ಜಗತ್ತಿನ ಮೊದಲ ಹೈಪರ್‌ಲೂಪ್‌ ಭಾರತದಲ್ಲಿ? ಏನಿದು? ಇಲ್ಲಿದೆ ಮಾಹಿತಿ

Published : Oct 04, 2021, 09:19 AM IST
ಜಗತ್ತಿನ ಮೊದಲ ಹೈಪರ್‌ಲೂಪ್‌ ಭಾರತದಲ್ಲಿ? ಏನಿದು? ಇಲ್ಲಿದೆ ಮಾಹಿತಿ

ಸಾರಾಂಶ

* ಟ್ಯೂಬ್‌ನೊಳಗೆ ಶರವೇಗದಲ್ಲಿ ಚಲಿಸುವ ಸಾರಿಗೆ ವ್ಯವಸ್ಥೆ * ಭಾರತ ಅಥವಾ ಸೌದಿಯಲ್ಲಿ ಮೊದಲು ಆರಂಭ ಸಾಧ್ಯತೆ * ಯುಎಇನ ಡಿಪಿ ವಲ್ಡ್‌ರ್‍ ಸಿಇಒ ಸುಲ್ತಾನ್‌ ಅಹ್ಮದ್‌ ಹೇಳಿಕೆ

ದುಬೈ(ಅ.04): ನೆಲದ ಮೇಲಿನ ಸಾರಿಗೆಯ ವೇಗವನ್ನು ವಿಮಾನದ ವೇಗಕ್ಕೆ ಹೆಚ್ಚಿಸುವ ನಿರೀಕ್ಷೆಯಿರುವ ಕ್ರಾಂತಿಕಾರಿ ಹೈಪರ್‌ಲೂಪ್‌(Hyperloop), ಜಗತ್ತಿನಲ್ಲೇ ಮೊಟ್ಟಮೊದಲ ಬಾರಿ ಭಾರತದಲ್ಲಿ ಆರಂಭವಾಗುವ ಸಾಧ್ಯತೆಯಿದೆ. ವಿವಿಧ ಹೈಪರ್‌ಲೂಪ್‌(Hyperloop) ಕಂಪನಿಗಳು ಈ ಕುರಿತು ಬೇರೆ ಬೇರೆ ದೇಶಗಳಲ್ಲಿ ಅಧ್ಯಯನ ನಡೆಸುತ್ತಿವೆಯಾದರೂ ಅಂತಿಮವಾಗಿ ಭಾರತ(India) ಅಥವಾ ಸೌದಿ ಅರೇಬಿಯಾದಲ್ಲಿ(Saudi Arabia) ಈ ವ್ಯವಸ್ಥೆ ಮೊದಲು ಸಾಕಾರವಾಗಲಿದೆ ಎಂದು ವರ್ಜಿನ್‌ ಹೈಪರ್‌ಲೂಪ್‌ ಸಂಸ್ಥೆಯ ಮಾಲಿಕರಲ್ಲೊಬ್ಬರಾದ ಸುಲ್ತಾನ್‌ ಅಹ್ಮದ್‌ ಬಿನ್‌ ಸುಲೇಯಮ್‌ ಹೇಳಿದ್ದಾರೆ.

ಈ ಹಿಂದೆ 2018ರಲ್ಲೇ ವರ್ಜಿನ್‌ ಹೈಪರ್‌ಲೂಪ್‌ ಕಂಪನಿಯ ಚೇರ್ಮನ್‌ ರಿಚರ್ಡ್‌ ಬ್ರಾನ್ಸನ್‌ ಪುಣೆ(Pune) ಮತ್ತು ಮುಂಬೈ(Mumbai) ನಡುವೆ ಹೈಪರ್‌ಲೂಪ್‌ ಆರಂಭಿಸುವುದಾಗಿ ಪ್ರಕಟಿಸಿದ್ದರು. ಆದರೆ ಕೋವಿಡ್‌ನಿಂದಾಗಿ ಅದು ಮುಂದುವರೆಯಲಿಲ್ಲ. ನಂತರ ಬೆಂಗಳೂರು ನಗರದಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ಕಲ್ಪಿಸುವ ಮಾರ್ಗದ ಸಮೀಕ್ಷೆಗೂ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಅದೇ ಕಂಪನಿಯಲ್ಲಿ ಬಹುಪಾಲು ಷೇರು ಹೊಂದಿರುವ ಯುಎಇಯ ಬಹುರಾಷ್ಟ್ರೀಯ ಲಾಜಿಸ್ಟಿಕ್‌ ಕಂಪನಿ ಡಿಪಿ ವಲ್ಡ್‌ರ್‍ನ ಸಿಇಒ ಸುಲ್ತಾನ್‌ ಅಹ್ಮದ್‌ ಮತ್ತೊಮ್ಮೆ ಭಾರತದಲ್ಲೇ ಜಗತ್ತಿನಲ್ಲಿ ಮೊದಲ ಹೈಪರ್‌ಲೂಪ್‌ ಆರಂಭವಾಗುವ ಸುಳಿವು ನೀಡಿದ್ದಾರೆ.

‘ಯುಎಇಗಿಂತ ಮೊದಲು ಭಾರತ ಅಥವಾ ಸೌದಿ ಅರೇಬಿಯಾದಲ್ಲಿ ಮೊದಲ ಹೈಪರ್‌ಲೂಪ್‌ ಆರಂಭವಾಗಲಿದೆ. ಇದಕ್ಕೆ ದಶಕಗಳೇನೂ ಹಿಡಿಯುವುದಿಲ್ಲ. ಈ ದಶಕದ ಅಂತ್ಯದೊಳಗೇ ಜಗತ್ತಿನ ಹಲವು ಭಾಗಗಳಲ್ಲಿ ಹೈಪರ್‌ಲೂಪ್‌ನಲ್ಲಿ ಜನರು ಪ್ರಯಾಣಿಸಬಹುದು. ಹೈಪರ್‌ಲೂಪ್‌ನ ಆರ್ಥಿಕ ಲೆಕ್ಕಾಚಾರ ಕೂಡ ಆಕರ್ಷಕವಾಗಿದೆ. ಬಹುಶಃ ವಿಮಾನದ ವೇಗದಲ್ಲಿ ಜನರು ಟ್ರಕ್‌ನ ಹಣಕ್ಕೆ ಪ್ರಯಾಣಿಸಬಹುದು’ ಎಂದು ಭಾನುವಾರ ದುಬೈ ಎಕ್ಸ್‌ಪೋದಲ್ಲಿ ಸುದ್ದಿಗಾರರಿಗೆ ಅವರು ತಿಳಿಸಿದ್ದಾರೆ.

ದುಬೈ ಎಕ್ಸ್‌ಪೋದಲ್ಲಿ ವರ್ಜಿನ್‌ ಹೈಪರ್‌ಲೂಪ್‌ ಕಂಪನಿ ಪೂರ್ಣ ಪ್ರಮಾಣದ ಹೈಪರ್‌ಲೂಪ್‌ ಪಾಡ್‌ ಅನ್ನು ಪ್ರದರ್ಶನಕ್ಕಿರಿಸಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಹೈಪರ್‌ಲೂಪ್‌ ಪಾಡ್‌ನೊಳಗೆ ಮನುಷ್ಯರು ಪ್ರಯಾಣಿಸಿ ಪರೀಕ್ಷೆ ನಡೆಸಿದ್ದು, ಯಶಸ್ವಿಯಾಗಿದೆ.

ಏನಿದು ಹೈಪರ್‌ಲೂಪ್‌?

ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ದೊಡ್ಡ ಗಾತ್ರದ ಟ್ಯೂಬ್‌ ಅಳವಡಿಸಿ, ಅದರೊಳಗೆ ಸಣ್ಣ ಸಣ್ಣ ಪೆಟ್ಟಿಗೆಯಂತಹ ‘ಪಾಡ್‌’ಗಳಲ್ಲಿ ಜನರು ಅಥವಾ ಸರಕುಗಳನ್ನು ಸಾಗಿಸುವುದೇ ಹೈಪರ್‌ಲೂಪ್‌. ಟ್ಯೂಬ್‌ನೊಳಗೆ ಗಾಳಿಯ ಒತ್ತಡ ಕಡಿಮೆಯಿರುವಂತೆ ನೋಡಿಕೊಳ್ಳಲಾಗುತ್ತದೆ. ಆಗ ಪಾಡ್‌ಗಳಿಗೆ ಪ್ರತಿರೋಧ ನಗಣ್ಯ ಪ್ರಮಾಣದಲ್ಲಿರುತ್ತದೆ. ಹೀಗಾಗಿ ಬಹಳ ವೇಗದಲ್ಲಿ ಚಲಿಸಲು ಸಾಧ್ಯವಿದೆ. ಇದು ಬುಲೆಟ್‌ ರೈಲಿಗಿಂತ ವೇಗದ ಸಾರಿಗೆ ಸಾಧನವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗ್ಯಾಸ್ ಸಿಲಿಂಡರ್ ಸ್ಫೋಟ: ಗೋವಾ ಕ್ಲಬ್‌ನಲ್ಲಿ ಅಗ್ನಿ ಅವಘಡ, 23 ಸಾವು
ಇಂದು ರಾತ್ರಿ 8ರ ಒಳಗೆ ಟಿಕೆಟ್ ಮೊತ್ತ ಮರುಪಾವತಿಸಿ : ಇಂಡಿಗೋಗೆ ಕೇಂದ್ರ ಗಡುವು