ಪದವಿ ಕಾಲೇಜಿನ 5000 ಮಂದಿ ಅತಿಥಿ ಉಪನ್ಯಾಸಕರ ನೌಕರಿಗೆ ಕುತ್ತು?

By Kannadaprabha News  |  First Published Oct 2, 2024, 10:48 AM IST

ಹೈಕೋರ್ಟ್‌ ಆದೇಶದಂತೆ ಯುಜಿಸಿ ಮಾನದಂಡ ಅನುಸರಿಸಿ ಅತಿಥಿ ಉಪನ್ಯಾಸಕರ ನೇಮಕಾತಿ ಮಾಡಿದರೆ 5000 ಮಂದಿ ಅನರ್ಹರಾಗುವ ಆತಂಕ ಎದುರಾಗಿದೆ. ಈ ನಡುವೆ ವಿದ್ಯಾರ್ಥಿಗಳು ನೇಮಕಾತಿ ವಿಳಂಬ ಖಂಡಿಸಿ ಪ್ರತಿಭಟನೆ ಆರಂಭಿಸಿದ್ದಾರೆ.


ಲಿಂಗರಾಜು ಕೋರಾ

ಬೆಂಗಳೂರು: ರಾಜ್ಯ ಸರ್ಕಾರಿ ಪದವಿ ಕಾಲೇಜುಗಳಿಗೆ ಹೈಕೋರ್ಟ್‌ ಆದೇಶದಂತೆ ಯುಜಿಸಿ ಮಾನದಂಡ ಅನುಸರಿಸಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಕ್ರಮ ವಹಿಸಿದ್ದೇ ಆದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ 5000 ಮಂದಿ ಅತಿಥಿ ಉಪನ್ಯಾಸಕರು ನೇಮಕಾತಿಗೆ ಅನರ್ಹರಾಗಲಿದ್ದಾರೆ.

Tap to resize

Latest Videos

ಯುಜಿಸಿ ಮಾನದಂಡ ಅನುಸರಿಸಿದರೆ ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸಿಕೊಂಡು ಬಂದಿರುವ ಸಾವಿರಾರು ಅತಿಥಿ ಉಪನ್ಯಾಸಕರು ಬೀದಿಗಿಳಿಯುವ ಸಾಧ್ಯತೆ ಇದೆ. ಹೈಕೋರ್ಟ್‌ ಆದೇಶ ಪಾಲಿಸದೆ ಹೋದರೆ ನ್ಯಾಯಾಲಯದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಮತ್ತೊಂದೆಡೆ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬ ಖಂಡಿಸಿ ಪದವಿ ವಿದ್ಯಾರ್ಥಿಗಳು ಪ್ರತಿಭಟನೆ ಆರಂಭಿಸಿದ್ದಾರೆ. ಇದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕಿದ್ದು, ಮುಂದೇನು ಮಾಡಬೇಕೆಂಬ ಬಗ್ಗೆ ಕಾನೂನು ಸಲಹೆ ಪಡೆದು ಮುಂದುವರೆಯಲು ತೀರ್ಮಾನಿಸಿದೆ.

ಹೈಕೋರ್ಟ್‌ ಆದೇಶವೇನು?:

ಅತಿಥಿ ಉಪನ್ಯಾಸಕ ಹುದ್ದೆಗೆ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದ (ಯುಜಿಸಿ) 2018-19ರ ನಿಯಮಾವಳಿ ಅನುಸಾರ ನೆಟ್‌/ಸ್ಲೆಟ್‌/ಪಿಎಚ್‌ಡಿ ವಿದ್ಯಾರ್ಹತೆ ಹೊಂದಿರುವವರನ್ನು ಮಾತ್ರ ನೇಮಕಾತಿ ಮಾಡಿಕೊಳ್ಳಲು ರಾಜ್ಯ ಹೈಕೋರ್ಟ್‌ ಇತ್ತೀಚೆಗೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಇದರಿಂದ ಉನ್ನತ ಶಿಕ್ಷಣ ಇಲಾಖೆಯು ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸಬೇಕೇ ಅಥವಾ ಬೇಡವೇ ಎನ್ನುವ ಗೊಂದಲದಲ್ಲಿ ಸಿಲುಕಿದೆ. ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಒಂದು ರೀತಿ ಬಿಕ್ಕಟ್ಟು ಎದುರಾಗಿದೆ.

ರಾಜ್ಯದಲ್ಲಿ ಪ್ರಸ್ತುತ 10,500 ಅತಿಥಿ ಉಪನ್ಯಾಸಕರು ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಇದರಲ್ಲಿ ಸುಮಾರು 5000ಕ್ಕೂ ಹೆಚ್ಚು ಮಂದಿ ಯುಜಿಸಿ ಮಾನದಂಡಗಳನ್ನು ಹೊಂದಿಲ್ಲ ಎನ್ನಲಾಗಿದೆ. ಆದರೂ, ಸರ್ಕಾರ ಮಾನವೀಯ ನೆಲೆಯಲ್ಲಿ ಇವರಿಗೆ 2025ರ ಒಳಗಾಗಿ ಯುಜಿಸಿ ನಿಗದಿಪಡಿಸಿರುವ ವಿದ್ಯಾರ್ಹತೆ ಗಳಿಸಲು ಅವಕಾಶ ನೀಡಿ ಸೇವೆಯಲ್ಲಿ ಮುಂದುವರೆಸಿತ್ತು.

ಇದೀಗ ಹೈಕೋರ್ಟ್‌ ಆದೇಶ ಪಾಲಿಸಿದರೆ 5000ಕ್ಕೂ ಹೆಚ್ಚು ಮಂದಿಯನ್ನು ಅತಿಥಿ ಉಪನ್ಯಾಸಕ ಹುದ್ದೆಗೆ ನೇಮಕ ಮಾಡಿಕೊಳ್ಳುವಂತಿಲ್ಲ. ಹಾಗೇನಾದರೂ ಮಾಡಿದರೆ ಅವರು ನಿರ್ವಹಿಸುತ್ತಿದ್ದ ಬೋಧನಾ ಕಾರ್ಯಕ್ಕೆ ಯಾರನ್ನು ನೇಮಿಸಬೇಕು? ಉಳಿದ 5500 ಜನರಿಗೆ ಕಾರ್ಯಭಾರ ಹಂಚಿದರೆ ಹೊರೆಯಾಗಲಿದೆ. ಜೊತೆಗೆ ನೇಮಕಾತಿ ಮಾಡಿಕೊಂಡವರಿಗೇ ದುಪ್ಪಟ್ಟು ವೇತನ ನೀಡಬೇಕಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಈ ಬಿಕ್ಕಟ್ಟಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳುವುದು ಎಂಬ ಬಗ್ಗೆ ಕಾನೂನು ಪರಿಣತರ ಸಲಹೆ ಪಡೆದು ಮುಂದಿನ ಹೆಜ್ಜೆ ಇಡಲು ಇಲಾಖೆ ತೀರ್ಮಾನಿಸಿದೆ.

ಕೆಲಸ ಬಿಟ್ಟು ಹೋಗಿದ್ದ ಉದ್ಯೋಗಿಯನ್ನು ಕರೆತರಲು ₹22000 ಕೋಟಿ ಖರ್ಚು ಮಾಡಿದ್ಯಾಕೆ ಗೂಗಲ್?

ಅಲ್ಲದೆ ಯುಜಿಸಿ ನಿಯಮ ಪಾಲಿಸಲು ಹೋದರೆ ಅತಿಥಿ ಉಪನ್ಯಾಸಕರಿಗೆ ಈಗ ಸರ್ಕಾರ ನೀಡುತ್ತಿರುವ ವೇತನವನ್ನು ದುಪ್ಪಟ್ಟುಗೊಳಿಸಬೇಕಾಗುತ್ತದೆ. ಕನಿಷ್ಠ 50 ಸಾವಿರ ರು.ಗಳಿಗೆ ಕಡಿಮೆ ಇಲ್ಲದಂತೆ ವೇತನ ಅಥವಾ ಗೌರವಧನ ನೀಡಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇನ್ನು, ಸರ್ಕಾರವೇನಾದರೂ ಸೇವೆಯಲ್ಲಿರುವ ಎಲ್ಲ ಅತಿಥಿ ಉಪನ್ಯಾಸಕರ ಶೈಕ್ಷಣಿಕ ವಿದ್ಯಾರ್ಹತೆ ಹೆಚ್ಚಿಸಲು ತೀರ್ಮಾನಿಸಿದರೆ, ಈ ಹಿಂದೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಿಗೆ ಬಿಇಡಿ ಪದವಿ ಪಡೆಯಲು ಅವಕಾಶ ಮಾಡಿಕೊಟ್ಟಂತೆ ವಿಶೇಷ ನಿಯಮಾವಳಿ ರೂಪಿಸಿ 5000 ಜನ ಅತಿಥಿ ಉಪನ್ಯಾಸಕರಿಗೂ ಪಾರ್ಟ್‌ ಟೈಂನಲ್ಲಿ ಪಿಎಚ್‌ಡಿ ಮಾಡಲು ಅನುಕೂಲ ಮಾಡಿಕೊಡಬಹುದು ಎನ್ನುವುದು ಸೇವೆಯಿಂದ ವಂಚನೆಯ ಆತಂಕದಲ್ಲಿರುವವರ ಅಭಿಪ್ರಾಯವಾಗಿದೆ.

ಅತಿಥಿ ಉಪನ್ಯಾಸಕರ ನೇಮಕಾತಿಗೆ ಯುಜಿಸಿ ನಿಯಮಾವಳಿ ಪಾಲಿಸಲು ಹೈಕೋರ್ಟ್‌ ಹೇಳಿರುವುದರಿಂದ ಒಂದಷ್ಟು ಬಿಕ್ಕಟ್ಟು ಎದುರಾಗಿದೆ. ಅವುಗಳನ್ನು ಪರಿಹರಿಸಿಕೊಂಡು ಈ ಬಾರಿಯ ನೇಮಕಾತಿಯನ್ನು ಆದಷ್ಟು ಬೇಗ ನಡೆಸಬೇಕು ಎನ್ನುವ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಮುಂದುವರೆಯಲು ತೀರ್ಮಾನಿಸಿದ್ದೇವೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಮಾಹಿತಿ ನೀಡಿದ್ದಾರೆ.

ಆಪಲ್ ಉದ್ಯೋಗ ಬಿಟ್ಟು ಕೇವಲ 22 ತಿಂಗಳಲ್ಲಿ 9000 ಕೋಟಿ ಕಂಪನಿ ಕಟ್ಟಿ ಬೆಳೆಸಿದ ನಿರ್ಮಿತ್ ಯಾರು?

click me!