ಬಾಲ್ಯವಿವಾಹದಲ್ಲಿ ಕರ್ನಾಟಕ ನಂ.2: ಬೆಚ್ಚಿಬೀಳಿಸುವ ಅಂಕಿಅಂಶ..!

By Kannadaprabha NewsFirst Published Jul 12, 2024, 4:30 AM IST
Highlights

ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿನಲ್ಲಿ 8,966 ಬಾಲ್ಯವಿವಾಹಗಳು ನಡೆದಿದ್ದರೆ, ಕರ್ನಾಟಕದಲ್ಲಿ 8,348, ಪಶ್ಚಿಮ ಬಂಗಾಳದಲ್ಲಿ 8,324, ತೆಲಂಗಾಣದಲ್ಲಿ 4,440, ಆಂಧ್ರದಲ್ಲಿ 3,416 ಬಾಲ್ಯವಿವಾಹಗಳು ನಡೆದಿವೆ ಎಂದು ರಾಜ್ಯಗಳು ಕಳುಹಿಸಿದ ಅಂಕಿಅಂಶಗಳನ್ನು ಒಟ್ಟುಗೂಡಿಸಿ ಕೇಂದ್ರ ಸರ್ಕಾರವು ಪೀಠದ ಗಮನಕ್ಕೆ ತಂದಿತು.
 

ನವದೆಹಲಿ(ಜು.12):  ಕಳೆದ 3 ವರ್ಷಗಳಲ್ಲಿ ಭಾರತದಾದ್ಯಂತ ಸಾವಿರಾರು ಬಾಲ್ಯವಿವಾಹಗಳು ನಡೆದಿವೆ. ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ತೆಲಂಗಾಣ, ಆಂಧ್ರಪ್ರದೇಶಗಳು ಬಾಲ್ಯವಿವಾಹ ನಡೆದ ಟಾಪ್‌-5 ರಾಜ್ಯಗಳಾಗಿವೆ ಎಂಬ ಆಘಾತಕಾರಿ ಮಾಹಿತಿಯನ್ನು ಕೇಂದ್ರ ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ಗೆ ನೀಡಿದೆ.

‘ಬಾಲ್ಯವಿವಾಹಗಳನ್ನು ನಿಯಂತ್ರಿಸಲು ಸುಪ್ರೀಂ ಕೋರ್ಟ್‌ ಮಾರ್ಗಸೂಚಿ ಹೊರಡಿಸಬೇಕು’ ಎಂದು ಕೋರಿ ಸ್ವಯಂಸೇವಾ ಸಂಸ್ಥೆಯೊಂದು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಾಧೀಶ ನ್ಯಾ। ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಪರವಾಗಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ, ಕಳೆದ 3 ವರ್ಷಗಳಲ್ಲಿ ಬಾಲ್ಯ ವಿವಾಹದ ಘಟನೆಗಳ ಬಗ್ಗೆ ಬೆಚ್ಚಿಬೀಳಿಸುವ ಅಂಕಿಅಂಶಗಳನ್ನು ಮಂಡಿಸಿದರು.

Latest Videos

ಜಾಗೃತಿ ನಡುವೆಯೂ ಪೋಕ್ಸೊ, ಬಾಲ್ಯವಿವಾಹ ಕೇಸು ಹೆಚ್ಚಳ: ಅಪ್ರಾಪ್ತ ವಯಸ್ಸಲ್ಲೇ ದಾಂಪತ್ಯದ ಜವಾಬ್ದಾರಿ

ಕಳೆದ ಮೂರು ವರ್ಷಗಳಲ್ಲಿ ತಮಿಳುನಾಡಿನಲ್ಲಿ 8,966 ಬಾಲ್ಯವಿವಾಹಗಳು ನಡೆದಿದ್ದರೆ, ಕರ್ನಾಟಕದಲ್ಲಿ 8,348, ಪಶ್ಚಿಮ ಬಂಗಾಳದಲ್ಲಿ 8,324, ತೆಲಂಗಾಣದಲ್ಲಿ 4,440, ಆಂಧ್ರದಲ್ಲಿ 3,416 ಬಾಲ್ಯವಿವಾಹಗಳು ನಡೆದಿವೆ ಎಂದು ರಾಜ್ಯಗಳು ಕಳುಹಿಸಿದ ಅಂಕಿಅಂಶಗಳನ್ನು ಒಟ್ಟುಗೂಡಿಸಿ ಕೇಂದ್ರ ಸರ್ಕಾರವು ಪೀಠದ ಗಮನಕ್ಕೆ ತಂದಿತು.

ಇನ್ನು ಅಸ್ಸಾಂನಲ್ಲಿ 3,316, ಮಹಾರಾಷ್ಟ್ರದಲ್ಲಿ 2,043, ಗುಜರಾತ್‌ನಲ್ಲಿ 1,206, ಉತ್ತರ ಪ್ರದೇಶದಲ್ಲಿ 1,197 ಮತ್ತು ಹರ್ಯಾಣದಲ್ಲಿ 1,104 ಬಾಲ್ಯವಿವಾಹಗಳು ನಡೆದಿವೆ. ಈ ಎಲ್ಲ ರಾಜ್ಯಗಳು ಬಾಲ್ಯವಿವಾಹದಲ್ಲಿ ಟಾಪ್‌-10 ರಾಜ್ಯಗಳಾಗಿವೆ ಎಂದು ಕೇಂದ್ರ ಹೇಳಿತು.

ಇಷ್ಟೇ ಸಂಖ್ಯೆಯ ಬಾಲ್ಯ ವಿವಾಹಕ್ಕೆ ತಡೆ:

ಇದೇ ವೇಳೆ, ಇಷ್ಟು ಸಂಖ್ಯೆಯ ಬಾಲ್ಯವಿವಾಹಗಳು ನಡೆದಿದ್ದರೂ, ಇಷ್ಟೇ ಸಂಖ್ಯೆಯ ಬಾಲ್ಯವಿವಾಹಗಳನ್ನು ತಡೆಯಲಾಗಿದೆ ಎಂದು ಭಾಟಿ ಹೇಳಿದರು. ಆದಾಗ್ಯೂ, ಬಾಲ್ಯವಿವಾಹ ನಿಷೇಧ ಕಾಯಿದೆ-2006 ರ ಅಡಿಯಲ್ಲಿ ಇಂಥ ವಿವಾಹಗಳ ವಿರುದ್ಧ ಕೆಲವೇ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ವಿಷಾದಿಸಿದರು.

ಬೆಂಗಳೂರು: ಬಾಲಕಿಯ ಹೆತ್ತವರಿಗೆ ತಿಳಿಸದೆ 8ನೇ ತರಗತಿ ಬಾಲಕಿಗೆ ಬಾಲ್ಯ ವಿವಾಹ ಮಾಡಿಸಿದ ಕುಟುಂಬ!

ಇದಕ್ಕೆ ಪ್ರತಿಕ್ರಿಯಿಸಿದ ಸ್ವಯಂಸೇವಾ ಸಂಸ್ಥೆಯ ವಕೀಲರು, ‘ಬಾಲ್ಯವಿವಾಹದ ಆರೋಪಿಗಳ ವಿರುದ್ಧ ಸೂಕ್ತ ರೀತಿಯಲ್ಲಿ ಕಾನೂನು ಕ್ರಮ ಆಗುತ್ತಿಲ್ಲ. ರಾಜ್ಯಗಳು ಸರಿಯಾದ ಅಂಕಿ-ಅಂಶ ನೀಡುತ್ತಿಲ್ಲ’ ಎಂದರು ಹಾಗೂ ಬಾಲ್ಯವಿವಾಹ ತಡೆಗೆ ಪ್ರಭಾರ ಅಧಿಕಾರಿಗಳ ಬದಲು, ವಿಶೇಷ ಅಧಿಕಾರಿಗಳನ್ನು ನೇಮಿಸಬೇಕು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ಪೀಠವು, ‘ಈ ಸಾಮಾಜಿಕ ಅನಿಷ್ಟದ ನಿರ್ಮೂಲನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನಗಳನ್ನು ಬಲಪಡಿಸಲು ನಾವು ಯಾವ ನಿರ್ದೇಶನಗಳು ಮತ್ತು ಮಾರ್ಗಸೂಚಿಗಳನ್ನು ನೀಡಬಹುದು ಎಂಬ ಬಗ್ಗೆ ಚರ್ಚಿಸುತ್ತೇವೆ’ ಎಂದು ಹೇಳಿ ತೀರ್ಪು ಕಾಯ್ದಿರಿಸಿತು.

click me!