Mekedatu Project: ಮೇಕೆದಾಟು ಅಣೆಕಟ್ಟೆಏಕೆ ಬೇಕು? ಕಾವೇರಿ ವಿವಾದಕ್ಕೆ ಪರಿಹಾರ ಈ ಡ್ಯಾಂ!

By Kannadaprabha News  |  First Published Jan 10, 2022, 7:40 AM IST

* ಮೇಕೆದಾಟು ಡ್ಯಾಂ ನಿರ್ಮಾಣವಾದರೆ ಬೆಂಗಳೂರಿಗೆ 2030 ಇಸ್ವಿಯಾಚೆಗಿನ ಬೇಡಿಕೆಗೆ ತಕ್ಕಂತೆ ಕುಡಿಯುವ ನೀರು ದೊರೆಯುತ್ತದೆ

* ಬೆಂಗಳೂರಿನ ಮತ್ತಷ್ಟುಪ್ರದೇಶ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೂ ನೀರು ಒದಗಿಸಬಹುದು

* 400 ಮೆ.ವ್ಯಾ. ಜಲವಿದ್ಯುತ್‌ ಕೂಡ ಉತ್ಪಾದಿಸಬಹುದು. ಹೀಗಾಗಿ ಈ ಯೋಜನೆ ಬಹೂಪಯೋಗಿ.


-ಎಂ.ಎಲ್‌.ಲಕ್ಷ್ಮೀಕಾಂತ್‌

ಬೆಂಗಳೂರಿನಿಂದ ಸುಮಾರು 100 ಕಿ.ಮೀ. ದೂರದಲ್ಲಿರುವ ಸಂಗಮ ಪ್ರಸಿದ್ಧ ಪ್ರವಾಸಿ ತಾಣ. ರಾಜಧಾನಿಯ ಮಲಿನ ನೀರನ್ನೆಲ್ಲಾ ಹೊತ್ತು ತರುವ ವೃಷಭಾವತಿಯನ್ನು ಕನಕಪುರ ಬಳಿ ತನ್ನ ಒಡಲಿಗೆ ಸೇರಿಸಿಕೊಂಡು ಬರುವ ಅರ್ಕಾವತಿ ನದಿ ಕಾವೇರಿಯಲ್ಲಿ ಸಂಧಿಸುವ ಸ್ಥಳ. ಸಂಗಮದಿಂದ ತೆಪ್ಪದಲ್ಲಿ ಕುಳಿತು ಅರ್ಕಾವತಿ ನದಿಯ ಅತ್ತ ಕಡೆ ದಾಟಿ, ಮಿನಿ ಬಸ್‌ನಲ್ಲಿ ಕುಳಿತು ಕಾಡ ಹಾದಿಯಲ್ಲಿ ಒಂದೈದು ಕಿ.ಮೀ. ಕ್ರಮಿಸಿದರೆ ಸಿಗುವುದೇ ಮೇಕೆದಾಟು. ವಿಶಾಲವಾಗಿ ಹರಿದು ಬರುವ ಕಾವೇರಿ ನದಿ ಮೇಕೆದಾಟು ಬಳಿ ಬಂಡೆಗಳ ಕೊರಕಲಿನ ನಡುವೆ ತನ್ನ ಗಾತ್ರವನ್ನು ತೀರಾ ಕಿರಿದಾಗಿಸಿಕೊಂಡು, ಭೋರ್ಗರೆದು ಹರಿಯುತ್ತದೆ. ಬಂಡೆಗಳ ಮೇಲೆ ನಿಂತು ಕಾವೇರಿಯ ಹರಿವನ್ನು ವೀಕ್ಷಿಸುವುದೇ ಸೊಗಸು. ಮೇಕೆದಾಟುವಿನಲ್ಲಿ ಕೇಳುವ ಕಾವೇರಿಯ ಭೋರ್ಗರೆತಕ್ಕಿಂತ ರಾಜ್ಯ ರಾಜಕಾರಣದಲ್ಲಿ ಮೇಕೆದಾಟು ಅಬ್ಬರವೇ ಈಗ ಜೋರಾಗಿದೆ. ಸಾಮಾನ್ಯವಾಗಿ ಕಾವೇರಿ ಎಂದ ಕೂಡಲೇ ಕರ್ನಾಟಕ- ತಮಿಳುನಾಡು ನಡುವೆ ವಾಕ್ಸಮರ, ಕಾನೂನು ಸಮರ, ಹೋರಾಟ, ಪ್ರತಿಭಟನೆ ನಡೆಯಬೇಕು. ಆದರೆ ಈ ಬಾರಿ ತಮಿಳುನಾಡು ಬಹುತೇಕ ಮೌನವಾಗಿದೆ. ಚುನಾವಣೆಗೆ 15 ತಿಂಗಳುಗಳು ಇರುವಾಗ ಪ್ರತಿಪಕ್ಷ ಕಾಂಗ್ರೆಸ್‌ ನಡೆಸುತ್ತಿರುವ ಪಾದಯಾತ್ರೆಯಿಂದಾಗಿ ರಾಜ್ಯದ ಪಕ್ಷಗಳು ಕಿತ್ತಾಡಿಕೊಳ್ಳುತ್ತಿವೆ.

Latest Videos

undefined

ಮೇಕೆದಾಟು ಡ್ಯಾಂ ಏಕೆ ಬೇಕು?

ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪು ಹಾಗೂ ಸುಪ್ರೀಂಕೋರ್ಟ್‌ ಆದೇಶದ ಬಳಿಕ, ಕರ್ನಾಟಕ ಪ್ರತಿ ವರ್ಷ ತಮಿಳುನಾಡಿಗೆ 177.25 ಟಿಎಂಸಿ ನೀರನ್ನು ಹರಿಸಬೇಕು. ಉತ್ತಮ ಮುಂಗಾರಿನ ವರ್ಷದಲ್ಲಿ ಇದನ್ನು ಪೂರೈಸಲು ಸಮಸ್ಯೆಯೇ ಆಗುವುದಿಲ್ಲ. ಬೆಂಕಿ ಹೊತ್ತಿಕೊಳ್ಳುವುದೇ ಮಳೆ ಕಡಿಮೆಯಾದಾಗ. ಅಧಿಕ ಮಳೆಯಾದಾಗ ಕರ್ನಾಟಕದ ಜಲಾಶಯಗಳು ತುಂಬಿ, ಹೆಚ್ಚುವರಿ ನೀರೆಲ್ಲಾ ತಮಿಳುನಾಡು ಪಾಲಾಗುತ್ತದೆ. ಉದಾಹರಣೆಗೆ 2020-21ನೇ ಸಾಲಿನ ಜಲ ವರ್ಷ (ಜೂನ್‌ನಿಂದ ಮೇ)ದಲ್ಲಿ ಕರ್ನಾಟಕದಿಂದ 34 ಟಿಎಂಸಿ ನೀರು ನೆರೆರಾಜ್ಯಕ್ಕೆ ಹೆಚ್ಚುವರಿಯಾಗಿ ಹರಿದಿದೆ. 2018-19ನೇ ಜಲ ವರ್ಷದಲ್ಲಿ 227 ಟಿಎಂಸಿ, 2019-20ನೇ ಸಾಲಿನಲ್ಲಿ 98 ಟಿಎಂಸಿ ನೀರು ತಮಿಳುನಾಡಿಗೆ ಹೆಚ್ಚುವರಿಯಾಗಿ ಸಿಕ್ಕಿದೆ. 4 ದಶಕಗಳ ಸರಾಸರಿಯನ್ನೇ ತೆಗೆದುಕೊಂಡರೂ ತಮಿಳುನಾಡಿಗೆ ನಿಗದಿತ ಕೋಟಾಕ್ಕಿಂತ ಹೆಚ್ಚುವರಿಯಾಗಿ 45 ಟಿಎಂಸಿ ನೀರು ಸಿಗುತ್ತಿದೆ. ಕರ್ನಾಟಕದ ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಾದ ಕೆಆರ್‌ಎಸ್‌, ಹೇಮಾವತಿ, ಕಬಿನಿ ಹಾಗೂ ಹಾರಂಗಿ ಡ್ಯಾಂಗಳ ಒಟ್ಟು ಸಾಮರ್ಥ್ಯ 115 ಟಿಎಂಸಿ. ಇವೆಲ್ಲಾ ಭರ್ತಿಯಾಗಿ, ಕಾವೇರಿ ಕಣಿವೆಯ ಕೆರೆ ಕಟ್ಟೆಗಳೆಲ್ಲಾ ಕೋಡಿ ಬಿದ್ದ ಮೇಲೆ ಸಿಗುವ ನೀರೆಲ್ಲಾ ತಮಿಳುನಾಡಿನದ್ದೇ. ಜತೆಗೆ ಅಣೆಕಟ್ಟೆಹಾಗೂ ಜಲಮಾಪನ ಕೇಂದ್ರವಿರುವ ಬಿಳಿಗುಂಡ್ಲು ನಡುವೆ ಬೀಳುವ ಮಳೆ ನೀರು ಕೂಡ ತಮಿಳುನಾಡಿಗೆ ಯಾವ ನಿಯಂತ್ರಣವೂ ಇಲ್ಲದೆ ಹರಿದುಹೋಗುತ್ತದೆ. ಈ ಹೆಚ್ಚುವರಿ ನೀರನ್ನು ತಮಿಳುನಾಡು ಕೂಡ ಸಂಪೂರ್ಣವಾಗಿ ಸಂಗ್ರಹಿಸಿಡಲು ಆಗುವುದಿಲ್ಲ. ಹೀಗಾಗಿ ಅದು ಸಮುದ್ರ ಸೇರುತ್ತದೆ. ಆ ನೀರನ್ನು ಹಿಡಿದಿಡಲು ಸಂಗಮದಿಂದ 4 ಕಿ.ಮೀ. ಕೆಳಭಾಗದಲ್ಲಿ 9000 ಕೋಟಿ ರು. ವೆಚ್ಚದಲ್ಲಿ ಅಣೆಕಟ್ಟೆನಿರ್ಮಿಸುವ ಉದ್ದೇಶ ಕರ್ನಾಟಕದ್ದು. ಅದೇ ಮೇಕೆದಾಟು ಡ್ಯಾಂ.

ಬರ ಬಂದಾಗ ಈ ಡ್ಯಾಂ ಅನುಕೂಲ

ಕಾವೇರಿ ಕಣಿವೆಯಲ್ಲಿ ಕೃಷ್ಣಾ ಕೊಳ್ಳದಲ್ಲಿರುವಂತೆ ತುಂಗಭದ್ರಾ (130 ಟಿಎಂಸಿ), ಆಲಮಟ್ಟಿ(123 ಟಿಎಂಸಿ)ಯಂತಹ ಬೃಹತ್‌ ಸಂಗ್ರಹ ಸಾಮರ್ಥ್ಯದ ಅಣೆಕಟ್ಟುಗಳು ಇಲ್ಲ. ಅಷ್ಟುನೀರೂ ಈ ಕಣಿವೆಯಲ್ಲಿಲ್ಲ. ಈ ಭಾಗದ ಅತಿದೊಡ್ಡ ಜಲಾಶಯವೇ ಕೆಆರ್‌ಎಸ್‌. ಅದರ ಸಂಗ್ರಹ ಸಾಮರ್ಥ್ಯ 49.5 ಟಿಎಂಸಿ. ಮೇಕೆದಾಟು ಬಳಿ ನಿರ್ಮಾಣ ಮಾಡಲು ಪ್ರಸ್ತಾಪಿಸಿರುವ ಜಲಾಶಯದ ಶೇಖರಣಾ ಸಾಮರ್ಥ್ಯ 67 ಟಿಎಂಸಿ. ಅಂದರೆ ಕಾವೇರಿ ಕೊಳ್ಳದ ಅತಿದೊಡ್ಡ ಜಲಾಶಯ ಇದು. ಅಧಿಕ ಮಳೆಯಿಂದ ಹೆಚ್ಚುವರಿ ನೀರು ಬಂದಾಗ ಈ ಜಲಾಶಯದಲ್ಲಿ ಶೇಖರಿಸಿಟ್ಟುಕೊಳ್ಳಬಹುದು. ಬರಗಾಲ ಎದುರಾದಾಗ ತಮಿಳುನಾಡಿಗೆ ವಾರ್ಷಿಕ ಕೋಟಾದಡಿ ನೀರನ್ನೂ ಕೊಡಬಹುದು. ಬರಗಾಲದಲ್ಲಿ ರಾಜ್ಯದ ಜಲಾಶಯಗಳಲ್ಲೇ ನೀರು ಇರುವುದಿಲ್ಲ. ಹೀಗಾಗಿ ತಮಿಳುನಾಡು ಕಾನೂನು ಸಮರ ನಡೆಸಿದರೂ ಹೆಚ್ಚಿನ ನೀರು ಸಿಗುವುದಿಲ್ಲ. ಅಂತಹ ಸಂದರ್ಭದಲ್ಲಿ ಈ ಯೋಜನೆಯಿಂದ ಒಂದಷ್ಟುನೀರು ಸಿಗುತ್ತದೆ. ಜತೆಗೆ ಬೆಂಗಳೂರಿಗೆ 2030 ಇಸ್ವಿಯಾಚೆಗಿನ ಬೇಡಿಕೆಗೆ ತಕ್ಕಂತೆ ಕುಡಿಯುವ ನೀರು ದೊರೆಯುತ್ತದೆ. ಬೆಂಗಳೂರಿನ ಮತ್ತಷ್ಟುಪ್ರದೇಶ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೂ ಕುಡಿಯುವ ನೀರು ಒದಗಿಸಬಹುದು. 400 ಮೆಗಾವ್ಯಾಟ್‌ ಜಲ ವಿದ್ಯುತ್‌ ಕೂಡ ಉತ್ಪಾದಿಸಬಹುದು. ಹೀಗಾಗಿ ಈ ಯೋಜನೆ ಬಹೂಪಯೋಗಿ.

ಮೇಕೆದಾಟುಗೆ ತಮಿಳುನಾಡು ಕೆಂಗಣ್ಣು

ತಮಿಳುನಾಡಿಗೆ ಮುಖ್ಯವಾಗಿ ನೀರು ಸಿಗುವುದು ಮೂರು ಕಡೆಯಿಂದ. 1.ಕೃಷ್ಣರಾಜಸಾಗರ, ಕಬಿನಿ ಡ್ಯಾಂಗಳಿಂದ ಬಿಡುಗಡೆಯಾಗುವ ನೀರು. 2.ಆ ಎರಡೂ ಜಲಾಶಯಗಳ ಕೆಳಭಾಗದಲ್ಲಿ ಬೀಳುವ ಮಳೆ. 3.ಅರ್ಕಾವತಿ, ಶಿಂಷಾ, ಸುವರ್ಣಾವತಿಯಂತಹ ಉಪನದಿಗಳಿಂದ. ಮಳೆಗಾಲದಲ್ಲಿ ಕೃಷ್ಣರಾಜಸಾಗರ ಹಾಗೂ ಕಬಿನಿ ಬಹುತೇಕ ಭರ್ತಿಯಾಗುವವರೆಗೂ ಕರ್ನಾಟಕ ನೀರು ಹರಿಸುವುದಿಲ್ಲ ಎಂದು ತಮಿಳುನಾಡು ಬಲವಾಗಿ ನಂಬಿದೆ. ಆದರೆ ಉಳಿದ ಎರಡು ಕಡೆಗಳಲ್ಲಿ ಕರ್ನಾಟಕದ ಯಾವುದೇ ನಿಯಂತ್ರಣವಿಲ್ಲದೆ ನೀರು ತಮಿಳುನಾಡು ಸೇರುತ್ತಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ತಮಿಳುನಾಡಿನ ಮೆಟ್ಟೂರು ಡ್ಯಾಂ ಸೇರುವ ಈ ನೀರು ತಮಿಳುನಾಡಿನ ಮೂರು ಭತ್ತದ ಬೆಳೆಗಳಲ್ಲಿ ಒಂದಾಗಿರುವ ಕುರುವೈಗೆ ಅನುಕೂಲ. ಮೇಕೆದಾಟು ಅಣೆಕಟ್ಟೆಮೂಲಕ ಕರ್ನಾಟಕ ತನಗೆ ಬರುವ ಅನಿಯಂತ್ರಿತ ನೀರಿಗೂ ಕಡಿವಾಣ ಹಾಕಲು ಹೊರಟಿದೆ ಎಂಬುದು ತಮಿಳುನಾಡಿನ ಆತಂಕ. ಈ ಯೋಜನೆ ಸಾಕಾರಗೊಳ್ಳಲು ಬಿಟ್ಟರೆ ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳ ಬಳಿಕ ಮೇಕೆದಾಟು ಡ್ಯಾಂ ತುಂಬುವವರೆಗೂ ನಾವು ಕರ್ನಾಟಕದ ಮರ್ಜಿಯಲ್ಲಿರಬೇಕಾಗುತ್ತದೆ ಎಂಬುದು ಆ ರಾಜ್ಯದ ಕಳವಳ. ಹೀಗಾಗಿಯೇ ಮೇಕೆದಾಟು ಯೋಜನೆಯನ್ನು ಖಂಡತುಂಡವಾಗಿ ತಮಿಳುನಾಡು ವಿರೋಧಿಸುತ್ತಿದೆ.

ಈ ಯೋಜನೆ ಜಾರಿಯಾಗುತ್ತಾ?

ಮೇಕೆದಾಟು ಜಲಾಶಯಕ್ಕೆ ಬೇಕಾಗಿರುವುದು ಸುಮಾರು 12500 ಎಕರೆ ಜಾಗ. ಇದರಲ್ಲಿ ಶೇ.10ರಷ್ಟುಮಾತ್ರ ಕಂದಾಯ ಭೂಮಿ. ಉಳಿದದ್ದೆಲ್ಲಾ ಅಂದರೆ ಶೇ.90ರಷ್ಟುಭಾಗ ಅರಣ್ಯ ಪ್ರದೇಶ. ಈ ಅರಣ್ಯದ ಜತೆಗೆ ಸಂಗಮ, ಮುತ್ತತ್ತಿ, ಭೀಮೇಶ್ವರಿ- ಗಾಳಿಬೋರೆ ಫಿಶಿಂಗ್‌ ಕ್ಯಾಂಪ್‌ನಂತಹ ಪ್ರವಾಸಿ ತಾಣಗಳೂ ಈ ಯೋಜನೆಯಿಂದಾಗಿ ಮುಳುಗಡೆಯಾಗುತ್ತವೆ. ಉದ್ದೇಶಿತ ಅಣೆಕಟ್ಟೆವ್ಯಾಪ್ತಿಯಲ್ಲಿ ಆನೆ ಕಾರಿಡಾರ್‌ ಕೂಡ ಇದ್ದು, ಅದು ನಾಮಾವಶೇಷವಾಗುತ್ತದೆ. ಹೀಗಾಗಿ ಈ ಜಲಾಶಯ ಬದಲು ಪರಾರ‍ಯಯ ಯೋಜನೆ ರೂಪಿಸಿ ಎಂದು ಪರಿಸರವಾದಿಗಳು ಹೇಳುತ್ತಲೇ ಬಂದಿದ್ದಾರೆ. ಅಪಾರ ಅರಣ್ಯ ಪ್ರದೇಶ ಈ ಯೋಜನೆಯಿಂದ ಮುಳುಗಡೆಯಾಗುವ ಕಾರಣ ಮೇಕೆದಾಟು ಯೋಜನೆ ಸಾಕಾರವಾಗಲು ಕೇಂದ್ರ ಅರಣ್ಯ ಸಚಿವಾಲಯದ ಒಪ್ಪಿಗೆಯೂ ಬೇಕು. ಅದಕ್ಕಿಂತ ಮುಖ್ಯವಾಗಿ ಕಾವೇರಿ ನದಿ ನೀರು ನಿರ್ವಹಣೆ ಪ್ರಾಧಿಕಾರದ ಸಮ್ಮತಿ ಕರ್ನಾಟಕ ಸರ್ಕಾರಕ್ಕೆ ಸಿಗಬೇಕು. 2019ರ ಜನವರಿಯಲ್ಲಿ ಕರ್ನಾಟಕ ಸರ್ಕಾರ ಕೇಂದ್ರ ಜಲ ಆಯೋಗಕ್ಕೆ ಮೇಕೆದಾಟು ಕುರಿತ ವಿಸ್ತೃತ ಯೋಜನಾ ವರದಿ (ಡಿಪಿಆರ್‌)ಯನ್ನು ಸಲ್ಲಿಕೆ ಮಾಡಿದೆ. ಇದನ್ನು ಕೇಂದ್ರ ಸರ್ಕಾರ ಕಾವೇರಿ ನಿರ್ವಹಣೆ ಪ್ರಾಧಿಕಾರಕ್ಕೆ ರವಾನಿಸಿದೆ. ಕಾವೇರಿ ನದಿ ಕಣಿವೆಯ ರಾಜ್ಯಗಳ ನಡುವೆ ಉದ್ಭವಿಸುವ ಬಿಕ್ಕಟ್ಟುಗಳನ್ನು ನಿವಾರಿಸಲು ರಚನೆಯಾಗಿರುವಂತಹದ್ದೇ ಕಾವೇರಿ ನಿರ್ವಹಣೆ ಪ್ರಾಧಿಕಾರ. ಈ ಪ್ರಾಧಿಕಾರ ಸಭೆ ಸೇರಿ ಮೇಕೆದಾಟು ಯೋಜನೆಗೆ ಕಣಿವೆಯ ಎಲ್ಲ ರಾಜ್ಯಗಳ ಒಪ್ಪಿಗೆ ಪಡೆದುಕೊಂಡರೆ ಮೇಕೆದಾಟು ಯೋಜನೆಗೆ ಬಹುತೇಕ ಯಶಸ್ಸು ಸಿಗುತ್ತದೆ. ಆದರೆ ತಮಿಳುನಾಡು ಹಾಗೂ ಪುದುಚೇರಿಯಂತಹ ರಾಜ್ಯಗಳನ್ನು ಒಪ್ಪಿಸುವುದು ಅಷ್ಟುಸುಲಭವಿಲ್ಲ. ಇದರ ಜತೆಗೆ ತಮಿಳುನಾಡಿನ ಕಾನೂನು ಹೋರಾಟ ಬೇರೆ. ಕರ್ನಾಟಕಕ್ಕಿಂತ (320 ಕಿ.ಮೀ.) ತಮಿಳುನಾಡಿನಲ್ಲೇ (416 ಕಿ.ಮೀ.) ಕಾವೇರಿ ಹೆಚ್ಚು ದೂರ ಹರಿಯುತ್ತದೆ. ಅಲ್ಲಿನ ಹಲವು ಜಿಲ್ಲೆಗಳ ಜೀವನಾಡಿ ಇದು. ರಾಜಕೀಯವಾಗಿಯೂ ಪ್ರಭಾವ ಬೀರುವ ನದಿ. ಹೀಗಾಗಿ ಈ ಯೋಜನೆಗೆ ತಮಿಳುನಾಡು ಸುಲಭವಾಗಿ ಮಣಿಯುತ್ತಾ ಎಂಬುದರ ಮೇಲೆ ಈ ಮೇಕೆದಾಟು ಡ್ಯಾಂ ಭವಿಷ್ಯ ಅಡಗಿದೆ. ಇದು ಕುಡಿಯುವ ನೀರಿನ ಯೋಜನೆ ಎಂದು ವಾದಿಸಿ ಅನುಮತಿ ಪಡೆಯಬಹುದಾದರೂ, ಕೇಂದ್ರ ಸರ್ಕಾರದ ಬೆಂಬಲವಿಲ್ಲದೆ ಈ ಯೋಜನೆ ಸಾಕಾರವಾಗುವುದು ಸಾಧ್ಯವಿಲ್ಲ.

click me!