* ಕೃಷ್ಣೆಗಾಗಿ ತೆಲಂಗಾಣ ವಿರುದ್ಧ ರಾಜ್ಯ, ಮಹಾ ಜಂಟಿ ಸಮರ
* ಹೊಸತಾಗಿ ನೀರು ಹಂಚಿಕೆ ಮಾಡಲು ಕೇಳಿರುವ ತೆಲಂಗಾಣ
* ಇದರ ವಿರುದ್ಧ ಜಂಟಿ ಕಾನೂನು ಹೋರಾಟಕ್ಕೆ ತೀರ್ಮಾನ
ಬೆಂಗಳೂರು(ಜೂ.20): ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಮಾಡುವಂತೆ ನ್ಯಾಯಾಂಗ ಹೋರಾಟ ಆರಂಭಿಸಿರುವ ತೆಲಂಗಾಣ ವಿರುದ್ಧ ಕರ್ನಾಟಕ ಹಾಗೂ ಮಹಾರಾಷ್ಟ್ರ ಒಗ್ಗೂಡಿದ್ದು, ನೀರು ಹಂಚಿಕೆಗೆ ಸಂಬಂಧಿಸಿದ ಅಂತಿಮ ಅಧಿಸೂಚನೆ ಹೊರಡಿಸುವಂತೆ ಒಗ್ಗೂಡಿ ನ್ಯಾಯಾಂಗ ಹೋರಾಟ ನಡೆಸಲು ನಿರ್ಧರಿಸಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತಾರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆಯ ನಂತರ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.
17 ಕೆರೆಗೆ ಕೃಷ್ಣಾ ನೀರು ತುಂಬಿಸಲು 457 ಕೋಟಿ
ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮಿಶ್ರಾ ನೇತೃತ್ವದ ನ್ಯಾಯಾಧಿಕರಣ ಐತೀರ್ಪು ನೀಡಿದೆ. ಅದರಂತೆ ನೀರು ಹಂಚಿಕೆ ನಡೆಯುತ್ತಿದೆ. ಆದರೆ ಐತೀರ್ಪಿನ ಕುರಿತು ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. ಅಂತಿಮ ಅಧಿಸೂಚನೆ ಪ್ರಕಟಗೊಳ್ಳಬೇಕು ಎಂಬುದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ನಿಲುವಾಗಿದೆ ಎಂದು ಸ್ಪಷ್ಟಪಡಿಸಿದರು.
ಆದರೆ, ಈ ಹಿಂದೆ ಇದ್ದ ಆಂಧ್ರಪ್ರದೇಶ ವಿಭಜನೆಯಾಗಿ ಸೀಮಾಂಧ್ರ ಹಾಗೂ ತೆಲಂಗಾಣ ರಚನೆಯಾಗಿದೆ. ಆಂಧ್ರಪ್ರದೇಶಕ್ಕೆ ಹಂಚಿಕೆಯಾಗಿದ್ದ ನೀರನ್ನೇ ಈ ಎರಡು ರಾಜ್ಯಗಳು ಹಂಚಿಕೆ ಮಾಡಿಕೊಳ್ಳಬೇಕು ಎಂಬ ವಾದ ಕರ್ನಾಟಕ ಹಾಗೂ ಮಹಾರಾಷ್ಟ್ರದ್ದು. ಆದರೆ, ತೆಲಂಗಾಣ ಇದನ್ನು ಒಪ್ಪುತ್ತಿಲ್ಲ. ಕೃಷ್ಣಾ ನದಿ ನೀರು ಮರು ಹಂಚಿಕೆಯಾಗಲಿ ಎಂದು ನ್ಯಾಯಾಂಗ ಹೋರಾಟಕ್ಕೆ ಮುಂದಾಗಿದೆ. ಹೀಗಾಗಿ ಕರ್ನಾಟಕ ಹಾಗೂ ಮಹಾರಾಷ್ಟ್ರ ಈ ನ್ಯಾಯಾಂಗ ಹೋರಾಟದಲ್ಲಿ ಒಗ್ಗೂಡಲು ತೀರ್ಮಾನಿಸಿವೆ.
ಡ್ಯಾಂ ಮಾಹಿತಿ ಹಂಚಿಕೆ:
ಇದಕ್ಕೂ ಮುನ್ನ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ನೀರು ಹಂಚಿಕೆ ಸಂಬಂಧ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಕೃಷ್ಣಾ ಮತ್ತು ಭೀಮಾ ಜಲಾನಯನ ಪ್ರದೇಶದಲ್ಲಿ ಪ್ರವಾಹ ನಿರ್ವಹಣೆ ಕುರಿತು ಮಾಹಿತಿ ವಿನಿಮಯ ನಡೆಯಿತು. ಎರಡೂ ರಾಜ್ಯಗಳ ನಡುವೆ ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುಗಡೆ ಕುರಿತಂತೆ ಕ್ಷಣಕ್ಷಣದ ಮಾಹಿತಿ ಹಂಚಿಕೊಳ್ಳಲು ತೀರ್ಮಾನಿಸಲಾಯಿತು.
ಭೀಮೆಗೆ 8 ಲಕ್ಷ ಕ್ಯುಸೆಕ್ ನೀರು ಬಿಡುಗಡೆ : ಮಹಾರಾಷ್ಟ್ರ ಮಾಹಿತಿ ತಪ್ಪು
ಜಲಾಶಯಗಳಿಂದ ನೀರು ಬಿಡುವ ಮುನ್ನ ಪರಸ್ಪರ ಮಾಹಿತಿ ವಿನಿಮಯವಾದರೆ ಪ್ರವಾಹ ಪರಿಸ್ಥಿತಿ ಬಗ್ಗೆ ಮುನ್ನೆಚ್ಚರಿಕೆ ಕೈಗೊಳ್ಳಬಹುದು. ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಬಹುದು. ಈ ಹಿನ್ನೆಲೆಯಲ್ಲಿ ಎರಡೂ ರಾಜ್ಯಗಳ ಜಲಸಂಪನ್ಮೂಲ ಸಚಿವರು, ಕಾರ್ಯದರ್ಶಿಗಳು ಹಾಗೂ ತಳಹಂತದ ಅಧಿಕಾರಿಗಳ ನಡುವೆ ಉತ್ತಮ ಸಂವಹನ, ಸಮನ್ವಯ ಇರಬೇಕು ಎಂದು ನಿರ್ಧರಿಸಲಾಯಿತು. ದೂಧಗಂಗಾ ಯೋಜನೆಯನ್ನು ಎರಡು ವರ್ಷದೊಳಗೆ ಪೂರ್ಣಗೊಳಿಸುವುದಾಗಿ ಮಹಾರಾಷ್ಟ್ರ ಸರ್ಕಾರ ಒಪ್ಪಿಗೆ ನೀಡಿತು.
ಮಹಾರಾಷ್ಟ್ರದ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ…, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ದೇವದುರ್ಗ: ಕೃಷ್ಣಾ ನದಿಗೆ 13 ಸಾವಿರ ಕ್ಯೂಸೆಕ್ ನೀರು
ಪರಸ್ಪರ 4 ಟಿಎಂಸಿ ನೀರು ವಿನಿಮಯ
ಬೇಸಿಗೆಯಲ್ಲಿ ಮಹಾರಾಷ್ಟ್ರವು 4 ಟಿಎಂಸಿ ನೀರನ್ನು ಕರ್ನಾಟಕಕ್ಕೆ ಹರಿಸಬೇಕು. ಇಷ್ಟೇ ಪ್ರಮಾಣದ ನೀರನ್ನು ಕರ್ನಾಟಕವು ಮಳೆಗಾಲದಲ್ಲಿ ಮಹಾರಾಷ್ಟ್ರಕ್ಕೆ ನೀಡಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಗಿದ್ದು, ಇದಕ್ಕಾಗಿ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಲಾಯಿತು. ಬೇಸಿಗೆಯಲ್ಲಿ ಮಹಾರಾಷ್ಟ್ರದಿಂದ ಹರಿದ ನೀರನ್ನು ಚಿಕ್ಕೋಡಿ, ರಾಯಭಾಗ ಮತ್ತಿತರ ಕಡೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಭೀಮಾ ನದಿಗೆ ಕರ್ನಾಟಕದವರು 4 ಟಿಎಂಸಿ ನೀರು ಹರಿಸಿದರೆ ಮಹಾರಾಷ್ಟ್ರದ ಸೋಲಾಪುರ, ಜತ್ತ, ಅಕ್ಕಲಕೋಟೆಗೆ ನೀರು ನೀಡಲು ಮಹಾರಾಷ್ಟ್ರಕ್ಕೆ ಅನುಕೂಲವಾಗುತ್ತದೆ. ಇದಕ್ಕೆ ಉಭಯ ರಾಜ್ಯಗಳು ಸಮ್ಮತಿ ವ್ಯಕ್ತಪಡಿಸಿದವು.