Supreme Court upholds EWS Quota: ಐವರು ಸದಸ್ಯರ ಸುಪ್ರೀಂ ಕೋರ್ಟ್ ಪೀಠ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿ ವರ್ಗಕ್ಕೆ ನೀಡಲಾಗಿರುವ ಶೇಕಡ 10 ಮೀಸಲಾತಿ ನಿರ್ಧಾರವನ್ನು ಎತ್ತಿ ಹಿಡಿದಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರೀ ಮುನ್ನಡೆ ಸಿಕ್ಕಿದೆ.
ನವದೆಹಲಿ: 2019ರ ಚುನಾವಣೆಗೂ ಮುನ್ನ ಕೇಂದ್ರ ಸರ್ಕಾರ ಹೊರಡಿಸಿದ್ದ ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ವರ್ಗದ ಮೀಸಲಾತಿ ಕಾಯ್ದೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಈ ಮೂಲಕ ಕೇಂದ್ರ ಸರ್ಕಾರಕ್ಕೆ ಭಾರೀ ಮುನ್ನಡೆಯಾಗಿದೆ. ಕಾಲೇಜು ಮತ್ತು ಸರ್ಕಾರಿ ನೌಕರಿಯಲ್ಲಿ ಶೇಕಡ 10 ಮೀಸಲಾತಿಯನ್ನು ಆರ್ಥಿಕವಾಗಿ ದುರ್ಬಲರಾಗಿರುವ ಮೇಲ್ಜಾತಿ ವರ್ಗಕ್ಕೆ ನೀಡಲು ಕೇಂದ್ರ ಸರ್ಕಾರ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿತ್ತು. ಐವರು ಸದಸ್ಯರ ಸುಪ್ರೀಂ ಕೋರ್ಟ್ ಪೀಠದಲ್ಲಿ ಮೂವರು ನ್ಯಾಯಮೂರ್ತಿಗಳು ಮೀಸಲಾತಿಯ ಪರ ಅಭಿಪ್ರಾಯ ನೀಡಿದರು. ಸಂವಿಧಾನ ಬಾಹಿರ ನಿರ್ಧಾರವಲ್ಲ, ಈ ಕಾಯ್ದೆಯಿಂದ ಹಿಂದುಳಿದ ವರ್ಗಕ್ಕೆ ಯಾವುದೇ ಅನ್ಯಾಯವಾಗುವುದಿಲ್ಲ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿದೆ. ಸಾಂಪ್ರದಾಯಕವಾಗಿ ಮೀಸಲಾತಿ ಹಕ್ಕು ಪಡೆದಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳನ್ನು ಬೈಪಾಸ್ ಮಾಡಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಲು ನಿರ್ಧರಿಸಲಾಗಿತ್ತು.
103ನೇ ಸಾಂವಿಧಾನಿಕ ಬದಲಾವಣೆ ಸಭೆಯ ಮೂಲಕ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಶೇಕಡ 10 ಮೀಸಲಾತಿ ನೀಡಲಾಗಿತ್ತು. ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತಿಸ್‌ಗಢ ಚುನಾವಣೆಗಳಲ್ಲಿ ಸೋಲು ಕಂಡ ನಂತರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಈ ಐತಿಹಾಸಿಕ ಕಾಯ್ದೆಯನ್ನು ಮಂಡಿಸಿತ್ತು. ಇದರ ಪರ ಮತ್ತು ವಿರೋಧ ಭಾರೀ ಚರ್ಚೆಯಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಮೀಸಲಾತಿಯನ್ನು ಬೆಂಬಲಿಸಿದ್ದರು. ಆದರೆ ಚುನಾವಣೆ ಕಾಲದಲ್ಲಿ ಮೀಸಲಾತಿ ಜಾರಿಗೊಳಿಸಿದ್ದನ್ನು ಪ್ರಶ್ನಿಸಿದ್ದರು.
1992ರಲ್ಲಿ ಸುಪ್ರೀಂ ಕೋರ್ಟ್ ದೇಶದಲ್ಲಿ 50%ಗಿಂತ ಹೆಚ್ಚು ಮೀಸಲಾತಿಗಳನ್ನು ನೀಡುವಂತಿಲ್ಲ ಎಂದು ಮಿತಿ ಹೇರಿತ್ತು. ಇದೇ ಕಾರಣಕ್ಕೆ ಹಲವು ಸಂಘಟನೆಗಳು, ಕಾರ್ಯಕರ್ತರು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿ ವರ್ಗಕ್ಕೆ ನೀಡಿರುವ ಮೀಸಲಾತಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. 1992ರ ಸುಪ್ರೀಂ ಕೋರ್ಟ್ ಹೇರಿದ್ದ ಮಿತಿಯ ಆಧಾರವನ್ನೇ ಕೇಂದ್ರದ ನಿರ್ಧಾರ ಮುರಿದಿದೆ ಎಂದು ಪ್ರಶ್ನಿಸಲಾಗಿತ್ತು. ಆದರೆ ಇದನ್ನು ಸುಪ್ರೀಂ ಕೋರ್ಟ್ ಈಗ ಎತ್ತಿ ಹಿಡಿದಿದೆ. ಈ ಮೂಲಕ ಆರ್ಥಿಕವಾಗಿ ಹಿಂದುಳಿದಿರುವ ಮೇಲ್ಜಾತಿ ಜನರಿಗೆ ಮೀಸಲಾತಿ ಖಾಯಂಗೊಳಿಸಿದೆ.
ಇದನ್ನೂ ಓದಿ: ಆರ್ಥಿಕವಾಗಿ ಹಿಂದುಳಿದ ಎಲ್ಲಾ ವರ್ಗಗಳಿಗೆ 10% ಮೀಸಲು ಏಕೆ, ಹೇಗೆ ಜಾರಿಯಾಗಬೇಕು?
"ಆರ್ಥಿಕವಾಗಿ ಹಿಂದುಳಿದಿರುವ, ಆರ್ಥಿಕವಾಗಿ ಬಡವರಾಗಿರುವ ವರ್ಗದ ಜನರಿಗೆ ಬೆನ್ನೆಲುಬಾಗುವ ದೃಷ್ಟಿಯಿಂದ ಮೀಸಲಾತಿ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದು ಸಂವಿಧಾನದ ವಿರೋಧಿ ಕಾಯ್ದೆಯಲ್ಲ. ಸಂವಿಧಾನದ ಕಟ್ಟುಪಾಡುಗಳೊಳಗೆ ಈ ಕಾಯ್ದೆಯಿದೆ. ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿಯನ್ನು ಕಡಿಮೆಗೊಳಿಸುವುದು ಅಥವಾ ತೆಗೆದು ಹಾಕುವುದನ್ನು ಮಾಡಲು ಸಾಧ್ಯವಿಲ್ಲ," ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಮೇಲ್ವರ್ಗ ಮೀಸಲು ದಾವೆ ಸಂವಿಧಾನ ಪೀಠಕ್ಕೆ ಈಗಲೇ ಇಲ್ಲ
ಬಹುತೇಕ ವಿರೋಧ ಪಕ್ಷಗಳು ಮೀಸಲಾತಿ ನಿರ್ಧಾರವನ್ನು ಸ್ವಾಗತಿಸಿತ್ತು. ಆದರೆ ಸುಮಾರು 40 ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಆಲಿಸಿತ್ತು. ತಮಿಳುನಾಡು ಸರ್ಕಾರವೂ ಮೀಸಲಾತಿಯನ್ನು ಪ್ರಶ್ನಿಸಿತ್ತು. ತಮಿಳುನಾಡಿನಲ್ಲಿ ಅತಿಹೆಚ್ಚು ಮೀಸಲಾತಿಯನ್ನು ಹಲವು ವರ್ಗಗಳಿಗೆ ನೀಡಲಾಗಿದೆ.