ಲೋಕಸಭಾ ಚುನಾವಣೆ: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಅಯೋಧ್ಯೆ ಶ್ರೀರಾಮನ ಬಲ

By Kannadaprabha NewsFirst Published Apr 1, 2024, 1:55 PM IST
Highlights

ಉತ್ತರಪ್ರದೇಶದಲ್ಲಿ ಯಾವ ಪಕ್ಷ ಭರ್ಜರಿಯಾಗಿ ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೋ, ಅದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೇರುವುದು ನಿಶ್ಚಿತ ಎಂಬ ರಾಜಕೀಯ ಪ್ರತೀತಿ ಬಹಳ ಹಿಂದಿನಿಂದಲೂ ಇದೆ. 2014ರಲ್ಲಿ 71 ಸ್ಥಾನ ಗೆದ್ದಿದ್ದ ಬಿಜೆಪಿ, 2019ರಲ್ಲಿ 62 ಸ್ಥಾನ ಗಳಿಸಿತ್ತು. ಈ ಬಾರಿ ಬಿಜೆಪಿ ಎಷ್ಟು ಸ್ಥಾನ ಗಳಿಸಬಹುದು ಎಂಬುದೇ ಸದ್ಯದ ಕುತೂಹಲ.

ಲಖನೌ: ಉತ್ತರಪ್ರದೇಶದಲ್ಲಿ ಯಾವ ಪಕ್ಷ ಭರ್ಜರಿಯಾಗಿ ಲೋಕಸಭಾ ಸ್ಥಾನಗಳನ್ನು ಗೆಲ್ಲುತ್ತದೋ, ಅದೇ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೇರುವುದು ನಿಶ್ಚಿತ ಎಂಬ ರಾಜಕೀಯ ಪ್ರತೀತಿ ಬಹಳ ಹಿಂದಿನಿಂದಲೂ ಇದೆ. 2014 ಹಾಗೂ 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಾಲಿಗೆ ಅದು ಅಕ್ಷರಶಃ ನಿಜವಾಗಿತ್ತು. 2014ರಲ್ಲಿ ಬಿಜೆಪಿ ಇತಿಹಾಸದಲ್ಲೇ ಮೊದಲ ಬಾರಿಗೆ ಬಹುಮತ ಗಳಿಸಲು ಬಹುದೊಡ್ಡ ಕೊಡುಗೆ ನೀಡಿದ್ದು ಉತ್ತರಪ್ರದೇಶ. 2019ರಲ್ಲಿ ಪುನರಾಯ್ಕೆಯಾಗಲೂ ಬಲ ತುಂಬಿದ್ದು ಇದೇ ರಾಜ್ಯ. 2014ರಲ್ಲಿ 71 ಸ್ಥಾನ ಗೆದ್ದಿದ್ದ ಬಿಜೆಪಿ, 2019ರಲ್ಲಿ 62 ಸ್ಥಾನ ಗಳಿಸಿತ್ತು. ಈ ಬಾರಿ ಬಿಜೆಪಿ ಎಷ್ಟು ಸ್ಥಾನ ಗಳಿಸಬಹುದು ಎಂಬುದೇ ಸದ್ಯದ ಕುತೂಹಲ.

ಬಿಜೆಪಿ ನೇತೃತ್ವದ ಎನ್‌ಡಿಎ, ಸಮಾಜವಾದಿ ಪಕ್ಷ ನೇತೃತ್ವದ ಇಂಡಿಯಾ ನಡುವೆಯೇ ಈ ರಾಜ್ಯದಲ್ಲಿ ನೇರ ಹಣಾಹಣಿ ನಿರೀಕ್ಷಿಸಲಾಗಿದೆ. ಮತ್ತೊಂದೆಡೆ, ಮಾಯಾವತಿ ನೇತೃತ್ವದ ಬಿಎಸ್‌ಪಿ ಕೂಡ ಏಕಾಂಗಿಯಾಗಿ ಸೆಣಸಾಡುತ್ತಿದೆ. ಅವರು ಹೆಚ್ಚು ಸ್ಥಾನ ಗೆಲ್ಲುತ್ತಾರೋ? ಅಥವಾ ಇಂಡಿಯಾ ಕೂಟಕ್ಕೆ ಹೊಡೆತ ನೀಡುತ್ತಾರೋ ಎಂಬುದು ಈ ಚುನಾವಣೆ ಬಳಿಕ ತಿಳಿಯಲಿದೆ.

ಬಿಜೆಪಿ ಜಾದೂ ನಡೆಯುತ್ತಾ?

ಅಯೋಧ್ಯೆಯಲ್ಲಿ ರಾಮಮಂದಿರ ಕನಸು ಸಾಕಾರಗೊಂಡಿರುವುದರಿಂದ ಭಾರಿ ಸಂಖ್ಯೆಯಲ್ಲಿ ಜನರು ಬಿಜೆಪಿ ಬೆಂಬಲಕ್ಕೆ ನಿಲ್ಲಬಹುದು ಎಂಬ ವಿಶ್ಲೇಷಣೆಗಳಿವೆ. ಜತೆಗೆ ಪ್ರಧಾನಿ ನರೇಂದ್ರ ಮೋದಿ ಅಲೆಯ ಶಕ್ತಿ ಇದೆ. ಭೂಗತ ಪಾತಕಿಗಳಿಗೆ ನಡುಕ ಹುಟ್ಟಿಸಿ, ಕಾನೂನು ಸುವ್ಯವಸ್ಥೆಯನ್ನು ಬಿಗಿಗೊಳಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಆಡಳಿತವೂ ಬಿಜೆಪಿಗೆ ವರವಾಗಿದೆ. ಹೆದ್ದಾರಿ, ವಿಮಾನ ನಿಲ್ದಾಣ ಸೇರಿದಂತೆ ಸಾಲು ಸಾಲು ಅಭಿವೃದ್ಧಿ ಕಾಮಗಾರಿಗಳು ಬಿಜೆಪಿಗೆ ಅನುಕೂಲ ಕಲ್ಪಿಸಬಹುದು. ಜತೆಗೆ ಜಯಂತ್‌ ಚೌಧರಿ ನೇತೃತ್ವದ ಆರ್‌ಎಲ್‌ಡಿ, ಓಂ ಪ್ರಕಾಶ್‌ ರಾಜಭರ್‌ ನೇತೃತ್ವದ ಸುಹೇಲ್‌ದೇವ್‌ ಭಾರತೀಯ ಸಮಾಜ ಪಾರ್ಟಿ ಎನ್‌ಡಿಎ ತೆಕ್ಕೆಗೆ ಸೇರಿರುವುದರಿಂದ ಬಲವೃದ್ಧಿಯಾಗಿದೆ. ಆದರೆ ಮುಸ್ಲಿಮರ ಮತಗಳು ಎದುರಾಳಿಗಳ ಪರ ಒಗ್ಗೂಡಬಹುದು ಎಂಬ ಭೀತಿ ಇದೆ. ಮುಖ್ಯವಾಗಿ ಅಖಿಲೇಶ್‌ ಯಾದವ್ ಅಥವಾ ಮಾಯಾವತಿ ಅವರಷ್ಟು ವರ್ಚಸ್ಸು ಇರುವ ಒಬಿಸಿ ಹಾಗೂ ದಲಿತ ನಾಯಕರ ಕೊರತೆ ಪಕ್ಷವನ್ನು ಕಾಡುತ್ತಿದೆ.

ಮುಲಾಯಂ ಒಗ್ಗಟ್ಟು ಎಸ್‌ಪಿಗೆ ಬಲ:

ಸಮಾಜವಾದಿ ಪಕ್ಷ ಈ ಬಾರಿ ಕಾಂಗ್ರೆಸ್‌ ಜತೆಗೂಡಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ತೊಡೆತಟ್ಟಿದೆ. ಎಸ್‌ಪಿಗೆ ಒಬಿಸಿ ಹಾಗೂ ಮುಸ್ಲಿಂ ಮತದಾರರ ಬೆಂಬಲವಿದೆ. ಹಿಂದೆ ವಿಘಟನೆಗೊಂಡಿದ್ದ ಮುಲಾಯಂ ಯಾದವ್‌ ಕುಟುಂಬ ಭಿನ್ನಾಭಿಪ್ರಾಯ ಮರೆತು ಒಗ್ಗೂಡಿ ಹೋರಾಡುತ್ತಿರುವುದು ಪ್ಲಸ್‌. ಆದರೆ ಅವರ ಕುಟುಂಬದ ಸುತ್ತವೇ ಪಕ್ಷದ ನಡೆಗಳು ಗಿರಕಿ ಹೊಡೆಯುತ್ತಿರುವುದನ್ನು ಮತದಾರರು ಹೇಗೆ ಸ್ವೀಕರಿಸುತ್ತಾರೆ ನೋಡಬೇಕು. ಸಮಾಜವಾದಿ ಪಕ್ಷ ಮುಸ್ಲಿಮರ ಪರ ನಿಲ್ಲುತ್ತದೆ, ಕ್ರಿಮಿನಲ್‌ಗಳನ್ನು ಪೋಷಿಸುತ್ತದೆ ಎಂಬ ಬಿಜೆಪಿ ಆರೋಪ ಮುಳುವಾಗುವ ನಿರೀಕ್ಷೆ ಇದೆ. ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದಾಗಿ ಮುಸ್ಲಿಮರ ಮತಗಳು ಒಡೆಯುವುದು ತಪ್ಪುತ್ತದೆ. ಆದರೆ ಪಕ್ಷದ ಹಲವು ನಾಯಕರು ಎನ್‌ಡಿಎಗೆ ಸೇರಿರುವುದು ದುಬಾರಿಯಾಗಿದೆ. ರಾಹುಲ್‌ ಯಾತ್ರೆಯಿಂದಾಗಿ ಲಾಭವಾಗಬಹುದು ಎಂಬ ನಿರೀಕ್ಷೆಯನ್ನು ಕಾಂಗ್ರೆಸ್‌ ಹೊಂದಿದೆ. ಆದರೆ ಆ ಪಕ್ಷದ ಸಂಘಟನೆ ರಾಜ್ಯದಲ್ಲಿ ದಿನೇ ದಿನೇ ದುರ್ಬಲವಾಗುತ್ತಲೇ ಇದೆ.

ಬಿಎಸ್ಪಿ ‘ಆನೆ’ ಶಕ್ತಿಹೀನ?:

ಕಳೆದ ಕೆಲವು ಚುನಾವಣೆಗಳಿಂದ ಬಿಎಸ್‌ಪಿ ದುರ್ಬಲಗೊಂಡಿದೆ. ಆದಾಗ್ಯೂ ದಲಿತ ವರ್ಗಗಳಲ್ಲಿ ಸಾಕಷ್ಟು ನೆಲೆಯನ್ನು ಹೊಂದಿದೆ. ಆ ಪಕ್ಷಕ್ಕೆ ಮಾಯಾವತಿ ಅವರಂತಹ ಬಲಿಷ್ಠ ನಾಯಕತ್ವ ಇದೆ. ಆದರೆ ಮಾಯಾವತಿ ಬಿಟ್ಟರೆ ಬೇರೆ ನಾಯಕರೇ ಇಲ್ಲ ಎನ್ನುವುದು ಹಿನ್ನಡೆಯಾಗಿ ಕಾಡುತ್ತಿದೆ. ಸಂಸತ್ತು ಹಾಗೂ ವಿಧಾನಸಭೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ ಕುಸಿದಿರುವುದರಿಂದ ಕಾರ್ಯಕರ್ತರ ಮನೋಬಲವೂ ಕುಸಿದಿದೆ. ಒಂದು ವೇಳೆ ಈ ಚುನಾವಣೆಯಲ್ಲೂ ಹಿನ್ನಡೆಯಾದರೆ, ಆ ಪಕ್ಷದ ನಾಯಕರನ್ನು ಹಿಡಿದಿಟ್ಟುಕೊಳ್ಳುವುದೇ ಕಷ್ಟವಾಗಬಹುದು.

ಸ್ಪರ್ಧೆ ಹೇಗೆ?
ಬಿಜೆಪಿ ನೇತೃತ್ವದ ಎನ್‌ಡಿಎ ಹಾಗೂ ಸಮಾಜವಾದಿ ಕಾಂಗ್ರೆಸ್‌ ಒಳಗೊಂಡ ಇಂಡಿಯಾ ಕೂಟದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ನರೇಂದ್ರ ಮೋದಿ, ರಾಮಮಂದಿರ, ಯೋಗಿ ಆಡಳಿತವನ್ನು ಬಿಜೆಪಿ ನೆಚ್ಚಿಕೊಂಡಿದ್ದು, ಇದಕ್ಕೆ ಪ್ರತಿಪಕ್ಷಗಳ ಬಳಿ ಪ್ರಬಲ ಅಸ್ತ್ರವಿಲ್ಲ. ರಾಷ್ಟ್ರೀಯ ವಿಚಾರದ ಮೇಲೆ ಚುನಾವಣೆ ನಡೆಯುವುದರಿಂದ ಎಸ್ಪಿ- ಕಾಂಗ್ರೆಸ್‌ ಹೇಗೆ ಪೈಪೋಟಿ ನೀಡುತ್ತವೆ ಎಂಬುದನ್ನು ಕಾದು ನೋಡಬೇಕು. ಬಿಎಸ್ಪಿ ಏನಾದರೂ ಮುಸ್ಲಿಮರ ಮತ ವಿಭಜನೆ ಮಾಡಿದರೆ ಬಿಜೆಪಿಗೆ ಭಾರಿ ಅನುಕೂಲವಾಗಲಿದೆ. ಒಂದು ವೇಳೆ ಮುಸ್ಲಿಂ- ಯಾದವ ಮತಗಳು ಒಗ್ಗೂಡಿ ಇಂಡಿಯಾ ಕೂಟಕ್ಕೆ ವರ್ಗಾವಣೆಯಾದರೆ ಒಂದಷ್ಟು ಸ್ಥಾನಗಳಲ್ಲಿ ಬದಲಾವಣೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

click me!