ಬಿಜೆಪಿ ನಾಯಕ ಹುಸೇನ್‌ ವಿರುದ್ಧ ಅತ್ಯಾಚಾರ ಆರೋಪ: ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಣೆ

By BK AshwinFirst Published Aug 18, 2022, 10:26 PM IST
Highlights

ಬಿಜೆಪಿ ಹಿರಿಯ ನಾಯಕ ಶಹನವಾಜ್‌ ಹುಸೇನ್‌ ವಿರುದ್ಧ ಆತ್ಯಾಚಾರ ಆರೋಪ ಎದುರಾಗಿದೆ. ಈ ಸಂಬಂಧ ದೆಹಲಿ ಹೈಕೋರ್ಟ್‌ ತಕ್ಷಣವೇ ಕೇಸ್‌ ದಾಖಲಿಸಬೇಕೆಂದು ಸೂಚನೆ ನೀಡಿತ್ತು.

ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ವಿರುದ್ದ ಅತ್ಯಾಚಾರ ಆರೋಪ ಪ್ರಕರಣದಲ್ಲಿ ಮತ್ತೆ ಹಿನ್ನೆಡೆಯಾಗಿದ್ದು, ದೆಹಲಿ ಹೈಕೋರ್ಟ್‌ ಆದೇಶಕ್ಕೆ ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ. ದೆಹಲಿ ಮೂಲದ ಸಂತ್ರಸ್ಥ ಮಹಿಳೆ ನೀಡಿದ್ದ ದೂರಿನ ಮೇರೆಗೆ ಬಿಜೆಪಿ ನಾಯಕನ ವಿರುದ್ಧ ತಕ್ಷಣವೇ ಎಫ್‌ಐಆರ್‌ ದಾಖಲಿಸಿ 3 ತಿಂಗಳೊಳಗೆ ತನಿಖೆ ನಡೆಸಬೇಕೆಂದು ದೆಹಲಿ ಹೈಕೋರ್ಟ್‌ ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. 

ಇನ್ನು, ಮಧ್ಯಂತರ ತಡೆ ನೀಡದಿದ್ದರೂ, ದೆಹಲಿ ಹೈಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ ವಿಚಾರಣೆಯನ್ನು ಮುಂದಿನ ವಾರ ಕೈಗೆತ್ತಿಕೊಳ್ಳುವುದಾಗಿ ದೇಶದ ಅತ್ಯುನ್ನತ ನ್ಯಾಯಾಲಯ ಒಪ್ಪಿಕೊಂಡಿದೆ. ಆಗಸ್ಟ್ 17 ರಂದು ದೆಹಲಿ ಹೈಕೋರ್ಟ್, 2018 ರ ಆದೇಶದಲ್ಲಿ ಯಾವುದೇ ವಿಕೃತತೆಯಿಲ್ಲ ಎಂದು ಹೇಳಿ, ತನ್ನ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹುಸೇನ್ ಮಾಡಿದ ಮೇಲ್ಮನವಿಯನ್ನು ವಜಾಗೊಳಿಸಿತ್ತು. ಮತ್ತು ಕೇಸ್‌ ದಾಖಲಿಸಲು ತಡೆಯಾಜ್ಞೆ ನೀಡಿದ್ದ ಹಿಂದಿನ ಮಧ್ಯಂತರ ಆದೇಶವನ್ನು ಸಹ ತೆರವುಗೊಳಿಸಿತ್ತು.

ಬಿಜೆಪಿ ಮುಖಂಡ ಶಹನವಾಜ್ ಹುಸೇನ್ ವಿರುದ್ದ ಅತ್ಯಾಚಾರ ಆರೋಪ: ಸುಪ್ರೀಂಕೋರ್ಟ್‌ ಮೊರೆ ಹೋದ ನಾಯಕ

ಈಗ ಎಫ್‌ಐಆರ್ ದಾಖಲಾದರೆ ನನ್ನ ವಿಶೇಷ ರಜೆ ಅರ್ಜಿ (Special Leave Petition)  ನಿರುಪಯುಕ್ತವಾಗುತ್ತದೆ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ನೇತೃತ್ವದ ಪೀಠಕ್ಕೆ ಬಿಜೆಪಿ ನಾಯಕ ಶಹನವಾಜ್ ಪರ ವಕೀಲರು ಹೇಳಿದರು. ಅಲ್ಲದೆ, ನಾನು 30 ವರ್ಷಗಳ ಕಳಂಕರಹಿತ ಸಾರ್ವಜನಿಕ ಜೀವನವನ್ನು ಹೊಂದಿದ್ದೇನೆ ಮತ್ತು ಈಗ ಎಫ್‌ಐಆರ್‌ ದಾಖಲಿಸಿದರೆ ಅದು ಕಳಂಕಿತವಾಗುತ್ತದೆ ಎಂದು ಬಿಜೆಪಿ ನಾಯಕನ ಪರ ವಕೀಲ ಮೋಹಿತ್ ಪೌಲ್ ಹೇಳಿದರು ಮತ್ತು ಅರ್ಜಿಯನ್ನು ವಿಚಾರಣೆಗೆ ಮುಂಚಿತವಾಗಿ ಪಟ್ಟಿ ಮಾಡುವಂತೆ ಕೋರಿ ಹೈಕೋರ್ಟ್‌ನ ತೀರ್ಪಿನ ಆದೇಶಕ್ಕೆ ಮಧ್ಯಂತರ ತಡೆ ಕೋರಿದರು.

ಸುಪ್ರೀಂಕೋರ್ಟ್‌ ಹೇಳಿದ್ದೇನು..?
ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ವಿರುದ್ಧ ಮುಂದಿನ ವಾರ ಅರ್ಜಿಯನ್ನು ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಿ. ಟಿ ರವಿಕುಮಾರ್ ಅವರನ್ನೊಳಗೊಂಡ ಪೀಠ ಹೇಳಿದೆ. ಆದರೆ ದೆಹಲಿ ಹೈಕೋರ್ಟ್‌ ತೀರ್ಪಿನ ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತು. 

ದೆಹಲಿ ಹೈಕೋರ್ಟ್‌ ಆದೇಶವೇನು..?
ಪ್ರಸ್ತುತ ಅರ್ಜಿಯಲ್ಲಿ ಯಾವುದೇ ಅರ್ಹತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ ತನ್ನ ಆದೇಶದಲ್ಲಿ ಹೇಳಿತ್ತು. ಅಲ್ಲದೆ, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಲಾಗಿದ್ದು, ಮಧ್ಯಂತರ ಆದೇಶಗಳನ್ನು ತೆರವುಗೊಳಿಸಲಾಗಿದೆ. ತಕ್ಷಣವೇ ಬಿಜೆಪಿ ನಾಯಕನ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು. ತನಿಖೆ ಪೂರ್ಣಗೊಳಿಸಿದ ನಂತರ ಸೆಕ್ಷನ್ 173 Cr.P.C ಅಡಿಯಲ್ಲಿ 3 ತಿಂಗಳೊಳಗೆ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ವಿವರವಾದ ವರದಿಯನ್ನು ಸಲ್ಲಿಸಬೇಕು ಎಂದೂ ದೆಹಲಿ ಹೈಕೋರ್ಟ್‌ ಹೇಳಿತ್ತು.

ಅಲ್ಲದೆ, 4 ಸಂದರ್ಭಗಳಲ್ಲಿ ಪ್ರಾಸಿಕ್ಯೂಷನ್‌ ಹೇಳಿಕೆಯನ್ನು ದಾಖಲಿಸಿರುವ ಬಗ್ಗೆ ಪೊಲೀಸ್ ಸ್ಥಿತಿ ವರದಿಯಲ್ಲಿ ಉಲ್ಲೇಖಿಸಿದ್ದರೂ, ಎಫ್‌ಐಆರ್ ಏಕೆ ದಾಖಲಿಸಿಲ್ಲ ಎಂಬುದಕ್ಕೆ ಯಾವುದೇ ವಿವರಣೆಯಿಲ್ಲ ಎಂದೂ ಹೈಕೋರ್ಟ್ ಅಭಿಪ್ರಾಯಪಟ್ಟಿತ್ತು. ಹಾಗೂ, ಎಫ್‌ಐಆರ್‌ ದಾಖಲಿಸುವುದು ಕೇವಲ ವಿಚಾರಣೆಯನ್ನು ಕಾರ್ಯರೂಪಕ್ಕ ತಂದಂತೆ. ದೂರು ನೀಡಿದ ಅಪರಾಧದ ತನಿಖೆಗೆ ಇದು ಅಡಿಪಾಯವಾಗಿದೆ. ತನಿಖೆಯ ನಂತರವಷ್ಟೇ ಪೊಲೀಸರು ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ಅಪರಾಧ ಎಸಗಿದ್ದಾರೆಯೇ ಅಥವಾ ಇಲ್ಲವೇ ಎಂಬ ತೀರ್ಮಾನಕ್ಕೆ ಬರಬಹುದು. ಆದರೆ, ಪ್ರಸ್ತುತ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ದೆಹಲಿ ಪೊಲೀಸರು ಸಂಪೂರ್ಣ ನಿರಾಸಕ್ತಿ ತೋರುತ್ತಿದ್ದಾರೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

Bilkis Bano Case: 11 ಅತ್ಯಾಚಾರಿಗಳಿಗೆ ಬಿಡುಗಡೆ ಭಾಗ್ಯ, ಗುಜರಾತ್‌ ಸರ್ಕಾರದ ವಿರುದ್ಧ ಆಕ್ರೋಶ

2018 ರಲ್ಲಿ, ದೆಹಲಿ ಮೂಲದ ಮಹಿಳೆಯೊಬ್ಬರು ತನ್ನ ವಿರುದ್ಧ ಅತ್ಯಾಚಾರ ಮಾಡಿರುವ ಬಿಜೆಪಿ ನಾಯಕ ಶಹನವಾಜ್‌ ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಕೆಳ ನ್ಯಾಯಾಲಯದ ಮೊರೆ ಹೋಗಿದ್ದರು. ನಂತರ,  ಜುಲೈ 7, 2018 ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಬಿಜೆಪಿ ನಾಯಕ ಸೆಷನ್ಸ್ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿದ್ದರು ಆದರೆ ಆ ಅರ್ಜಿ ಸಹ ವಜಾ ಆಗಿತ್ತು. 

click me!