ನರೇಂದ್ರ ಮೋದಿ ಸರ್ಕಾರ ಎರಡನೇ ಅವಧಿಯಲ್ಲಿ ಎರಡು ವರ್ಷ ಪೂರ್ಣಗೊಳಿಸಿದೆ. ಈ ಸಂದರ್ಭದಲ್ಲಿ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ತಮ್ಮ ಕ್ಷೇತ್ರದಲ್ಲಿನ ಈವರೆಗಿನ ಸಾಧನೆ ಹಾಗೂ ಪ್ರಧಾನಿ ಮೋದಿ ಜತೆಗಿನ ಒಡನಾಟವನ್ನು ಸುವರ್ಣ ನ್ಯೂಸ್ ಸೋದರ ಸಂಸ್ಥೆ ಕನ್ನಡಪ್ರಭ ನಡೆಸಿದ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳ ಮೂಲಕ ಹಂಚಿಕೊಂಡಿದ್ದಾರೆ.
ಸಂದರ್ಶನ-ಗೋಪಾಲ್ ಯಡಗೆರೆ, ಕನ್ನಡಪ್ರಭ
ಶಿವಮೊಗ್ಗ: ಬಾಲ್ಯದಿಂದಲೂ ಅಧಿಕಾರದಲ್ಲಿರುವ ತಮ್ಮ ತಂದೆಯ ಅಡಳಿತ, ಹೋರಾಟ, ಬದ್ಧತೆ, ಸಾರ್ವಜನಿಕ ಜೀವನ ಸಾರ್ಥಕತೆಯ ಅನುಭವವನ್ನು ಗಮನಿಸುತ್ತಲೇ ಬಂದ ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ತಮ್ಮ ರಾಜಕೀಯ ಜೀವನದ ಮೊದಲ ಗುರುವಾಗಿ,ಆದರ್ಶವಾಗಿ ತಮ್ಮ ತಂದೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಲೋಕಸಭೆಗೆ ಆಯ್ಕೆಯಾದ ಬಳಿಕ ಪ್ರಬಲ, ವರ್ಚಸ್ವಿ ನಾಯಕರಾಗಿ ಬೆಳೆದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಾಮೀಪ್ಯ ಸಿಕ್ಕಿದೆ. ಅವರ ಆದರ್ಶ ಇವರ ಕಣ್ಣ ಮುಂದಿದೆ. ಈ ಇಬ್ಬರು ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ಮುನ್ನಡಿಯಿಟ್ಟಿರುವ ಅವರು ಈ ಇಬ್ಬರಂತೆ ಅಭಿವೃದ್ಧಿಯ ಮಂತ್ರವನ್ನು ಮೈಗೂಡಿಸಿಕೊಂಡಿದ್ದಾರೆ. ಅವರ ಜೊತೆ ಕನ್ನಡಪ್ರಭ ನಡೆಸಿದ ಸಂದರ್ಶನ ಇಲ್ಲಿದೆ.
*ಒಂದು ವರ್ಷದ ನರೇಂದ್ರ ಮೋದಿ ನೇತೃತ್ವದ ಆಡಳಿತ ನಿಮ್ಮ ಕಣ್ಣಲ್ಲಿ ಹೇಗೆ ಕಾಣುತ್ತದೆ?
- ಮೋದಿಯವರೊಬ್ಬ ಅಪ್ರತಿಮ ನಾಯಕ. ಕೇವಲ ದೇಶಿಯವಾಗಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲಿಯೂ ತಮ್ಮ ವರ್ಚಸ್ಸನ್ನು ಪ್ರಬಲವಾಗಿ ಛಾಪಿಸಿದವರು. ತಮ್ಮ ಹಲವು ಭಿನ್ನ ಕಾರ್ಯಯೋಜನೆ,ಆಲೋಚನಾ ದಾಟಿ, ನೀತಿ, ನಿಲುವುಗಳಿಂದ ಸದಾ ಭಿನ್ನರಾಗಿಯೇ ಕಾಣುತ್ತಾರೆ. ಇಡೀ ದೇಶವನ್ನು ಹೊಸ ಹಾದಿಯಲ್ಲಿ ಕೊಂಡೊಯ್ಯುವ ಸಮರ್ಥ ಮತ್ತು ಯಶಸ್ವಿ ನಾಯಕ. ಪ್ರತಿಯೊಬ್ಬ ಭಾರತೀಯನೂ ಅಭಿವೃದ್ಧಿ ನಾಗಾಲೋಟದಲ್ಲಿ ಜೊತೆಯಾಗಬೇಕು ಎಂಬುದರ ಜೊತೆಗೆ ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಸ್ಥಾನಮಾನ ಸಿಗಬೇಕು ಎಂದು ಆಲೋಚಿಸಿ ಕಾರ್ಯಕ್ರಮ ರೂಪಿಸುತ್ತಿರುವವರು.
*ನರೇಂದ್ರ ಮೋದಿಯವರ ಮೊದಲನೇ ಅವಧಿ ಮತ್ತು ಎರಡನೇ ಅವಧಿಯಲ್ಲಿನ ಸಾಧನೆಗಳು ಹೇಗೆ ಜನರನ್ನು ತಲುಪುತ್ತಿದೆ?
- ಅವರ ಕಾರ್ಯ ಯೋಜನೆಗಳೇ ಹಾಗೆ. ನೇರವಾಗಿ ಜನರನ್ನು ತಲುಪಬೇಕು ಎಂಬುದು. ಸರ್ಕಾರದ ವಿವಿಧ ಯೋಜನೆಗಳ ಲಾಭಗಳು ಕಟ್ಟಕಡೆಯ ವ್ಯಕ್ತಿಗೆ ತಲುಪುವುದೇ ಅಪರೂಪ ಎನ್ನುವಂತಹ ವಾತಾವರಣ ಬದಲಿಸಿ ಜನರ ಖಾತೆಗೆ ನೇರವಾಗಿ ಹಣ ತಲುಪಿಸಿದವರು. ಜನಧನ್ ಎಂಬ ಯೋಜನೆಯ ಮೂಲಕ ಜನ ಮತ್ತು ಸರ್ಕಾರವನ್ನು ಜೊತೆಯಾಗಿಸಿದವರು. ಇಂತಹ ಆಲೋಚನೆಯಿಂದಲೇ ಅಂತ್ಯೋದಯ ನೀತಿ ರೂಪುಗೊಂಡಿದೆ. ಮೇಕ್ ಇನ್ ಇಂಡಿಯಾ, ಸ್ಮಾರ್ಟ್‌ಅಪ್ ಇಂಡಿಯಾದಂತಹ ಯೋಜನೆಗಳ ಮೂಲಕ ದೇಶದ ಅಭಿವೃದ್ಧಿ ತಳಹದಿಯನ್ನು ಗಟ್ಟಿಗೊಳಿಸಿದರು. ಇಲ್ಲಿನ ಯುವಜನತೆಯ ಕ್ರಿಯಾಶೀಲತೆ, ಜ್ಞಾನಕ್ಕೆ ಸರಿಯಾದ ಅವಕಾಶ ಕಲ್ಪಿಸಿಕೊಟ್ಟರು. ಕೋಟ್ಯಂತರ ಉದ್ಯೋಗ ಸೃಷ್ಟಿಸಿದರು. ಜೊತೆಗೆ ಹೊಸ ಹೂಡಿಕೆದಾರರಿಗೆ ವಿಶ್ವಾಸ ಹುಟ್ಟುವಂತೆ ಮಾಡಿ ಇಲ್ಲಿಗೆ ಬರುವಂತೆ ಮಾಡಿದರು.ಕಾರ್ಮಿಕ ಸಮುದಾಯಕ್ಕೆ ಹೊಸ ಚೇತನ ನೀಡಿದರು. ಅವರ ಘನತೆ ಹೆಚ್ಚಿಸುವ ಕೆಲಸ ಮಾಡಿದರು. ಸ್ವಚ್ಚ ಭಾರತ್ ಎಂಬ ಕಲ್ಪನೆಯನ್ನು ನೀಡಿ ಜನರಲ್ಲಿ ಸ್ವಚ್ಚತೆಯ ಅರಿವನ್ನು ಮೂಡಿಸಿದರು. ಗ್ರಾಮಗಳಿಗೆ ವಿದ್ಯುತ್, ಜನರಿಕ್ ಔಷಧ ನೀಡುವ ಕ್ರಾಂತಿಕಾರ ಚಿಂತನೆ, ಗಂಭೀರ ಕಾಯಿಲೆಗಳ ಔಷಧದ ಬೆಲೆ ಕಡಿಮೆ ಮಾಡಿದ್ದು, ಉಜ್ವಲ್ ಯೋಜನೆ, ಪ್ರದಾನ ಮಂತ್ರಿಗಳ ಅವಾಸ್ ಯೋಜನೆ, ಗ್ರಾಮ ಸಡಕ್ ಯೋಜನೆ, ಜನ ಸುರಕ್ಷಾ, ಪ್ರಧಾನ ಮಂತ್ರಿ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆ, ಭೇಟಿ ಬಚಾವ್, ಭೇಟಿ ಪಡಾವ್, ಮಹಿಳೆಯರ ಸಬಲೀಕರಣದ ಹಲವು ಯೋಜನೆಗಳು ತಳಮಟ್ಟದಲ್ಲಿ ಜನರಿಗೆ ನೆರವು ಒದಗಿಸಿದೆ. ಸಂತೃಪ್ತ ಜೀವನಕ್ಕೆ ಅವಕಾಶ ಕಲ್ಪಿಸಿಕೊಟ್ಟಿದೆ.
*ದೇಶದ ಯುವ ಜನತೆಯನ್ನು ಹೇಗೆ ಮುಖ್ಯ ವಾಹಿನಿಗೆ ತರಲಾಗುತ್ತಿದೆ?
ಭಾರತದಲ್ಲಿನ ಯುವ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಅವರನು ಮುಖ್ಯ ವಾಹಿನಿಗೆ ಕರೆದು ತರುವ ಪ್ರಯತ್ನ ನಡೆಸಿದ್ದಾರೆ. ಅವರ ಸಾಮರ್ಥ್ಯ ಮತ್ತು ಕೌಶಲ್ಯವನ್ನು ಬಳಸಿಕೊಂಡು ರಾಷ್ಟ್ರವನ್ನು ಉತ್ತುಂಗಕ್ಕೆ ಮೇಲೆತ್ತುವ ಪ್ರಯತ್ನವಾಗಿದೆ. ಸ್ಟಾರ್ಟ್‌ಅಪ್ ಯೋಜನೆ ರೂಪಿತವಾಗಿದ್ದು ಈ ವರ್ಗವನ್ನು ಗುರಿಯಾಗಿಸಿಕೊಂಡು. ಅವರಲ್ಲಿನ ಕೌಶಲ್ಯವನ್ನು ಹೆಚ್ಚಿಸುವ ಸಂಬಂಧ ಹೊಸ ಯೋಜನೆಯನ್ನೇ ಜಾರಿಗೆ ತಂದರು. ಗುಣಾತ್ಮಕ ಶಿಕ್ಷಣ, ವಿದ್ಯಾರ್ಥಿಗಳಿಗೆ ಮುದ್ರಾ ಯೋಜನೆ, ವೃತ್ತಿಪರ ಕೋರ್ಸ್‌ಗೆ ಹೆಚ್ಚು ಅವಕಾಶ ಹೀಗೆ ಅನೇಕ ಪ್ರಥಮಗಳು ಈ ಸರ್ಕಾರದಿಂದಲೇ ಆದವು.
ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: 'ಉಮೇಶ್ ಕತ್ತಿ ಪಕ್ಷದ ವೇದಿಕೆಯಲ್ಲಿ ಮಾತನಾಡಲಿ'
ರೈತರಿಗಾಗಿ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ, ನೀರಾವರಿ ಯೋಜನೆ, ಬೇವು ಮಿಶ್ರಿತ ಗೊಬ್ಬರ, ಎಪಿಎಂಸಿ ಕಾಂಪೌಂಡ್‌ನಲ್ಲಿ ಇದ್ದ ಮಾರ್ಕೆಟ್ ಅನ್ನು ವಿಸ್ತಾರಗೊಳಿಸಿ ರೈತ ತಾನು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರುವ ವ್ಯವಸ್ಥೆ ಹೀಗೆ ಹಲವು ಯೋಜನೆ ರೂಪಿಸಿದರು.
*ಕ್ಷೇತ್ರಕ್ಕೆ ನೀವು ನೀಡಿದ ಪ್ರಮುಖ ಕೊಡುಗೆಗಳಾವುವು?
-ಭದ್ರಾವತಿಯ ಜೀವನಾಡಿಯಾದ ವಿಐಎಸ್‌ಎಲ್ ಉಳಿಸುವ ಯತ್ನ. ಇದಕ್ಕಾಗಿ ಗಣಿ ಮಂಜೂರು. ದೇಶಕ್ಕಾಗಿ ತ್ಯಾಗ ಮಾಡಿದ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ನೆರವು, ಅಂಬಾರಗೋಡ್ಲಿನಲ್ಲಿ ಸೇತುವೆಗೆ ಚಾಲನೆ. ಕ್ಷೇತ್ರದ ಕಾರ್ಮಿಕರಿಗಾಗಿ ಇಎಸ್‌ಐ ಆಸ್ಪತ್ರೆ ಮಂಜೂರಾಗಿದ್ದು, ಇನ್ನೊಂದು ತಿಂಗಳಲ್ಲಿ ನಿರ್ಮಾಣ ಕೆಲಸ ಆರಂಭವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ದೂರವಾಣಿ ವ್ಯವಸ್ಥೆಯನ್ನು ಸದೃಢಗೊಳಿಸಲು ಈಗಾಗಲೇ 60 ಟವರ್ ಸ್ಥಾಪನೆಯಾಗಿದ್ದು, ಇನ್ನೂ 60 ಟವರ್ ಸ್ಥಾಪನೆಯಾಗಲಿದೆ.
ರೈಲ್ವೆ ಯೋಜನೆಗೆ ಆದ್ಯತೆ ನೀಡಲಾಗಿದೆ. ಅರಸಾಳು ರೈಲ್ವೆಸ್ಟೇಷನ್, ಕುಂಸಿ ಸ್ಟೇಷನ್ 4 ಕೋಟಿ ರು. ವೆಚ್ಚದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಿದ್ದು, ಜನ ಶತಾಬ್ದಿ ರೈಲು ಆರಂಭಗೊಂಡಿದೆ. ಶಿವಮೊಗ್ಗದಿಂದ ತಿರುಪತಿ -ಚೆನ್ನೈಗೆ ನೇರ ರೈಲು ಸಂಪರ್ಕ ಕಲ್ಪಿಸಿದ್ದು, ಶಿವಮೊಗ್ಗ-ಶಿಕಾರಿಪುರ-ರಾಣಿಬೆನ್ನೂರು ನಡುವೆ ರೈಲ್ವೆ ಮಾರ್ಗ ಆರಂಭವಾಗಲಿದೆ. ಈ ಮೂಲಕ ಮಲೆನಾಡು ಮತ್ತು ಉತ್ತರ ಕರ್ನಾಟಕದ ನೇರ ಸಂಪರ್ಕ ಸಾಧ್ಯವಾಗಲಿದೆ. ಕೋಟೆ ಗಂಗೂರಿನಲ್ಲಿ ರೈಲ್ವೆ ಟರ್ಮಿನಲ್ ಸ್ಥಾಪನೆಗೆ 3 ಕೋಟಿ ರು.ಬಜೆಟ್ ಇರಿಸಲಾಗಿದೆ. ಮೊದಲು ಇಲ್ಲಿಂದ ಸುಮಾರು 9-10 ರೈಲು ಸಂಚರಿಸುತ್ತಿತ್ತು. ಈಗ ಇದು 30 ಕ್ಕೆ ಏರಿದೆ.
ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ದೇಶದಲ್ಲಿ 3 ಸಫಾರಿಗಳಿಗೆ ಮಾತ್ರ ವಿಸ್ತರಣಾ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದ್ದು,ಇದರಲ್ಲಿ ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹಧಾಮವೂ ಸೇರಿದೆ. ಭದ್ರಾವತಿಯಲ್ಲಿ ಡಿಎಆರ್ ತರಬೇತಿ ಕೇಂದ್ರ ಸ್ಥಾಪನೆ, ಕೊಲ್ಲೂರು-ಕೊಡಚಾದ್ರಿ ನಡುವೆ 11 ಕಿ.ಮೀ. ದೂರದ ಕೇಬಲ್ ಕಾರ್ ಸ್ಥಾಪನೆ, ಜೋಗದಲ್ಲಿ ಜಿಪ್‌ಲೈನ್ ಯೋಜನೆಗೆ ಅಡಿಗಲ್ಲು ಹಾಕಲಾಗಿದೆ. ಮಲೆನಾಡಿನ ಸಮಸ್ಯೆಯಾದ ಮಂಗಗಳ ಸಮಸ್ಯೆ ಪರಿಹಾರಕ್ಕೆ ಮಂಕಿ ಪಾರ್ಕ್ ಸ್ಥಾಪನೆಗೆ ಯತ್ನ, ಹೊಸಹಳ್ಳಿ ಬಳಿ ಲಿಪ್ಟ್ ಇರ್ರಿಗೇಶನ್ ಯೋಜನೆ, ಉಡುಗಣಿ ನೀರಾವರಿ ಯೋಜನೆ, ಸೊರಬದಲ್ಲಿನ ಮೂಗೂರು, ಮೂಡಿ ಯೋಜನೆ, ಬೈಂದೂರಿನಲ್ಲಿ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆ, ಕ್ಷೇತ್ರದ ಬಹುತೇಕ ಶಾಲಾ ಕಾಲೇಜುಗಳಲ್ಲಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆ ಸೇರಿದಂತೆ ಹಲವಾರು ಕಾಮಗಾರಿ ಆರಂಭವಾಗಿದೆ. ಗಾಜನೂರು ಬಳಿ ನೂರು ಎಕರೆ ಜಾಗದಲ್ಲಿ ಬಯೋಡೈವರ್ಸಿಟಿ ಪಾರ್ಕ್ ಮಾಡುವ ಪ್ರಯತ್ನ ನಡೆದಿದೆ.
*ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿಮ್ಮ ವೈಯುಕ್ತಿಕ ಸಂಪರ್ಕ ಹೇಗಿದೆ?
ಬೈ ಎಲೆಕ್ಷನ್ ಚುನಾವಣೆ ಬಳಿಕ ಪ್ರಮಾಣ ವಚನ ತೆಗೆದುಕೊಳ್ಳುವಾಗ ಅವರ ಜೊತೆ ಪ್ರತ್ಯೇಕವಾಗಿ ಐದು ನಿಮಿಷ ಮಾತನಾಡುವ ಸಂದರ್ಭ ಸಿಕ್ಕಿತ್ತು. ಆಗ ಹೆಗಲ ಮೇಲೆ ಕೈ ಹಾಕಿ ವಿಶ್ವಾಸದಿಂದ ಮಾತನಾಡಿದರು. ಯುವಕರು ಮುಂದೆ ಬರಬೇಕು, ಎಲ್ಲ ರೀತಿಯ ಸಹಕಾರ ಇರುತ್ತದೆ ಎಂದು ವಿಶ್ವಾಸದಿಂದ ಮಾತನಾಡಿದ್ದನ್ನು ಮರೆಯಲಾಗದು.
*ನರೇಂದ್ರ ಮೋದಿಯವರನ್ನು ನೀವು ಮೊದಲು ಭೇಟಿಯಾಗಿದ್ದು..?
-ಬೆಂಗಳೂರಿನಲ್ಲಿ 1994ರಲ್ಲಿ ನಡೆದ ನನ್ನ ಮದುವೆಯಲ್ಲಿ. ಆಗ ಸಂಘಟನೆಯ ಜವಾಬ್ದಾರಿ ಹೊತ್ತಿದ್ದ ಅವರು ನಮ್ಮನ್ನು ಆಶೀರ್ವದಿಸಿದ್ದರು. ಬಳಿಕ ನನ್ನ ಕಸಿನ್ ಮದುವೆಗೆ ಬಂದಾಗಲೂ ಭೇಟಿಯಾದೆ. ಆ ಬಳಿಕ ಸಂಸದನಾಗಿ ಭೇಟಿ.
*ಕೊರೋನಾ ಸಂದರ್ಭವನ್ನು ಹೇಗೆ ನಿಭಾಯಿಸಿದ್ದೀರಿ?
-ಲಾಕ್‌ಡೌನ್ ಸಂದರ್ಭದಲ್ಲಿ ಸುಮಾರು 60 ಸಾವಿರ ಜನರಿಗೆ ಉಚಿತ ಅಕ್ಕಿ ನೀಡಿದ್ದೇವೆ. ಹಸಿವು ನೀಗಿಸುವ ಪ್ರಯತ್ನ ಮಾಡಲಾಗಿದೆ. ಎನ್‌ಜಿಓ ಸಂಸ್ಥೆಗಳ ಮೂಲಕ ಕೆಲಸ ಮಾಡಲಾಯಿತು. ಬಿಜೆಪಿ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ದುಡಿದರು. ಪ್ರತಿ ಕಾರ್ಯಕರ್ತರು ಪಿಎಂ ಕೇರ್ಸ್ ತಲಾ 100 ರು.ನಂತೆ ನೀಡಿದ್ದು, ಜಿಲ್ಲೆಯಿಂದ 2.5 ಕೋಟ ರು. ಸಂಗ್ರಹಿಸಲಾಗಿದೆ.
*ನಿಮ್ಮ ಕನಸಿನ ಇಂಡಿಯಾ ಹೇಗಿರುತ್ತದೆ?
-ಪ್ರಪಂಚದ ದೊಡ್ಡ ಜನಸಂಖ್ಯೆಯ ದೇಶಗಳಲ್ಲಿ ಒಂದಾದ ಈ ಭಾರತ ಸ್ವಾವಲಂಬನೆಯಿಂದ ಹೆಜ್ಜೆ ಇಡಬೇಕು. ಬೇರೆ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗಬೇಕು. ಆ ದಿಕ್ಕಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಸ್ವಾವಲಂಬಿ ಭಾರತ ರೂಪುಗೊಳ್ಳಬೇಕು.
*ಕೊರೋನಾ ಬಳಿಕ ನಿಮ್ಮ ಚಿಂತನೆಯೇನು?
-ಕೊರೋನಾ ನಂತರ ನಮ್ಮ ಕ್ಷೇತ್ರದಲ್ಲಿ 1 ಲಕ್ಷಕ್ಕೂ ಹೆಚ್ಚು ಮಂದಿ ನಗರ ಪ್ರದೇಶದಿಂದ ವಾಪಸ್ಸು ಬಂದಿದ್ದಾರೆ. ಅವರಲ್ಲಿ ಆತಂಕವಿದೆ. ಅವರಿಗೆ ಇಲ್ಲಿಯೇ ಉದ್ಯೋಗ ಸೃಷ್ಟಿಸುವ ಕುರಿತು ಚಿಂತನೆ ಆರಂಭಿಸಿದ್ದೇನೆ. ಈಗಾಗಲೇ ಐದಾರು ಸಾಫ್ಟ್‌ವೇರ್ ಕಂಪನಿಗಳ ಜೊತೆ ಮಾತನಾಡಿದ್ದು,ಇಲ್ಲಿಯೇ ತಮ್ಮ ಶಾಖೆ ಆರಂಭಿಸುವಂತೆ ಮನವೊಲಿಸುವ ಪ್ರಯತ್ನ ನಡೆದಿದೆ. ಜೊತೆಗೆ ಕೊರೋನಾದಿಂದಾಗಿ ಜನರ ಆಲೋಚನಾ ಕ್ರಮ ಬದಲಾಗಿದೆ. ಹೈಜೆನಿಕ್, ಸ್ವಚ್ಚತೆ, ಸಾಮಾಜಿಕ ಅಂತರ, ಕೆಮ್ಮು ಇದ್ದಾಗ ಮಾಸ್ಕ್ ಧರಿಸಬೇಕು, ಪರಿಸರ ಮಾಲಿನ್ಯ ತಡೆಯಬೇಕು, ಕುಟುಂಬದ ಸಂಬಂಧ ಎಷ್ಟುಮುಖ್ಯ ಎಂಬೆಲ್ಲ ಚಿಂತನೆಗಳು ಹುಟ್ಟಲಾರಂಭಿಸಿದೆ. ಕೇಂದ್ರ ಸರ್ಕಾರ ಕೂಡ ಕೊರೋನಾವನ್ನು ಧನಾತ್ಮಕವಾಗಿ ಹೇಗೆ ಬಳಸಿಕೊಳ್ಳಬೇಕು ಎಂಬ ಚಿಂತನೆಯಲ್ಲಿದೆ. ಈಗಾಗಲೇ ಹಲವಾರು ಕಂಪನಿಗಳನ್ನು ಇಲ್ಲಿಗೆ ಕರೆ ತರುವ ಯತ್ನ ನಡೆದಿದೆ.