ಮಹಾರಾಷ್ಟ್ರ ಕರ್ನಾಟಕ ಗಡಿವಿವಾದ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿ ಇದ್ದರೂ ರಾಜ್ಯದ ಗಡಿ ಹಳ್ಳಿಗಳಿಗೆ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ನೀಡುವ ಮೂಲಕ ಕ್ಯಾತೆ ತೆಗೆದಿದೆ.
ಬೆಂಗಳೂರು (ಏ.05): ಕರ್ನಾಟಕ ಮತ್ತು ಮಹಾರಾಷ್ಟ್ರಗಳ ನಡುವಿನ ಗಡಿ ವಿವಾದ ಕುರಿತ ಪ್ರಕರಣವು ಸುಪ್ರೀಂ ಕೋರ್ಟ್ ಅಂಗಳಲ್ಲಿದ್ದರೂ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ 860ಕ್ಕೂ ಅಧಿಕ ಹಳ್ಳಿಗಳಿಗೆ ಆರೋಗ್ಯ ವಿಮೆಯನ್ನು ಒದಗಿಸುತ್ತಿರುವ ಮೂಲಕ ಉದ್ಧಟತನ ಪ್ರದರ್ಶನ ಮಾಡಿರುವ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿದ್ದಾರೆ.
ಈ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಮಹಾರಾಷ್ಟ್ರ ಸರ್ಕಾರ ಮತ್ತು ಮುಖ್ಯಮಂತ್ರಿಗೆ ತರಾಟೆ ತೆಗೆದುಕೊಮಡಿದ್ದಾರೆ. "ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇದ್ದರೂ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ. ಕರ್ನಾಟಕದ ಗಡಿಯಲ್ಲಿರುವ ಕೆಲವರಿಗೆ ವಿಮೆ ನೀಡುವ ಆದೇಶ ಮಾಡಿರುವುದು ಉದ್ದಟತನದ ಪರಮಾವಧಿಯಾಗಿದ್ದು, ಇದು ಎರಡು ರಾಜ್ಯಗಳ ನಡುವಿನ ಬಾಂಧವ್ಯ ಕದಡುವ ಪ್ರಯತ್ನವಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
ಮಹಾ ವಿಧಾನ ಪರಿಷತ್ತಿನಲ್ಲಿ ಸಿಎಂ ಬೊಮ್ಮಾಯಿಗೆ ಅವಮಾನ
ಉಳಿದಂತೆ ಈ ವಿಚಾರವನ್ನು ಕೇಂದ್ರ ಗೃಹ ಸಚಿವರ ಗಮನಕ್ಕೂ ತಂದಿದ್ದಾರೆ. ಈ ಕುರಿತು " ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಗಡಿ ವಿಚಾರದಲ್ಲಿ ಯಾವುದೇ ರೀತಿಯ ಗೊಂದಲ ಸೃಷ್ಟಿಸುವುದಿಲ್ಲ ಎಂದು ಒಪ್ಪಿಕೊಂಡಿದ್ದರು. ಈಗ ಕರ್ನಾಟಕದ 865 ಗ್ರಾಮಗಳ ಜನತೆಗೆ ಬಾಬು ಜಗಜೀವನ್ ರಾಮ್ ಆರೋಗ್ಯ ವಿಮೆ ಯೋಜನೆ ಜಾರಿಗೆ ಆದೇಶ ಮಾಡಿರುವುದು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ಕೆಲಸವಾಗಿದೆ. ಮಹಾರಾಷ್ಟ್ರ ಸರ್ಕಾರ ತಕ್ಷಣ ತನ್ನ ಆದೇಶವನ್ನು ವಾಪಸ್ ಪಡೆದು, ಅಮಿತ್ ಶಾ ಅವರ ಸೂಚನೆಗೆ ಗೌವರ ಕೊಡುವ ಮೂಲಕ ಎರಡೂ ರಾಜ್ಯಗಳ ನಡುವಿನ ಬಾಂಧವ್ಯ ಕಾಪಾಡುವ ಕೆಲಸ ಮಾಡಬೇಕು" ಎಂದು ಆಗ್ರಹಿಸಿದ್ದಾರೆ.
ಮಹಾರಾಷ್ಟ್ರದ ಗಡಿ ಹಳ್ಳಿಗಳಿಗೆ ನುಗ್ಗಿ ಕರ್ನಾಟಕ ವಿಮೆ ಕೊಡ್ತೇವೆ: "ಮಹಾರಾಷ್ಟ್ರ ಸರ್ಕಾರ ಇದೇ ರೀತಿ ಉದ್ದಟತನ ಮುಂದುವರೆಸಿದರೆ ಕರ್ನಾಟಕ ಸರ್ಕಾರವೂ ಕೂಡ ಮಹಾರಾಷ್ಟ್ರ ಗಡಿಯಲ್ಲಿರುವ ಕನ್ನಡಿಗರ ರಕ್ಷಣೆಗೆ ಇದೇ ರೀತಿಯ ವಿಮೆ ಜಾರಿಗೊಳಿಸಲಾಗುವುದು. ಕರ್ನಾಟಕ ಗಡಿಯಲ್ಲಿರುವ ಜನರಿಗೆ ವಿಮೆ ನೀಡುವ ಹೆಸರಿನಲ್ಲಿ ಮಹಾರಾಷ್ಟ್ರ ಸರ್ಕಾರ, ಅವರಿಂದ ಮಹಾರಾಷ್ಟ್ರಕ್ಕೆ ಸೇರಿದವರೆಂದು ಘೋಷಣಾ ಪತ್ರ ತೆಗೆದುಕೊಳ್ಳುವುದು ಖಂಡನೀಯ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರದ ಹೊಸ ಕ್ಯಾತೆ ವವರ ಇಲ್ಲಿದೆ: ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರ-ಕರ್ನಾಟಕ ಗಡಿ ಪ್ರದೇಶದಲ್ಲಿ ಕರ್ನಾಟಕದ 865 ಮರಾಠಿ ಮಾತನಾಡುವ ಹಳ್ಳಿಗಳ ನಾಗರಿಕರಿಗೆ ಮಹಾತ್ಮ ಜ್ಯೋತಿರಾವ್ ಫುಲೆ ಜನ ಆರೋಗ್ಯ ಯೋಜನೆಯ ಪ್ರಯೋಜನಗಳನ್ನು ಒದಗಿಸುವ ತನ್ನ ಘೋಷಣೆಯ ಅನುಷ್ಠಾನದ ಕುರಿತು ಸರ್ಕಾರದ ನಿರ್ಣಯವನ್ನು (ಜಿಆರ್) ಹೊರಡಿಸಿದೆ. ಗಡಿ ತಂಟೆ ತೀರ್ಪು ಹೊರಬೀಳುವವರೆಗೂ ಎರಡೂ ರಾಜ್ಯಗಳು ಯಾವುದೇ ರೀತಿಯ ಹಸ್ತಕ್ಷೇಪ ಮಾಡಕೂಡದು ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಸಂಧಾನ ಸಭೆಯಲ್ಲಿ ಸೂಚಿಸಿದ್ದರು. ಕರ್ನಾಟಕ– ಮಹಾರಾಷ್ಟ್ರದ ತಲಾ ಮೂವರು ಸಚಿವರನ್ನು ಒಳಗೊಂಡ ಸಲಹಾ ಸಮಿತಿಯನ್ನೂ ರಚನೆ ಮಾಡಿದ್ದರು. ಏನೇ ನಿರ್ಣಯ ಕೈಗೊಳ್ಳುವ ಮುನ್ನ ಈ ಸಮಿತಿ ಮುಂದೆ ಇಡಬೇಕು ಎಂದು ಆದೇಶಿಸಿದ್ದರು. ಆದರೆ, ಈಗ ಮಹಾರಾಷ್ಟ್ರ ಸರ್ಕಾರ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ನಿರ್ಣಯ ಕೈಗೊಂಡಿದೆ.
ಯಾವ್ಯಾವ ಜಿಲ್ಲೆಗಳ ಗಡಿಯಲ್ಲಿ ಆರೋಗ್ಯ ವಿಮೆ: ಮಹಾರಾಷ್ಟ್ರದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಬೀದರ್, ಕಲಬುರಗಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಒಟ್ಟು 12ತಾಲ್ಲೂಕುಗಳಲ್ಲಿನ 860 ಅಧಿಕ ಹಳ್ಳಿಗಳ ಎಲ್ಲ ಭಾಷಿಗರೂ ಈ ವಿಮೆಯ ಫಲಾನುಭವಿಗಳು ಆಗಬಹುದು. ಸಣ್ಣ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಒಳಗೊಂಡಂತೆ ಬರೋಬ್ಬರಿ 996 ಕಾಯಿಲೆಗಳಿಗೆ ಈ ವಿಮೆ ಅನ್ವಯ ಆಗಲಿದ್ದು, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿನ ಯಾವುದೇ ದೊಡ್ಡ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಪಡೆಯಬಹುದು ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಇದ್ದರೂ ಮಹಾರಾಷ್ಟ್ರ ಸರ್ಕಾರ ಎರಡೂ ರಾಜ್ಯಗಳ ಗಡಿ ಭಾಗದಲ್ಲಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದೆ.
ಕರ್ನಾಟಕದ ಗಡಿಯಲ್ಲಿರುವ ಕೆಲವರಿಗೆ ವಿಮೆ ನೀಡುವ ಆದೇಶ ಮಾಡಿರುವುದು ಉದ್ದಟತನದ ಪರಮಾವಧಿಯಾಗಿದ್ದು, ಇದು ಎರಡು ರಾಜ್ಯಗಳ ನಡುವಿನ ಬಾಂಧವ್ಯ ಕದಡುವ ಪ್ರಯತ್ನವಾಗಿದೆ.
1/5