ರಾಜ್ಯದ ಎಲ್ಲಾ ರೈಲ್ವೆ ಹುದ್ದೆಯಲ್ಲಿ ಕನ್ನಡಿಗರಿಗೆ ಸಿಕ್ಕಿದ್ದು 22!

By Kannadaprabha NewsFirst Published Sep 12, 2019, 7:43 AM IST
Highlights

ಕರ್ನಾಟಕದ ಸಂಪೂರ್ಣ  ರೈಲ್ವೆ ಹುದ್ದೆಗಳೂ ಕೂಡ ಬಿಹಾರಿಗಳ ಪಾಲಾಗಿದೆ. ಕರ್ನಾಟಕದಲ್ಲೇ ಶೇ.90ಕ್ಕೂ ಹೆಚ್ಚು ಸೇವಾ ಜಾಲ ಹೊಂದಿರುವ ನೈಋುತ್ಯ ರೈಲ್ವೆಯ 2017-18ನೇ ಸಾಲಿನ 2,200 ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ದೊರೆತಿದ್ದು 22ರಷ್ಟು ಉದ್ಯೋಗ ಮಾತ್ರ. 

ಬೆಂಗಳೂರು [ಸೆ.12]:  ಕರ್ನಾಟಕದಲ್ಲೇ ಶೇ.90ಕ್ಕೂ ಹೆಚ್ಚು ಸೇವಾ ಜಾಲ ಹೊಂದಿರುವ ನೈಋುತ್ಯ ರೈಲ್ವೆಯ 2017-18ನೇ ಸಾಲಿನ 2,200 ಹುದ್ದೆಗಳ ನೇಮಕಾತಿಯಲ್ಲಿ ಕನ್ನಡಿಗರಿಗೆ ದೊರೆತಿದ್ದು 22 (ಶೇ.1) ಉದ್ಯೋಗ ಮಾತ್ರ.

ಕನ್ನಡಿಗರಿಗೆ ಆದ ಈ ಭಾರಿ ಅನ್ಯಾಯಕ್ಕೆ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ಮಾತ್ರವಲ್ಲ. ಕನ್ನಡಿಗರಿಗೆ ಕೇಂದ್ರ ಸರ್ಕಾರದ ಉದ್ಯೋಗ, ಸೌಲಭ್ಯಗಳ ಮಾಹಿತಿ ದೊರೆಯದಂತೆ ಮರೆಮಾಚುತ್ತಿರುವ ತಂತ್ರವೂ ಕಾರಣ!

ದಶಕಗಳಿಂದಲೂ ಕೇಂದ್ರದಲ್ಲಿ ಕೂರುವ ಪ್ರತಿ ಸರ್ಕಾರವು ಹಿಂದಿಯನ್ನು ಮೆರೆಸುವ ಹಾಗೂ ಕನ್ನಡವನ್ನು ತುಳಿಯುವ ಧೋರಣೆ ಅನುಸರಿಸುತ್ತಿದೆ. ಇದೀಗ 2017ರ ಮಾಚ್‌ರ್‍ ತಿಂಗಳಿಂದ ಕೇಂದ್ರ ಸರ್ಕಾರವು ದೇಶಾದ್ಯಂತ ಕೇಂದ್ರ ಸರ್ಕಾರದ ಇಲಾಖೆಗಳು, ಸಂಘ-ಸಂಸ್ಥೆಗಳು, ಸಮಿತಿಗಳು, ಕಚೇರಿಗಳು ನೀಡುವ ಜಾಹಿರಾತುಗಳಲ್ಲಿ ಶೇ.50ರಷ್ಟುಜಾಹಿರಾತುಗಳು ಕಡ್ಡಾಯವಾಗಿ ಹಿಂದಿ ಭಾಷೆಯಲ್ಲಿರಬೇಕು ಎಂದು ಆದೇಶ ಹೊರಡಿಸಿದೆ.

ರಾಜಭಾಷಾ ಆಯೋಗದ ಶಿಫಾರಸು ಆಧಾರದ ಮೇಲಿನ ಈ ಕ್ರಮದ ಫಲವಾಗಿ ಕರ್ನಾಟಕ ಸೇರಿದಂತೆ ಹಿಂದಿಯೇತರ ಭಾಷಾ ಬಳಕೆಯ ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರದ ಮಾಹಿತಿಗಳೇ ದೊರೆಯುತ್ತಿಲ್ಲ. ಇದಕ್ಕೆ ಸ್ಪಷ್ಟಉದಾಹರಣೆ ರಾಜ್ಯದಲ್ಲಿರುವ ನೈಋುತ್ಯ ರೈಲ್ವೆಗೆ ನಡೆದ 2017-18ರ ನೇಮಕಾತಿ. ಡಿ - ವೃಂದದ ಉದ್ಯೋಗದ ಮಾಹಿತಿ ಬಹುತೇಕ ಸುದ್ದಿ ಪತ್ರಿಕೆಗಳಲ್ಲಿ ಜಾಹಿರಾತು ಬರಲೇ ಇಲ್ಲ. ಕರ್ನಾಟಕದಲ್ಲಿನ ರೈಲ್ವೆ ಉದ್ಯೋಗದ ಮಾಹಿತಿ ಬಗ್ಗೆ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶದಲ್ಲೇ ಹೆಚ್ಚು ಜಾಹೀರಾತು ನೀಡಿದೆ. ಪರಿಣಾಮ ಕನ್ನಡಿಗರಿಗೆ ದೊರೆಯಬೇಕಾಗಿದ್ದ ಉದ್ಯೋಗಗಳು ಬಿಹಾರಿಗಳ ಪಾಲಾಗಿವೆ ಎಂದು ಬನವಾಸಿ ಬಳಗದ ಸಂಚಾಲಕ ಅರುಣ್‌ ಜಾವಗಲ್‌ ದೂರುತ್ತಾರೆ.

ಸಂಸತ್‌ನಲ್ಲಿ ಕನ್ನಡದಲ್ಲಿ ಪ್ರಮಾಣವಚನ ಸ್ವೀಕರಿಸುವ ಸಂಸದರು ಕನ್ನಡಿಗರಿಗೆ ಆಗುತ್ತಿರುವ ಇಂತಹ ಅನ್ಯಾಯವನ್ನು ವಿರೋಧಿಸಬೇಕು. ಈ ವಿಷಯದಲ್ಲಿ ಹಿಂದಿ ಹೇರಿಕೆಯನ್ನು ಹಾಗೂ ಈ ಮೂಲಕ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಬೇಕು ಎಂದು ಒತ್ತಾಯಿಸುತ್ತಾರೆ.

ಕನ್ನಡಿಗರೇ ಹೆಚ್ಚು ನೇಮಕವಾಗುತ್ತಿದ್ದರು:

ನೈಋುತ್ಯ ರೈಲ್ವೆಗೆ 2011ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ 4,590 ಉದ್ಯೋಗಗಳಲ್ಲಿ ಪೈಕಿ 2,200 (ಶೇ.48) ಉದ್ಯೋಗ ಕನ್ನಡಿಗರಿಗೆ ದೊರೆತಿತ್ತು. ಈ ವೇಳೆಯೂ ಕೇಂದ್ರ ಹಾಗೂ ರಾಜ್ಯ ಒಬಿಸಿ ಪಟ್ಟಿಯಲ್ಲಿನ ವ್ಯತ್ಯಾಸ, ಕೆನೆಪದರ ನಿಯಮಾವಳಿ ವ್ಯತ್ಯಾಸದಿಂದಾಗಿ ಕನ್ನಡಿಗರು ಕಡಿಮೆ ನೇಮಕವಾಗಿದ್ದಾರೆ ಎಂದು ಕನ್ನಡಿಗ ಯುವಕರು ಹೋರಾಟ ಮಾಡಿದ್ದರು. ಇದಲ್ಲದೆ 2013ರಲ್ಲಿ ನಡೆದ ನೇಮಕಾತಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಆಯ್ಕೆಯಾಗಿದ್ದರು.

ಆದರೆ, ಪ್ರಸ್ತುತ 2,200 ಉದ್ಯೋಗದಲ್ಲಿ ಶೇ.1ರಷ್ಟುಮಾತ್ರ ಕನ್ನಡಕ್ಕೆ ದೊರೆತಿದೆ. ಇದಕ್ಕೆ ಕಾರಣ ಕೇಂದ್ರೀಕೃತ ಹಾಗೂ ಆನ್‌ಲೈನ್‌ ಪರೀಕ್ಷಾ ವ್ಯವಸ್ಥೆ ಎಂದು ಹಲವರು ಹೇಳುತ್ತಾರೆ. ಆದರೆ, ರಾಜ್ಯದಲ್ಲೇ ಇರುವ ನೈಋುತ್ಯ ರೈಲ್ವೆ ಉದ್ಯೋಗಗಳು ಬಿಹಾರದವರಿಗೆ ಹೆಚ್ಚು ಹೋಗಲು ಹೇಗೆ ಸಾಧ್ಯ? ಅದೂ ಕೂಡ ಉತ್ತರ ಭಾರತೀಯರಿಗೆ ಹೆಚ್ಚು ಉದ್ಯೋಗ ದೊರೆತಿದೆ. ಕನ್ನಡಿಗರಿಗೆ ಶೇ.1ರಷ್ಟುಉದ್ಯೋಗ ದೊರೆತಿದ್ದರೆ ನೆರೆಯ ಆಂಧ್ರಪ್ರದೇಶ, ತಮಿಳುನಾಡು, ಕೇರಳಿಗರಿಗೆ ಇದಕ್ಕಿಂತಲೂ ಕಡಿಮೆ ಇದೆ. ಸಾಮಾನ್ಯ ಹಾಗೂ ಹಿಂದುಳಿದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯಲ್ಲಿ ಶೇ.80ರಷ್ಟುಮಂದಿ ಬಿಹಾರ ರಾಜ್ಯದವರಿದ್ದಾರೆ. ಹಿಂದಿ ಭಾಷಿಕರೇ ಹೆಚ್ಚಾಗಿರಲು ಜಾಹಿರಾತು ಕೂಡ ಪ್ರಮುಖ ಕಾರಣ. ಇದರ ಜತೆಗೆ ಇದೀಗ ಹಿಂದಿ ಹಾಗೂ ಇಂಗ್ಲಿಷ್‌ನಲ್ಲಿ ಮಾತ್ರವೇ ರೈಲ್ವೆ ಪರೀಕ್ಷೆ ಬರೆಯಬೇಕು ಎಂಬ ನಿಯಮ ಮಾಡಿದ್ದಾರೆ ಎಂದು ಕನ್ನಡಪರ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಶೇ.50ರಷ್ಟುನೇಮಕ ಜಾಹೀರಾತು ಹಿಂದಿಯಲ್ಲಿ!

ಯುಪಿಎ ಸರ್ಕಾರದ ಅವಧಿಯಲ್ಲಿ ರಾಜಭಾಷಾ ಆಯೋಗವು ಹಿಂದಿ ಭಾಷೆಯ ಅನುಷ್ಠಾನದ ಬಗ್ಗೆ ವರದಿ ನೀಡಿತ್ತು. ಆಯೋಗ ಮಂಡಿಸಿದ ತನ್ನ 9ನೇ ವರದಿಯ 21ನೇ ಶಿಫಾರಸಿನಲ್ಲಿ ಕೇಂದ್ರ ಸರ್ಕಾರವು ವೆಚ್ಚ ಮಾಡುವ ಶೇ.50ರಷ್ಟುಜಾಹಿರಾತು ವೆಚ್ಚವನ್ನು ಹಿಂದಿ ಜಾಹಿರಾತು ಪ್ರಕಟಿಸಲು ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಇದರ ಆಧಾರದ ಮೇಲೆ 2017ರ ಮಾಚ್‌ರ್‍ನಲ್ಲಿ ಆದೇಶ ಹೊರಡಿಸಿರುವ ಕೇಂದ್ರ ಗೃಹ ಇಲಾಖೆಯು ಶೇ.50ರಷ್ಟುಮೊತ್ತದ ಬದಲಿಗೆ ಜಾಹಿರಾತುಗಳಲ್ಲಿ ಶೇ.50ರಷ್ಟುಜಾಹಿರಾತು ಹಿಂದಿಯಲ್ಲಿ ನೀಡಲು ಆದೇಶಿಸಿದೆ. ಉಳಿದ ಜಾಹಿರಾತು ಇಂಗ್ಲೀಷ್‌ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ನೀಡಲು ವಿವಿಧ ಇಲಾಖೆಗಳಿಗೆ ಸೂಚನೆ ನೀಡಿದೆ.

ಇದಲ್ಲದೆ ಕೇಂದ್ರ ಸರ್ಕಾರದ ಅಡಿ ಬರುವ ವೈಜ್ಞಾನಿಕ ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಖರೀದಿಸುವ ಪುಸ್ತಕಗಳಲ್ಲೂ ಶೇ.50ರಷ್ಟುಹಣವನ್ನು ಹಿಂದಿ ಪುಸ್ತಕಗಳಿಗೆ ವೆಚ್ಚ ಮಾಡಬೇಕು. ಕಚೇರಿಗಳಿಗೆ ತರಿಸುವ ಪತ್ರಿಕೆ, ನಿಯತಕಾಲಿಕೆಗಳಲ್ಲೂ ಶೇ.50ರಷ್ಟುಹಿಂದಿ ಭಾಷೆಯವು ಇರಬೇಕು ಎಂದು ಆದೇಶಿಸಲಾಗಿದೆ.

click me!