ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಟ್ಟು 6 ಮಂದಿಯನ್ನು ಜೈಲು ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದ ಎಲ್ಲಾ ಪ್ರತಿಗಳನ್ನು ಸ್ವೀಕರಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯ ಬಳಿಕ ಪ್ರತಿಕ್ರಿಯಿಸಿದ ನಳಿನಿ, ಪತಿ ಮತ್ತು ಮಗಳೊಂದಿಗೆ ನನ್ನ ಹೊಸ ಬದುಕು ಎಂದಿದ್ದಾರೆ.
ಚೆನ್ನೈ (ನ.12): ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಒಟ್ಟು 6 ಮಂದಿ ಭಾರತೀಯ ಮತ್ತು ಶ್ರೀಲಂಕಾ ಪ್ರಜೆಗಳು ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲು ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದ ಎಲ್ಲಾ ಪ್ರತಿಗಳನ್ನು ಸ್ವೀಕರಿಸಿ ಬಳಿಕ ಬಿಡುಗಡೆಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಅಪರಾಧಿಗಳ ಮೂರು ದಶಕಗಳ ಸುದೀರ್ಘ ಸೆರೆವಾಸ ಕೊನೆಯಾಗುತ್ತಿದೆ. ಕೊನೆಯ ದೋಷಿ ಆರ್.ಪಿ.ರವಿಚಂದ್ರನ್ ಬಿಡುಗಡೆ ಪ್ರಕ್ರಿಯೆ ಇನ್ನೂ ಬಾಕಿ ಇದೆ. ಆದರೆ ಈಗಾಗಲೇ ಅವರು ಪೆರೋಲ್ ಮೇಲಿರುವ ಕಾರಣ ಅಧಿಕೃತ ಬಿಡುಗಡೆಗೆ ಸಮಯ ಹಿಡಿಯಬಹುದು ಎನ್ನಲಾಗಿದೆ. ಈ ನಡುವೆ, ಬಿಡುಗಡೆಯ ಬಳಿಕ ಪ್ರತಿಕ್ರಿಯಿಸಿದ ನಳಿನಿ, ‘ಇದು ನನ್ನ ಪತಿ ಮತ್ತು ಮಗಳೊಂದಿಗೆ ನನ್ನ ಹೊಸ ಬದುಕು. ನಾನು ಸಾರ್ವಜನಿಕ ಬದುಕನ್ನು ಪ್ರವೇಶಿಸುವುದಿಲ್ಲ. 30 ವರ್ಷಗಳಿಂದ ನಮ್ಮನ್ನು ಬೆಂಬಲಿಸಿದ ತಮಿಳರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದ್ದಾರೆ. ನಳಿನಿ ಇನ್ನು ಎಲ್ಲಿ ತಂಗುವರು ಎಂದು ತಿಳಿದುಬಂದಿಲ್ಲ. ತಮಿಳುನಾಡಿನ ಸೋದರಿಯ ಮನೆ ಅಥವಾ ಲಂಡನ್‌ನಲ್ಲಿರುವ ಪುತ್ರಿಯ ಮನೆ- ಎರಡಲ್ಲಿ ಒಂದನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು ಎಂದು ನಳಿನಿ ಪರ ವಕೀಲ ಪಿ ಪುಗಜೆಂಡಿ ಪಿಟಿಐಗೆ ತಿಳಿಸಿದ್ದಾರೆ. ಶ್ರೀಲಂಕಾ ಪ್ರಜೆಯಾಗಿರುವ ನಳಿನಿಯ ಪತಿ ಶ್ರೀಹರನ್ ಅಲಿಯಾಸ್ ಮುರುಗನ್ ಕೂಡ ಈ ಪ್ರಕರಣದಲ್ಲಿ ಅಪರಾಧಿಯಾಗಿದ್ದು, ಅವರ ಭವಿಷ್ಯವನ್ನು ತಮಿಳುನಾಡು ಸರ್ಕಾರ ನಿರ್ಧರಿಸುತ್ತದೆ ಎಂದು ವಕೀಲರು ಹೇಳಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಸಂತನ್, ರಾಬರ್ಟ್ ಪಯಾಸ್ ಮತ್ತು ಜಯಕುಮಾರ್ ಶ್ರೀಲಂಕಾದವರಾಗಿದ್ದಾರೆ, ನಳಿನಿ ಮತ್ತು ಆರ್ ಪಿ ರವಿಚಂದ್ರನ್ ತಮಿಳುನಾಡಿಗೆ ಸೇರಿದವರಾಗಿದ್ದಾರೆ. ಇದರಲ್ಲಿ ಸಂತನ್ ಶ್ರೀಲಂಕಾಕ್ಕೆ ಮರಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಇಂದು ಮುಂಜಾನೆ ಪೆರೋಲ್ ಮೇಲೆ ಬಂದಿರುವ ನಳಿನಿ ಕಟಪಾಡಿ ಪೊಲೀಸ್ ಠಾಣೆಗೆ ಆಗಮಿಸಿದ್ದರು. ನಂತರ ಆಕೆಯ ಬಿಡುಗಡೆಗೆ ಸಂಬಂಧಿಸಿದ ವಿಧಿವಿಧಾನಗಳನ್ನು ಪೂರ್ಣಗೊಳಿಸಲು ವೆಲ್ಲೂರ್ ಮಹಿಳಾ ಜೈಲಿಗೆ ಕರೆದೊಯ್ಯಲಾಯಿತು. ಅಲ್ಲಿ ಬಿಡುಗಡೆ ಆದ ತಮ್ಮ ಪತಿ ಮುರುಗನ್ ಹಾಗೂ ಶಾಂತನ್‌ರನ್ನು ಭೇಟಿ ಮಾಡಿದಳು. ಅದು ಭಾವುಕ ಕ್ಷಣವಾಗಿತ್ತು. ನಂತರ ಶ್ರೀಲಂಕಾ ಪ್ರಜೆಗಳಾದ ಕಾರಣ ಮುರುಗನ್ ಹಾಗೂ ಶಾಂತನ್‌ರನ್ನು ತಿರುಚಿರಾಪಳ್ಳಿಯ ಲಂಕಾ ನಿರಾಶ್ರಿತರ ಕೇಂದ್ರಕ್ಕೆ ಪೊಲೀಸರು ಕರೆದೊಯ್ದರು.
ಈ ವರ್ಷದ ಆರಂಭದಲ್ಲಿ ಸಹಾಪರಾಧಿ ಎಜಿ ಪೆರಾರಿವಾಲನ್ ಅವರನ್ನು ಬಿಡುಗಡೆಗೊಳಿಸಿದ ಆದೇಶವು ಇತರ ಅಪರಾಧಿಗಳಿಗೂ ವಿಸ್ತರಿಸಿರುವುದನ್ನು ಗಮನಿಸಿ ಸುಪ್ರೀಂ ಕೋರ್ಟ್ ಶುಕ್ರವಾರ ಆರು ಅಪರಾಧಿಗಳನ್ನು ಸನ್ನತೆಯ ಆಧಾರದಲ್ಲಿ ಬಿಡುಗಡೆ ಮಾಡಲು ಆದೇಶ ಹೊರಡಿಸಿತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀ ಹರನ್ ಯಾರು?
1991 ರಲ್ಲಿ ಶ್ರೀಪೆರಂಬದೂರಿನಲ್ಲಿ ಸಾರ್ವತ್ರಿಕ ಚುನಾವಣಾ ಪ್ರಚಾರದ ಸಮಯದಲ್ಲಿ ಧನು ಎಂಬ ಆತ್ಮಹತ್ಯಾ ಬಾಂಬರ್‌ನಿಂದ ರಾಜೀವ್ ಗಾಂಧಿಯನ್ನು ಎಲ್‌ಟಿಟಿಇ ಕಾರ್ಯಕರ್ತರು ಕೊಂದರು. ಶ್ರೀಲಂಕಾದ ತಮಿಳು ಸೇನೆಯು ರಾಜೀವ್ ಗಾಂಧಿಯವರು ಅಧಿಕಾರಕ್ಕೆ ಮರಳಿದರೆ ಶಾಂತಿಪಾಲನಾ ಪಡೆಗಳನ್ನು ಹಿಂದಕ್ಕೆ ಕಳುಹಿಸಬಹುದೆಂದು ಹೆದರಿದ್ದರು. ಹೀಗಾಗಿ ಈ ಹತ್ಯೆ ನಡೆದಿತ್ತು. ಗಾಂಧಿಯನ್ನು ಕೊಲ್ಲಲು ನಿಯೋಜಿಸಲಾದ ಐದು ಜನರ ತಂಡದಲ್ಲಿ ನಳಿನಿ ಮಾತ್ರ ಬದುಕುಳಿದಿದ್ದಳು. ಸ್ಫೋಟಕ್ಕೂ ಮುನ್ನ ಅವಳು ಧನು ಜೊತೆಗಿನ ಫೋಟೋದಲ್ಲಿ ಕಾಣಿಸಿಕೊಂಡಿದ್ದಳು. ಆಕೆಗೆ ಮರಣದಂಡನೆ ವಿಧಿಸಲಾಯಿತು ಆದರೆ ನಂತರ ಅದನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಲಾಯಿತು.
ರಾಜೀವ್ ಗಾಂಧಿ ಹತ್ಯೆ ಪ್ರಮುಖ ಆರೋಪಿ ನಳಿನಿ ಸೇರಿ 6 ಜನರ ಬಿಡುಗಡೆಗೆ ಆದೇಶಿಸಿದ ಸುಪ್ರೀಂ ಕೋರ್ಟ್
ಯಾರು ಈ ನಳಿನಿ:
ಎಥಿರಾಜ್ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ ಪದವೀಧರೆಯಾಗಿರುವ ನಳಿನಿ ಮುರುಗನ್ ಶ್ರೀಹರನ್ ಚೆನ್ನೈನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಳು. ಚೆನ್ನೈ ಪೋಲೀಸ್ ಇನ್ಸ್‌ಪೆಕ್ಟರ್ ಆಗಿದ್ದ ದಿವಂಗತ ಪಿ ಶಂಕರ ನಾರಾಯಣನ್ (ಮೂಲತ ಕೇರಳದವರು) ಮತ್ತು ನರ್ಸ್ ಆಗಿದ್ದ ದಿವಂಗತ ಪದ್ಮಾವತಿ (ಚೆನ್ನೈಯವರು) ಅವರಿಗೆ ಜನಿಸಿದ ಮೂವರು ಮಕ್ಕಳಲ್ಲಿ ಈಕೆ ಒಬ್ಬಳು ಮತ್ತು ಮೊದಲನೆಯವಳು ಕೂಡ. ತಂಗಿ ಕಲ್ಯಾಣಿ, ಸಹೋದರ ಬಾಗ್ಯನಾಥನ್ . ನಳಿನಿಯ ಯಾವುದೇ ಒಬ್ಬ ಸಂಬಂಧಿಕ ಕೂಡ ಯಾವುದೇ ರೀತಿಯ ರಾಜಕೀಯ ಸಂಬಂಧವನ್ನು ಹೊಂದಿರಲಿಲ್ಲ, ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಕೈದಿಯಾಗಿರುವುದು ಈಕೆಯ ಸಂಬಂಧಿಕರಿಗೆ ವಿಲಕ್ಷಣವಾಯ್ತು. ಆಕೆಯ ಸಹೋದರ ಬಾಗ್ಯನಾಥನ್ ಮತ್ತು ಸ್ನೇಹಿತರ ನಡುವಿನ ಸ್ನೇಹದ ಪರಿಣಾಮವಾಗಿ ಎಲ್‌ಟಿಟಿಇಯ ಕಾರ್ಯಕರ್ತ ಮುರುಗನ್ ಶ್ರೀಹರನ್ ಪರಿಚಯ ನಳಿನಿಗೆ ಆಗಿತ್ತು. ಈತ ನಳಿನಿ ಎಲ್‌ಟಿಟಿಇ ಸೇರಲು ಪ್ರೇರೇಪಿಸಿದ್ದ.