ತ.ನಾಡಲ್ಲಿ ಭರ್ಜರಿ ರೂ 450 ಕೋಟಿ ಐಟಿ ಬೇಟೆ!| ಎಸ್‌ಇಜೆಡ್ ಡೆವಲಪರ್, ಉಕ್ಕು ಪೂರೈಕೆ ಉದ್ಯಮಿ ಮೇಲೆ ತೆರಿಗೆ ದಾಳಿ| 4 ನಗರಗಳಲ್ಲಿ 16 ಕಡೆ ನಡೆದ ಐಟಿ ದಾಳಿ ವೇಳೆ ಅಪಾರ ಪ್ರಮಾಣದ ಅಕ್ರಮ ಆಸ್ತಿ ವಶ| ತೆರಿಗೆ ಬೇಟೆ
ನವದೆಹಲಿ(ನ.30): ಸಗಟು ಚಿನ್ನದ ವಹಿವಾಟು ನಡೆಸುವ ಚೆನ್ನೈ ಮೂಲದ ಕಂಪನಿ ಮೇಲೆ 15 ದಿನಗಳ ಹಿಂದಷ್ಟೇ ದಾಳಿ ಮಾಡಿ 400 ಕೋಟಿ ರು. ಮೌಲ್ಯದ 814 ಕೇಜಿ ಚಿನ್ನ ಸೇರಿದಂತೆ 500 ಕೋಟಿ ರು. ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದ ಆದಾಯ ತೆರಿಗೆ ಇಲಾಖೆ ಇದೀಗ ಮತ್ತೊಂದು ಮಹಾ ಬೇಟೆ ನಡೆಸಿದೆ. ತಮಿಳುನಾಡಿನ ಮೂವರು ಉದ್ಯಮಿಗಳ ಮೇಲೆ ನಡೆದ ಆದಾಯ ತೆರಿಗೆ (ಐಟಿ) ದಾಳಿಯಲ್ಲಿ ಬರೋಬ್ಬರಿ 450 ಕೋಟಿ ರು. ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ.
ನ.27ರಂದು ಮೂವರು ಉದ್ಯಮಿಗಳಿಗೆ ಸೇರಿದ ಎರಡು ಸಮೂಹದ ಕಂಪನಿಗಳ ಚೆನ್ನೈ, ಮುಂಬೈ, ಹೈದರಾಬಾದ್ ಹಾಗೂ ಕಡಲೂರಿನ 16 ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆದಿತ್ತು. ಆ ವೇಳೆ ತೆರಿಗೆ ವಂಚಿಸಿ ಅಕ್ರಮವಾಗಿ ಸಂಗ್ರಹಿಸಿದ್ದ ಹಾಗೂ ಹೂಡಿಕೆ ಮಾಡಿದ್ದ ಅಪಾರ ಪ್ರಮಾಣದ ಆಸ್ತಿ ಪತ್ತೆಯಾಗಿದೆ. ಅದರ ವಿವರವನ್ನು ಕೇಂದ್ರೀಯ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಭಾನುವಾರ ಬಹಿರಂಗಪಡಿಸಿದೆ.
ಸಿಕ್ಕಿಬಿದ್ದ ಭಾರಿ ಅಕ್ರಮದ ಕುಳಗಳು:
ದಾಳಿಗೊಳಗಾದ ಮೂವರಲ್ಲಿ ಇಬ್ಬರು ಮಾಹಿತಿ ತಂತ್ರಜ್ಞಾನ ವಿಶೇಷ ಆರ್ಥಿಕ ವಲಯ (ಐಟಿ ಎಸ್‌ಇಝಡ್)ವೊಂದರ ಡೆವಲಪರ್ ಹಾಗೂ ಅದೇ ಕಂಪನಿಯ ಮಾಜಿ ನಿರ್ದೇಶಕರಾಗಿದ್ದಾರೆ. ಇನ್ನೊಬ್ಬರು ಉಕ್ಕು ಪೂರೈಕೆದಾರ ಉದ್ಯಮಿಯಾಗಿದ್ದಾರೆ. ಐಟಿ ಎಸ್‌ಇಝಡ್‌ನ ಮಾಜಿ ನಿರ್ದೇಶಕನ ಬಳಿ ಹಾಗೂ ಆತನ ಕುಟುಂಬದ ಸದಸ್ಯರ ಬಳಿ ಒಟ್ಟು 100 ಕೋಟಿ ರು.ಗಳಿಗೂ ಹೆಚ್ಚು ಅಕ್ರಮ ಆಸ್ತಿ ದೊರೆತಿದೆ. ಇದು ಕಳೆದ 3 ವರ್ಷದಲ್ಲಿ ಸಂಪಾದಿಸಿದ ಅಕ್ರಮ ಆಸ್ತಿಯಾಗಿದೆ.
ಇನ್ನು, ಅದೇ ಐಟಿ ಎಸ್‌ಇಝಡ್‌ನ ಡೆವಲಪರ್ ಯಾವುದೇ ಕಾಮಗಾರಿಯನ್ನೂ ನಡೆಸದೆ ವಿಶೇಷ ಆರ್ಥಿಕ ವಲಯದ ನಿರ್ಮಾಣ ಪ್ರಗತಿಯಲ್ಲಿದೆ ಎಂದು ಹೇಳಿ ಸುಮಾರು 160 ಕೋಟಿ ರು. ಅಕ್ರಮ ಆಸ್ತಿ ಸಂಪಾದಿಸಿದ್ದ. ಈತನ ಕಂಪನಿ ಸುಮಾರು 30 ಕೋಟಿ ರು.ಗಳನ್ನು ಬೋಗಸ್ ಕನ್ಸಲ್ಟೆನ್ಸಿ ಸೇವೆಗಳಿಂದ ಸಂಗ್ರಹಿಸಿತ್ತು. ಜೊತೆಗೆ 20 ಕೋಟಿ ರು.ಗಳಷ್ಟುಬಡ್ಡಿ ಮರಳಿ ಪಡೆದಿತ್ತು. ಅಲ್ಲದೆ ಭಾರಿ ಮೊತ್ತದ ಷೇರು ಅವ್ಯವಹಾರವನ್ನೂ ನಡೆಸಿತ್ತು. ಜೊತೆಗೆ, 2017-18ನೇ ಆರ್ಥಿಕ ವರ್ಷದಲ್ಲಿ ಸುಮಾರು 2300 ಕೋಟಿ ರು. ಬೇನಾಮಿ ಹಣ ಮಾರಿಷಸ್ ಮೂಲಕ ಭಾರತಕ್ಕೆ ಬರುವಂತೆ ಮಾಡಿ ಕ್ಯಾಪಿಟಲ್ ಗೇನ್ಸ್ ತೆರಿಗೆಯಿಂದ ತಪ್ಪಿಸಿಕೊಂಡಿತ್ತು. ಇವೆಲ್ಲವೂ ಐಟಿ ದಾಳಿಯ ವೇಳೆ ಪತ್ತೆಯಾಗಿವೆ.
ಉಕ್ಕು ಉದ್ಯಮಿಯ ಬ್ರಹ್ಮಾಂಡ ಭ್ರಷ್ಟಾಚಾರ:
ದಾಳಿಗೊಳಗಾದ ಚೆನ್ನೈ ಮೂಲದ ಉಕ್ಕು ಉದ್ಯಮಿಯು ತನ್ನ ಸಮೂಹದ ಕಂಪನಿಗಳು ಮಾಡಿದ ಉಕ್ಕಿನ ವ್ಯಾಪಾರದಲ್ಲಿ ಪ್ರತಿ ವರ್ಷ ಸುಮಾರು ಶೇ.25ರಷ್ಟುವ್ಯಾಪಾರವನ್ನು ರಹಸ್ಯವಾಗಿರಿಸಿ ತೆರಿಗೆ ವಂಚನೆ ಮಾಡುತ್ತಿದ್ದ. ಈತನ ವಂಚನೆ 100 ಕೋಟಿ ರು.ಗಿಂತ ಹೆಚ್ಚಿನ ಪ್ರಮಾಣದಲ್ಲಿದ್ದು, ಇನ್ನೂ ಮೌಲ್ಯಮಾಪನ ನಡೆಯುತ್ತಿದೆ. ಈತನ ಒಡೆತನದಲ್ಲಿರುವ ವಿವಿಧ ಕಂಪನಿಗಳು ಸಾಲ ನೀಡಿಕೆ, ರಿಯಲ್ ಎಸ್ಟೇಟ್ ಮುಂತಾದ ಉದ್ಯಮಗಳಲ್ಲೂ ತೊಡಗಿಕೊಂಡಿವೆ. ಇವೂ ಕೂಡ ಸುಮಾರು 50 ಕೋಟಿ ರು.ಗಿಂತ ಹೆಚ್ಚು ಅಕ್ರಮ ವ್ಯವಹಾರ ನಡೆಸಿವೆ ಎಂದು ಸಿಬಿಡಿಟಿ ಹೇಳಿದೆ.