World Nature Conservation Day 2024: ಕಣ್ಮರೆಯಾದ ದೇಸೀ ಬೀಜಗಳಿಗೆ ಮರುಜೀವ!

By Kannadaprabha News  |  First Published Jul 28, 2024, 9:28 AM IST

ಬೀಜಗಳನ್ನು ಬಾಟಲಿಯಲ್ಲಿ ಸಂಗ್ರಹ ಮಾಡುವ ಮೂಲಕ ಅದರ ಸಂವರ್ಧನೆ ಸಾಧ್ಯವಿಲ್ಲ. ಬದಲಾಗಿ ಅದನ್ನು ಕ್ರಿಯಾಶೀಲವಾಗಿ ಬಳಸುತ್ತಾ, ವೃದ್ಧಿಗೊಳಿಸಬೇಕು. ಇದು ಅವುಗಳನ್ನು ಜೀವಂತವಾಗಿಡುವ ಅತ್ಯುತ್ತಮ ವಿಧಾನ. ಇಲ್ಲವಾದರೆ ರೈತರಿಗೆ ನಾವು ಲಾಭ ಉಂಟುಮಾಡಲು ಹೇಗೆ ಸಾಧ್ಯ?


- ಗುರುದೇವ್ ಶ್ರೀ ಶ್ರೀ ರವಿಶಂಕರ, ಆರ್ಟ್‌ ಆಫ್‌ ಲಿವಿಂಗ್‌
ಒಂದು ಪ್ರಜಾತಿಯ ಜೀವಿ ಕಣ್ಮರೆಯಾದರೂ, ಅದರಿಂದ ಈ ಪರಸ್ಪರಾವಲಂಬಿ ಜಗತ್ತಿನಲ್ಲಿ ದೊಡ್ಡ ಪರಿಣಾಮಗಳು ಉಂಟಾಗುತ್ತವೆ. ಕಪ್ಪು ಅರಿಶಿಣ, ಮುಳ್ಳಿನ ಬೆಂಡೇಕಾಯಿ, ಕಪ್ಪು ಸೀತಾಫಲ ಅಥವಾ ರಾಜಮುಡಿ ಅಕ್ಕಿಯ ಕೇಳಿದ್ದೀರಾ? ಇವುಗಳೆಲ್ಲವೂ ಕೇವಲ ರಾಜಮನೆತನಕ್ಕಾಗಿ ಮಾತ್ರ ಮೀಸಲಾಗಿಡಲಾಗಿದ್ದವು. ಇವುಗಳೊಂದಿಗೆ ಇತರ 10,000 ವಿರಳವಾದ, ಅಳಿವಿನಂಚಿನಲ್ಲಿರುವ ವೈವಿಧ್ಯಮಯ ಬೀಜಗಳನ್ನು ಈಗ ಆರ್ಟ್ ಆಫ್ ಲಿವಿಂಗ್‌ನ ಅಂತಾರಾಷ್ಟ್ರೀಯ ಕೇಂದ್ರದ ರಾಷ್ಟ್ರೀಯ ದೇಸೀ ಬೀಜ ಕೋಶದಲ್ಲಿ ಪುನರೂರ್ಜಿತಗೊಳಿಸಲಾಗುತ್ತಿದೆ. ಹವಾಮಾನದ ವೈಪರೀತ್ಯಗಳನ್ನು ರೈತರು ಬೇರೆ ವಿಧಿಯಿಲ್ಲದೇ ಒಪ್ಪಿಕೊಳ್ಳಲು ಆರಂಭಿಸಿರುವ ಈ ಸಮಯದಲ್ಲಿ, ಅತ್ಯಂತ ಪೌಷ್ಠಿಕವಾದ, ವಾತಾವರಣದ ಬದಲಾವಣೆಗಳನ್ನು ಮೀರಿ, ವೈವಿಧ್ಯಮಯ ರುಚಿಯನ್ನುಳ್ಳಂತಹ, ರೈತರ ಜೇಬುಗಳಿಗೆ ಹೊರೆಯಾಗದಂತಹ, ಸ್ಥಳೀಯ ಮಣ್ಣಿಗೆ ಚೆನ್ನಾಗಿ ಹೊಂದಿಕೊಳ್ಳಬಲ್ಲಂತಹ ಸ್ಥಳೀಯ ಬೀಜಗಳ ಪುನರುಜ್ಜೀವನವು ಈ ನಿಟ್ಟಿನಲ್ಲಿ ಇಡುವ ಸರಿಯಾದ ಹೆಜ್ಜೆಯಾಗಿದೆ.

ಸುಸ್ಥಿರ ಕೃಷಿಗೆ ದೇಸಿ ಬೀಜ

Latest Videos

undefined

ಆರ್ಟ್ ಆಫ್ ಲಿವಿಂಗ್‌ನ ಬೀಜ ಸಂಗ್ರಹ(Art of Living's seed collection)ವು 14 ಬಗೆಯ ತುಳಸಿಯನ್ನು ಹೊಂದಿದೆ. ಅವುಗಳಲ್ಲಿ ಒಂದು ರೀತಿ ತುಳಸಿಯು ದಾಲ್ಚಿನಿಯ ಸ್ವಾದವನ್ನು ಹೊಂದಿದ್ದು, 400 ವರ್ಷಗಳಿಂದಲೂ ಮೆಕ್ಸಿಕೋದ ಒಂದು ಬೌದ್ಧಾಶ್ರಮದಲ್ಲಿ ಇದನ್ನು ಬಳಸುತ್ತಿದ್ದ ಭಿಕ್ಕುಗಳಿಂದ ಪಡೆದು ಸಂರಕ್ಷಿಸಲಾಗಿದೆ.

ಬಹಳ ಕಾಲದಿಂದಲೂ ನಾವು ಸ್ಥಳೀಯ ಬೀಜಗಳ ಸಂರಕ್ಷಣೆ(Conservation of indigenous seeds)ಯನ್ನು ಮಾಡುತ್ತಲೇ ಬಂದಿದ್ದೇವೆ. ಒಂದು ಸಮಯದಲ್ಲಿ ಜನರು ಹೆಚ್ಚಿನ ಬೆಳೆಯನ್ನು ಪಡೆಯುವ ದುರಾಸೆಯಲ್ಲಿ ಈ ಭೂಮಿಯ ಮೇಲೆ ರಾಸಾಯನಿಕಗಳನ್ನು ಬಳಸಿ, ಭೂಮಿಯ ಫಲವತ್ತತೆಯನ್ನು ನಶಿಸಿ ಹೋಗುವಂತೆ ಮಾಡಿದರು.

ಯುವಜನತೆಗೆ ಸ್ಫೂರ್ತಿಯಾಗಿರುವ ಮಲೆನಾಡಿನ ಮಹಿಳೆ ಅನಸೂಯ

ಆರ್ಟ್‌ ಆಫ್‌ ಲಿವಿಂಗ್‌ನಲ್ಲಿ ನಾವು ಜಾಗತಿಕ ಮಾನವತಾವಾದದ ಸಿದ್ಧಾಂತದಲ್ಲಿ ನಂಬಿಕೆಯಿಟ್ಟಿದ್ದೇವೆ. ಹೀಗಾಗಿ ಪ್ರಾಕೃತಿಕ ಹಾಗೂ ಸುಸ್ಥಿರ ಕೃಷಿಯಲ್ಲಿ ಮತ್ತು ದೇಸೀ ಬೀಜಗಳ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡಿದ್ದೇವೆ.

ಅಪರೂಪದ ತಳಿ ವೈವಿಧ್ಯಗಳು

ವಿಜ್ಞಾನಿಗಳು ಪೂರ್ಣವಾಗಿ ನಶಿಸಿ ಹೋಗಿವೆ ಎಂದು ಘೋಷಿಸಿದ್ದಂತಹ 27 ಗಿಡಮೂಲಿಕೆಗಳು ಈಗ ಆಶ್ರಮದ ವಾತಾವರಣದಲ್ಲಿ ಬೆಳೆಯುತ್ತಿವೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಅತೀ ಪೌಷ್ಠಿಕವಾದ, ಕುಲಸ್ವತ್ತಾದಂತಹ ಕಪ್ಪು ಅಕ್ಕಿಯಂತಹವನ್ನು ಸಂರಕ್ಷಿಸುತ್ತಿದೆ. ಇವುಗಳೆಲ್ಲವೂ ವಿಪರೀತ ರಾಸಾಯನಿಕ ಕೃಷಿಯಿಂದಾಗಿ ನಶಿಸಿ ಹೋಗಿದ್ದವು. ಇವುಗಳಲ್ಲಿ ಸಸಾರಜನಕ, ಕಬ್ಬಿಣಾಂಶ, ನಾರಿನಂಶವು ಸಮೃದ್ಧವಾಗಿರುವುದಲ್ಲದೆ, ಆಂಟಿಓಕ್ಸಿಡೆಂಟ್‌ಗಳ ಅತೀ ದೊಡ್ಡ ಮೂಲವಾಗಿವೆ. ಕಪ್ಪು ಅಕ್ಕಿಯು ರಾಜರುಗಳ, ಯೋಧರ ದಿನನಿತ್ಯದ ಆಹಾರವಾಗಿತ್ತು. ಸೋನಾಮೋತಿಯೆಂದು ಕರೆಯಲ್ಪಟ್ಟಂತಹ ಎಮ್ಮರ್ ಜಾತಿಯ ಗೋಧಿಯನ್ನೂ ಸಂರಕ್ಷಿಸಲಾಗಿದೆ. ಅದರ ಬಣ್ಣದಿಂದಾಗಿ, ಅದರ ಅಪಾರವಾದ ಆರ್ಥಿಕ ಹಾಗೂ ಆರೋಗ್ಯದ ಲಾಭಗಳನ್ನು ಹೊಂದಿರುವುದರಿಂದ ನಾವೇ ಆ ಜಾತಿಯ ಗೋಧಿಗೆ ಆ ಹೆಸರನ್ನು ಇಟ್ಟಿದ್ದೇವೆ.

ಹತ್ತು ಸಾವಿರ ವರ್ಷಗಳ ಹಿಂದೆ ಎಮ್ಮರ್ ಜಾತಿಯ, ಸಿಪ್ಪೆಯನ್ನು ತೆಗೆಯಲ್ಪಡುವ ಗೋಧಿಯು, ಸ್ಥಳೀಯವಾಗಿ ಬೆಳೆಸಲಾಗುತ್ತಿದ್ದ ಪ್ರಪ್ರಥಮ ಬೆಳೆಯಾಗಿತ್ತು. ಈ ಸಿಪ್ಪೆಯು ನೀಡುವ ಹೆಚ್ಚು ಸಂರಕ್ಷಣೆಯಿಂದಾಗಿ ಈ ಗೋಧಿಯನ್ನು, ಉತ್ತಮವಾದ ಮಣ್ಣಿನ ಆರೋಗ್ಯವನ್ನು ಹೊಂದಿರದಂತಹ ಪರ್ವತ ಪ್ರದೇಶಗಳಲ್ಲೂ ಬೆಳೆಯಲಾಗುತ್ತದೆ. ಕೇವಲ ಈ ಬೀಜಗಳು ಮಾತ್ರವಲ್ಲದೆ, ನಶಿಸಿ ಹೋಗುತ್ತಿದ್ದ, ಜಗತ್ತಿನಲ್ಲೇ ಅತ್ಯಂತ ಖಾರವಾದ ನಾಗಾಲ್ಯಾಂಡ್‌ನ ಭೂತ್ ಝಲೋಕಿಯ (ಘೋಸ್ಟ್ ಪೆಪ್ಪರ್), ಮೈಸೂರು ಮಲ್ಲಿಗೆ ಬದನೆಕಾಯಿ, ಮಹಾರಾಷ್ಟ್ರದ ಸಂಗ್ಡಿ ಅಕ್ಕಿ, ಕೇರಳದ, ನೀರಿನ ಉಪ್ಪನ್ನು ತಡೆಗಟ್ಟುವ ಕೈಪಾಡ್ ಅಕ್ಕಿ, ಕೊಚ್ಚಿಯ ಕೆಂಪು ಸೌತೇಕಾಯಿಯನ್ನೂ ಸಂಸ್ಥೆಯು ಪುನರುಜ್ಜೀವಿಸಿದೆ.

ದೇಸೀ ಬೀಜ ಏಕೆ ಸಂರಕ್ಷಿಸಬೇಕು?

ದೇಸೀ ಬೀಜಗಳು ಸ್ಥಳೀಯ ಕೃಷಿಗೆ ಬಹಳ ಸೂಕ್ತವಾದವು. ಬೆಳವಣಿಗೆಗೆ ಪೂರಕವಲ್ಲದ ವಾತಾವರಣಕ್ಕೂ ಈ ಬೀಜಗಳು ಒಗ್ಗಿಕೊಳ್ಳಬಲ್ಲವು, ಎಲ್ಲಾ ರೀತಿಯ ಪರಿಸರಕ್ಕೂ ಒಗ್ಗಿಕೊಳ್ಳಬಲ್ಲವು. ಪೀಳಿಗೆಗಳು ಮುಂದುವರಿಯುತ್ತಿದ್ದಂತೆ ಅವುಗಳ ಫಸಲಿನ ಪ್ರಮಾಣವೂ ಹೆಚ್ಚುತ್ತಾ ಹೋಗುತ್ತವೆ ಮತ್ತು ಇವು ಅತೀ ಪೌಷ್ಠಿಕವಾದವು. ಇವು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ, ಜೈವಿಕ ವೈವಿಧ್ಯವಾಗಿವೆ. ಇವುಗಳಿಗೆ ಯಾವ ರಾಸಾಯನಿಕವೂ ಬೇಕಾಗಿಲ್ಲದಿರುವುದರಿಂದ ಮಾಲಿನ್ಯವನ್ನೂ ಕುಗ್ಗಿಸುತ್ತವೆ. ವ್ಯಾಪಕವಾದ ಬೇಡಿಕೆ ಇರುವುದರಿಂದ, ಇವು ಸುಸ್ಥಿರವಾದ್ದರಿಂದ ರೈತರ ಆದಾಯವನ್ನೂ ಹೆಚ್ಚಿಸುತ್ತವೆ. ಇವು ರೈತರನ್ನು ಆತ್ಮನಿರ್ಭರರನ್ನಾಗಿ ಮಾಡುತ್ತವೆ.

ಆರ್ಟ್ ಆಫ್ ಲಿವಿಂಗ್‌ನ ಶ್ರೀ ಶ್ರೀ ಅಗ್ರಿಕಲ್ಚರಲ್ ಸೈನ್ಸಸ್ ಆಂಡ್ ಟೆಕ್ನಾಲಜಿ ಟ್ರಸ್ಟ್‌(Art of Linguing Sri Sri Agricultural Sciences and Technology Trust)ನ ಟ್ರಸ್ಟಿಯಾದ ಡಾ.ಪ್ರಭಾಕರ್ ರಾವ್ ಅವರು, ‘ಬೀಜಗಳಿಂದ ಬಿತ್ತನೆ ಬೀಜಗಳ ಪೂರೈಕೆಯು ರೈತರ ಜನ್ಮಸಿದ್ಧ ಹಕ್ಕು. ಇದರಿಂದ, ಪ್ರತಿ ವರ್ಷವೂ ಬೀಜಗಳ ಕಂಪನಿಗಳಿಂದ ಬೀಜಗಳನ್ನು ಕೊಳ್ಳುವ ಅನಿವಾರ್ಯತೆಯನ್ನು ಅವರು ಎದುರಿಸಬೇಕಾಗಿರುವುದಿಲ್ಲ. ಪ್ರತಿ ಋತುವಿನ ಅಂತ್ಯದಲ್ಲೂ ರೈತರು ತೋಟಕ್ಕೆ ಹೋಗಿ, ಅತೀ ದೊಡ್ಡದಾದ, ಅತೀ ಆರೋಗ್ಯಕರವಾದ ಬೆಳೆಯನ್ನು ಆಯ್ಕೆ ಮಾಡಿ, ಅವುಗಳನ್ನು ಹಣ್ಣಾಗಿ ಮಾಡಿ, ಆ ಬೀಜಗಳನ್ನು ಮುಂದಿನ ಬೆಳೆಗೆ ಬಳಸಬೇಕು. ಈಗ ಸಮುದಾಯದ ಮಾಲಿಕತ್ವವನ್ನು ಹೊಂದಿರುವ ಬೀಜಗಳ ಬ್ಯಾಂಕ್‌ನ ಮೂಲಕ ಈ ಹಕ್ಕನ್ನು ರೈತರು ಪ್ರತಿಪಾದಿಸುವಂತೆ ಮಾಡಿದ್ದೇವೆ’ ಎನ್ನುತ್ತಾರೆ.

ಬೀಜಗಳ ಬ್ಯಾಂಕ್ ಹೇಗೆ ಕೆಲಸ ಮಾಡುತ್ತೆ?

ಕೆಲವು ಸಂಸ್ಥೆಗಳು ಫಸಲನ್ನು ರಕ್ಷಿಸುವ ರೀತಿಯೆಂದರೆ, ಫಸಲುಗಳ ಅನುವಂಶಿಕೆಯನ್ನು ಹೊಂದಿರುವ ಜರ್ಮ್ ಪ್ಲಾಸ್ಮಾ ಅನ್ನು ಸಂರಕ್ಷಿಸುತ್ತಾರೆ. ಕ್ರೈಯೋಜೆನಿಕ್ ಪ್ರಯೋಗಾಲಯಗಳನ್ನು ಸ್ಥಾಪಿಸಿ, ಬೀಜಗಳನ್ನು ನೈಟ್ರೋಜನ್ ದ್ರಾವಣದಲ್ಲಿ ಶುದ್ಧ ಮಾಡಿ, ಹೆಪ್ಪುಗಟ್ಟಿಸಿ ಇಡಲಾಗುತ್ತದೆ. ಇದನ್ನು ಸಂಶೋಧನೆಯ ಉದ್ದೇಶಕ್ಕಾಗಿ ಮಾಡಲಾಗುತ್ತದೆ ಅಥವಾ ಮುಂದೆ ಯಾವುದಾದರೂ ಕಾರಣಕ್ಕೆ ಈ ಜಗತ್ತಿನಲ್ಲಿ ಆ ಬೀಜ ಲಭ್ಯವಾಗದೆ ಹೋದಾಗ, ಅದನ್ನು ಅನುವಂಶಿಕೆಯ ಮೂಲಕ ಮತ್ತೆ ಪುನರುಜ್ಜೀವಿಸಬಹುದು.

ಆದರೆ ನಮ್ಮ ದೃಷ್ಟಿಕೋನವೇ ವಿಭಿನ್ನವಾಗಿದೆ. ಬೀಜಗಳನ್ನು ಬಾಟಲಿಯಲ್ಲಿ ಸಂಗ್ರಹ ಮಾಡುವ ಮೂಲಕ ಅದರ ಸಂವರ್ಧನೆ ಸಾಧ್ಯವಿಲ್ಲ. ಬದಲಾಗಿ ಅದನ್ನು ಕ್ರಿಯಾಶೀಲವಾಗಿ ಅವುಗಳನ್ನು ಬಳಸುತ್ತಾ, ವೃದ್ಧಿಗೊಳಿಸುವುದು. ಇದು ಅವುಗಳನ್ನು ಜೀವಂತವಾಗಿಡುವ ಅತ್ಯುತ್ತಮವಾದ ವಿಧಾನವೆಂದು ನಮ್ಮ ನಂಬಿಕೆ. ಇಲ್ಲವಾದರೆ ರೈತರಿಗಾಗಿ ನಾವು ಸಮೃದ್ಧಿಯನ್ನು, ಲಾಭವನ್ನು ಹೇಗೆ ಉಂಟು ಮಾಡಲು ಸಾಧ್ಯ?

ಕರ್ನಾಟಕವು ಅತ್ಯಂತ ವೈವಿಧ್ಯಮಯವಾದ ಬೀಜಗಳನ್ನು ಹೊಂದಿದೆ. ಇದು ನಮ್ಮ ಸಂಪತ್ತು ಮತ್ತು ಅದನ್ನು ಸಂರಕ್ಷಿಸಬೇಕು. ಇದರಿಂದ ನಮ್ಮ ರೈತರು ಸ್ವತಂತ್ರರಾಗುತ್ತಾರೆ, ಅವರು ಆರೋಗ್ಯದಿಂದಿರುತ್ತಾರೆ ಮತ್ತು ಅವರ ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತದೆ.

ಬರಲಿದೆ ಶ್ರೀ ಶ್ರೀ ರವಿಶಂಕರ ಗುರೂಜಿ ಜೀವನಕಥನ ಆಧರಿಸಿದ ಸಿನಿಮಾ..!

ಪ್ರಾಕೃತಿಕವಾಗಿ ಬೆಳೆದಂತಹ ಬೂದುಗುಂಬಳಕಾಯಿಯು ತನ್ನ ಸಾಮಾನ್ಯ ತೂಕಕ್ಕಿಂತಲೂ 10 ಪಟ್ಟು ಹೆಚ್ಚು ತೂಕವನ್ನು, ಬೂದುಸೋರೆಕಾಯಿಯು 30 ಕಿಲೋ ತೂಕವನ್ನು ನಮ್ಮ ಮಾದರಿ ತೋಟಗಳಲ್ಲಿ ಹೊಂದಿರುವುದು ಈಗ ಸರ್ವೇಸಾಮಾನ್ಯವಾಗಿದೆ. ದೇಸೀ ತಳಿಗಳಿಗೆ ಅವಕಾಶವನ್ನು ಕೊಡುವ ರೈತರಿಗೆ ಸಿಗುವ ಉಜ್ವಲವಾದ ಭವಿಷ್ಯವನ್ನು ಇದು ಸೂಚಿಸುತ್ತದೆ.

click me!