ಭಾರತೀಯ ರೈಲ್ವೆ ಮಾಡಿದ ಸಣ್ಣ ತಪ್ಪಿನಿಂದಾಗಿ ರೈತರೊಬ್ಬರು ಸಂಪೂರ್ಣ ರೈಲಿನ ಮಾಲೀಕರಾಗಿದ್ದರು. ರೈಲ್ವೆ ನಿಲ್ದಾಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ನ್ಯಾಯಾಲಯ ಆದೇಶ ನೀಡಿತ್ತು.
ನವದೆಹಲಿ: ಭಾರತೀಯ ರೈಲ್ವೆ ಪ್ರಯಾಣಿಕರ ನೆಚ್ಚಿನ ಸಾರಿಗೆಯಾಗಿದ್ದು, ಎಲ್ಲಾ ವರ್ಗದವರು ಪ್ರಯಾಣಿಸುತ್ತಾರೆ. ಭಾರತದ ರೈಲು ಸಾರ್ವಜನಿಕ ಸಾರಿಗೆ ಸಂಸ್ಥೆಯಾಗಿದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಭಾರತೀಯ ರೈಲ್ವೆಯ ನಿರ್ವಹಣೆ, ನೇಮಕಾತಿ ಸೇರಿದಂತೆ ಎಲ್ಲಾ ತರಹದ ಕೆಲಸಗಳು ಭಾರತ ಸರ್ಕಾರವೇ ನಿರ್ವಹಿಸುತ್ತದೆ. ಹಾಗಾಗಿ ಖಾಸಗಿ ಒಡೆತನಕ್ಕೆ ಇಲ್ಲಿ ಅವಕಾಶವೇ ಇಲ್ಲ. ಭಾರತ ಸರ್ಕಾರವೇ ಸಂಪೂರ್ಣ ಮಾಲೀಕತ್ವವನ್ನು ಹೊಂದಿದೆ. ಆದ್ರೆ ಭಾರತದ ಓರ್ವ ವ್ಯಕ್ತಿ ಬಳಿ ಮಾತ್ರ ಇಡೀ ರೈಲಿನ ಮಾಲೀಕತ್ವ ಇದೆ. ಆ ವ್ಯಕ್ತಿ ಅತ್ಯಂತ ಶ್ರೀಮಂತ ಅಂತ ತಿಳಿದುಕೊಂಡಿದ್ದರೆ ಖಂಡಿತ ತಪ್ಪು. ಆ ವ್ಯಕ್ತಿ ನೀವು ಅಂದುಕೊಂಡಂತೆ ಅದಾನಿ, ಅಂಬಾನಿ ಕುಟುಂಬದ ಬಳಿ ರೈಲ್ವೆಯೇ ಮಾಲೀಕತ್ವ ಇಲ್ಲ. ರತನ್ ಟಾಟಾ ಅವರ ಬಳಿಯಲ್ಲಿಯೂ ಸ್ವಂತದ ರೈಲು ಇಲ್ಲ. ಬೇಕಾದರೆ ನೀವು ಸ್ವಂತದ ಪ್ರೈವೇಟ್ ಜೆಟ್ ಹೊಂದಬಹುದು. ಆದರೆ ರೈಲು ಖರೀದಿ ಮಾಡಲು ಸಾಧ್ಯವಿಲ್ಲ.
ದೇಶದ ಪ್ರಧಾನಿ ಅಥವಾ ರಾಷ್ಟ್ರಪತಿಗಳಿಗೆ ಅಂತ ಯಾವುದೇ ವಿಶೇಷ ರೈಲುಗಳಿಗಿಲ್ಲ. ಹಾಗಾದ್ರೆ ಸ್ವಂತ ರೈಲು ಹೊಂದಿರುವ ವ್ಯಕ್ತಿ ಯಾರು ಎಂದು ನೀವು ಯೋಚನೆ ಮಾಡುತ್ತಿರಬಹುದು. ಸ್ವಂತ ರೈಲು ಹೊಂದಿರುವ ವ್ಯಕ್ತಿಯ ಹೆಸರು ಸಂಪೂರ್ಣ ಸಿಂಗ್ (Sampuran Singh). ಪಂಜಾಬ್ ರಾಜ್ಯದ ಲೂಧಿಯಾನ ಜಿಲ್ಲೆಯ ಕಟಾಣಾ ಎಂಬ ಗ್ರಾಮದ ರೈತ. 2017ರಲ್ಲಿ ಸಂಪೂರ್ಣ ಸಿಂಗ್ ಒಂದು ರೈಲಿನ ಮಾಲೀಕರಾಗಿದ್ದರು. ದೆಹಲಿಯಿಂದ ಅಮೃತಸರಗೆ ತೆರಳುವ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನ (Delhi-Amritsar Swarna Shatabdi Express) ಮಾಲೀಕರಾಗಿದ್ದರು ರೈತ ಸಂಪೂರ್ಣ ಸಿಂಗ್.
ಮಹಿಳೆಯರಿಗಾಗಿ IRCTC ಸುರಕ್ಷಿತ ಟೂರ್ ಪ್ಯಾಕೇಜ್‌ಗಳ ಲಿಸ್ಟ್!
ರೈಲಿನ ಮಾಲೀಕರಾಗಿದ್ದು ಹೇಗೆ?
ಲೂಧಿಯಾನ-ಚಂಡೀಗಢ ಮಾರ್ಗದ ರೈಲು ಹಳಿ ನಿರ್ಮಾಣಕ್ಕಾಗಿ 2007ರಲ್ಲಿ ರೈತರಿಂದ ಕೃಷಿ ಭೂಮಿಯನ್ನು ಖರೀದಿಸಲಾಗಿತ್ತು. ಈ ಸಮಯದಲ್ಲಿ ಸಂಪೂರ್ಣ ಸಿಂಗ್ ಸಹ ತಮ್ಮ ಜಮೀನನ್ನು ಭಾರತೀಯ ರೈಲ್ವೆಗೆ ನೀಡಿದ್ದರು. ಎಕರೆಗೆ 25 ಲಕ್ಷ ರೂಪಾಯಿ ದರದಲ್ಲಿ ರೈಲ್ವೆ ಇಲಾಖೆ ರೈತರಿಂದ ಭೂಮಿಯನ್ನು ಖರೀದಿಸಿತ್ತು. ಇದೇ ಬೆಲೆಯಲ್ಲಿಯೇ ಸಂಪೂರ್ಣ ಸಿಂಗ್ ಸಹ ತಮ್ಮ ಜಮೀನು ನೀಡಿದ್ದರು. ಆದರೆ ಕೆಲ ದಿನಗಳ ಬಳಿಕ ಸಮೀಪದ ಊರಿನಲ್ಲಿ ಪ್ರತಿ ಎಕರೆಗೆ 71 ಲಕ್ಷ ರೂಪಾಯಿ ದರದಲ್ಲಿ ರೈಲ್ವೆ ಇಲಾಖೆ ಭೂಮಿ ಖರೀದಿ ಮಾಡಿರುವ ವಿಷಯ ಸಂಪೂರ್ಣ ಸಿಂಗ್ ಅವರಿಗೆ ಗೊತ್ತಾಗುತ್ತದೆ.
ತಮಗೂ ಇದೇ ಮಾನದಂಡದಲ್ಲಿಯೇ ಪರಿಹಾರ ನೀಡಬೇಕೆಂದು ಸಂಪೂರ್ಣ ಸಿಂಗ್ ನ್ಯಾಯಾಲದ ಮೊರೆ ಹೋಗಿದ್ದರು. ಕೋರ್ಟ್ ನಲ್ಲಿ ಅರ್ಜಿಯ ವಿಚಾರಣೆಗೆ ಬಂದ ಬಳಿಕ ಭಾರತೀಯ ರೈಲ್ವೆ 25 ರಿಂದ 50 ಲಕ್ಷ ರೂಪಾಯಿ ಪರಿಹಾರ ನೀಡಲು ಮುಂದಾಗಿತ್ತು. ಮುಂದೆ ಪರಿಹಾರದ ಮೊತ್ತ 1.47 ಕೋಟಿ ರೂ.ಗೆ ಏರಿಕೆಯಾಗಿತ್ತು. 2015ರೊಳಗೆ ಸಂಪೂರ್ಣ ಸಿಂಗ್ ಅವರಿಗೆ ಎಲ್ಲಾ ಪರಿಹಾರದ ಮೊತ್ತವನ್ನು ನೀಡುವಂತೆ ಉತ್ತರ ವಿಭಾಗದ ರೈಲ್ವೆಗೆ ನ್ಯಾಯಾಲಯ ಆದೇಶ ನೀಡಿತ್ತು. 42 ಲಕ್ಷ ರೂಪಾಯಿ ನೀಡಿದ ಉತ್ತರ ರೈಲ್ವೆ, ಬಾಕಿ 1.05 ಕೋಟಿ ನೀಡುವಲ್ಲಿ ವಿಫಲವಾಗಿತ್ತು.
ರೈಲುಗಳು ರಾತ್ರಿ ಹೆಚ್ಚು ವೇಗವಾಗಿ ಹೋಗಲು ಕಾರಣವೇನು?
ನ್ಯಾಯಾಲಯ ಆದೇಶ ಪಾಲಿಸಲು ಉತ್ತರ ರೈಲ್ವೆ ವಿಫಲವಾಗಿದ್ದರಿಂದ 2017ರಲ್ಲಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯದ ನ್ಯಾಯಾಧೀಶರಾದ ಜಸ್ಪಾಲ್ ವರ್ಮಾ, ಲೂಧಿಯಾನ ರೈಲ್ವೆ ನಿಲ್ದಾಣವನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶ ನೀಡಿದರು. ಇದರ ಜೊತೆಯಲ್ಲಿ ಸ್ಟೇಶನ್ ಮಾಸ್ಟರ್ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶದಲ್ಲಿ ಹೇಳಲಾಗಿತ್ತು. ಆದೇಶದ ಪ್ರತಿ ಹಿಡಿದು ಹೊರಟ ಸಂಪೂರ್ಣ ಸಿಂಗ್, ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ನಿಂತಿದ್ದ ಸ್ವರ್ಣ ಶತಾಬ್ದಿ ಎಕ್ಸ್‌ಪ್ರೆಸ್ ರೈಲನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಮಾಲೀಕರಾದರು. ಈ ಮೂಲಕ ಸಂಪೂರ್ಣ ಸಿಂಗ್ ಒಂದು ರೈಲಿನ ಮಾಲೀಕರಾಗಿದ್ದರು. ಇದಾದ ಕೆಲವೇ ಸಮಯದ ಬಳಿಕ ರೈಲ್ವೆ ಅಧಿಕಾರಿಗಳು ನ್ಯಾಯಾಲಯದ ಮೂಲಕವೇ ನಿಲ್ದಾಣವನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು. ವರದಿಗಳ ಪ್ರಕಾರ, ಈ ಪ್ರಕರಣದ ವಿಚಾರಣೆ ಇನ್ನೂ ನ್ಯಾಯಾಲದಲ್ಲಿ ನಡೆಯುತ್ತಿದೆ.