ಕನ್ನಡಿಗರ ಉದ್ಯೋಗ : ಸರೋಜಿನಿ ಮಹಿಷಿ ವರದಿ ಶಿಫಾರಸುಗಳೇನು?

By Web Desk  |  First Published Aug 10, 2019, 10:24 AM IST

ರಾಜ್ಯದಲ್ಲಿ ಸ್ಥಳೀಯರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ‘ಡಾ.ಸರೋಜಿನಿ ಮಹಿಷಿ ವರದಿ’ಯಲ್ಲಿನ 45 ಐತಿಹಾಸಿಕ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಮೋದಿಸಿ 1990ರಲ್ಲೇ ಅನುಷ್ಠಾನ ಪ್ರಯತ್ನ ಆರಂಭಿಸಿದರೂ ಇಲ್ಲಿಯವರೆಗೆ ಒಂದೆ ಒಂದು ಶಿಫಾರಸೂ ಅನುಷ್ಠಾನಗೊಂಡಿಲ್ಲ.


ಲಿಂಗರಾಜು ಕೋರಾ

ಬೆಂಗಳೂರು (ಆ.10) : ರಾಜ್ಯದಲ್ಲಿ ಸ್ಥಳೀಯರಿಗೆ ಅರ್ಥಾತ್‌ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ‘ಡಾ.ಸರೋಜಿನಿ ಮಹಿಷಿ ವರದಿ’ಯಲ್ಲಿನ 45 ಐತಿಹಾಸಿಕ ಶಿಫಾರಸುಗಳನ್ನು ರಾಜ್ಯ ಸರ್ಕಾರ ಅನುಮೋದಿಸಿ 1990ರಲ್ಲೇ ಅನುಷ್ಠಾನ ಪ್ರಯತ್ನ ಆರಂಭಿಸಿದರೂ ಇಲ್ಲಿಯವರೆಗೆ ಒಂದೆ ಒಂದು ಶಿಫಾರಸೂ ಅನುಷ್ಠಾನಗೊಂಡಿಲ್ಲ!

Tap to resize

Latest Videos

undefined

ಸರೋಜಿನಿ ಮಹಿಷಿ ವರದಿಯ ಪ್ರಮುಖ ಶಿಫಾರಸುಗಳೇನು?

* ರಾಜ್ಯದಲ್ಲಿನ ಕೇಂದ್ರ ಸರ್ಕಾರದ ಉದ್ದಿಮೆಗಳಲ್ಲಿ ಗ್ರೂಪ್‌ ‘ಸಿ’ ಮತ್ತು ‘ಡಿ’ ಹುದ್ದೆಗಳಿಗೆ ಶೇ.100ರಷ್ಟುಮತ್ತು ಗ್ರೂಪ್‌ ‘ಬಿ’ ಹುದ್ದೆಗಳಿಗೆ ಶೇ.65ರಷ್ಟುಕನ್ನಡಿಗರನ್ನು ನೇಮಿಸಿಕೊಳ್ಳಬೇಕು. ಈ ಸಂಬಂಧ ರಾಜ್ಯ ಸರ್ಕಾರವು, ಕೇಂದ್ರ ಸಾರ್ವಜನಿಕ ಉದ್ದಿಮೆಗಳನ್ನು ಸ್ಥಾಪಿಸಲು ನೆಲ, ಜಲ, ವಿದ್ಯುಚ್ಛಕ್ತಿ ನೀಡುವಾಗ ಪೂರ್ವ ಷರತ್ತು ಹಾಕಬೇಕು.

* ರಾಜ್ಯ ಸರ್ಕಾರಿ ಅಥವಾ ಸಾರ್ವಜನಿಕ ವಲಯದ ಉದ್ದಿಮೆಗಳಲ್ಲಿ ಎಲ್ಲಾ ಹಂತಗಳಲ್ಲಿ ಶೇ.100ರಷ್ಟುಕನ್ನಡಿಗರನ್ನು ನೇಮಿಸಿಕೊಳ್ಳಬೇಕು. ವಿಶೇಷ ಪರಿಣತಿ ಬೇಕಿರುವ ಗ್ರೂಪ್‌ ‘ಎ’ ಮತ್ತು ‘ಬಿ’ ಹುದ್ದೆಗಳಿಗೆ ನೇಮಕಾತಿಯಲ್ಲಿ ರಾಜ್ಯ ಸರ್ಕಾರದ ಅನುಮತಿ ಬಳಿಕ ಈ ನಿರ್ಬಂಧಗಳಿಗೆ ವಿನಾಯಿತಿ ನೀಡಬಹುದು.

* ರಾಜ್ಯದ ಖಾಸಗಿ ಉದ್ದಿಮೆಗಳಲ್ಲಿನ ಎಲ್ಲಾ ಹುದ್ದೆಗಳಿಗೆ ಕನ್ನಡಿಗರನ್ನೇ ನೇಮಿಸಬೇಕು. ಖಾಸಗಿ ಉದ್ದಿಮೆಗಳಿಗೆ ರಾಜ್ಯ ಸರ್ಕಾರ ಕೆಎಸ್‌ಐಡಿಸಿ, ಕೆಎಸ್‌ಎಫ್‌ಸಿ, ಕೆಇಬಿ, ನಗರಪಾಲಿಕೆ, ನೀರು ಮತ್ತು ಒಳಚರಂಡಿ ಮುಂತಾದ ಸಂಸ್ಥೆಗಳು ಸೇವೆ ಸೌಲಭ್ಯ ಒದಗಿಸುವಾಗ ಈ ಪೂರ್ಣ ಷರತ್ತುಗಳನ್ನು ಹಾಕಬೇಕು.

* ದಿ ಎಂಪ್ಲಾಯ್‌ಮೆಂಟ್‌ ಎಕ್ಸ್‌ಚೇಂಜಸ್‌ ಆಕ್ಟ್ 1956 ಈ ಅಧಿನಿಯಮ 4ನೇ ಅನುಚ್ಛೇದವನ್ನು ತಿದ್ದುಪಡಿ ಮಾಡಿ ಖಾಲಿ ಹುದ್ದೆಗಳನ್ನು ಅವಶ್ಯಕವಾಗಿ ಉದ್ಯೋಗ ವಿನಿಯಮ ಕೇಂದ್ರಗಳಿಗೆ ತಿಳಿಸಿದ ಮೇಲೆ ಹೆಸರು ನೋಂದಾಯಿಸಿದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ನೇಮಕ ಮಾಡುವುದು ಕಡ್ಡಾಯ ಮಾಡಬೇಕು. ರಾಜ್ಯದ ಯಾವುದೇ ಕೇಂದ್ರದಲ್ಲಿ ಅರ್ಹತೆಯುಳ್ಳ ಅಭ್ಯರ್ಥಿಗಳು ದೊರೆಯದೆ ಇದ್ದಲ್ಲಿ ಮಾತ್ರ ಇತರ ಮೂಲಗಳಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶ ಇರಬೇಕು.

* ಉದ್ಯೋಗ ವಿನಿಮಯ ಕೇಂದ್ರಗಳಲ್ಲಿನ ಹೆಸರು ನೋಂದಾಯಿಸುವ ಮೊದಲು ಅಭ್ಯರ್ಥಿಗಳು 15 ವರ್ಷ ಕಾಲ ರಾಜ್ಯದಲ್ಲಿ ವಾಸವಾಗಿದ್ದರೆಂಬುದನ್ನು ರುಜುವಾತುಪಡಿಸಲು ನೋಂದಣಿಗೆ ಮುನ್ನ ಅಧಿಕಾರಿಗಳು ಶಾಲಾ ಪ್ರಮಾಣ ಪತ್ರ (ಎಸ್‌ಎಸ್‌ಎಲ್‌ಸಿ ಸರ್ಟಿಫಿಕೇಟ್‌), ಪಡಿತರ ಚೀಟಿ, ಮತದಾರರ ಪಟ್ಟಿ, ಜನ್ಮ ದಾಖಲೆ ಪರಿಶೀಲಿಸಬೇಕು.

* ಕರ್ನಾಟಕದಲ್ಲಿ ಎಸ್ಸೆಸ್ಸೆಲ್ಸಿ ಅಥವಾ ಪದವಿ ಪರೀಕ್ಷೆ ಪಾಸಾದ ಅಭ್ಯರ್ಥಿಗಳು ಮಾತ್ರ ರಾಜ್ಯದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ನೇಮಕಾತಿಗೆ ಅರ್ಹರು ಎಂದು ಪರಿಗಣಿಸುವಂತೆ ಬ್ಯಾಂಕ್‌ ನೇಮಕಾತಿ ಮಂಡಳಿಗಳಿಗೆ ಸೂಚಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷಾ ಜ್ಞಾನವನ್ನು ಕುರಿತು ಒಂದು ಪ್ರಶ್ನೆ ಪತ್ರಿಕೆ ಸೇರಿಸುವಂತೆ ಸಲಹೆ ನೀಡಬೇಕು.

* ರಾಜ್ಯದ ಎಲ್ಲ ಬ್ಯಾಂಕುಗಳಲ್ಲಿ ಕನ್ನಡ ಬಳಕೆಯ ನಾಗರಿಕರ ಅನುಕೂಲಕ್ಕಾಗಿ ಹಾಗೂ ಕನ್ನಡಿಗರ ನೇಮಕದ ದೃಷ್ಟಿಯಿಂದ ಕನ್ನಡದಲ್ಲಿಯೇ ವ್ಯವಹರಿಸುವಂತೆ ಒತ್ತಾಯಿಸುವುದು. ರಾಜ್ಯದ ಬ್ಯಾಂಕುಗಳ ನೇಮಕಾತಿ ಮಂಡಳಿಗೆ ಬಹು ಸಂಖ್ಯೆಯಲ್ಲಿ ಕನ್ನಡಿಗರನ್ನು ಸೇರಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಸಿಬೇಕು.

* ಕೈಗಾರಿಕಾ ಬಂಡವಾಳ ಹೂಡಿಕೆಗೆ ಆಕರ್ಷಣೆಯಾಗಿ ಪರಿಷ್ಕೃತ ಪ್ರೋತ್ಸಾಹ ಹಾಗೂ ರಿಯಾಯಿತಿ ಕೊಡುವಾಗ ಕನ್ನಡಿಗರಿಗೆ ಆದ್ಯತೆ ಕೊಡುವಂತೆ ಆದೇಶಿಸಬೇಕು ಮತ್ತು ಸರ್ಕಾರದ ನೆರವು ಪಡೆದು ಸ್ಥಾಪಿಸಲಾಗುವ ಕೈಗಾರಿಕೆಗಳು ಕನ್ನಡಿಗರಿಗೇ ಉದ್ಯೋಗಾವಕಾಶವನ್ನು ಕೊಡಬೇಕೆಂದು ಕರಾರು ಹಾಕಬೇಕು.

* ನೂರಕ್ಕಿಂತ ಹೆಚ್ಚು ಸಂಖ್ಯೆಯ ನೌಕರರು ಇರುವ ಖಾಸಗಿ ಉದ್ಯಮಗಳ ನೇಮಕಾತಿ ಸಮಿತಿಗಳಲ್ಲಿ ರಾಜ್ಯ ಸರ್ಕಾರದ ಪ್ರತಿನಿಧಿಯನ್ನು ಸೇರಿಸುವಂತೆ ಉದ್ಯಮಗಳನ್ನು ಒತ್ತಾಯಿಸಬೇಕು.

* ಮಹಾರಾಷ್ಟ್ರ ಪದ್ಧತಿಯಂತೆ ಉದ್ಯಮಗಳಿಂದ ಕನ್ನಡಿಗರಿಗೆ ನಿಗದಿ ಪಡಿಸಿದ ಪ್ರಮಾಣದಲ್ಲಿ ಉದ್ಯೋಗಾವಕಾಶವನ್ನು ಒದಗಿಸುವ ಬಗ್ಗೆ ಪ್ರತಿ ವರ್ಷ ಘೋಷಣೆ ಪ್ರಪತ್ರವನ್ನು ಪಡೆಯಬೇಕು. ಅದನ್ನು ಪರಿಶೀಲಿಸಲು ಸೂಚಿತ ಘಟಕಕ್ಕೆ ವಹಿಸಬೇಕು.

* 1983ರ ಆದೇಶದಲ್ಲಿ ಸಂದರ್ಶನ ಕಾಲದಲ್ಲಿ ಅಭ್ಯರ್ಥಿಗಳನ್ನು ಸಾಧ್ಯವಾದಷ್ಟುಮಟ್ಟಿಗೆ ಕನ್ನಡದಲ್ಲಿಯೇ ಪ್ರಶ್ನಿಸಿ ಉತ್ತರವನ್ನು ಪಡೆಯಬೇಕೆಂದಿರುವುದರಿಂದ ಅದನ್ನು ತಿದ್ದುಪಡಿ ಮಾಡಿ ಕನ್ನಡದಲ್ಲಿಯೇ ಪ್ರಶ್ನಿಸಿ ಉತ್ತರ ಪಡೆಯುವ ವ್ಯವಸ್ಥೆ ಮಾಡಬೇಕು.

* ರೈಲ್ವೆ ನೇಮಕಾತಿ ಮಂಡಳಿಯಲ್ಲಿ ಕರ್ನಾಟಕದ ಗಣ್ಯ ವ್ಯಕ್ತಿಗಳನ್ನು ಸದಸ್ಯರನ್ನಾಗಿ ನೇಮಕ ಮಾಡುವ ವ್ಯವಸ್ಥೆ ಮಾಡಬೇಕು. ಮಂಡಳಿಯು ನಡೆಸುವ ನೇಮಕಾತಿಯಲ್ಲಿ ಕನ್ನಡ ಭಾಷಾ ಜ್ಞಾನ ಅವಶ್ಯವೆಂದು ಪರಿಗಣಿಸಿ ಪರೀಕ್ಷಿಸಬೇಕು.

* ಸರ್ಕಾರವು ಕನ್ನಡಿಗರಿಗೆ ಶೇ.80ರಷ್ಟುಉದ್ಯೋಗಾವಕಾಶವನ್ನು ನಿಗದಿತ ಕಾಲಮಿತಿಯೊಳಗೆ ಸಾಧಿಸುವ ದೃಢ ಸಂಕಲ್ಪ ಮಾಡುವುದಲ್ಲದೆ, ಈ ಬಗ್ಗೆ ಅನವಶ್ಯಕ ಪ್ರಚಾರವನ್ನು ಬಿಟ್ಟು ಇದನ್ನು ಕೃತಿಯಲ್ಲಿಯೇ ತರಬೇಕು. ಈ ವಿಷಯದಲ್ಲಿ ಧೈರ್ಯ ಮಾಡಿ ಎಂಬ ಕಿವಿ ಮಾತನ್ನು ಸರ್ಕಾರಕ್ಕೆ ತಿಳಿಸಲು ಸಮಿತಿ ಬಯಸುವುದು.

* ಕರ್ನಾಟಕದ ರೈತರ ಸಹಾಯಕ್ಕಾಗಿ ರಾಜ್ಯದ ನಬಾರ್ಡ್‌ ಶಾಖೆಗೆ ನೇಮಕಾತಿ ಮಾಡುವಾಗ ಬೆಂಗಳೂರಿನಲ್ಲಿಯೇ ಒಂದು ನೇಮಕಾತಿ ಸಮಿತಿ ರಚಿಸುವಂತೆ ಒತ್ತಾಯಿಸುವುದು.

click me!