Delhi Pollution| ಎಲ್ಲಕ್ಕೂ ನಮ್ಮ ಆದೇಶಕ್ಕೇಕೆ ಕಾಯುತ್ತೀರಿ? ಸರ್ಕಾರಕ್ಕೆ ಸುಪ್ರೀಂ ತರಾಟೆ!

By Suvarna News  |  First Published Nov 18, 2021, 11:16 AM IST

* ಎಲ್ಲದಕ್ಕೂ ನಮ್ಮ ಆದೇಶಕ್ಕೇಕೆ ಕಾಯುತ್ತೀರಿ?

* ಕೇಂದ್ರ, ರಾಜ್ಯಗಳ ವಿರುದ್ಧ ಸುಪ್ರೀಂ ಕಿಡಿಕಿಡಿ

* ದಿಲ್ಲಿ ಮಾಲಿನ್ಯ: ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ತರಾಟೆ


ನವದೆಹಲಿ(ನ.18): ದೆಹಲಿ (Delhi)  ಮತ್ತು ರಾಜಧಾನಿ ವಲಯದಲ್ಲಿ ವಾಯು ಮಾಲಿನ್ಯ (Air Pollution)ನಿಯಂತ್ರಣದ ವಿಷಯದಲ್ಲಿ ಕೇಂದ್ರ ಮತ್ತು ಸುತ್ತಲಿನ ರಾಜ್ಯ ಸರ್ಕಾರಗಳನ್ನು ಮತ್ತೊಮ್ಮೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂಕೋರ್ಟ್‌ (Supreme Court), ‘ಅಧಿಕಾರಶಾಹಿಗೆ ಜಡತ್ವ ಬಂದಿದೆ. ನೀತಿ ನಿರೂಪಣೆಯಲ್ಲಿ ನೀವು ಪೂರ್ಣ ವಿಫಲವಾಗಿದ್ದೀರಿ. ಪ್ರತಿ ವಿಷಯದಲ್ಲೂ ಕೋರ್ಟೇ ಆದೇಶ ಹೊರಡಿಸಬೇಕು ಎಂಬ ಮನಸ್ಥಿತಿಗೆ ಬಂದು ತಲುಪಿದ್ದೀರಿ’ ಎಂದು ಕಿಡಿಕಾರಿದೆ.

ಮಾಲಿನ್ಯ ಕುರಿತಂತೆ ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನ್ಯಾ| ಎನ್‌.ವಿ.ರಮಣ (NV Ramana) ನೇತೃತ್ವದ ನ್ಯಾಯಪೀಠಕ್ಕೆ ಮಾಲಿನ್ಯ ನಿಯಂತ್ರಣಕ್ಕಾಗಿ ಕೇಂದ್ರ, ದೆಹಲಿ, ಪಂಜಾಬ್‌ (Punjab) ಮತ್ತು ಹರ್ಯಾಣ ಸರ್ಕಾರಗಳು (Haryana Govt) ಕೈಗೊಂಡ ಕ್ರಮಗಳ ಮಾಹಿತಿ ನೀಡಲಾಯಿತು. ಅದರಲ್ಲಿ, ‘ಟ್ರಕ್‌ಗಳಿಗೆ ರಾಜಧಾನಿ ಪ್ರವೇಶ ನಿಷೇಧ, ಶಾಲೆ ಪೂರ್ಣ ಬಂದ್‌, ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟುಸಿಬ್ಬಂದಿಗೆ ಮಾತ್ರ ಅವಕಾಶ, ವರ್ಕ್ ಫ್ರಂ ಹೋಮ್‌, ಕಾರ್‌ ಪೂಲಿಂಗ್‌’ ಸೇರಿ ಹಲವು ಅಂಶಗಳಿದ್ದವು.

Latest Videos

undefined

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಈ ಕ್ರಮ ತೃಪ್ತಿಕರವಾಗಿಲ್ಲ. ವರ್ಕ್ ಫ್ರಂ ಹೋಮ್‌, ಕಾರ್‌ ಪೂಲಿಂಗ್‌ (Car Pooling) ಮತ್ತು ನೀರು ಚಿಮಿಕಿಸುವ ಕ್ರಮವನ್ನಷ್ಟೇ ಕೈಗೊಂಡರೆ ಸಾಲದು. ನಮ್ಮಿಂದ ಆದೇಶವನ್ನು ಬಯಸುವುದರ ಹೊರತಾಗಿ ನಾವು ಸರ್ಕಾರಗಳಿಂದ ಇನ್ನಷ್ಟು ಕ್ರಮಗಳನ್ನು ಬಯಸುತ್ತೇವೆ’ ಎಂದು ಚಾಟಿ ಬೀಸಿತು.

‘ಆಡಳಿತಕ್ಕೆ ಜಡತ್ವ ಬಂದಿದೆ. ನೀತಿ ನಿರೂಪಣೆಗೆ ಪಾಶ್ರ್ವವಾಯು ಹೊಡೆದಿದೆ. ಕೋರ್ಟ್‌ಗಳೇ ಎಲ್ಲವನ್ನೂ ಮಾಡಬೇಕೆಂದು ಬಯಸುವ ಸ್ಥಿತಿಗೆ ಬಂದಿದ್ದೀರಿ. ಒಂದು ಬಕೆಟ್‌ ನೀರು ತೆಗೆದುಕೊಂಡು ಬೆಂಕಿ ಆರಿಸಿ ಎಂಬುದನ್ನೂ ನಾವೇ ಆದೇಶಿಸಬೇಕಿದೆ. ‘‘ಕೋರ್ಟ್‌ ಆದೇಶಿಸಲಿ. ಅದಕ್ಕೆ ನಾವು ಸಹಿ ಹಾಕಿ, ‘ಇದು ಕೋರ್ಟ್‌ ಆದೇಶ’ ಎಂದು ತೋರಿಸುತ್ತೇವೆ’’ ಎಂಬ ಹಂತದಲ್ಲಿ ಆಡಳಿತ ವ್ಯವಸ್ಥೆ ಇದೆ. ಇಡೀ ದೆಹಲಿ ಉಸಿರುಗಟ್ಟುವ ಸ್ಥಿತಿಗೆ ತಲುಪಿದಾಗ ನಾವು ಮಧ್ಯಪ್ರವೇಶ ಮಾಡಿದೆವು. ಹಾಗಿದ್ದರೆ ವರ್ಷದ ಉಳಿದ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಏನು ಮಾಡುತ್ತಿದ್ದವು? ಬೆಂಕಿ ಬಿದ್ದಾಗ ನೀವು ಬಾವಿ ತೋಡಲು ಆರಂಭಿಸಿದ್ದೀರಿ’ ಎಂದು ನ್ಯಾ| ರಮಣ ಕಿಡಿಕಾರಿದರು.

‘ವಿದ್ಯುತ್‌ ಉತ್ಪಾದನಾ ಘಟಕ, ಧೂಳು ಮತ್ತು ಮಾಲಿನ್ಯಸೃಷ್ಟಿಸುವ ಕೈಗಾರಿಕೆಗಳ ನಿಯಂತ್ರಣಕ್ಕೆ ಈಗಾಗಲೇ ಕಾನೂನು ಇವೆ. ಆದರೆ ಅವುಗಳ ಪಾಲನೆಯ ಮೇಲೆ ನಿಗಾ ಇಲ್ಲ’ ಎಂದೂ ಕೋರ್ಟ್‌ ತರಾಟಗೆ ತೆಗೆದುಕೊಂಡಿತು.

ಸ್ಟಾರ್‌ ಹೋಟೆಲಲ್ಲಿ ಕುಳಿತು ರೈತರ ದೂಷಣೆ ಏಕೆ?:

‘ಮಾಲಿನ್ಯಕ್ಕೆ ರೈತರು ತ್ಯಾಜ್ಯಕ್ಕೆ ಬೆಂಕಿ ಹಾಕುತ್ತಿರುವುದೇ ಕಾರಣ’ ಎಂಬ ಆರೋಪದ ಬಗ್ಗೆ ಪ್ರಸ್ತಾಪಿಸಿದ ನ್ಯಾಯಪೀಠ, ‘ರೈತರು ತ್ಯಾಜ್ಯಕ್ಕೆ ಏಕೆ ಬೆಂಕಿ ಹಾಕುತ್ತಿದ್ದಾರೆ? ಅವರ ಸಮಸ್ಯೆ ಏನು ಎಂಬುದನ್ನು ಅರಿಯಬೇಕು.ಅವರಿಗೆ ಏನಾದರೂ ಪರ್ಯಾಯ ವ್ಯವಸ್ಥೆ ಮಾಡಿ. ದಿಲ್ಲಿ ಸ್ಟಾರ್‌ ಹೋಟೆಲ್‌ಗಳಲ್ಲಿ (Star Hotel) ಕುಳಿತವರು ರೈತರನ್ನು ಹೊಣೆ ಮಾಡುತ್ತಾರೆ. ರೈತÃ ಸಣ್ಣ ಸಣ್ಣ ಜಮೀನು ನೋಡಿ. ನೀವೆಲ್ಲಾ ಹೇಳುವ ಯಂತ್ರಗಳನ್ನು ಅವರೆಲ್ಲಾ ಖರೀದಿಸಲು ಸಾಧ್ಯವೇ’ ಎಂದೂ ಸರ್ಕಾರಗಳಿಗೆ ಕೋರ್ಟ್‌ (Supreme Court) ಚಾಟಿ ಬೀಸಿತು.

ಕಠಿಣ ಕ್ರಮ ಬೇಡ:

ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ‘ಇನ್ನು ಕೆಲ ದಿನಗಳಲ್ಲಿ ಗಾಳಿ ದಿಕ್ಕು ಬದಲಾಗುವ ಕಾರಣ, ಮಾಲಿನ್ಯ (Pollution) ಇಳಿಕೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹೀಗಾಗಿ ದೆಹಲಿ ಲಾಕ್‌ಡೌನ್‌, ಕೇಂದ್ರದ ನೌಕರರಿಗೆ ಕಡ್ಡಾಯ ವರ್ಕ್ ಫ್ರಂನಂಥ ಕಠಿಣ ಕ್ರಮ ಜಾರಿಗೆ ಕೋರ್ಟ್‌ ಆದೇಶಿಸಬೇಡಿ’ ಎಂದು ಮನವಿ ಮಾಡಿದರು. ಇದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿದ ನ್ಯಾಯಾಲಯ ವಿಚಾರಣೆಯನ್ನು ನ.24ಕ್ಕೆ ಮುಂದೂಡಿತು. ಜೊತೆಗೆ ಮಾಲಿನ್ಯ ನಿಯಂತ್ರಣಕ್ಕೆ ಇತರೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವಂತೆ ಸೂಚಿಸಿತು.

ಕೋರ್ಟ್‌ ಹೇಳಿದ್ದೇನು?

- ಅಧಿಕಾರಿಶಾಹಿಗೆ ಜಡತ್ವ ಬಂದಿದೆ, ನೀತಿ ನಿರೂಪಣೆಯಲ್ಲಿ ವಿಫಲವಾಗಿದೆ

- ಬರೀ ವರ್ಕ್ ಫ್ರಂ ಹೋಂ, ಕಾರ್‌ ಪೂಲಿಂಗ್‌, ನೀರು ಸಿಂಪಡಣೆ ಸಾಲದು

- ಈಗ ಮಾಲಿನ್ಯ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಏನೇನೂ ಸಾಲದು

- ಬೆಂಕಿ ಬಿದ್ದಾಗ ಬಾವಿ ತೋಡುತ್ತಿದ್ದೀರಿ, ಇಷ್ಟುದಿನ ಏನು ಮಾಡಿದಿರಿ?

click me!