India Gate: ಕೇವಲ 100 ಸಂಸತ್ ಸ್ಥಾನಕ್ಕೆ ಕಾಂಗ್ರೆಸ್ ಟಾರ್ಗೆಟ್!

By Prashant Natu  |  First Published Aug 7, 2023, 10:10 AM IST

ಕರ್ನಾಟಕದಲ್ಲಿ 1999ರಲ್ಲಿ ಎಸ್‌.ಎಂ.ಕೃಷ್ಣ ನೇತೃತ್ವದಲ್ಲಿ 18 ಸೀಟು ಗೆದ್ದಿದ್ದು ಬಿಟ್ಟರೆ ಖರ್ಗೆ, ಸಿದ್ದು, ಪರಮೇಶ್ವರ ನೇತೃತ್ವ ವಹಿಸಿಕೊಂಡ ಮೇಲೆ ಕಾಂಗ್ರೆಸ್‌ ಪಕ್ಷ ಲೋಕಸಭೆ ಚುನಾವಣೆಯಲ್ಲಿ 2004ರಲ್ಲಿ ಗೆದ್ದಿದ್ದು 8, 2009ರಲ್ಲಿ 5, 2014ರಲ್ಲಿ 9 ಮತ್ತು 2019ರಲ್ಲಿ ಬರೀ ಒಂದು ಮಾತ್ರ. ಹಾಗಿರುವಾಗ ಈ ಸಲ 20 ಸೀಟಿನ ಗುರಿ ಈಡೇರುತ್ತಾ?


ಪ್ರಶಾಂತ್‌ ನಾತು

ಕರ್ನಾಟಕದಲ್ಲಿ ಚುನಾವಣೆ ಗೆದ್ದ ನಂತರ ಒಂದು ರೀತಿ ಸ್ಟಿರಾಯ್ಡ್‌ ಮೇಲಿದ್ದು ಅತಿ ಸಕ್ರಿಯವಾಗಿರುವ ರಾಷ್ಟ್ರೀಯ ಕಾಂಗ್ರೆಸ್‌ ಪಾರ್ಟಿ, ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ವರ್ಷದ ಮುಂಚೆಯೇ ಲೋಕಸಭಾ ಚುನಾವಣೆ ತಯಾರಿ ಶುರು ಮಾಡಿದೆ. ರಾಹುಲ… ಗಾಂಧಿ, ಖರ್ಗೆ, ವೇಣುಗೋಪಾಲ… ಸೇರಿದಂತೆ ಉನ್ನತ ನಾಯಕರು ರಾಜ್ಯಗಳಿಂದ ಜಿಲ್ಲಾ ಮಟ್ಟದವರೆಗಿನ ನಾಯಕರನ್ನು ದಿಲ್ಲಿಗೆ ಕರೆದು ಅಭಿಪ್ರಾಯ ಕೇಳುತ್ತಿದ್ದಾರೆ. 1984ರಲ್ಲಿ ಇಂದಿರಾ ಹತ್ಯೆಯ ಅನುಕಂಪದ ಅಲೆಯಲ್ಲಿ 400ರ ಗಡಿ ದಾಟಿದ್ದ ಕಾಂಗ್ರೆಸ್‌ ಪಕ್ಷ ಸರಿಯಾಗಿ 30 ವರ್ಷಗಳ ನಂತರ 2014ರಲ್ಲಿ ತಲುಪಿದ್ದು 44ಕ್ಕೆ. ಮುಂದೆ 2019ರಲ್ಲಿ ಕಾಂಗ್ರೆಸ್‌ ನಾಯಕರು ಗಾಂಧಿ ಪರಿವಾರದವರನ್ನು ಮುಂದಿಟ್ಟುಕೊಂಡು ಎಷ್ಟೇ ಸರ್ಕಸ್‌ ಮಾಡಿದರೂ ತಲುಪಿದ್ದು 52ಕ್ಕೆ. ಅಂದರೆ ಇನ್ನೊಂದು ರಾಷ್ಟ್ರೀಯ ಪಕ್ಷ ಬಿಜೆಪಿಗಿಂತ ಸುಮಾರು 260 ಸೀಟು ಕಡಿಮೆ. ಕಾಂಗ್ರೆಸ್‌ನ ಕಳೆದ ಹತ್ತು ವರ್ಷಗಳ ಸಮಸ್ಯೆ ಎಂದರೆ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ರಾಜಸ್ಥಾನ, ಛತ್ತಿಸ್‌ಗಢದಲ್ಲಿ ಬಿಜೆಪಿ ಜೊತೆಗಿನ ಕಾಂಗ್ರೆಸ್‌ನ ನೇರ ಹಣಾಹಣಿ ನಡೆಯುವ 184 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು 170, ಆದರೆ ಕಾಂಗ್ರೆಸ್‌ ಗೆದ್ದಿದ್ದು ಕೇವಲ 14. ಅರ್ಥಾತ್‌ ಕಾಂಗ್ರೆಸ್‌ ಪಾರ್ಟಿ ಎಷ್ಟೇ ಪಾಟ್ನಾ, ಬೆಂಗಳೂರು, ಮುಂಬೈ ಅಂತೆಲ್ಲ ಓಡಾಡಿ ವಿಪಕ್ಷಗಳನ್ನು ಒಟ್ಟಿಗೆ ತಂದು ಕೈ ಕೈ ಎತ್ತಿಸಿದರೂ ಕೂಡ ರಾಷ್ಟ್ರೀಯ ರಾಜಕಾರಣದ ಚಿತ್ರಣ ಬದಲಾಗಬೇಕಾದರೆ ಬಿಜೆಪಿ ಜೊತೆಗಿನ ನೇರ ಕಾದಾಟ ಇರುವ ರಾಜ್ಯಗಳಲ್ಲಿ ಕಾಂಗ್ರೆಸ್‌ ಗೆಲ್ಲುವಂತೆ ನೋಡಿಕೊಳ್ಳಬೇಕು. ಈಗಿನ ಅಂದಾಜಿನ ಪ್ರಕಾರ ಕಾಂಗ್ರೆಸ್‌ 100 ಸೀಟು ಸ್ವಂತ ಶಕ್ತಿಯ ಮೇಲೆ ಪಡೆದರೂ ಸಾಕು ದಿಲ್ಲಿಯ ಅಂಕಗಣಿತ ಬದಲಾಗಿ ಹೋಗುತ್ತದೆ. ಅಂದರೆ ಈಗಿರುವ 52ರಿಂದ ಕಾಂಗ್ರೆಸ್‌ 100ಕ್ಕೆ ಜಿಗಿದರೆ ಅಂದಾಜು 50 ಸೀಟು ಬಿಜೆಪಿಯದು ಕಡಿಮೆ ಆಗಬಹುದು. ಆದರೆ ವಿಧಾನಸಭಾ ಗೆಲುವಿನಿಂದ ಬೀಗುತ್ತಿರುವ ಕಾಂಗ್ರೆಸ್‌ಗೆ ಅದೇ ರಾಜ್ಯಗಳಲ್ಲಿ ಜನ ಲೋಕಸಭಾ ಚುನಾವಣೆಯಲ್ಲಿ ವೋಟು ಹಾಕುತ್ತಾರಾ ಎಂಬ ಪ್ರಶ್ನೆಗೆ ಇಷ್ಟುಬೇಗ ಉತ್ತರ ಹೇಳುವುದು ಕಷ್ಟ.

Tap to resize

Latest Videos

undefined

India Gate: ದಳ-ಬಿಜೆಪಿ ಮೈತ್ರಿ ಮಾತುಕತೆ ಸದ್ಯಕ್ಕೆ ಸ್ಥಗಿತ..!

ಕರ್ನಾಟಕದಲ್ಲಿ ಮಿಷನ್‌ 20

ಲೋಕಸಭಾ ಚುನಾವಣೆಗಳು ಎಷ್ಟುಮೋದಿ ಮೋದಿ ಎಂದು ನಡೆಯುತ್ತವೆಯೋ ಅಷ್ಟುಬಿಜೆಪಿಗೆ ಲಾಭ. ಎಷ್ಟುಪ್ರಾದೇಶಿಕ ವಿಷಯಗಳ ಮೇಲೆ ನಡೆಯುತ್ತವೆಯೋ ಅಷ್ಟುಕಾಂಗ್ರೆಸ್‌ ಮತ್ತು ಮಿತ್ರ ಪಕ್ಷಗಳಿಗೆ ಲಾಭ. ಕರ್ನಾಟಕದ ಲೋಕಸಭಾ ಫಲಿತಾಂಶಗಳನ್ನು ತೆಗೆದುಕೊಂಡರೆ 1991ರ ನಂತರ ಇಲ್ಲಿ ಕಾಂಗ್ರೆಸ್‌ ಪಕ್ಷ 20ರ ಗಡಿ ದಾಟಿಲ್ಲ. ಅಷ್ಟೇ ಏಕೆ 1999ರ ನಂತರ, 10ರ ಗಾಡಿಯನ್ನು ಕ್ರಾಸ್‌ ಮಾಡಿಲ್ಲ. 1999ರಲ್ಲಿ ಎಸ್‌.ಎಂ.ಕೃಷ್ಣ ನೇತೃತ್ವದಲ್ಲಿ 18 ಸೀಟು ಗೆದ್ದಿದ್ದು ಬಿಟ್ಟರೆ ಖರ್ಗೆ, ಸಿದ್ದು, ಪರಮೇಶ್ವರ ನೇತೃತ್ವ ವಹಿಸಿಕೊಂಡ ಮೇಲೆ ಕಾಂಗ್ರೆಸ್‌ ಲೋಕಸಭೆಯಲ್ಲಿ 2004ರಲ್ಲಿ ಗೆದ್ದಿದ್ದು 8, 2009ರಲ್ಲಿ 5, 2014ರಲ್ಲಿ 9 ಮತ್ತು 2019ರಲ್ಲಿ ಬರೀ ಒಂದು ಮಾತ್ರ. ಇದಕ್ಕೆ ಮುಖ್ಯ ಕಾರಣ ಕಳೆದ 20 ವರ್ಷಗಳಲ್ಲಿ ವಿಧಾನಸಭಾ ಚುನಾವಣೆಗೆ ಬಿಜೆಪಿ ಕಾಂಗ್ರೆಸ್‌, ಜೆಡಿಎಸ್‌ ಎಂದು ವೋಟ್‌ ನೀಡುವ ಮತದಾರ ಲೋಕಸಭೆಗೆ ಮಾತ್ರ ಹೆಚ್ಚು ಬಿಜೆಪಿ ಪರ ವಾಲುವುದು. ಇದಕ್ಕೆ ಅಟಲ… ಬಿಹಾರಿ ವಾಜಪೇಯಿ, ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಜನಪ್ರಿಯತೆ ಕೂಡ ಒಂದು ಕಾರಣ ಹೌದು. ಆದರೆ ದಿಲ್ಲಿ ಕಾಂಗ್ರೆಸ್‌ ನಾಯಕರಿಗೆ ಅನ್ನಿಸುತ್ತಿರುವುದು ಕರ್ನಾಟಕದಲ್ಲಿ ಯಡಿಯೂರಪ್ಪ ನಾಯಕತ್ವ ಇಲ್ಲದಿರುವಾಗ ಬಿಜೆಪಿ ದುರ್ಬಲವಾದಂತೆ ಕಾಣುತ್ತಿದೆ. ಹೀಗಾಗಿ ರಾಹುಲ… ಗಾಂಧಿ ಕರ್ನಾಟಕದ ನಾಯಕರನ್ನು ಕರೆದು 20 ಸೀಟು ನೀವು ಕೊಡಿಸಲೇಬೇಕು ಎಂದು ಟಾರ್ಗೆಟ್‌ ಕೊಡುತ್ತಿದ್ದಾರೆ.

ತುಪ್ಪ ಸವರುತ್ತಿರುವ ದಿಲ್ಲಿ

ರಾಜ್ಯ ಕಾಂಗ್ರೆಸ್‌ನಲ್ಲಿ ಮೂರು ಬಣಗಳಿವೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಇಲ್ಲಿಯವರೆಗಂತೂ ರಾಜ್ಯ ಕಾಂಗ್ರೆಸ್‌ಗೆ ಈ ಮೂರು ಬಣಗಳ ಪೈಪೋಟಿ ಮತ್ತು ಮಹತ್ವಾಕಾಂಕ್ಷೆಗಳಿಂದ ಲಾಭವಾಗುತ್ತಿದೆಯೇ ಹೊರತು ನಷ್ಟಆಗಿಲ್ಲ. ಈಗ ಕರ್ನಾಟಕದಲ್ಲಿ ಟಾರ್ಗೆಟ್‌ 20 ಸಾಧ್ಯ ಆಗಬೇಕಾದರೆ ಮೂರು ಬಣಗಳು ಕಾಯಾ ವಾಚಾ ಮನಸಾ ಒಟ್ಟಿಗೆ ಕುಳಿತು ಕೆಲಸ ಮಾಡಬೇಕು. ಅದು ಬಿಟ್ಟು ಜಗಳ ಆದರೆ 10 ಸ್ಥಾನ ಗೆಲ್ಲುವುದೂ ಕಷ್ಟಎಂದು ಸ್ವತಃ ರಾಹುಲ… ಗಾಂಧಿ ಸಿದ್ದು ಮತ್ತು ಡಿಕೆಶಿ ಇಬ್ಬರನ್ನೂ ಕರೆದು ಕೂರಿಸಿ ಹೇಳಿ ಕಳುಹಿಸಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌ 20ರ ಗಡಿ ತಲುಪಿದರೆ ಮಾತ್ರ ಬಿಜೆಪಿಯ ಲೋಕಸಭಾ ಸಂಖ್ಯೆ 272ಕ್ಕಿಂತ ಕಡಿಮೆ ಆಗುವ ಸಾಧ್ಯತೆ ಜಾಸ್ತಿ ಆಗುತ್ತದೆ. ಟಾರ್ಗೆಟ್‌ 20 ಸಾಧ್ಯವಾದರೆ ಮಾತ್ರ 81ರ ಖರ್ಗೆ ಅವರಿಗೆ ದಿಲ್ಲಿ ಪೊಲಿಟಿP್ಸ…ನಲ್ಲಿ ಪ್ರಸ್ತುತತೆ ಇನ್ನೂ ಜಾಸ್ತಿ ಆಗುತ್ತದೆ. ರಾಜ್ಯದ ಮುಖ್ಯಮಂತ್ರಿ ಆಗುವ ಮಹತ್ವಾಕಾಂಕ್ಷೆ ಹೊಂದಿರುವ ಡಿ.ಕೆ.ಶಿವಕುಮಾರ್‌ ಇನ್ನಷ್ಟುಪ್ರಬಲರಾಗುತ್ತಾರೆ. ಇನ್ನು ತಮಗೆ ವಿಧಾನಸಭೆ ಅಷ್ಟೇ ಅಲ್ಲ ಲೋಕಸಭೆಗೂ ಜನ ವೋಟು ಹಾಕುತ್ತಾರೆ ಎಂದು ಸಿದ್ದು ತೋರಿಸಬೇಕಾದರೆ ಟಾರ್ಗೆಟ್‌ 20 ಮುಟ್ಟಲೇಬೇಕು. ಬಣಗಳ ನಡುವಿನ ಸ್ಪರ್ಧೆ ಯಾವಾಗಲೂ ನಷ್ಟವೇ ಮಾಡುತ್ತದೆ ಅಂತೇನಿಲ್ಲ. ಕೆಲವೊಮ್ಮೆ ಸ್ಪರ್ಧೆ, ಪೈಪೋಟಿ, ಜಿದ್ದು ಲಾಭ ಕೂಡ ಮಾಡುತ್ತದೆ.

ಬರೀ ಮೋದಿ ಎನ್ನುತ್ತಾ ಇರಬೇಡಿ

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬರೀ ಮೋದಿ ಮೋದಿ ಎಂದು ಹವೆಯಲ್ಲಿ ಇರಬೇಡಿ ಎಂದು ಹೇಳುತ್ತಿರುವವರು ರಾಹುಲ… ಗಾಂಧಿ ಅಥವಾ ಕೇಜರಿವಾಲ… ಅಲ್ಲ; ಸ್ವತಃ ಪ್ರಧಾನಿ ಮೋದಿ. ದೇಶದೆಲ್ಲೆಡೆಯ ಬಿಜೆಪಿಯ ಸಂಸದರನ್ನು ಖುದ್ದು ಮೋದಿ ಕರೆದು ಈ ಎಚ್ಚರಿಕೆ ಕೊಡುತ್ತಿದ್ದಾರೆ. ಬಹುತೇಕ ಸರ್ವೇಗಳು ಹೇಳುತ್ತಿರುವ ಪ್ರಕಾರ ಮೋದಿ ಜನಪ್ರಿಯತೆ ಮತ್ತು ವೋಟರ್‌ಗಳ ಮೇಲಿನ ಹಿಡಿತ ಹಾಗೇ ಇದೆ. ಆದರೆ ಬಿಜೆಪಿಗಿರುವ ಒಂದು ಆತಂಕ ಏನೆಂದರೆ, ಆ ಜನಪ್ರಿಯತೆ ಇನ್ನೂ ಜಾಸ್ತಿ ಆಗುವ ಸಾಧ್ಯತೆ ಕಡಿಮೆ. ಆದರೆ 2004ರಲ್ಲಿ ಆದಂತೆ ಬಿಜೆಪಿನಿಷ್ಠ ಮತ್ತು ಮೋದಿನಿಷ್ಠ ಮತದಾರರು ಹೇಗೂ ಮೋದಿಯೇ ಪ್ರಧಾನಿ ಆಗುತ್ತಾರೆ ಬಿಡು, ಈ ಕೈಗೆ ಸಿಗದ ಸಂಸದನಿಗೆ ಪಾಠ ಕಲಿಸೋಣ ಎಂದು ಹೊರಟರೆ ಕಷ್ಟಆಗಬಹುದು ಎಂಬ ಚಿಂತೆಯಲ್ಲಿ ಮೋದಿ ಮತ್ತು ತಂಡ ಇದೆ. ಹೀಗಾಗಿ ಸಂಸದರ ಚಿಕ್ಕ ಚಿಕ್ಕ ಸಭೆ ಕರೆದು ಮೋದಿ ದೇಶ-ವಿದೇಶ ಎಲ್ಲಾ ಬಿಡಿ, ಮುಂದಿನ 10 ತಿಂಗಳು ಕ್ಷೇತ್ರ ಬಿಟ್ಟು ಓಡಾಡಬೇಡಿ. ಮದುವೆ, ಮುಂಜಿ, ನಾಮಕರಣ, ಅಂತ್ಯಸಂಸ್ಕಾರ ಅಂತ ಅಲ್ಲೇ ಓಡಾಡಿ ಜನರ ಕೈಗೆ ಸಿಗುತ್ತಿರಿ ಎಂದು ಕಿವಿಮಾತು ಹೇಳಿದ್ದಾರೆ.

ಎಡ ಪಕ್ಷದವರಿಗೆ 'ಗಣೇಶ'ನಿಗಿಂತ ಮಿಡತೆ ಮೇಲೆ ಗೌರವ: ಪೈಲಟ್‌ಗಿಲ್ಲ ಕೃತಜ್ಞತೆ; ‘ಪವರ್’ ಕಳ್ಳರ ಮೇಲೆ ಗೆಹ್ಲೋಟ್‌ ಪ್ರೇಮ!

ಸಿ.ಟಿ.ರವಿ ರಾಜ್ಯಾಧ್ಯಕ್ಷ: ಏನಾಯ್ತು?

ಸಿ.ಟಿ.ರವಿ ಮುಂದಿನ ಬಿಜೆಪಿ ರಾಜ್ಯಾಧ್ಯಕ್ಷ ಎಂದು ಮಾಧ್ಯಮಗಳಲ್ಲಿ ಸುದ್ದಿ ಓಡಿದ್ದೇ ಓಡಿದ್ದು ಬಿಟ್ಟರೆ ದಿಲ್ಲಿಯಲ್ಲಿ ಸಿ.ಟಿ.ರವಿ ಅವರನ್ನು ಕೂರಿಸಿಕೊಂಡು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯ ರಾಜಕಾರಣದ ಬಗ್ಗೆ ಒಂದು ಅಕ್ಷರವೂ ಮಾತನಾಡಿಲ್ಲವಂತೆ. ಬದಲಾಗಿ ‘2 ವರ್ಷದ 8 ತಿಂಗಳು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಒಳ್ಳೆಯ ಕೆಲಸ ಮಾಡಿದ್ದೀರಿ’ ಎಂದು ಹೇಳಿ, ಚಹಾ ಕೊಟ್ಟು ಕಳುಹಿಸಿದ್ದಾರಂತೆ. ನಡ್ಡಾ ಸಾಹೇಬರು ಸಿ.ಟಿ.ರವಿಗೆ ರಾಜ್ಯಾಧ್ಯಕ್ಷ ಸ್ಥಾನ, ಲೋಕಸಭಾ ಟಿಕೆಟ್‌ ಹೀಗೆ ಯಾವ ವಿಷಯದ ಬಗ್ಗೆಯೂ ಚಕಾರ ಎತ್ತಿಲ್ಲವಂತೆ. ಸಮಸ್ಯೆ ಎಂದರೆ, ಯಾವುದೇ ಕಾರಣಕ್ಕೂ ಸಿ.ಟಿ.ರವಿ ಮತ್ತು ಯತ್ನಾಳರಿಗೆ ಸ್ಥಾನಮಾನ ಕೊಡಬೇಡಿ ಎಂದು ರಾಜ್ಯ ಬಿಜೆಪಿಯಿಂದಲೇ ಒಂದು ಗುಂಪಿನಿಂದ ಅಮಿತ್‌ ಶಾ ಮತ್ತು ಜೆ.ಪಿ.ನಡ್ಡಾ ಮೇಲೆ ತೀವ್ರ ಒತ್ತಡವಿದೆ. ಮೊದಲೇ ಲಿಂಗಾಯತ ಮತಗಳು ಎಲ್ಲಿ ಚದುರಿ ಹೋಗುತ್ತವೆಯೋ ಎನ್ನುವ ಆತಂಕದಲ್ಲಿರುವ ದಿಲ್ಲಿ ಬಿಜೆಪಿ ನಾಯಕರು, ಯಾರನ್ನು ಮಾಡಿದರೆ ಸರಿ ಅನ್ನುವ ದ್ವಂದ್ವದಲ್ಲಿದ್ದಾರೆ. ಸಿ.ಟಿ.ರವಿ ಹೆಸರು ಕೇಳಿಬಂದ ಕೂಡಲೇ ಒಂದು ಕಡೆ ಅಶ್ವತ್ಥನಾರಾಯಣ, ಇನ್ನೊಂದು ಕಡೆ ಆರ್‌.ಅಶೋಕ್‌ ಅವರು ಯಡಿಯೂರಪ್ಪನವರ ಮನೆ ಮತ್ತು ಕೇಶವ ಕೃಪಾಗಳಿಗೆ ಎಡತಾಕತೊಡಗಿದ್ದಾರೆ ಎಂಬ ಗುಸುಗುಸು ಇದೆ. ಕೆಲವು ಮೂಲಗಳ ಪ್ರಕಾರ ರಾಜ್ಯಾಧ್ಯಕ್ಷ ಹಾಗೂ ವಿಪಕ್ಷ ನಾಯಕನ ಸ್ಥಾನ ಇವೆರಡರಲ್ಲಿ ಯಡಿಯೂರಪ್ಪ ಬಣಕ್ಕೆ ಒಂದು ಮತ್ತು ಬಿ.ಎಲ….ಸಂತೋಷ್‌ ಬಣಕ್ಕೆ ಇನ್ನೊಂದು ಸ್ಥಾನವನ್ನು ಕೊಡುವ ಮೂಡ್‌ನಲ್ಲಿ ಅಮಿತ್‌ ಶಾ ಇದ್ದಾರೆ. ಆದರೆ ಯಾರಿಗೆ ಯಾವುದು ಕೊಡಬೇಕು ಎಂಬ ಬಗ್ಗೆ ತೀರಾ ಗೊಂದಲಗಳಿವೆ.

ಅವಿಶ್ವಾಸದ ಎರಡು ಪ್ರಸಂಗಗಳು

ಯಾವತ್ತಿಗೂ ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡುವುದು ಬರೀ ಸಂಖ್ಯಾಬಲ ಬದಲಾದಾಗ ಸರ್ಕಾರ ಬೀಳಿಸಲು ಅಲ್ಲ. ಅನೇಕ ಬಾರಿ ಅವಿಶ್ವಾಸ ಗೊತ್ತುವಳಿಗಳ ಮೇಲಿನ ಪರ ವಿರೋಧದ ಚರ್ಚೆಗಳು ರಾಜಕೀಯ ವಾತಾವರಣ ನಿರ್ಮಿಸಲು ಕೂಡ ಬಳಕೆ ಆಗುತ್ತವೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಅವಿಶ್ವಾಸ ಗೊತ್ತುವಳಿ ಮಂಡನೆ ಆಗಿದ್ದು 1963ರಲ್ಲಿ. ಚೀನಾ ವಿರುದ್ಧ ಯುದ್ಧ ಸೋತಾಗ ಪಂಡಿತ್‌ ನೆಹರು ವಿರುದ್ಧ ಆಚಾರ್ಯ ಕೃಪಾಲಾನಿ ಮೊದಲ ಬಾರಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದರು. ಆಗ ನೆಹರು ವಿರುದ್ಧ ಕೃಪಾಲಾನಿ, ರಾಮಮನೋಹರ ಲೋಹಿಯಾ, ಮಿನು ಮಸಾನಿ ಮಾತುಗಳು ಬಹಳ ಚರ್ಚೆ ಆಗಿದ್ದವು. ಆಚಾರ್ಯ ಕೃಪಾಲಾನಿ ವಿರೋಧ ಪಾರ್ಟಿಯಲ್ಲಿದ್ದರೆ ಅವರ ಪತ್ನಿ ಸುಚೇತಾ ಕೃಪಲಾನಿ ಕಾಂಗ್ರೆಸ್‌ ಪಾರ್ಟಿಯಲ್ಲಿದ್ದರು. ಒಮ್ಮೆ ಆಚಾರ್ಯ ಕೃಪಾಲಾನಿ ಸದನದಲ್ಲಿ ಎದ್ದು ನಿಂತು, ಸಭಾಧ್ಯಕ್ಷರೇ ಇಲ್ಲಿ ಎದುರು ಕುಳಿತಿರುವ ಮಹಿಳೆ ನನ್ನನ್ನು ಎರಡು ಸದನಗಳಲ್ಲಿ ತೊಂದರೆಗೀಡು ಮಾಡಿದ್ದಾಳೆ ಎಂದು ಹೇಳಿದಾಗ ಇಡೀ ಸದನ ಬಿದ್ದು ಬಿದ್ದು ನಕ್ಕಿತ್ತಂತೆ. ಆವಿಶ್ವಾಸ ಗೊತ್ತುವಳಿಯಿಂದ ಬಿದ್ದ ಒಂದೇ ಒಂದು ಸರ್ಕಾರ ಅಂದರೆ 1979ರಲ್ಲಿ ಮೊರಾರ್ಜಿ ದೇಸಾಯಿ ಅವರದು. ಆದರೆ ವಿಶ್ವಾಸಮತ ಯಾಚನೆ ವೇಳೆ ಬಿದ್ದ ಸರ್ಕಾರಗಳು ಮೂರು- 1990ರಲ್ಲಿ ವಿ.ಪಿ.ಸಿಂಗ್‌, 1997ರಲ್ಲಿ ದೇವೇಗೌಡ ಮತ್ತು 1999ರಲ್ಲಿ ಅಟಲ… ಬಿಹಾರಿ ವಾಜಪೇಯಿ ಅವರದು. ಒಂದು ವೋಟಿನಿಂದ ಸರ್ಕಾರ ಬಿದ್ದಾಗ ಅತೀವ ಬೇಸರದಲ್ಲಿದ್ದ ಅಟಲ…ಜಿ ಕಣ್ಣೀರು ಹಾಕುತ್ತಾ ಪಾರ್ಲಿಮೆಂಟ್‌ನಿಂದ ಹೊರಗೆ ಬಂದಾಗ ಎದುರುಗಡೆ ಸೋನಿಯಾ ಗಾಂಧಿ ಕಾರಿಡಾರ್‌ನಲ್ಲಿ ನಡೆದುಕೊಂಡು ಬರುತ್ತಿದ್ದರಂತೆ. ಬೇಸರದಲ್ಲಿದ್ದ ಅಟಲ…ಜಿ ಸೋನಿಯಾ ಕಡೆ ನೋಡುತ್ತಾ, ತಾಜ್‌ ತೋ ಹಠವಾ ಹಿ ದಿಯಾ ಮೊಹತರಮಾ ಅಬ್‌ ತೋ ಮುಸ್ಕುರಾವೋ (ಕಿರೀಟವನ್ನಂತೂ ತೆಗೆಸಿಯೇಬಿಟ್ಟಿರಿ, ಈಗಲಾದರೂ ನಗಬಹುದಲ್ಲವೇ) ಎಂದು ಬೇಸರದಿಂದಲೇ ಹೇಳಿದರಂತೆ.

click me!