* ಕೊರೋನಾ ಲಸಿಕೆ ತೆಗೆದುಕೊಳ್ಳುವಂತೆ ಯಾರಿಗೂ ಬಲವಂತ ಮಾಡುವಂತಿಲ್ಲ
* ಲಸಿಕೆ ಪಡೆಯದವರನ್ನು ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧಿಸುವಂತಿಲ್ಲ
* ಅಡ್ಡ ಪರಿಣಾಮಗಳ ಬಗೆಗಿನ ಮಾಹಿತಿಯನ್ನು ಕೂಡಲೇ ಬಹಿರಂಗಪಡಿಸಬೇಕು
ನವದೆಹಲಿ(ಮೇ.03): ಕೊರೋನಾ ಲಸಿಕೆ ತೆಗೆದುಕೊಳ್ಳುವಂತೆ ಯಾರಿಗೂ ಬಲವಂತ ಮಾಡುವಂತಿಲ್ಲ ಎಂದು ಸೂಚಿಸಿರುವ ಸುಪ್ರೀಂಕೋರ್ಟ್, ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆ ಇರುವವರೆಗೆ ಲಸಿಕೆ ಪಡೆಯದವರನ್ನು ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧಿಸುವಂತಿಲ್ಲ ಎಂದೂ ಕಟ್ಟಪ್ಪಣೆ ಮಾಡಿದೆ. ಅಲ್ಲದೆ, ಕೊರೋನಾ ಲಸಿಕೆ ತೆಗೆದುಕೊಂಡವರ ಮೇಲಾಗಿರುವ ಅಡ್ಡ ಪರಿಣಾಮಗಳ ಬಗೆಗಿನ ಮಾಹಿತಿಯನ್ನು ಕೂಡಲೇ ಬಹಿರಂಗಪಡಿಸಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಲಸಿಕೆಯ ಅಡ್ಡ ಪರಿಣಾಮಗಳ ಕುರಿತ ದತ್ತಾಂಶಗಳನ್ನು ಬಹಿರಂಗಪಡಿಸಬೇಕು ಎಂದು ಕೋರಿ ರಾಷ್ಟ್ರೀಯ ಲಸಿಕಾಕರಣ ನೀತಿಯ ಕುರಿತಾದ ಸಲಹೆಗಾರರ ಸಮಿತಿಯ ಮಾಜಿ ಸದಸ್ಯ ಡಾ.ಜೇಕಬ್ ಪುಲಿಯೆಲ್ ಎಂಬುವರು ಸುಪ್ರೀಂಕೋರ್ಚ್‌ಗೆ ಹೋಗಿದ್ದರು. ಆ ಕುರಿತು ವಿಚಾರಣೆ ನಡೆಸಿದ ನ್ಯಾಯಪೀಠ, ಯಾರಿಗೂ ಲಸಿಕೆ ತೆಗೆದುಕೊಳ್ಳುವಂತೆ ಬಲವಂತ ಮಾಡುವಂತಿಲ್ಲ. ಸಂವಿಧಾನದ 21ನೇ ಪರಿಚ್ಛೇದದಡಿ ಜನರಿಗೆ ಅವರ ದೇಹದ ಮೇಲೆ ಸಂಪೂರ್ಣ ಹಕ್ಕಿದೆ. ಕೊರೋನಾ ಪೀಡಿತರ ಸಂಖ್ಯೆ ಕಡಿಮೆ ಇರುವವರೆಗೂ ಲಸಿಕೆ ಪಡೆಯದವರನ್ನು ಸಾರ್ವಜನಿಕ ಸ್ಥಳಗಳಿಗೆ ನಿರ್ಬಂಧಿಸುವಂತಿಲ್ಲ. ಲಸಿಒಕೆಯ ಅಡ್ಡ ಪರಿಣಾಮಗಳ ಕುರಿತ ಮಾಹಿತಿಯನ್ನು ಜನರ ಖಾಸಗಿತನವನ್ನು ಗೌರವಿಸಿ ಸಾರ್ವಜನಿಕ ವೇದಿಕೆಯಲ್ಲಿ ಬಹಿರಂಗಪಡಿಸಬೇಕು ಎಂದು ಸೂಚನೆ ನೀಡಿತು.
ಇದೇ ವೇಳೆ, ಮಕ್ಕಳಿಗೆ ಲಸಿಕೆ ನೀಡುವ ವಿಷಯದಲ್ಲಿ ಜಾಗತಿಕ ಮಾನದಂಡಗಳನ್ನು ಪಾಲಿಸಬೇಕು. ಮಕ್ಕಳ ಮೇಲೆ ನಡೆಸಿದ ಲಸಿಕೆ ಪ್ರಯೋಗದ ವಿವಿಧ ಹಂತಗಳ ಫಲಿತಾಂಶವನ್ನು ಕೂಡಲೇ ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದೂ ನ್ಯಾಯಪೀಠ ಹೇಳಿತು.
15 ಜಿಲ್ಲೆಗಳಲ್ಲಿ ಬೂಸ್ಟರ್ ಡೋಸ್ ಕೇಳೋರೇ ಇಲ್ಲ
ಕೊರೋನಾ ನಾಲ್ಕನೇ ಅಲೆಯ ಅಪಾಯದ ಬಗ್ಗೆ ಸರ್ಕಾರ ಸತತವಾಗಿ ಎಚ್ಚರಿಕೆ ನೀಡುತ್ತಿದ್ದರೂ, ರಾಜ್ಯದ 15 ಜಿಲ್ಲೆಗಳಲ್ಲಿ ವಯಸ್ಕ ಗುಂಪಿನಡಿ (18ರಿಂದ 59 ವರ್ಷ ವಯೋಮಾನದವರು) ಬರುವ ಒಬ್ಬರೇ ಒಬ್ಬರು ಕೂಡಾ ಬೂಸ್ಟರ್ ಡೋಸ್ ಪಡೆದಿಲ್ಲ.
ಬಳ್ಳಾರಿ, ಬಾಗಲಕೋಟೆ, ಹಾಸನ, ರಾಯಚೂರು, ಮಂಡ್ಯ, ಬೀದರ್, ಚಿತ್ರದುರ್ಗ, ಕೋಲಾರ, ಹಾವೇರಿ, ಕೊಪ್ಪಳ, ಚಿಕ್ಕಬಳ್ಳಾಪುರ, ಗದಗ, ಯಾದಗಿರಿ, ರಾಮನಗರ, ಚಾಮರಾಜನಗರ ಜಿಲ್ಲೆಯಲ್ಲಿ ಏ.26ರವರೆಗೆ ಒಬ್ಬರೇ ಒಬ್ಬರು ಬೂಸ್ಟರ್ ಡೋಸ್ ಪಡೆದಿಲ್ಲ. ತುಮಕೂರು ಜಿಲ್ಲೆಯಲ್ಲಿ ಒಬ್ಬರು ಮಾತ್ರ ಲಸಿಕೆ ಪಡೆದಿದ್ದಾರೆ. ವಿಜಯಪುರ 10, ಕಲಬುರಗಿ 33, ಬೆಂಗಳೂರು ಗ್ರಾಮಾಂತರ 45, ಉತ್ತರ ಕನ್ನಡ 58, ಚಿಕ್ಕಬಳ್ಳಾಪುರ 77 ಮತ್ತು ದಾವಣಗೆರೆ ಜಿಲ್ಲೆಯಲ್ಲಿ 90 ಮಂದಿ ಮಾತ್ರ ಬೂಸ್ಟರ್ ಡೋಸ್ ಸ್ವೀಕರಿಸಿದ್ದಾರೆ.
ಎರಡನೇ ಡೋಸ್ ಪಡೆದು ಒಂಬತ್ತು ತಿಂಗಳ ಬಳಿಕ ಮುನ್ನೆಚ್ಚರಿಕೆ ಡೋಸ್ ಪಡೆಯಲು ಅರ್ಹರಾಗಿರುವುದರಿಂದ ಸದ್ಯರಾಜ್ಯದಲ್ಲಿ 25 ಲಕ್ಷಕ್ಕೂ ಹೆಚ್ಚು ಮಂದಿ ವಯಸ್ಕರು ಅರ್ಹತೆ ಹೊಂದಿದ್ದಾರೆ. ಆದರೆ ಕೇವಲ 46,296 ಮಂದಿ ಮಾತ್ರ ಲಸಿಕೆ ಪಡೆದಿದ್ದಾರೆ.
18- 59ರ ವಯೋಮಾನ ಅತ್ಯಂತ ಚಲನಶೀಲ ವಯೋಮಾನ. ಇಲ್ಲಿ ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ಮತ್ತು ಸಮಾಜದ ದುಡಿಯುವ ವರ್ಗ ಬರುತ್ತದೆ. ಕೋವಿಡ್‌ಗೆ ಅತ್ಯಂತ ಸುಲಭವಾಗಿ ಸಿಲುಕುವುದೇ ಈ ವಯೋಮಾನದ ಗುಂಪು. ರಾಜ್ಯದಲ್ಲಿ ಈವರೆಗೆ 40,057 ಮಂದಿ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡಿದ್ದು ಈ ಪೈಕಿ 17,705 ಮಂದಿ 18 ರಿಂದ 59 ವರ್ಷದವರು. ಅದೇ ರೀತಿ ಈವರೆಗೆ ಪತ್ತೆಯಾಗಿರುವ 39.47 ಲಕ್ಷ ಕೋವಿಡ್ ಪ್ರಕರಣಗಳಲ್ಲಿ ಈ ವಯೋಮಾನದ ಪಾಲು ಬರೋಬ್ಬರಿ 28.83 ಲಕ್ಷ. ಅಂದರೆ ಕೋವಿಡ್ ಸೋಂಕಿತರಲ್ಲಿ ಶೇ.73 ಭಾಗ ಈ ವಯಸ್ಸಿನವರು. ಇದೀಗ ನಾಲ್ಕನೇ ಅಲೆ ಸನ್ನಿಹಿತವಾಗಿದೆ ಎಂಬಂತಹ ಬೆಳವಣಿಗೆಗಳು ನಡೆಯುತ್ತಿದ್ದರೂ ಕೋವಿಡ್‌ಗೆ ಸುಲಭ ತುತ್ತಾಗುವ ಈ ವಯೋಮಾನದವರಲ್ಲಿ ಬೂಸ್ಟರ್ ಡೋಸ್ ಪಡೆಯುವ ಉತ್ಸಾಹ ಕಾಣುತ್ತಿಲ್ಲ.