ಭಾರತ - ಅಮೆರಿಕ ನಡುವೆ 18ನೇ ಆವೃತ್ತಿಯ ಜಂಟಿ ಸಮರಾಭ್ಯಾಸ ನಡೆಯಲಿದೆ. ಅಕ್ಟೋಬರ್ 14 ರಿಂದ 31 ರ ನಡುವೆ ಉತ್ತರಾಖಂಡದ ಔಲಿಯಲ್ಲಿ ಈ ಸಮರಾಭ್ಯಾಸ ನಡೆಯಲಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗಷ್ಟೇ ಅಮೆರಿಕದ ಸ್ಪೀಕರ್ ತೈವಾನ್‌ಗೆ ಭೇಟಿ ನೀಡಿದ್ದಕ್ಕೆ ಚೀನಾ ಅಮೆರಿಕ ವಿರುದ್ಧ ಕೆಂಡ ಕಾರುತ್ತಿದೆ. ಆದರೆ, ಚೀನಾಗೆ ತಿರುಗೇಟು ನೀಡಲು ಭಾರತ ಹಾಗೂ ಅಮೆರಿಕ ಮತ್ತೆ ಜಂಟಿ ಸಮರಾಭ್ಯಾಸ (Joint Military Exercise) ನಡೆಸಲು ಮುಂದಾಗಿದೆ. ಉತ್ತರಾಖಂಡದ (Uttarakhand) ಔಲಿಯಲ್ಲಿ (Auli) ಎರಡು ವಾರಗಳ ಕಾಲ ಭಾರತ ಹಾಗೂ ಅಮೆರಿಕ ಅಕ್ಟೋಬರ್ ತಿಂಗಳಲ್ಲಿ ಜಂಟಿ ಸಮರಾಭ್ಯಾಸ ನಡೆಸಲಿದೆ ಎಂದು ತಿಳಿದುಬಂದಿದೆ.
ಇತ್ತೀಚಿನ ಪ್ರಾದೇಶಿಕ ಭದ್ರತಾ ಸನ್ನಿವೇಶವನ್ನು ಗಮನದಲ್ಲಿಟ್ಟುಕೊಂಡು ವಿಶ್ವದ ದೊಡ್ಡಣ್ಣ ರಾಷ್ಟ್ರ ಅಮೆರಿಕ ಹಾಗೂ ಮಿತ್ರ ರಾಷ್ಟ್ರ ಭಾರತ ಜಂಟಿ ಸಮರಾಭ್ಯಸ ನಡೆಸಲಿದೆ. ಅಕ್ಟೋಬರ್ 14 ರಿಂದ 31 ರವರೆಗೆ 18ನೇ ಆವೃತ್ತಿಯ ಯುದ್ಧಾಭ್ಯಾಸ (Yudh Abhyas) ನಡೆಯಲಿದೆ ಎಂದು ರಕ್ಷಣಾ ಹಾಗೂ ಮಿಲಿಟರಿ ಸ್ಥಾಪನೆಯ ಮೂಲಗಳು ಮಾಹಿತಿ ನೀಡಿದೆ. 18 ದಿನಗಳ ಕಾಲ ನಡೆಯಲಿರುವ ಈ ಜಂಟಿ ಸಮರಾಭ್ಯಾಸದಲ್ಲಿ ಹಲವು ಸಂಕೀರ್ಣ ಡ್ರಿಲ್‌ಗಳು ನಡೆಯಲಿವೆ ಎಂದು ಅವರು ಹೇಳಿದ್ದಾರೆ. ಅಮೆರಿಕದ ಅಲಾಸ್ಕಾದಲ್ಲಿ (Alaska) ಅಕ್ಟೋಬರ್ 2021 ರಲ್ಲಿ ಕಳೆದ ಆವೃತ್ತಿಯ ಸಮರಾಭ್ಯಾಸ ನಡೆದಿತ್ತು.
ಬೆಳಗಾವಿಯಲ್ಲಿ ಇಂಡೋ-ಜಪಾನ್ ಜಂಟಿ ಸಮರಾಭ್ಯಾಸ: ಮೈನವಿರೇಳಿಸುವ ಫೋಟೋಸ್
ಭಾರತ ಮತ್ತು ಯುಎಸ್ ಸೇನೆಗಳ ನಡುವೆ ತಿಳುವಳಿಕೆ, ಸಹಕಾರ ಹಾಗೂ ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಈ ಸಮರಾಭ್ಯಾಸ ಹೊಂದಿದೆ ಎಂದು ಮೂಲಗಳು ತಿಳಿಸಿವೆ. ಅಲ್ಲದೆ, ಪೂರ್ವ ಲಡಾಖ್‌ನಲ್ಲಿ (Eastern Ladakh) ಭಾರತ ಹಾಗೂ ನೆರೆಯ ರಾಷ್ಟ್ರ ಚೀನಾ ನಡುವಿನ ಗಡಿ ವಿವಾದ ನಡೆಯುತ್ತಿರುವಾಗಲೇ ಈ ಜಂಟಿ ಯುದ್ಧಾಭ್ಯಾಸ ನಡೆಯಲಿರುವುದು ಗಮನಾರ್ಹ. ಕಳೆದ ಕೆಲ ವರ್ಷಗಳಿಂದ ಭಾರತ ಹಾಗೂ ಅಮೆರಿಕದ ರಕ್ಷಣಾ ಪಡೆಗಳ ನಡುವಿನ ಸಂಬಂಧದಲ್ಲಿ ತೀವ್ರ ಸುಧಾರಣೆಯಾಗಿದೆ. ಜೂನ್ 2016 ರಲ್ಲಿ ಅಮೆರಿಕ ಭಾರತವನ್ನು ಪ್ರಮುಖ ರಕ್ಷಣಾ ಪಾಲುದಾರ ಎಂಬುದಾಗಿ ಘೋಷಿಸಿತ್ತು.
ಕಳೆದ ಕೆಲವು ವರ್ಷಗಳಿಂದ ಉಭಯ ದೇಶಗಳು ಪ್ರಮುಖ ರಕ್ಷಣಾ ಮತ್ತು ಭದ್ರತಾ ಒಪ್ಪಂದಗಳಿಗೆ ಸಹಿ ಹಾಕಿವೆ. 2016 ರಲ್ಲಿ ಲಾಜಿಸ್ಟಿಕ್ಸ್ ಎಕ್ಸ್‌ಚೇಂಜ್ ಮೆಮೊರಾಂಡಮ್ ಆಫ್ ಅಗ್ರೀಮೆಂಟ್ (Logistics Exchange Memorandum of Agreement) (LEMOA) ಸೇರಿದಂತೆ, ತಮ್ಮ ಮಿಲಿಟರಿಗಳು ಪರಸ್ಪರರ ನೆಲೆಗಳನ್ನು ದುರಸ್ತಿ ಮತ್ತು ಸರಬರಾಜು ಮರುಪೂರಣಕ್ಕಾಗಿ ಬಳಸಲು ಅನುಮತಿಸುತ್ತದೆ ಮತ್ತು ಆಳವಾದದ್ ಸಹಕಾರ ಒದಗಿಸುತ್ತದೆ. ಹಾಗೂ, ಭಾರತ - ಅಮೆರಿಕ 2018 ರಲ್ಲಿ COMCASA (ಸಂವಹನ ಹೊಂದಾಣಿಕೆ ಮತ್ತು ಭದ್ರತಾ ಒಪ್ಪಂದ) ಗೆ ಸಹಿ ಹಾಕಿದವು, ಇದು ಎರಡು ದೇಶಗಳ ಮಿಲಿಟರಿಗಳ ನಡುವೆ ಪರಸ್ಪರ ಕಾರ್ಯಸಾಧ್ಯತೆಯನ್ನು ಒದಗಿಸುತ್ತದೆ ಮತ್ತು US ನಿಂದ ಭಾರತಕ್ಕೆ ಉನ್ನತ-ಮಟ್ಟದ ತಂತ್ರಜ್ಞಾನವನ್ನು ಮಾರಾಟ ಮಾಡಲು ಈ ಮೂಲಕ ಸುಲಭವಾಗುತ್ತದೆ.
ಇಂಡೋ ಯುಎಸ್ ಜಂಟಿ ಯುದ್ಧ ಅಭ್ಯಾಸ; ಅಮೆರಿಕ ನೆಲದಲ್ಲಿ 350 ಭಾರತೀಯ ಯೋಧರಿಗೆ ತರಬೇತಿ!
ಈ ಮಧ್ಯೆ, ಅಕ್ಟೋಬರ್ 2020 ರಲ್ಲಿ, ಭಾರತ ಮತ್ತು ಯುಎಸ್ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಹೆಚ್ಚಿಸಲು BECA (Basic Exchange and Cooperation Agreement) (ಮೂಲ ವಿನಿಮಯ ಮತ್ತು ಸಹಕಾರ ಒಪ್ಪಂದ) ಕ್ಕೆ ಸಹಿ ಹಾಕಿದ್ದವು. ಉಭಯ ದೇಶಗಳ ನಡುವೆ ಉನ್ನತ ಮಟ್ಟದ ಮಿಲಿಟರಿ ತಂತ್ರಜ್ಞಾನ, ಲಾಜಿಸ್ಟಿಕ್ಸ್ ಮತ್ತು ಜಿಯೋಸ್ಪೇಷಿಯಲ್ ನಕ್ಷೆಗಳನ್ನು ಹಂಚಿಕೊಳ್ಳಲು ಈ ಒಪ್ಪಂದ ಅನುಮತಿ ನೀಡುತ್ತದೆ.
ಇನ್ನೊಂದೆಡೆ, ಅಮೆರಿಕದ ಸ್ಪೀಕರ್ ತೈವಾನ್‌ಗೆ ಭೇಟಿ ನೀಡುತ್ತಿದ್ದಂತೆ ಚೀನಾ ಸಹ ಅಮೆರಿಕದ ವಿರುದ್ಧ ಕೆಂಡ ಕಾರುತ್ತಿದ್ದು, ತೈವಾನ್ ವಿರುದ್ಧವೂ ಸಮರಾಭ್ಯಾಸ ನಡೆಸಲು ಮುಂದಾಗಿದ್ದು, ಇದರಿಂದ ಚೀನಾ - ತೈವಾನ್ ವಿರುದ್ಧ ಯುದ್ಧ ಸಾರುತ್ತದಾ ಎಂಬ ಆತಂಕ ಕಾಡುತ್ತಿದೆ.