ರಾಜಸ್ಥಾನದ ಜೈಸಲ್ಮೇರ್‌ನ ಮರುಭೂಮಿಯಲ್ಲಿ ಕೊಳವೆಬಾವಿ ತೆಗೆಯುವಾಗ ಭೂಗರ್ಭದಿಂದ ನೀರು ಉಕ್ಕಿ ಹರಿದಿದೆ. ಪ್ರಾಚೀನ ನದಿ ಸರಸ್ವತಿ ಈ ಪ್ರದೇಶದಲ್ಲಿ ಹರಿಯುತ್ತಿದ್ದ ಕಾರಣ ಜನರಲ್ಲಿ ಕುತೂಹಲ ಮೂಡಿದೆ.
ರಾಜಸ್ಥಾನದ ಜೈಸಲ್ಮೇರ್‌ನ ಮರುಭೂಮಿಯಲ್ಲಿ ವಿಸ್ಮಯವೊಂದು ನಡೆದಿದೆ. ಕೊಳವೆಬಾವಿ ತೆಗೆಯುವ ವೇಳೆ ಜೈಸಲ್ಮೇರ್‌ನ ಮರುಭೂಮಿಯಲ್ಲಿ ನೀರು ಇದ್ದಕ್ಕಿದ್ದಂತೆ ಉಕ್ಕಿ ಹರಿಯಲು ಆರಂಭಿಸಿದೆ. ಈ ಪ್ರದೇಶದಲ್ಲಿ ಪ್ರಾಚೀನ ನದಿ ಸರಸ್ವತಿ ಭೂಮಿಯ ಕೆಳಗೆ ಗುಪ್ತ ಗಾಮಿನಿಯಾಗಿ ಹರಿಯುತ್ತಿದ್ದಾಳೆ ಎಂಬ ಪ್ರತೀತಿ ಇರುವ ಕಾರಣಕ್ಕೆ ಈ ಘಟನೆಯೂ ಮತ್ತಷ್ಟು ಮಹತ್ವಪೂರ್ಣವೆನಿಸಿದೆ.
ಜೈಸಲ್ಮೇರ್‌ನ ತಾರಗಢ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಅಲ್ಲಿನ ಜನ ಈ ಅಪರೂಪದ ಘಟನೆಯಿಂದ ಭಯ ಭೀತಗೊಂಡಿದ್ದರು. ಅಲ್ಲಿ ಕೊಳವೆಬಾವಿಯನ್ನು ತೆಗೆಯಲು ಆರಂಭಿಸಿದಾಗ ಈ ವಿಸ್ಮಯ ನಡೆದಿದೆ. ಶನಿವಾರ, ಮೋಹನ್‌ಗಢದ ಕಾಲುವೆ ಪ್ರದೇಶದ ಚಾಕ್ 27 ಬಿಡಿ ಬಳಿ ಕಾರ್ಮಿಕರು ಕೊಳವೆಬಾವಿಯನ್ನು ಕೊರೆಯುತ್ತಿದ್ದಾಗ, 850 ಅಡಿ ಆಳದಲ್ಲಿ, ನೀರು ಮತ್ತು ಅನಿಲವು ಒಟ್ಟಿಗೆ ನೆಲದಿಂದ ಹೊರಹೊಮ್ಮಿ ಅಪಾಯಕಾರಿ ಪರಿಸ್ಥಿತಿಯನ್ನು ಸೃಷ್ಟಿಸಿತು. ಪ್ರವಾಹದಂತೆ ಉಕ್ಕಿದ ನೀರಿನ ಹರಿವು ಸ್ವಲ್ಪ ಹೊತ್ತಿನಲ್ಲೇ ಸುತ್ತಮುತ್ತಲಿನ ಹೊಲಗಳನ್ನು ಮುಳುಗಿಸಿತು ಮತ್ತು ಬೋರ್‌ವೆಲ್ ಕೊರೆಯಲು ಬಂದಿದ್ದ ಟ್ರಕ್ ಸೇರಿದಂತೆ ಯಂತ್ರೋಪಕರಣಗಳು ಏರುತ್ತಿರುವ ನೀರಿನ ಪ್ರವಾಹದಲ್ಲಿ ಸಿಲುಕಿಕೊಂಡವು. ಕೆಲವೇ ಕ್ಷಣಗಳಲ್ಲಿ, ನೀರಿನ ಮಟ್ಟ ಏರುತ್ತಲೇ ಇದ್ದುದರಿಂದ ಆ ಪ್ರದೇಶವು ತುಂಬಿದ ಕೊಳದಂತೆ ಕಾಣಿಸಿತ್ತು. ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಅನೇಕರು ಗುಪ್ತ ಗಾಮಿನಿ ಸರಸ್ವತಿ ಮೇಲುಕ್ಕಿ ಬಂದಳು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಈ ಪ್ರದೇಶವೂ ಹಿಂದೆ ಪ್ರಾಚೀನ ನದಿ ಸರಸ್ವತಿ ಹರಿಯುತ್ತಿದ್ದ ಜಾಗದ ಕಾರಣಕ್ಕೆ ಜನರಲ್ಲಿ ಈ ಘಟನೆ ಹೆಚ್ಚಿನ ಕುತೂಹಲ ಸೃಷ್ಟಿಸಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿ ಮಾಧ್ಯಮವೊಂದರ ಜೊತೆ ಮಾತನಾಡಿದ ಅಂತರ್ಜಲ ವಿಜ್ಞಾನಿ. ಡಾಕ್ಟರ್ ನಾರಾಯಣ ದಾಸ್, ಈ ಘಟನೆಯನ್ನು 'ಹಿಮಪಾತದ ಸ್ಥಿತಿ' (avalanche condition) ಎಂದು ಕರೆದಿದ್ದಾರೆ, ಇದು ಹಲವಾರು ದಿನಗಳವರೆಗೆ ಮುಂದುವರಿಯಬಹುದಾದ ಅಪರೂಪದ ಘಟನೆ ಎಂದು ವಿವರಿಸಿದ್ದಾರೆ. ಈ ಘಟನೆಯು ಆರ್ಟಿಸಿಯನ್ ಸ್ಥಿತಿಯಿಂದ ಪ್ರಚೋದಿಸಲ್ಪಟ್ಟಿದೆ ಎಂದು ಡಾ. ದಾಸ್ ವಿವರಿಸಿದ್ದಾರೆ, ಈ ಹಿಂದೆ ಮರಳುಗಲ್ಲು ಮತ್ತು ಜೇಡಿಮಣ್ಣಿನ ದಪ್ಪ ಪದರಗಳ ಕೆಳಗೆ ಸೀಮಿತವಾಗಿದ್ದ ನೀರು, ಕೊರೆಯುವ ಯಂತ್ರವು ರಕ್ಷಣಾತ್ಮಕ ಪದರವನ್ನು ಉಲ್ಲಂಘಿಸಿದ ನಂತರ ತೀವ್ರ ಒತ್ತಡದಲ್ಲಿ ಹೊರಹೊಮ್ಮಿತು ಎಂದಿದ್ದಾರೆ.
ಆದರೆ ಈ ಹಠಾತ್ ನೀರಿನ ಹರಿವು ಸರಸ್ವತಿ ನದಿಯ ಪ್ರಾಚೀನ ಹರಿವಿನೊಂದಿಗೆ ಸಂಬಂಧ ಹೊಂದಿದೆ. ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಘಟನೆಯ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಸರಸ್ವತಿ ನದಿಯ ಪುನರುತ್ಥಾನವಾಗಿರಬಹುದು ಎಂದು ಹೇಳಿಕೊಂಡಿದ್ದಾರೆ.
ಆದರೆ ಈ ಘಟನೆ ನಡೆದ ಸ್ಥಳದಲ್ಲಿ 24 ಗಂಟೆ ಕಳೆದರೂ ನೀರಿನ ಹರಿವು ಕಡಿಮೆಯಾಗದೇ ಹಾಗೆಯೇ ಇದೆ. ಹೀಗಾಗಿ ಸುರಕ್ಷತೆ ದೃಷ್ಟಿಯಿಂದ ಸಾರ್ವಜನಿಕರು ಸ್ಥಳದಿಂದ ದೂರ ಇರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಘಟನೆಯು ಅಪರೂಪವಾಗಿದ್ದರೂ, ಇದು ದೀರ್ಘಕಾಲದವರೆಗೆ ನೀರು ನಿಲ್ಲುವ ಅಥವಾ ಪ್ರದೇಶಕ್ಕೆ ಹಾನಿಯಾಗುವ ಅಪಾಯವನ್ನು ಉಂಟುಮಾಡುವುದಿಲ್ಲ ಎಂದು ಡಾ. ದಾಸ್ ಸ್ಪಷ್ಟಪಡಿಸಿದ್ದಾರೆ. ಆದರೆ, ಕೊಳವೆಬಾವಿಯ ಸುತ್ತ 15ರಿಂದ 20 ಅಡಿ ಅಗಲದ ಆಳವಾದ ಹೊಂಡ ನಿರ್ಮಾಣವಾಗಿದ್ದು, ಅಪಾಯದ ಭೀತಿ ಎದುರಾಗಿದೆ.
ಘಟನಾ ಸ್ಥಳಕ್ಕೆ ಮೋಹನ್‌ಗರ್ ಉಪ ತಹಸೀಲ್ದಾರ್ ಲಲಿತ್ ಚರಣ್ ಭೇಟಿ ನೀಡಿದ್ದು, ಒಎನ್‌ಜಿಸಿಯ ಪರಿಣಿತರು ಈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಡಳಿತವು ಮುನ್ನೆಚ್ಚರಿಕೆಯಾಗಿ 500 ಮೀಟರ್ ವ್ಯಾಪ್ತಿಯಲ್ಲಿರುವ ಪ್ರದೇಶವನ್ನು ಸ್ಥಳಾಂತರಿಸಿದೆ. ನೀರಿನ ಹರಿವನ್ನು ನಿಯಂತ್ರಿಸಲು ಮತ್ತು ಹೆಚ್ಚಿನ ಹಾನಿಯನ್ನು ತಡೆಯಲು ಪ್ರಯತ್ನಗಳು ನಡೆಯುತ್ತಿವೆ ಎಂದು ವರದಿಯಾಗಿದೆ.