India Gate: ಮೋದಿ ಮತ್ತು ಆರೆಸ್ಸೆಸ್‌ ನಡುವೆ ಏನಾಗ್ತಿದೆ?

By Prashant Natu  |  First Published Jul 13, 2024, 8:39 AM IST

ಇತ್ತೀಚೆಗೆ ಆರ್‌ಎಸ್‌ಎಸ್‌ ಹಾಗೂ ಸಂಘಪರಿವಾರದ ನಾಯಕರು ''ಮೋದಿ ಪರಿವಾರದ ಬಿಜೆಪಿ''ಯನ್ನು ಕಟುವಾಗಿ ಟೀಕಿಸಿದ ಸುದ್ದಿಗಳನ್ನು ಓದಿರುತ್ತೀರಿ. ಈ ಮೊದಲು, ಗಡ್ಕರಿ, ಯೋಗಿ ಆದಿತ್ಯನಾಥ್‌, ಸಂತೋಷ್‌ ವಿಷಯದಲ್ಲಿ ಕೊಂಚ ಏರುಪೇರಾಗಿದ್ದ ಮೋದಿ-ಆರೆಸ್ಸೆಸ್‌ ಸಂಬಂಧ ಈಗ ಇನ್ನೂ ಒಂದು ತಿರುವಿಗೆ ಬಂದು ನಿಂತಿದೆ. ಈ ಸಂಬಂಧ ಮುಂದೆ ಹೇಗೆ ಸಾಗುತ್ತವೆ ಎಂಬುದರ ಮೊದಲ ಝಲಕ್ ಜೆ.ಪಿ.ನಡ್ದಾ ತೆರವುಗೊಳಿಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನುವುದರಲ್ಲಿ ಕಾಣಲಿದೆ.
 


- ಪ್ರಶಾಂತ್‌ ನಾತು

ಯಾವುದೇ ಮನುಷ್ಯನ ಸಾಮರ್ಥ್ಯಗಳೇ ಕೆಲ ದಿನಗಳಾದ ನಂತರ ಹೊಸ ರೀತಿಯ ಸಮಸ್ಯೆ ಆಗಿ ಪರಿಣಮಿಸುತ್ತವೆ ಅನ್ನೋದು ಸಾರ್ವಕಾಲಿಕ ಸತ್ಯ. ಈಗ ಮೋದಿ ವಿಷಯದಲ್ಲೂ ಕಟ್ಟಾ ಆರ್‌ಎಸ್‌ಎಸ್‌ಗೆ ಹಾಗೇ ಆಗುತ್ತಿದೆ ಎನ್ನುವುದು ಬಹಿರಂಗ ರಹಸ್ಯ. ಇತ್ತೀಚೆಗೆ ಆರ್‌ಎಸ್‌ಎಸ್‌ ಹಾಗೂ ಸಂಘಪರಿವಾರದ ನಾಯಕರು ''ಮೋದಿ ಪರಿವಾರದ ಬಿಜೆಪಿ''ಯನ್ನು ಕಟುವಾಗಿ ಟೀಕಿಸಿದ ಸುದ್ದಿಗಳನ್ನು ಓದಿರುತ್ತೀರಿ. ವಾಸ್ತವ ಏನೆಂದರೆ, ಮೋದಿ ಅವರಿಗೆ, ಈಗ ಆರ್‌ಎಸ್‌ಎಸ್‌ನ ಎಲ್ಲ ಆದ್ಯತೆಗಳನ್ನು ಈಡೇರಿಸುವ ಅವಕಾಶಗಳಿಲ್ಲ. ಅವರಿಗೆ ಒಟ್ಟಾರೆ ರಾಷ್ಟ್ರೀಯ ರಾಜಕೀಯ ಹಾಗೂ ಜಾಗತಿಕ ರಾಜಕೀಯವನ್ನೂ ನಿಭಾಯಿಸುವ ಅನಿವಾರ್ಯತೆ ಇದೆ. ಹಾಗಾಗಿ ‘ಆರ್‌ಎಸ್‌ಎಸ್‌ ಏನಾದರೂ ಸಲಹೆ ಕೊಡಲಿ, ಆದರೆ ಅದು ಹೇಳಿದ್ದೆಲ್ಲವನ್ನೂ ಕೇಳಲೇಬೇಕು ಅನ್ನುವ ಸ್ಥಿತಿಯಲ್ಲಿ ನಾನಿಲ್ಲ’ ಎಂದು ಅನ್ನಿಸುತ್ತಿದೆ. ಆರ್‌ಎಸ್‌ಎಸ್‌ ಪ್ರಮುಖರಿಗೆ, ‘ಮೋದಿ ಕ್ಲೀನ್ ಇದ್ದಾರೆ. ಹಿಂದುತ್ವಕ್ಕೆ ಬದ್ಧರಾಗಿದ್ದಾರೆ. ಆದರೆ ಅವರಿಗೆ ಸಂಘವನ್ನೂ ಮೀರಿದ ವ್ಯಕ್ತಿಪೂಜೆ ಹೆಚ್ಚಾಗುತ್ತಾ ಹೋದರೆ ಮುಂದೆ ದೀರ್ಘಕಾಲದಲ್ಲಿ ಮೋದಿ-ರಹಿತ ಸಂಘದ ಪ್ರಸ್ತುತತೆ ಉಳಿಯೋದು ಹೇಗೆ’ ಎಂದು ಅನ್ನಿಸುತ್ತಿದೆ.

Tap to resize

Latest Videos

undefined

ಘಟನೆ 1

ಚುನಾವಣೆಗೆ ಮುಂಚೆ ನಡೆದ ದಿಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಒಂದು ಪ್ರದರ್ಶಿನಿ ಇತ್ತಂತೆ. ಆರ್‌ಎಸ್‌ಎಸ್‌(RSS)ನ ಅನೇಕ ಹಿರಿಯ ಪ್ರಚಾರಕರು ಅದನ್ನು ನೋಡಲು ಹೋಗಿದ್ದಾರೆ. ಹಾಕಿದ 2000 ಫೋಟೋಗಳಲ್ಲಿ ಒಂದೊಂದು ಮಾಜಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಫೋಟೋ ಬಿಟ್ಟರೆ ಹೆಚ್ಚಿನೆಲ್ಲ ಫೋಟೋಗಳು ಮೋದಿ(PM Modi) ಅವರದ್ದೇ ಇತ್ತಂತೆ. ಈ ಪ್ರದರ್ಶಿನಿ ಸಂಘದಿಂದ ಬಿಜೆಪಿಗೆ ಹೋಗಿರುವ ನಾಯಕರಲ್ಲಿ ಸಾಕಷ್ಟು ಚರ್ಚೆಗೂ ಕಾರಣ ಆಗಿತ್ತು.

ಮೋದಿ ಅಧಿಕಾರಾವಧಿಯಲ್ಲಿ ಖಾದಿ ಉತ್ಪನ್ನ ಮಾರಾಟ 5 ಪಟ್ಟು ಏರಿಕೆ

ಘಟನೆ 2

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದಾ(JP Nadda) ‘ಇನ್ನು ಬಿಜೆಪಿಗೆ ಆರ್‌ಎಸ್‌ಎಸ್‌ ಸಹಾಯದ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದು. ಇದು ನಡ್ದಾ ಬಾಯಲ್ಲಿ ಆಕಸ್ಮಿಕವಾಗಿ ಬಂದಿದ್ದಾ ಅಥವಾ ಮುದ್ದಾಂ ಬರಿಸಿದ್ದಾ ಅನ್ನುವ ಚರ್ಚೆ ಸಂಘ ಪರಿವಾರದಲ್ಲಿ ಜೋರಾಗಿಯೇ ನಡೆದಿದೆ.

ಘಟನೆ 3

ಲೋಕಸಭಾ ಚುನಾವಣೆ(Lok sabha election 2024)ಯಲ್ಲಿ ಸ್ಥಾನಗಳಿಕೆ ಕಡಿಮೆಯಾಗಲು ಕೆಲ ಬಿಜೆಪಿಯ ನಾಯಕರು ಅಹಂಕಾರ ತೋರಿಸಿದ್ದೇ ಕಾರಣ ಎಂದು ಆರ್‌ಎಸ್‌ಎಸ್‌ ನಾಯಕರು ಇತ್ತೀಚೆಗೆ ಬಹಿರಂಗವಾಗಿ ಟೀಕಿಸಿದ್ದರು.

ಮೋದಿ ಮತ್ತು ಸಂಘದ ನಡುವೆ ಏನಾಗುತ್ತಿದೆ ಅನ್ನುವುದು ತಿಳಿಯಲು ಈ ಮೂರು ಘಟನೆಗಳು ಸಾಕು.

ಸಮಸ್ಯೆ ಶುರು ಆಗಿದ್ದು ಎಲ್ಲಿ?

ಆರ್‌ಎಸ್‌ಎಸ್‌ ಮತ್ತು ಮೋದಿ(RSS and Modi) ನಡುವೆ ಮೊದಲ ಅವಧಿಯಲ್ಲಿ ಸಂಬಂಧಗಳು ಆತ್ಮೀಯವಾಗೇ ಇದ್ದವು. ಮೋದಿಯವರು ಬಹುತೇಕ ನಿರ್ಣಯ ತೆಗೆದುಕೊಳ್ಳುವಾಗ ಸಂಘದ ಹಿರಿಯರ ಬಳಿಗೆ ಅಮಿತ್ ಶಾ(Amit shah)ರನ್ನು ಕಳುಹಿಸುತ್ತಿದ್ದರು. ಸಂಘ ಹೇಳಿದ 10ರಲ್ಲಿ 5 ಕೆಲಸ ಪಕ್ಕಾ ಆಗುತ್ತಿದ್ದವು. ಆದರೆ 2017ರಲ್ಲಿ ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿ ಮಾಡುವುದು ಅಮಿತ್ ಶಾಗೆ ಇಷ್ಟ ಇರಲಿಲ್ಲವಂತೆ. ಅವರಿಗೆ ಕೇಶವ ಪ್ರಸಾದ ಮೌರ್ಯರನ್ನು ಮಾಡಬೇಕಿತ್ತು. ಆದರೆ ಸಂಘ ಅದನ್ನು ವೀಟೊ ಮಾಡಿದ್ದೂ ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾಗಿದ್ದೂ ಎಲ್ಲರಿಗೂ ಗೊತ್ತೇ ಇದೆ. ಮುಂದೆ ‘ಬಿಜೆಪಿ ಸಂಘಟನಾ ಕಾರ್ಯದರ್ಶಿ ರಾಮಲಾಲ್ ನಮ್ಮ ಸ್ಪೀಡ್‌ಗೆ ಆಗುವುದಿಲ್ಲ. ಯಾರಾದರೂ ತರುಣರನ್ನು ಕೊಡಿ’ ಎಂದು ಮೋದಿ ಪಾಳೆಯದಿಂದ ಆರ್‌ಎಸ್‌ಎಸ್‌ಗೆ ಸಲಹೆ ಹೋಯಿತು. ಆರ್‌ಎಸ್‌ಎಸ್‌ ಎರಡು ಹೆಸರು ಕೊಟ್ಟಿತು. ಮೊದಲನೆಯದು ಎಬಿವಿಪಿಯಿಂದ ಬಂದಿದ್ದ ನಾಗ್ಪುರದ ಸುನೀಲ ಅಂಬೇಕರ ಮತ್ತೊಂದು ಬಿ.ಎಲ್‌.ಸಂತೋಷ್(BL Santosh) ಅವರದು. ಮೋದಿ ಮತ್ತು ಶಾ ಸಂತೋಷ್ ಹೆಸರನ್ನು ಆಯ್ಕೆ ಮಾಡಿಕೊಂಡರು. ಆದರೆ ನೋಡನೋಡುತ್ತಾ ಒಂದು ವರ್ಷದಲ್ಲಿ ಈ ಸೂತ್ರ ಏರುಪೇರಾಯಿತು. ಆಗ ಅಮಿತ್ ಶಾ ಉತ್ತರ ಪ್ರದೇಶದಲ್ಲಿ ಸಂಘಟನಾ ಕಾರ್ಯದರ್ಶಿ ಆಗಿದ್ದ ಸುನೀಲ ಬನ್ಸಲ್‌ರನ್ನು ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಆಗಿ ಕರೆದುಕೊಂಡು ಬರುವ ಪ್ರಯತ್ನ ಮಾಡಿದರು. ಆದರೆ ಅದಕ್ಕೆ ಸಂಘ ಪ್ರಮುಖರು ಸಾಧ್ಯ ಇಲ್ಲ ಅಂದರು. ಆಗ ಮೋದಿ ಮತ್ತು ಅಮಿತ್ ಶಾ ಜೊತೆಗೆ ಸಂಘದ ಸಹ ಸರಕಾರ್ಯವಾಹರಾಗಿ ಬಿಜೆಪಿ ಉಸ್ತುವಾರಿ ಆಗಿದ್ದ ಕೃಷ್ಣ ಗೋಪಾಲ್‌ಗೆ ಸಮಸ್ಯೆಗಳು ಶುರು ಆದವು. ''ತುಂಬಾ ಹಸ್ತಕ್ಷೇಪ'' ಎಂದು ಬಿಜೆಪಿ ನಾಯಕರು ಗೊಣಗತೊಡಗಿದಾಗ ಆರ್‌ಎಸ್‌ಎಸ್‌ ಅವರನ್ನು ಕೂಡ ಬದಲಿಸಿ ಹರ್ಯಾಣದ ಅರುಣ್‌ ಕುಮಾರಗೆ ಬಿಜೆಪಿ ಮತ್ತು ಸಂಘದ ಸಮನ್ವಯ ಜವಾಬ್ದಾರಿ ನೀಡಿತು. ಇನ್ನು ಅಧ್ಯಕ್ಷರಾಗಿ ಅಮಿತ್ ಶಾ ಅವಧಿ ಮುಗಿದ ಮೇಲೆ ಭೂಪೇಂದ್ರ ಯಾದವ್‌ರನ್ನು ರಾಷ್ಟ್ರೀಯ ಅಧ್ಯಕ್ಷರಾಗಿ ಮಾಡುವ ಮನಸ್ಸು ಮೋದಿ ಮತ್ತು ಶಾ ಅವರಿಗಿತ್ತು. ಆದರೆ ಆರ್‌ಎಸ್‌ಎಸ್‌ ಅಭಿಪ್ರಾಯಕ್ಕೆ ಮನ್ನಣೆ ಸಿಕ್ಕಿ, ಸರ್ವಸಮ್ಮತವಾಗಿ ಜೆ.ಪಿ.ನಡ್ದಾ ರಾಷ್ಟ್ರೀಯ ಅಧ್ಯಕ್ಷರಾದರು. ಒಟ್ಟಾರೆ ಮೋದಿ ಮತ್ತು ನಾಗ್ಪುರದ ಆರ್‌ಎಸ್‌ಎಸ್‌ ಸಂಬಂಧಗಳು ‘ನೀನಿದ್ದರೆ ಕಷ್ಟ ಹೌದು, ಆದರೆ ನೀನು ಇಲ್ಲದೇ ಇನ್ನೂ ಕಷ್ಟ’ ಎನ್ನುವ ಸ್ಥಿತಿಗೆ ಬಂದು ನಿಂತಂತೇ ಕಾಣುತ್ತಿವೆ.

ಗಡ್ಕರಿ ಫ್ಲಾಶ್ ಪಾಯಿಂಟ್

ಮೋದಿ ಮತ್ತು ಆರ್‌ಎಸ್‌ಎಸ್‌ ನಡುವಿನ ಶೀತಲ ಸಮರ ಬಹಿರಂಗಗೊಂಡಿದ್ದು ನಿತಿನ್ ಗಡ್ಕರಿ ವಿಷಯದಲ್ಲಿ. ಹಾಗೆ ನೋಡಿದರೆ 2012ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಗಡ್ಕರಿ ಅವರು ಯುಪಿಗೆ ಪ್ರಭಾರಿಯಾಗಿ ಮೋದಿಯವರ ಕಡುವೈರಿ ಸಂಜಯ ಜೋಶಿಯನ್ನು ನೇಮಿಸಿದಾಗ ಮೋದಿ ಎಷ್ಟು ಸಿಟ್ಟಾಗಿದ್ದರೆಂದರೆ, ಮುಂಬೈ ಕಾರ್ಯಕಾರಿಣಿಗೇ ಬರುವುದಿಲ್ಲ ಎಂದು ಎಂದಿದ್ದರು. ಕೊನೆಗೆ ನಿತಿನ್ ಗಡ್ಕರಿ, ಸಂಜಯ ಜೋಶಿ ಅವರನ್ನು ತೆಗೆದುಹಾಕಿದ ಪತ್ರಿಕಾ ಪ್ರಕಟಣೆ ಕೊಟ್ಟ ಮೇಲೆಯೇ ಮೋದಿ ವಿಮಾನ ಮುಂಬೈನತ್ತ ಹೊರಟಿತ್ತು. ಆಗಿನಿಂದ ಮೋದಿ ಮತ್ತು ಗಡ್ಕರಿ ಸಂಬಂಧವೂ ಅಷ್ಟಕಷ್ಟೆ. 2019ರ ನಂತರ ಗಡ್ಕರಿ, ಹೋದಲ್ಲಿ ಬಂದಲ್ಲಿ ಸರ್ಕಾರದ ವಿರುದ್ಧ ಹಾಗೂ ಮೋದಿ ವಿರುದ್ಧ ಪರೋಕ್ಷವಾಗಿ ಮಾತನಾಡಲು ಶುರು ಮಾಡಿದಾಗ ಅಮಿತ್ ಶಾ ಆರ್‌ಎಸ್‌ಎಸ್‌ ನಾಯಕರ ಬಳಿ ಗಡ್ಕರಿ ವಿರುದ್ಧ ದೂರು ನೀಡಿದರು. ಅಲ್ಲದೇ, ಆಗ 2021ರಲ್ಲಿ ಸಂಪುಟ ಪುನಾರಚನೆ ಮಾಡುವಾಗ ಮೋದಿ ಆರ್‌ಎಸ್‌ಎಸ್‌ ನಾಯಕರ ಬಳಿ ಗಡ್ಕರಿಯನ್ನು ಕೈಬಿಡುತ್ತವೆ ಎಂದರು. ನಮ್ಮದಂತೂ ಒಪ್ಪಿಗೆ ಇಲ್ಲ ಎಂದು ನಾಗ್ಪುರದ ಹಿರಿಯರು ಸ್ಪಷ್ಟವಾಗಿ ಹೇಳಿದಾಗ ಮೋದಿ ಆರ್‌ಎಸ್‌ಎಸ್‌ನ ಮಾತನ್ನು ಒಪ್ಪಬೇಕಾಗಿ ಬಂತು. ಆದರೆ, ಅದಾದ 6 ತಿಂಗಳ ನಂತರ ನಿತಿನ್ ಗಡ್ಕರಿಯನ್ನು ಸಂಸದೀಯ ಮಂಡಳಿಯಿಂದ ತೆಗೆಯಲಾಯಿತು. ಅದೂ ಹೇಗೆ ಎಂದರೆ... ಹರ್ಯಾಣದ ಮಾಜಿ ಸಂಸದೆ ಜ್ಯೋತಿ ಯಾದವ್, ನನ್ನನ್ನು ಯಾವುದಾದರೂ ರೀತಿಯಲ್ಲಿ ದಯವಿಟ್ಟು ಪಾರ್ಟಿ ಕೆಲಸಕ್ಕೆ ಉಪಯೋಗಿಸಿಕೊಳ್ಳಿ ಎಂದು ಕೇಳಲು ಗಡ್ಕರಿ ಮನೆಗೆ ಹೋಗಿದ್ದರಂತೆ. ಅದಾದ ಒಂದು ವಾರದಲ್ಲಿ ಜ್ಯೋತಿ ಯಾದವ್ ಬಿಜೆಪಿ ಪಾರ್ಲಿಮೆಂಟರಿ ಬೋರ್ಡ್ ಸದಸ್ಯರಾಗಿದ್ದರು! ಗಡ್ಕರಿಯಂಥ ಹಿರಿಯ ನಾಯಕರು ಅಲ್ಲಿಂದ ಹೊರಬಿದ್ದಿದ್ದರು.

ಸಂತೋಷ್‌ ಏಕೆ ಕರ್ನಾಟಕದ ವಿಷಯದಲ್ಲಿ ತಲೆ ಹಾಕುವುದಿಲ್ಲ?

ಕರ್ನಾಟಕದ ವಿಧಾನಸಭಾ ಚುನಾವಣೆಗಳ ಫಲಿತಾಂಶ ಬಂದ ನಂತರ ಸಂಘದ ಪ್ರಚಾರಕರಾಗಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಗಿದ್ದ ಬಿ.ಎಲ್.ಸಂತೋಷ್ ಅವರ ವಿರುದ್ಧ ಏಕಾಏಕಿ ಬಿಜೆಪಿಯ ಆಂತರಿಕ ವಲಯದಲ್ಲಿ ಅಪಸ್ವರಗಳು ಕೇಳಿಬರಲಾರಂಭಿಸಿದವು. ಆಗ ಸಂತೋಷ್ ಬದಲಿಗೆ ಸುನೀಲ ಬನ್ಸಲ್‌ರನ್ನು ತರುವ ಪ್ರಯತ್ನ ನಡೆದವು. ಆದರೆ ಆರ್‌ಎಸ್‌ಎಸ್‌ ಹಿರಿಯರು ನಮಗೆ ಅನ್ನಿಸಿದಾಗ ತರುತ್ತೇವೆಯೇ ಹೊರತು ನಿಮಗೆ ಅನ್ನಿಸಿದಾಗ ಹೊಸ ಪ್ರಚಾರಕರನ್ನು ಕೊಡಲು ಆಗುವುದಿಲ್ಲ ಎಂದು ಹೇಳಿದರು. ಕರ್ನಾಟಕದ ಬಿಜೆಪಿ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನ ಆಯ್ಕೆ ತಡವಾಗಿದ್ದು ಅಲ್ಲಿಯೇ. ಒಂದು ವೇಳೆ ಸಂತೋಷ್ ಜಾಗಕ್ಕೆ ಹೊಸಬರು ಬಂದಿದ್ದಲ್ಲಿ ರಾಜ್ಯ ಅಧ್ಯಕ್ಷರಾಗಿ ವಿಜಯೇಂದ್ರ ಬದಲಿಗೆ ಬೇರೆ ಯಾರಾನ್ನಾದರೂ ಒಕ್ಕಲಿಗರನ್ನು ತಂದು, ಯತ್ನಾಳ್‌ರನ್ನು ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಚರ್ಚೆ ದಿಲ್ಲಿ ಬಿಜೆಪಿ ನಾಯಕರಲ್ಲಿ ನಡೆದಿತ್ತು. ಈಗಲೂ ಯಾರೇ ದಿಲ್ಲಿಗೆ ಹೋಗಿ ಭೇಟಿ ಆದರೂ ಕೂಡ ಸಂತೋಷ್ ನಾನು ಕರ್ನಾಟಕದ ವಿಷಯದಲ್ಲಿ ತಲೆ ಹಾಕುವುದಿಲ್ಲ ಎಂದು ಹೇಳಿ ಕಳುಹಿಸುತ್ತಾರೆ.

ಇತಿಹಾಸದ ಪುಟಗಳಿಂದ

1925ರಿಂದ ಹೆಚ್ಚುಕಡಿಮೆ 1948ರ ವರೆಗೂ ಆರ್‌ಎಸ್‌ಎಸ್‌ಗೆ ತಮ್ಮದೊಂದು ರಾಜಕೀಯ ಪಾರ್ಟಿ ಇರಬೇಕೆಂದು ಅನ್ನಿಸಿರಲಿಲ್ಲ. ಆದರೆ ಯಾವಾಗ ಗಾಂಧಿ ಹತ್ಯೆ ನಂತರ ಸಂಘದ ನಿಷೇಧ ಆಯಿತೋ ಆಗ ಆರ್‌ಎಸ್‌ಎಸ್‌ನ ಎರಡನೇ ಸರ ಸಂಘ ಚಾಲಕರಾಗಿದ್ದ ಗುರೂಜಿ ಗೋಳವಳ್ಕರ್‌ರಿಗೆ ಕಾಂಗ್ರೆಸ್ ವಿರುದ್ಧ ಒಂದು ಹಿಂದುತ್ವದ ವಿಚಾರ ಹೇಳುವ ಹೊಸ ಪಾರ್ಟಿ ಬೇಕು ಎಂದು ಮನವರಿಕೆ ಮಾಡಿಕೊಟ್ಟಿದ್ದು, ಹಿಂದೂ ಮಹಾಸಭಾದಲ್ಲಿ ವಿನಾಯಕ ಸಾವರ್ಕರ್‌ ವಿರುದ್ಧ ಮತಭೇದ ಇದ್ದು ಹೊರಬಂದಿದ್ದ ಶ್ಯಾಮಪ್ರಸಾದ್‌ ಮುಖರ್ಜಿ. ಗುರೂಜಿಗೆ ತುಂಬಾ ಒಪ್ಪಿಗೆ ಇರದಿದ್ದರೂ ಪಂಡಿತ್ ದೀನದಯಾಳ್ ಉಪಾಧ್ಯಾಯ, ನಾನಾಜಿ ದೇಶಮುಖ್‌, ಅಟಲ್ ಬಿಹಾರಿ ವಾಜಪೇಯಿ, ಬಲರಾಜ್ ಮುಧೋಕ್, ಲಾಲ್‌ಕೃಷ್ಣ ಅಡ್ವಾಣಿ ಹೀಗೆ ಸಂಘದ ಕೆಲ ಸ್ವಯಂಸೇವಕರನ್ನು ಹಂತಹಂತವಾಗಿ ಜನಸಂಘಕ್ಕೆ ಕಳುಹಿಸಲಾಯಿತು. ಇದೆಲ್ಲ ಆಗಿ 20 ವರ್ಷ ಮಣ್ಣು ಹೊತ್ತ ನಂತರ 1967ರ ಸುಮಾರಿಗೆ ಜನಸಂಘಕ್ಕೆ 100 ಸೀಟು ಸಿಕ್ಕು, ಚೌಧರಿ ಚರಣ್ ಸಿಂಗ್‌ರನ್ನು ಕಾಂಗ್ರೆಸ್ ಒಡೆದು ಬರುವಂತೆ ಮಾಡಿ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ ಮಾಡಲಾಯಿತು. ನಂತರ ಶುರುವಾಗಿದ್ದು ಬಲರಾಜ್ ಮುಧೋಕ್ ವರ್ಸಸ್ ಅಟಲ್ ಬಿಹಾರಿ ವಾಜಪೇಯಿ ಕಿತ್ತಾಟ. ಅದರಲ್ಲಿ ಆರ್‌ಎಸ್‌ಎಸ್‌ ವಾಜಪೇಯಿ ಜೊತೆಗೆ ಇತ್ತು. ಇದೇ ಕಾರಣದಿಂದ ನಾನಾಜಿ ದೇಶಮುಖ್‌ ಜನಸಂಘ ಬಿಟ್ಟು ಹೋಗಿ ಚಿತ್ರಕೂಟ ಸೇರಿಕೊಂಡರು. ಆಮೇಲೆ 1984ರ ಸೋಲಿನ ನಂತರ ಆರ್‌ಎಸ್‌ಎಸ್‌ ಅಟಲ್‌ಗಿಂತ ಜಾಸ್ತಿ ಅಡ್ವಾಣಿಯವರನ್ನು ಎತ್ತಿ ಹಿಡಿಯತೊಡಗಿತ್ತು. 1999ರಲ್ಲಂತೂ ವಾಜಪೇಯಿ ಜಸ್ವಂತ ಸಿಂಗ್‌ರನ್ನು ಇನ್ನೇನು ಹಣಕಾಸು ಸಚಿವರಾಗಿ ಮಾಡಬೇಕು ಅನ್ನುವಾಗ ಆಗಿನ ಸರ ಸಂಘಚಾಲಕ ಕೆ.ಸಿ.ಸುದರ್ಶನ್ ಯಾವುದೇ ಕಾರಣಕ್ಕೂ ಕೂಡದು ಎಂದು ಹೇಳಿ ಯಶವಂತ ಸಿನ್ಹಾರನ್ನು ಹಣಕಾಸು ಸಚಿವ ಮಾಡಿದರು. ಆಗ ಕೆಟ್ಟ ವಾಜಪೇಯಿ ಹಾಗೂ ಸುದರ್ಶನ್ ಸಂಬಂಧ ಆರ್‌ಎಸ್‌ಎಸ್‌ ಸರ ಸಂಘಚಾಲಕರು ಸಂದರ್ಶನ ಕೊಟ್ಟು ವಾಜಪೇಯಿಯನ್ನು ಟೀಕಿಸುವ ಮಟ್ಟಕ್ಕೆ ಹೋಯಿತು. 2002ರ ಗುಜರಾತ್ ದಂಗೆಗಳ ನಂತರ ಮೋದಿ ಅವರನ್ನು ವಾಜಪೇಯಿ ಮುಖ್ಯಮಂತ್ರಿ ಸ್ಥಾನದಿಂದ ತೆಗೆಯಲು ಹೊರಟಾಗ ಅಡ್ವಾಣಿ ಮೂಲಕ ಅದನ್ನು ತಡೆದದ್ದೇ ಆರ್‌ಎಸ್‌ಎಸ್‌. ಆದರೆ ಈಗ 22 ವರ್ಷಗಳ ನಂತರ ಮೋದಿ ಮತ್ತು ಆರ್‌ಎಸ್‌ಎಸ್‌ ಸಂಬಂಧಗಳು ಏರಿಳಿತ ಕಾಣುತ್ತಿವೆ. ಆರ್‌ಎಸ್‌ಎಸ್‌ಗೆ ಮೋದಿ ಅನಿವಾರ್ಯ ಎಂದು ಗೊತ್ತಿದೆ, ಆದರೆ ಸ್ವಲ್ಪ ಮಾತು ಕೇಳಲಿ ಎಂಬ ತಳಮಳವೂ ಇದೆ.

ಬಿಜೆಪಿ ಅಂದುಕೊಂಡಷ್ಟು ರಾಮಮಂದಿರ ಪರಿಣಾಮ ಬೀರಿಲ್ಲವೇ?: ಮೋದಿ ಏಕ್‌ದಂ ಅಗ್ರೆಸಿವ್ ಆಗಿದ್ದು ಏಕೆ?

ಇಬ್ಬರಿಗೂ ಪರಸ್ಪರರು ಬೇಕು!

ಇಂಡಿಯಾ ಒಕ್ಕೂಟದಲ್ಲಿ ಟ್ರೋಫಿ ತೆಗೆದುಕೊಂಡಿದ್ದು ರಾಹುಲ್ ಗಾಂಧಿ ಅನ್ನಿಸಿದರೂ ಕೂಡ ಅವರಿಗೋಸ್ಕರ ರನ್ ಹೊಡೆಯಲು ಅಖಿಲೇಶ್ ಯಾದವ್, ಮಮತಾ, ಸ್ಟಾಲಿನ್‌, ಶರದ್ ಪವಾರ್‌, ಉದ್ಧವ್‌ ಠಾಕ್ರೆ, ತೇಜಸ್ವಿ ಯಾದವ್ ಇದ್ದರು. ಆದರೆ ಬಿಜೆಪಿಯದು ಹಾಗಲ್ಲ. ಸೆಂಚುರಿ ಹೊಡೆಯಲು ಮೋದಿಯೇ ಬೇಕು. ಅಷ್ಟು ರನ್ ಹೊಡೆದರೆ ಮಾತ್ರ ಮೋದಿಗೆ ಟ್ರೋಫಿ. ಬಹುತೇಕ ಈ ಕಾರಣದಿಂದಲೇ ಬಿಜೆಪಿ 303ರಿಂದ 240ಕ್ಕೆ ಬಂತು. ಇನ್ನುಮುಂದೆ ಆಕ್ರಮಣಕಾರಿಯಾಗಿರುವ ವಿಪಕ್ಷಗಳು ಒಂದು ಸವಾಲು. ಇದನ್ನು ಎದುರಿಸಲು ಮೋದಿಗೂ ಸಂಘ ಪರಿವಾರ ಬೇಕು, ಜೊತೆಗೆ ಅಧಿಕಾರದ ಮಹತ್ವ ಅರಿತಿರುವ ಪರಿವಾರಕ್ಕೂ ಅದರ ನಿರಂತರತೆಗೆ ಮೋದಿಯಂಥ ಜನಪ್ರಿಯ ವಿಶ್ವಾಸಾರ್ಹ ಮುಖ ಬೇಕು.

ಮೋದಿ ಅವರಿಗೆ 75 ತುಂಬಿದಾಗ ಮುಂದೆ ಏನು, ಮೋದಿ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಇನ್ನೂ ಸ್ವಲ್ಪ ಸಮಯ ಇದೆ. ಆದರೆ, ಮೋದಿ ಮತ್ತು ನಾಗ್ಪುರದ ನಡುವಿನ ಸಂಬಂಧ ಮುಂದೆ ಹೇಗೆ ಸಾಗುತ್ತವೆ ಎಂಬುದರ ಮೊದಲ ಝಲಕ್ ಜೆ.ಪಿ.ನಡ್ದಾ ತೆರವುಗೊಳಿಸಿದ ಸ್ಥಾನಕ್ಕೆ ಯಾರು ಬರುತ್ತಾರೆ ಅನ್ನುವುದರಲ್ಲಿ ಕಾಣಲಿದೆ.

click me!