* ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗ್ಯಾಂಗ್‌ವಾರ್
* ಗ್ಯಾಂಗ್‌ಸ್ಟರ್ ಮೇಲೆ ದಾಳಿ, ಕೋರ್ಟ್ ಆವರಣದಲ್ಲಿ ಬಿತ್ತು ಆರು ಶವ
* ಗ್ಯಾಂಗ್‌ಸ್ಟರ್ ಬಲಿ, ಕೊಲ್ಲಲು ಬಂದಿದ್ದ ಶೂಟರ್‌ಗಳ ಹತ್ಯೆ
ನವದೆಹಲಿ(ಸೆ.24): ದೆಹಲಿಯ ರೋಹಿಣಿ ಕೋರ್ಟ್(Rohini Court) ಆವರಣದಲ್ಲಿ ನಡೆದ ಗ್ಯಾಂಗ್‌ವಾರ್(Gangwar) ಪ್ರಕರಣ ಬೆಚ್ಚಿ ಬೀಳಿಸುವಂತೆ ಮಾಡಿದೆ. ಶುಕ್ರವಾರ, ಗ್ಯಾಂಗ್‌ಸ್ಟರ್ ಜಿತೇಂದ್ರ ಗೋಗಿ ಅವರನ್ನು ಕೋರ್ಟ್‌ನಲ್ಲಿ ಹಾಜರುಪಡಿಸಲು ಪೊಲೀಸರು ಕರೆತಂದಿದ್ದರು. ಆದರೆ ಈ ಸಂದರ್ಭದಲ್ಲಿ ಜಿತೇಂದ್ರನ ಹತ್ಯೆಗೈಯ್ಯಲು ಬಂದಿದ್ದ ಇಬ್ಬರು ಶೂಟರ್‌ಗಳು ಗೋಗಿಯ ಮೇಲೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹೀಗಿರುವಾಗ ನ್ಯಾಯಾಲಯದಲ್ಲಿ(Court) ಹಾಜರಿದ್ದ ಪೊಲೀಸರು ಇಬ್ಬರು ಶೂಟರ್‌ಗಳನ್ನು ಹೊಡೆದುರುಳಿಸಿದ್ದಾರೆ. ಈ ಗ್ಯಾಂಗ್ ವಾರ್‌ನಲ್ಲಿ ದರೋಡೆಕೋರರು ಮತ್ತು ಇಬ್ಬರು ಶೂಟರ್‌ಗಳು ಸೇರಿದಂತೆ ಒಟ್ಟು 6 ಮಂದಿ ಹತ್ಯೆಗೀಡಾಗಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಇನ್ನೂ ಅನೇಕ ಮಂದಿಗೆ ಗಾಯಗಳಾಗಿವೆ ಎನ್ನಲಾಗಿದೆ. ಗುಂಡು ಹಾರಿಸಿದವರನ್ನು ಮೋರಿಸ್ ಮತ್ತು ರಾಹುಲ್ ಎಂದು ಗುರುತಿಸಲಾಗಿದೆ.
ಶೂಟರ್‌ಗಳಿಂದ ಗುಂಡಿನ ದಾಳಿ
undefined
ಲಭ್ಯವಾದ ಮಾಹಿತಿಯ ಪ್ರಕಾರ, ದರೋಡೆಕೋರ ಜೀತೇಂದ್ರ ಗೋಗಿಯನ್ನು ರೋಹಿಣಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿತ್ತು. ಆ ಸಮಯದಲ್ಲಿ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಗಗನ್ ದೀಪ್ ವಿಚಾರಣೆಗಾಗಿ ನ್ಯಾಯಾಲಯದಲ್ಲಿ ಹಾಜರಿದ್ದರು. ಆದರೆ ಅದಕ್ಕೂ ಮೊದಲೇ 2 ಶೂಟರ್‌ಗಳು ನ್ಯಾಯಾಲಯ ತಲುಪಿದ್ದರು ಎಂದು ಹೇಳಲಾಗಿದೆ. ಗೋಗಿ ಕೋರ್ಟ್‌ನೊಳಗೆ ಪ್ರವೇಶಿಸುತ್ತಿದ್ದಂತೆಯೇ ಶೂಟರ್‌ಗಳು ಆತನ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾರೆ. ಇನ್ನು ಘಟನೆಯ ಸಮಯದಲ್ಲಿ ನ್ಯಾಯಾಲಯದ ಆವರಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರಿದ್ದರು. ಹೀಗಾಗಿ ಪ್ರತಿದಾಳಿ ನಡೆಸಿದ ಪೊಲೀಸರು ಇಬ್ಬರು ಶೂಟರ್‌ಗಳನ್ನು ಹೊಡೆದುರುಳಿಸಿದ್ದಾರೆ.
ಎರಡು ವರ್ಷದ ಹಿಂದೆ ಗ್ಯಾಂಗ್‌ಸ್ಟರ್ ಬಂಧನ
ದರೋಡೆಕೋರ ಗೋಗಿಯನ್ನು 2 ವರ್ಷಗಳ ಹಿಂದೆ ಬಂಧಿಸಲಾಗಿತ್ತು. ವಿಶೇಷ ತಂಡ ಆತನನ್ನು ಗುರುಗಾಂವ್‌ನಲ್ಲಿ ಬಂಧಿಸಿತ್ತು. ಈ ಗ್ಯಾಂಗ್ ವಾರ್ ನಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಕೋರ್ಟ್ ನಂ -206 ರ ಹೊರಗೆ ಗುಂಡಿನ ದಾಳಿ ನಡೆದಿದ್ದು, ಈ ದಾಳಿ ಹಿಂದೆ ಕುಖ್ಯಾತ ಟಿಲ್ಲು ಗ್ಯಾಂಗ್ ಇದೆ ಎಂದು ಹೇಳಲಾಗಿದೆ.
ವಕೀಲರ ವೇಷದಲ್ಲಿ ನುಗ್ಗಿದ್ದ ಶೂಟರ್‌ಗಳು
ಗೋಗಿಯನ್ನು ಕೊಲ್ಲಲು ಬಂದ ಇಬ್ಬರು ಶೂಟರ್‌ಗಳು ವಕೀಲರ ಸೋಗಿನಲ್ಲಿ ನ್ಯಾಯಾಲಯವನ್ನು ಪ್ರವೇಶಿಸಿದ್ದರು. ಕೋರ್ಟ್‌ಗೆ ಹಾಜರಾಗಲು ಗೋಗಿ ನ್ಯಾಯಾಲಯದ ಕೋಣೆಯನ್ನು ಪ್ರವೇಶಿಸಿದ ತಕ್ಷಣ; ದರೋಡೆಕೋರರು ಗುಂಡು ಹಾರಿಸಿದ್ದು, ಗೋಗಿ ಸ್ಥಳದಲ್ಲೇ ಮೃತಪಟಗ್ಟಿದ್ದಾನೆ. ಗ್ಯಾಂಗ್ ವಾರ್ ನಂತರ ದೆಹಲಿಯ ಎಲ್ಲಾ ನ್ಯಾಯಾಲಯ ಸಂಕೀರ್ಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.