* ಉತ್ತರಾಖಂಡ, ಗೋವಾ, ಉತ್ತರಪ್ರದೇಶದ 2ನೇ ಹಂತದ ಚುನಾವಣೆ ಕಣ ಹೇಗಿದೆ?
* ಬಿರುಸಿನ ಮತದಾನಕ್ಕೆ ಸಿದ್ಧತೆ
* ಕಾಂಗ್ರೆಸ್‌ನ ಶಿಥಿಲತೆ. ಎರಡೂ ರಾಜ್ಯಗಳಲ್ಲಿನ ಕಾಂಗ್ರೆಸ್ ದಿಗ್ಗಜರನ್ನು ಆಪೋಶನ
ಪ್ರಶಾಂತ್ ನಾತು, ಇಂಡಿಯಾ ಗೇಟ್
ನವದೆಹಲಿ(ಫೆ.14): ಹಿಮಾಚ್ಛಾದಿತ ಪರ್ವತ ಶ್ರೇಣಿಗಳಿರುವ ಉತ್ತರಾಖಂಡ ಮತ್ತು ಸರಣಿ ಸಮುದ್ರ ತೀರಗಳನ್ನು ಹೊಂದಿರುವ ಗೋವಾದಲ್ಲಿ ಇವತ್ತು ಚುನಾವಣೆ ನಡೆಯಲಿದೆ. ಈ ಎರಡು ರಾಜ್ಯಗಳ ಸಮಸ್ಯೆ ಎಂದರೆ ಕಾಂಗ್ರೆಸ್‌ನ ಶಿಥಿಲತೆ. ಎರಡೂ ರಾಜ್ಯಗಳಲ್ಲಿನ ಕಾಂಗ್ರೆಸ್ ದಿಗ್ಗಜರನ್ನು ಆಪೋಶನ ತೆಗೆದುಕೊಂಡಿರುವ ಬಿಜೆಪಿಯ 5 ವರ್ಷದ ಸರ್ಕಾರಗಳ ವಿರುದ್ಧ ಸಹಜವಾಗಿ ಆಡಳಿತ ವಿರೋಧಿ ಅಲೆಯಿದೆ, ಆಕ್ರೋಶವಿದೆ. ಆದರೆ ಅದರ ಪೂರ್ತಿ ಲಾಭವನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಸಂಘಟನೆ ಮತ್ತು ನಾಯಕತ್ವ ಕಾಣುತ್ತಿಲ್ಲ. ಉತ್ತರಾಖಂಡ ಕಾಂಗ್ರೆಸ್‌ನಲ್ಲಿ ವಿಪರೀತ ಅನ್ನಿಸುವಷ್ಟುಕಚ್ಚಾಟ ಇದ್ದರೆ, ಗೋವಾದಲ್ಲಿ 80 ಪ್ರತಿಶತ ಕಾಂಗ್ರೆಸ್ ನಾಯಕರು ಬಿಜೆಪಿ ಸೇರಿಕೊಂಡು ಟಿಕೆಟ್ ಪಡೆದಿದ್ದಾರೆ. ಉತ್ತರಾಖಂಡದಲ್ಲಿ ಕಾಂಗ್ರೆಸ್‌ನ ಹರೀಶ್ ರಾವತ್‌ರಿಗೆ ಕೈಕೊಟ್ಟದಿಲ್ಲಿ ನಾಯಕರು ಹರಕ ಸಿಂಗ್ ರಾವತ್ ಯಶಪಾಲ… ಆರ್ಯರನ್ನು ಕರೆದುಕೊಂಡು ಬಂದಿರುವುದು ತಿಕ್ಕಾಟ ಹೆಚ್ಚಿಸಿದೆ. ಇನ್ನು ಗೋವಾದಲ್ಲಿ ಪೂರ್ತಿ ಕಾಂಗ್ರೆಸ್ಸು ಬಿಜೆಪಿಯನ್ನು ಆವರಿಸಿಕೊಂಡ ಮೇಲೆ ಮೂಲ ಬಿಜೆಪಿಯವರು ಬಂಡಾಯ ಎದ್ದಿದ್ದಾರೆ. ಉತ್ತರಾಖಂಡದಲ್ಲಿ 5 ವರ್ಷದ ಹಿಂದೆ ವಿಜಯ ಬಹುಗುಣಾ ಸತ್ಪಾಲ… ಮಹಾರಾಜ… ಸೇರಿದಂತೆ 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ ಆಗಿದ್ದರು. ಗೋವಾದಲ್ಲಿ ಕಳೆದ 5 ವರ್ಷಗಳಲ್ಲಿ 17 ಕಾಂಗ್ರೆಸ್ ಶಾಸಕರಲ್ಲಿ 15 ಜನ ಈಗ ಬಿಜೆಪಿಯಲ್ಲಿದ್ದಾರೆ. ಸಣ್ಣ ರಾಜ್ಯಗಳಲ್ಲಿ ಹೇಗಿರುತ್ತದೆ ಎಂದರೆ ದಿಲ್ಲಿಯಲ್ಲಿ ಮಾಲಿಕರು ಬದಲು ಆದಾಗ ಇಲ್ಲಿನ ಡ್ರಾಮಾ ಕಂಪನಿಗಳ ಸುಣ್ಣ ಬಣ್ಣ ಹೆಸರು ಬದಲಾಗಿ ಪಾತ್ರಧಾರಿಗಳು ಅವರೇ ಇರುತ್ತಾರೆ. ಅದೇ ಪಾತ್ರಧಾರಿಗಳು ಹೊಸ ದಿಲ್ಲಿ ಮಾಲಿಕನನ್ನು ಹೊಗಳುತ್ತಾರೆ. ಹಳೆ ಮಾಲಿಕನನ್ನು ಬಯ್ಯುತ್ತಾರೆ. ಈ ಸಣ್ಣ ರಾಜ್ಯಗಳ ಪೊಲಿಟಿಕ್ಸ್ ರಾತ್ರೋರಾತ್ರಿ ಬದಲಾಗಿ ಹೋಗುತ್ತದೆ.
ಉತ್ತರಾಖಂಡ ಪೊಲಿಟಿಕ್ಸ್
2002ರಲ್ಲಿ ರಚಿತವಾದ ಉತ್ತರಾಖಂಡದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಇದೆ. ಇಲ್ಲಿ ಒಟ್ಟು 75ರಿಂದ 80 ಪ್ರತಿಶತ ಮತಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಡೆದರೆ ಉಳಿದ ಸಣ್ಣ ಪಕ್ಷಗಳು ಪಡೆಯುವುದು ಶೇ.20 ಮತಗಳು. ಆ ಉಳಿದವರ ಮತಗಳು ಕಾಂಗ್ರೆಸ್‌ನಿಂದ ಬರುತ್ತವೋ ಅಥವಾ ಬಿಜೆಪಿಯಿಂದಲೋ ಎನ್ನುವುದು ಅಲ್ಲಿನ ಫಲಿತಾಂಶವನ್ನು ನಿರ್ಧರಿಸುತ್ತದೆ. 2017ರಲ್ಲಿ ಬಹುಪಾಲು ಇತರ ಪಕ್ಷಗಳ ಮತ ಪಡೆದ ಬಿಜೆಪಿ 70ರಲ್ಲಿ 56 ಸೀಟು ಗೆದ್ದಿತ್ತು. ಇಲ್ಲಿ ಇತರ ಪಕ್ಷಗಳು ಅಂದರೆ ಮುಖ್ಯವಾಗಿ ಮಾಯಾವತಿಯ ಬಹುಜನ ಸಮಾಜ ಪಕ್ಷ. 2012ರಲ್ಲಿ 12 ಪ್ರತಿಶತ ಮತ ಪಡೆದಿದ್ದ ಮಾಯಾವತಿ 2017ರಲ್ಲಿ ಕೇವಲ 7 ಪ್ರತಿಶತ ಮತ ಪಡೆದಿದ್ದರು. ಮಾಯಾವತಿಯ ಕೆಲ ಶೇಕಡಾವಾರು ದಲಿತ ಮತಗಳು ಬಿಜೆಪಿಗೆ ಹೋಗಿದ್ದವು. ಹೀಗಾಗಿ ಪ್ರತಿಬಾರಿ ಇಲ್ಲಿ ಶೇ.35ರಿಂದ 38 ಮತ ಪಡೆಯುತ್ತಿದ್ದ ಬಿಜೆಪಿ ಕಳೆದ ಬಾರಿ 46 ಪ್ರತಿಶತ ಮತ ಪಡೆದಿತ್ತು. ಈ ಬಾರಿ ಬಿಜೆಪಿಯಲ್ಲೂ 3 ಮುಖ್ಯಮಂತ್ರಿ ಬದಲಾವಣೆ ನಂತರ ಒಳಜಗಳ ನಿಶ್ಚಿತವಾಗಿ ಇದೆ. ಕಾಂಗ್ರೆಸ್‌ನಲ್ಲೂ ಇದೆ. ಹೀಗಾಗಿ ಸ್ಪರ್ಧೆಯಲ್ಲಿ ಇಬ್ಬರು ಹತ್ತಿರ ಹತ್ತಿರ ಓಡುತ್ತಿದ್ದಾರೆ. ಯಾರೇ ಗೆದ್ದರೂ ಅತ್ಯಂತ ಕಡಿಮೆ ಅಂತರ ಇರಲಿದೆಯಂತೆ.
ದೇವಭೂಮಿಯಲ್ಲಿ ಜಾತಿಗಳು
ಜಾತಿರಹಿತ ಸಮಾಜ ಆದರ್ಶ ಅನ್ನುವುದು ಹೌದಾದರೂ ಶೇ.70ರಷ್ಟುಸಾಮಾನ್ಯ ಭಾರತೀಯ ಮತದಾರರು ವೋಟಿನ ಪ್ರಶ್ನೆ ಬಂದಾಗ ಜಾತಿ, ಉಪಜಾತಿ ಭಾಷೆಗಳ ಅಸ್ಮಿತೆ ಕಾರಣದಿಂದ ವೋಟು ಹಾಕುತ್ತಾರೆ ಎನ್ನುವುದು ವಾಸ್ತವ. ದೇವರು ವಾಸಿಸುವ ಭೂಮಿ ಎಂದು ಕರೆಯುವ ಉತ್ತರಾಖಂಡ ಪ್ರಮುಖವಾಗಿ ತಥಾಕಥಿತ ಮೇಲು ಜಾತಿಗಳ ಪ್ರಾಬಲ್ಯ ಇರುವ ರಾಜ್ಯ. ಇಲ್ಲಿ 35 ಪ್ರತಿಶತ ಠಾಕೂರರು ಇದ್ದರೆ 25 ಪ್ರತಿಶತ ಬ್ರಾಹ್ಮಣರು ಇದ್ದಾರೆ. ಯೋಗಿ ಆದಿತ್ಯನಾಥ, ಅಜಿತ್ ದೋವಲ…, ಜನರಲ… ಬಿಪಿನ್ ರಾವತ್, ಬಿ.ಸಿ.ಖಂಡೂರಿ, ಹರೀಶ ರಾವತ್ ಇವರೆಲ್ಲರೂ ಇಲ್ಲಿನ ಯುದ್ಧೋತ್ಸಾಹಿ ಕ್ಷತ್ರಿಯರು. ನಾರಾಯಣ ದತ್ತ ತಿವಾರಿ, ಬಹುಗುಣ ಇವರೆಲ್ಲರೂ ಇಲ್ಲಿನ ಪ್ರಭಾವಿ ಬ್ರಾಹ್ಮಣರು. ಕಾಂಗ್ರೆಸ್ ಇಲ್ಲಿ ನಾರಾಯಣ ದತ್ತ ತಿವಾರಿ ಮತ್ತು ಹರೀಶ ರಾವತ್‌ರ ಸಮೀಕರಣ ಬಳಸಿ ಚುನಾವಣೆ ಗೆಲ್ಲುತ್ತಿತ್ತು. ಯಾವಾಗ ಇಬ್ಬರ ನಡುವೆ ತಿಕ್ಕಾಟ ಆಯಿತೋ ಇಲ್ಲಿ ಬಿಜೆಪಿ ಗೆದ್ದಿತ್ತು. ಮರಳಿ ಯಾವಾಗ ಹರೀಶ ರಾವತ್ ಮುಖ್ಯಮಂತ್ರಿ ಆದರೋ ಇಲ್ಲಿನ ಬ್ರಾಹ್ಮಣ ಶಾಸಕ ವಿಜಯ ಬಹುಗುಣ ಮತ್ತು ದಲಿತ ಶಾಸಕ ಯಶ ಆರ್ಯ ಬಂಡಾಯ ಎದ್ದು ಬಿಜೆಪಿಗೆ ಹೋದರು. ಕಾಂಗ್ರೆಸ್ ಶಿಥಿಲವಾಯಿತು. ಇಲ್ಲಿನ ಸರಳ ಪೊಲಿಟಿಕಲ… ಫಾರ್ಮುಲಾ ಅಂದರೆ ಬ್ರಾಹ್ಮಣರು ಮತ್ತು ಠಾಕೂರರು ಒಟ್ಟಾಗಿ ಬಂದರೆ ಗೆಲುವು ಸುಲಭ. ಸಮಸ್ಯೆ ಆದರೆ ದಲಿತ ಮತಗಳು ನಿರ್ಣಾಯಕವಾಗುತ್ತವೆ. ಇಲ್ಲಿನ 70 ಸೀಟುಗಳಲ್ಲಿ ಹರಿದ್ವಾರ, ಡೆಹ್ರಾಡೂನ್, ಉಧಾಮಸಿಂಗ ನಗರದಲ್ಲೇ 30 ಸೀಟು ಬರುತ್ತವೆ. ಅಧಿಕಾರಕ್ಕೆ ಬರುವ ಪಕ್ಷ 30ರಲ್ಲಿ ಕನಿಷ್ಠ 20 ಗೆಲ್ಲಲೇಬೇಕು.
ಪರ್ರಿಕರ್ ಇಲ್ಲದ ಗೋವಾ
ಗೋವಾದ 40 ಕ್ಷೇತ್ರಗಳಲ್ಲಿ ಕ್ಷೇತ್ರವಾರು ಮತದಾರರು 22ರಿಂದ 26 ಸಾವಿರ ಅಷ್ಟೆ. ಹೀಗಾಗಿ ಶಾಸಕರು ಪ್ರತಿಯೊಬ್ಬ ಮತದಾರನ ಮನೆಗೆ ಚಿರಪರಿಚಿತರು. ಪಕ್ಷದ ಜೊತೆಗೆ ವ್ಯಕ್ತಿಯ ಸಂಪರ್ಕ, ಸಾಮರ್ಥ್ಯ ಇಲ್ಲಿ ಬಹಳವೇ ಮುಖ್ಯ. ಮನೋಹರ ಪರ್ರಿಕರ್ ಬರುವ ಮುಂಚೆ ಗೋವಾ ರಾಜಕಾರಣ ನಿಂತ ನೀರಾಗಿತ್ತು. ದಿಲ್ಲಿ ಸನ್ನೆ ಮಾಡಿದರೆ ಸಾಕು ಇಲ್ಲಿ ಮುಖ್ಯಮಂತ್ರಿಗಳು ಬದಲಾಗುತ್ತಿದ್ದರು. ಆಯಾರಾಮ…ಗಳು ಗಯಾರಾಮ…ಗಳು ತುಂಬಿಹೋಗಿದ್ದರು. ಮೈನಿಂಗ್, ಡ್ರಗ್ಸ್, ಭೂ ಮಾಫಿಯಾದ ಮಾಲಿಕರೆಲ್ಲ ಖಾದಿ ಧರಿಸಿದ್ದರು. ಆದರೆ ಐಐಟಿ ಹಿನ್ನೆಲೆಯಿಂದ ಬಂದಿದ್ದ ಮನೋಹರ ಪರ್ರಿಕರ್ ಕಾರಣದಿಂದ ಗೋವಾ ಪೊಲಿಟಿಕ್ಸ್ ಇಮೇಜ್ ಶೇ.50ರಷ್ಟುಬದಲಾಗಿತ್ತು. ಆದರೆ ಈಗ ಗೋವಾ ಮರಳಿ ಹಳೆ ಅಸ್ಥಿರತೆಯ, ದುಡ್ಡಿನ ಮಾಫಿಯಾದ ಪೊಲಿಟಿಕ್ಸ್‌ಗೆ ಮರಳುತ್ತಿದೆ. ಮರಳಿ ದಿಲ್ಲಿ ಕಡೆ ಮುಖ ಮಾಡಿ ಕುಳಿತುಕೊಳ್ಳುವ ನಾಯಕರೇ ತುಂಬಿಕೊಂಡಿದ್ದಾರೆ. ಈಗ ಗೋವಾದ ಬಿಜೆಪಿ ಅಭ್ಯರ್ಥಿಗಳು ಎಂದರೆ ಬಹುತೇಕ ಕಾಂಗ್ರೆಸ್ ಶಾಸಕರೇ. ವೇದಿಕೆ ಅದೇ, ಜನರು ಅದೇ, ಶ್ರೋತೃಗಳೂ ಅವರೇ. ಬರೀ ಬ್ಯಾನರ್, ಧ್ವಜ, ಚಿಹ್ನೆ ಬದಲಿ ಅಷ್ಟೆ.
ಜೋಶಿ ಮ್ಯಾನೇಜ್‌ಮೆಂಟ್ ಪರೀಕ್ಷೆ
ಕರ್ನಾಟಕದ ಬಹುತೇಕ ನಾಯಕರು ಸ್ಥಳೀಯವಾಗಿ ಚುನಾವಣೆ ಗೆಲ್ಲಲು, ಗೆಲ್ಲಿಸಲು ಪಕ್ಕಾ ವೃತ್ತಿಪರರು. ಆದರೆ ಬೇರೆ ಭಾಷೆಯವರ ಮುಂದೆ ಹೋಗಿ ತಂತ್ರ ಹೆಣೆದು ಮಾತಾಡಿ ಚುನಾವಣೆ ಗೆಲ್ಲಿಸೋದು ಅಂದರೆ ಸ್ವಲ್ಪ ಕಷ್ಟ, ಬಹುಪಾಲು ಆಲಸ್ಯ, ಭಾಷಾ ಸಮಸ್ಯೆ ಹೀಗೆ ನೂರಾರು ಕಾರಣಗಳು. ಈ ಬಾರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿಗೆ ಉತ್ತರಾಖಂಡದ ಜವಾಬ್ದಾರಿ ಹೊರಿಸಲಾಗಿದೆ. ಈ ಪ್ರಯತ್ನದಲ್ಲಿ ಗೆದ್ದರೆ ಜೋಶಿ ಮಹತ್ವ ದಿಲ್ಲಿಯಲ್ಲಿ ಏಕ್‌ದಂ ಜಾಸ್ತಿ ಆಗಲಿದೆ. ಹೋದ ವರ್ಷ ಅವರಿಗೆ ಕೇರಳದ ಚುನಾವಣಾ ಉಸ್ತುವಾರಿ ಕೊಡಲಾಗಿತ್ತು. ಆದರೆ ಯಶಸ್ಸು ಸಿಕ್ಕಿರಲಿಲ್ಲ. ಈ ಬಾರಿ ಪ್ರಹ್ಲಾದ ಜೋಶಿಗೆ ಉತ್ತರಾಖಂಡದಲ್ಲಿ, ಸಿ.ಟಿ.ರವಿ ಮತ್ತು ದಿನೇಶ ಗುಂಡೂರಾವ್‌ಗೆ ಗೋವಾದಲ್ಲಿ ಯಶಸ್ಸು ಸಿಕ್ಕರೆ, ಸ್ವಲ್ಪ ದಿಲ್ಲಿ ಮತ್ತು ಸ್ವಲ್ಪ ಬೆಂಗಳೂರಿನಲ್ಲಿ ಪ್ರಭಾವ ವೃದ್ಧಿ ಸಹಜವಾಗಿ ಆಗುತ್ತದೆ. ಮೋದಿ ಮತ್ತು ಅಮಿತ್ ಶಾ ಕಾಲದಲ್ಲಿ ದಿಲ್ಲಿಗೆ ಒಳ್ಳೆಯ ಚುನಾವಣಾ ಪ್ರಬಂಧನಕಾರರು ಬೇಕು.
ಯುಪಿಯಲ್ಲಿ ಮುಸ್ಲಿಂ ಬಾಹುಳ್ಯ ಕ್ಷೇತ್ರಗಳು
ಯುಪಿಯಲ್ಲಿ ಇಂದು ಚುನಾವಣೆ ನಡೆಯುವ 55 ಕ್ಷೇತ್ರಗಳು ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳು. ರಾಮಪುರ, ಸಂಭಲ…, ಮೊರಾದಾಬಾದ್, ಅಂರೋಹಾ, ಸಹಾರನ್‌ಪುರಗಳಲ್ಲಿ ಶೇ.30ರಿಂದ 45 ಮುಸ್ಲಿಂ ಜನವಸತಿಯಿದೆ. ಈ ಕ್ಷೇತ್ರಗಳಲ್ಲಿ ಜಾಟರು ಕೂಡ ಇರುವುದರಿಂದ ಸಮಾಜವಾದಿ ಪಕ್ಷ ಮತ್ತು ರಾಷ್ಟ್ರೀಯ ಲೋಕದಳ ಮಜಬೂತ್ ಅನ್ನಿಸುತ್ತಿದೆ. ಹೀಗಾಗಿ ಇಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ನಡುವೆ ನೇರ ಸ್ಪರ್ಧೆಯಿದೆ. ರಾಮಪುರ, ಸಂಭಲ…ದಂಥ ಮುಸ್ಲಿಮರು 50 ಪ್ರತಿಶತಕ್ಕೂ ಜಾಸ್ತಿ ಇರುವ ಕ್ಷೇತ್ರಗಳಲ್ಲಿ ಮಾತ್ರ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ನಡುವೆ ಹಣಾಹಣಿ ಇದೆ. 2017ರಲ್ಲಿ ಈ 55 ಕ್ಷೇತ್ರಗಳಲ್ಲಿ ಬಿಜೆಪಿ 40 ಕ್ಷೇತ್ರ ಗೆದ್ದಿತ್ತು. ಈ ಬಾರಿ ಬಿಜೆಪಿ ಸೀಟು ಎಷ್ಟುಕಡಿಮೆ ಆಗುತ್ತವೋ ಅಖಿಲೇಶ್‌ರ ಸೀಟು ಸಂಖ್ಯೆ ಏರುತ್ತದೆ. ಆದರೆ ಅಖಿಲೇಶರ ಚಿಂತೆಯೆಂದರೆ ಮಾಯಾವತಿ 55ರಲ್ಲಿ 23 ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ಮಾಯಾವತಿ ಏನಾದರೂ ಇಲ್ಲಿ ವೋಟು ಸೆಳೆದರೆ ಅಖಿಲೇಶ್ ಲೆಕ್ಕಾಚಾರ ತಿರುವು ಮುರುವು ಆಗಲಿದೆ.
ಮೋದಿ ಫೈನಲ್ ಪ್ರಚಾರ
ನೀವು 2014ರ ನಂತರ ನಡೆದ ಯಾವುದೇ ಚುನಾವಣೆ ತೆಗೆದು ನೋಡಿ. ಕೊನೆ ಕ್ಷಣದಲ್ಲಿ ಮೋದಿ ಸಾಹೇಬರು ಬಂದರು, ಹೀಗಾಗಿ ಸೋಲುವ ಕ್ಷೇತ್ರ ಬಿಜೆಪಿ ಗೆದ್ದಿತು ಎನ್ನುವ ವಿಶ್ಲೇಷಣೆ ಇರುತ್ತದೆ. ಇವತ್ತಿನ ಸ್ಥಿತಿಯಲ್ಲಿ ರಾತ್ರೋರಾತ್ರಿ ಸೋಲುವ ಕ್ಷೇತ್ರದಲ್ಲಿ 6ರಿಂದ 7 ಪ್ರತಿಶತ ಮತ ಹೆಚ್ಚಿಗೆ ತಂದು ಗೆಲ್ಲಿಸುವ ಸಾಮರ್ಥ್ಯ ಇರುವುದು ಮೋದಿಗೆ ಮಾತ್ರ. ಅದು ಕೂಡ ಅಧಿಕಾರ ಹಿಡಿದ 8 ವರ್ಷಗಳ ನಂತರ. ಈಗಲೂ ಕೂಡ ಉತ್ತರಪ್ರದೇಶ, ಉತ್ತರಾಖಂಡ, ಗೋವಾದಲ್ಲಿ ಬಿಜೆಪಿ ಅದನ್ನೇ ಮಾಡುತ್ತಿದೆ. ಕೊನೆ ಕ್ಷಣದಲ್ಲಿ ಬಿಜೆಪಿ ಮೇಲೆ ಸ್ಥಳೀಯ ಕಾರಣಗಳಿಂದ ಮುನಿಸಿಕೊಂಡ ಮತದಾರರು ಮೋದಿ ಕಾರಣದಿಂದ ವಾಪಾಸು ಬರುತ್ತಾರೆ ಅನ್ನುವ ತಂತ್ರಗಾರಿಕೆ ಬಿಜೆಪಿಯದು.