ಕಾಶಿ ಮಸೀದಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದವರಿಗೆ ಹತ್ಯೆ ಬೆದರಿಕೆ| ಮಸೀದಿ ಸಮೀಕ್ಷೆಗೆ ಸೂಚನೆ ಬೆನ್ನಲ್ಲೇ, ಬೆದರಿಕೆ ಕರೆ| ಕೊಲೆ ಬೆದರಿಕೆ ಕರೆ ಸ್ವೀಕರಿಸಿದ ಅರ್ಜಿದಾರನಿಗೆ ಭದ್ರತೆ
ವಾರಾಣಸಿ(ಏ.11): ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರಕ್ಕೆ ಅಂಟಿಕೊಂಡಂತಿರುವ ಜ್ಞಾನವಾಪಿ ಮಸೀದಿಯ ಸಮೀಕ್ಷೆಗೆ ಸ್ಥಳೀಯ ಕೋರ್ಟ್ ಆದೇಶಿಸಿದ ಬೆನ್ನಲ್ಲೇ, ಕಾಶಿಯಲ್ಲಿರುವ ಮಸೀದಿ ವಿರುದ್ಧ ಕಾನೂನು ಹೋರಾಟಕ್ಕೆ ಧುಮುಕಿದ ಅರ್ಜಿದಾರ ಹರಿಹರ ಪಾಂಡೆ ಅವರಿಗೆ ಜೀವ ಬೆದರಿಕೆಯ ಕರೆಗಳು ಬಂದಿವೆ.
ಈ ಹಿನ್ನೆಲೆಯಲ್ಲಿ ಅವರಿಗೆ ಭದ್ರತೆ ಕಲ್ಪಿಸಲಾಗಿದೆ. ಜೊತೆಗೆ ಈ ಪ್ರಕರಣದ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಶನಿವಾರ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಹರಿಹರ ಪಾಂಡೆ ಅವರು, ‘ಜ್ಞಾನವಾಪಿ ಮಸೀದಿ ಸಮೀಕ್ಷೆ ನಡೆಸುವಂತೆ ಪುರಾತತ್ವ ಸರ್ವೇಕ್ಷಣ ಇಲಾಖೆಗೆ ನ್ಯಾಯಾಲಯ ಸೂಚನೆ ನೀಡಿದ ಬಳಿಕ ನಾನು ಮನೆಗೆ ತಲುಪುತ್ತಿದ್ದಂತೆಯೇ ಯಾಸಿನ್ ಎಂಬ ವ್ಯಕ್ತಿ ಕರೆ ಮಾಡಿದ್ದ.
ಪಾಂಡೆ ನೀವು ಕೇಸ್ ಅನ್ನು ಗೆದ್ದಿದ್ದೀರಿ. ಆದರೆ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಮೀಕ್ಷೆ ನಡೆಸಲು ಬಿಡಲ್ಲ. ನೀವು ಮತ್ತು ನಿಮ್ಮ ಸಹೋದ್ಯೋಗಿಗಳನ್ನು ಮುಗಿಸುತ್ತೇವೆ ಎಂದು ಬೆದರಿಕೆ ಹಾಕಿದ್ದ’ ಎಂದು ಹೇಳಿದ್ದಾರೆ.