ಸದ್ಯ ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಇನ್ನೇನು ತೀರ್ಪು ನೀಡಲಿರುವುದರಿಂದ ಅಯೋಧ್ಯೆ ಪೊಲೀಸರು ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾ ಮೂಲಕ ಕಳುಹಿಸುವ ಸಂದೇಶಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಸಂದೇಶವೊಂದು ವೈರಲ್ ಆಗುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಅಯೋಧ್ಯೆ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ಇನ್ನೇನು ಮಹತ್ವದ ತೀರ್ಪು ನೀಡಲಿದೆ. ಈ ನಡುವೆ ಜನರಲ್ಲಿ ಭೀತಿ ಹುಟ್ಟಿಸುವ ಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಸದ್ಯ ಅಯೋಧ್ಯೆ ವಿವಾದ ಸಂಬಂಧ ಸುಪ್ರೀಂಕೋರ್ಟ್ ಇನ್ನೇನು ತೀರ್ಪು ನೀಡಲಿರುವುದರಿಂದ ಅಯೋಧ್ಯೆ ಪೊಲೀಸರು ವಾಟ್ಸ್‌ಆ್ಯಪ್, ಫೇಸ್‌ಬುಕ್, ಟ್ವೀಟರ್ ಸೇರಿದಂತೆ ಎಲ್ಲಾ ಸೋಷಿಯಲ್ ಮೀಡಿಯಾ ಮೂಲಕ ಕಳುಹಿಸುವ ಸಂದೇಶಗಳ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ಸಂದೇಶವೊಂದು ವೈರಲ್ ಆಗುತ್ತಿದೆ.
ಜೊತೆಗೆ ಮೊಬೈಲ್ ಕರೆಗಳನ್ನು ರೆಕಾರ್ಡ್ ಮಾಡಲಾಗುತ್ತಿದೆ, ಸೋಷಿಯಲ್ ಮೀಡಿಯಾಗಳನ್ನು ಕಣ್ಗಾವಲಿನಲ್ಲಿ ಇಡಲಾಗಿದೆ ಎಂದೂ ಹೇಳಲಾಗಿದೆ. ಹಾಗೆಯೇ ಧಾರ್ಮಿಕ ಮತ್ತು ರಾಜಕೀಯ ಭಾವನೆಗಳಿಗೆ ಧಕ್ಕೆಯುಂಟುಮಾಡುವಂತಹ ಸಂದೇಶ ಕಳಿಸಿದ್ದರೆ ಅಂತಹ ವ್ಯಕ್ತಿಯನ್ನು ಬಂಧಿಸಲಾಗುತ್ತದೆ. ಮತ್ತು ಜಾಮೀನು ಕೂಡ ಸಿಗುವುದಿಲ್ಲ ಎಂದು ಎಚ್ಚರಿಸಲಾಗಿದೆ.
#FactCheck: PF ಸಂಸ್ಥೆಯಿಂದ ಕಾರ್ಮಿಕರಿಗೆ 80,000 ಬಂಪರ್ ಕೊಡುಗೆ!
ಆದರೆ ನಿಜಕ್ಕೂ ಸೋಷಿಯಲ್ ಮೀಡಿಯಾ ಸಂವಹನಗಳ ಮೇಲೆ ಅಯೋಧ್ಯೆ ಪೊಲೀಸರು ಕಣ್ಣಿಟ್ಟಿದ್ದಾರೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂಬುದು ಖಚಿತವಾಗಿದೆ. ಉತ್ತರ ಪ್ರದೇಶದ ಪೊಲೀಸ್ ಇಲಾಖೆಯಾಗಲೀ ಅಥವಾ ಗೃಹ ಇಲಾಖೆಯಾಗಲೀ ಇಂತಹ ನಿರ್ದೇಶನ ನೀಡಿಲ್ಲ.
ಕ್ವಿಂಟ್ ಸುದ್ದಿಸಂಸ್ಥೆಗೆ ಅಯೋಧ್ಯೆ ಎಸ್‌ಎಸ್‌ಪಿ ಆಶಿಶ್ ತಿವಾರಿ ಅವರೇ ಸ್ಪಷ್ಟನೆ ನೀಡಿ, ‘ಇದು ಸುಳ್ಳು ಸುದ್ದಿ. ಜನರು ಇಂತಹ ಸುದ್ದಿಗಳನ್ನು ನಂಬಬಾರದು’ ಎಂದಿದ್ದಾರೆ. ಅಲ್ಲದೆ ವಾಸ್ತವವಾಗಿ ಪೊಲೀಸ್ ಇಲಾಖೆ ವಾಟ್ಸ್‌ಆ್ಯಪ್ ಸಂದೇಶಗಳ ಮೇಲೆ ನಿಗಾ ಇಡಲು ಸಾಧ್ಯವಿಲ್ಲ.
ಸುಪ್ರೀಂಕೋರ್ಟ್ ಅಯೋಧ್ಯೆ ಕುರಿತ ತೀರ್ಪು ಪ್ರಕಟಿಸುವುದರಿಂದ ಕೋಮು ಸಾಮರಸ್ಯ ಕಾಪಾಡುವ ದೃಷ್ಟಿಯಿಂದ ಅಯೋಧ್ಯೆಯಲ್ಲಿ ಅ.14ರಿಂದಲೇ ಸೆಕ್ಷನ್ 144 ಜಾರಿ ಮಾಡಲಾಗಿದೆಯೇ ವಿನಃ ಸೋಷಿಯಲ್ ಮೀಡಿಯಾಗಳ ಮೇಲೆ ನಿಗಾ ಇಟ್ಟಿಲ್ಲ.