ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕೆಂಬ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು, ಈ ವಿಷಯದಲ್ಲಿ ‘ಸಾಂವಿಧಾನಿಕ ಘೋಷಣೆ’ ಪ್ರಕಟಿಸುವ ಸುಳಿವನ್ನು ಸುಪ್ರೀಂಕೋರ್ಟ್ ನೀಡಿದೆ.
ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕೆಂಬ ಅರ್ಜಿಗಳ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಬಹುತೇಕ ಕೊನೆಯ ಹಂತಕ್ಕೆ ಬಂದಿದ್ದು, ಈ ವಿಷಯದಲ್ಲಿ ‘ಸಾಂವಿಧಾನಿಕ ಘೋಷಣೆ’ ಪ್ರಕಟಿಸುವ ಸುಳಿವನ್ನು ಸುಪ್ರೀಂಕೋರ್ಟ್ ನೀಡಿದೆ. ಯಾವುದೇ ವಿಷಯದಲ್ಲಿ ಸುಪ್ರೀಂಕೋರ್ಟ್ ‘ಸಾಂವಿಧಾನಿಕ ಘೋಷಣೆ’ ಪ್ರಕಟಿಸಿದರೆ ಅದರ ಬಗ್ಗೆ ಸಂಸತ್ತು ಕಾಯ್ದೆ ರಚಿಸಬೇಕಾಗುತ್ತದೆ. ಸದ್ಯ ದೇಶದಲ್ಲಿ ಸಲಿಂಗ ವಿವಾಹದ ಬಗ್ಗೆ ಯಾವುದೇ ಕಾಯ್ದೆಯಿಲ್ಲ. ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯ ವೇಳೆಯೂ ಕೇಂದ್ರ ಸರ್ಕಾರ ಈ ವಿಷಯದಲ್ಲಿ ಕಾಯ್ದೆ ರೂಪಿಸುವ ಬಗ್ಗೆ ಭರವಸೆ ನೀಡಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಬಗ್ಗೆ ಆದೇಶ ನೀಡದೆ ‘ಸಾಂವಿಧಾನಿಕ ಘೋಷಣೆ’ ಹೊರಡಿಸಿದರೆ ಸಂಸತ್ತು ಅದರ ಬಗ್ಗೆ ಕಾಯ್ದೆ ರೂಪಿಸಬೇಕಾಗುತ್ತದೆ.
ಮಂಗಳವಾರ ನಡೆದ ವಿಚಾರಣೆಯ ವೇಳೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಸಾಂವಿಧಾನಿಕ ಪೀಠ, ಸಲಿಂಗ ವಿವಾಹಕ್ಕೆ ಕಾನೂನಿನ ಮಾನ್ಯತೆ ನೀಡಬೇಕೇ ಬೇಡವೇ, ಈ ವಿಷಯದಲ್ಲಿ ವೈಯಕ್ತಿಕ ಕಾನೂನುಗಳಲ್ಲಿರುವ ಗೊಂದಲಗಳೇನು, ವಿಶೇಷ ವಿವಾಹ ಕಾಯ್ದೆಯ ವ್ಯಾಪ್ತಿಯೇನು, ವಿರುದ್ಧ ಲಿಂಗಿಗಳ ವಿವಾಹಕ್ಕೆ ಸಮಾನವಾಗಿ ಸಲಿಂಗ ವಿವಾಹವನ್ನು ಪರಿಗಣಿಸಬೇಕೇ ಎಂಬಿತ್ಯಾದಿ ಎಲ್ಲಾ ಗೊಂದಲಗಳಿಗೂ ಶೀಘ್ರದಲ್ಲೇ ತೆರೆ ಎಳೆಯುವುದಾಗಿ ಹೇಳಿತು. ಇದೇ ವೇಳೆ, ಸುಪ್ರೀಂಕೋರ್ಟ್ ‘ಸಾಂವಿಧಾನಿಕ ಘೋಷಣೆ’ ಪ್ರಕಟಿಸಬೇಕು. ಏಕೆಂದರೆ ಈ ವಿಷಯದಲ್ಲಿ ಸಂಸತ್ತು ಕಾಯ್ದೆ ರೂಪಿಸುವ ಬಗ್ಗೆ ನಮಗೆ ಅನುಮಾನವಿದೆ ಎಂದು ಅರ್ಜಿದಾರರು ವಾದಿಸಿದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠ ಸಾಂವಿಧಾನಿಕ ಘೋಷಣೆ ಪ್ರಕಟಿಸುವ ಸುಳಿವು ನೀಡಿತು.
ಸಲಿಂಗಕಾಮ ಒಂದು ‘ಕಾಯಿಲೆ’: ಆರೆಸ್ಸೆಸ್ ಸಹವರ್ತಿ ಸಂಘಟನೆ; ದೇಶದ ವೈದ್ಯರನ್ನು ಸಂದರ್ಶಿಸಿ ಅಧ್ಯಯನ
ಮಕ್ಕಳ ಹಕ್ಕುಗಳ ಆಯೋಗ, ಜಮಾತ್ ವಿರೋಧ:
ಸಲಿಂಗ ವಿವಾಹದ ಸಂಬಂಧ ಸುಪ್ರೀಂಕೋರ್ಟ್ ಸಾಂವಿಧಾನಿಕ ಘೋಷಣೆ ಪ್ರಕಟಿಸುವುದನ್ನು ಈ ವಿಷಯದಲ್ಲಿ ಜಮಾತ್ ಉಲೇಮಾ ಇ ಹಿಂದ್ ಸಂಘಟನೆಯನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ವಿರೋಧಿಸಿದರು. ಸುಪ್ರೀಂಕೋರ್ಟ್ ಹೀಗೆ ಮಾಡುವುದು ಅಪಾಯಕಾರಿ ನಡೆ. ಸಾಂವಿಧಾನಿಕ ಘೋಷಣೆಯ ಬಳಿಕ ಸಂಸತ್ತಿಗೆ ಈ ವಿಷಯದಲ್ಲಿ ಚರ್ಚೆ ನಡೆಸುವ ಅವಕಾಶವೇ ಇರುವುದಿಲ್ಲ ಎಂದು ಹೇಳಿದರು. ಇದೇ ವೇಳೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದನ್ನು ವಿರೋಧಿಸಿತು.
ಏನಿದು ಸಾಂವಿಧಾನಿಕ ಘೋಷಣೆ?
ಸಂವಿಧಾನದಲ್ಲಿ ಯಾವುದಾದರೂ ಒಂದು ವಿಷಯದ ಬಗ್ಗೆ ಸ್ಪಷ್ಟಉಲ್ಲೇಖ ಅಥವಾ ಕಾಯ್ದೆ ಇಲ್ಲದಿದ್ದರೆ ಮತ್ತು ಜನರು ಸಾಕಷ್ಟುಬೇಡಿಕೆಯಿಟ್ಟರೂ ಅದರ ಬಗ್ಗೆ ಸಂಸತ್ತು ಕಾಯ್ದೆ ರೂಪಿಸದೆ ಇದ್ದರೆ ಅಂತಹ ವಿಷಯದಲ್ಲಿ ಸುಪ್ರೀಂಕೋರ್ಟ್ ‘ಸಾಂವಿಧಾನಿಕ ಘೋಷಣೆ’ ಪ್ರಕಟಿಸಬಹುದು. ಆಗ ಸಂಸತ್ತು ಅದರ ಬಗ್ಗೆ ಕಾಯ್ದೆ ರೂಪಿಸಬೇಕಾಗುತ್ತದೆ. ಈ ಹಿಂದೆಯೂ ಸುಪ್ರೀಂಕೋರ್ಟ್ ಅಂತಹ ಸಾಂವಿಧಾನಿಕ ಘೋಷಣೆಗಳನ್ನು ಪ್ರಕಟಿಸಿದ್ದು, ಬಳಿಕ ಸಂಸತ್ತು ಸ್ವಚ್ಛ ಪರಿಸರದ ಹಕ್ಕುಗಳ ಕಾಯ್ದೆ, ಆರೋಗ್ಯದ ಹಕ್ಕು, ಪ್ರಾಥಮಿಕ ಶಿಕ್ಷಣದ ಹಕ್ಕು ಮುಂತಾದ ಕಾಯ್ದೆಗಳನ್ನು ರೂಪಿಸಿದೆ.
ಸಲಿಂಗಿಗಳ ಕಳವಳ ನಿವಾರಣೆಗಾಗಿ ಸಂಪುಟ ಕಾರ್ಯದರ್ಶಿ ಮಟ್ಟದಲ್ಲಿ ಸಮಿತಿ
ಅಭಿಪ್ರಾಯ ಸಲ್ಲಿಸಲು ಸಮಯ ಕೇಳಿದ 6 ರಾಜ್ಯಗಳು
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಬಗ್ಗೆ ತಮ್ಮ ಅಭಿಪ್ರಾಯ ಸಲ್ಲಿಸಲು ಆರು ರಾಜ್ಯಗಳು ಇನ್ನಷ್ಟು ಕಾಲಾವಕಾಶ ಕೇಳಿವೆ. ಇದೇ ವೇಳೆ, ಕಾಂಗ್ರೆಸ್ ನೇತೃತ್ವದ ರಾಜಸ್ಥಾನ ಸರ್ಕಾರ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವುದನ್ನು ವಿರೋಧಿಸಿ ಅಭಿಪ್ರಾಯ ಸಲ್ಲಿಸಿದೆ. ‘ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ’ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ರಾಜ್ಯಗಳಿಗೆ ಪತ್ರ ಬರೆದಿತ್ತು. ಅದಕ್ಕೆ ಉತ್ತರಿಸಲು ಮಹಾರಾಷ್ಟ್ರ, ಉತ್ತರ ಪ್ರದೇಶ, ಆಂಧ್ರಪ್ರದೇಶ, ಮಣಿಪುರ, ಅಸ್ಸಾಂ ಮತ್ತು ಸಿಕ್ಕಿಂ ರಾಜ್ಯಗಳು ಸಮಯ ಕೇಳಿವೆ.