ಇಡೀ ಮನುಕುಲವನ್ನೇ ನಡುಗಿಸಿದ, ಸುಮಾರು 8 ಕೋಟಿ ಜನರ ಸಾವು-ನೋವು, ನಷ್ಟಕ್ಕೆ ಕಾರಣವಾದ 2ನೇ ಮಹಾಯುದ್ಧ ಅಂತ್ಯಗೊಂಡು ಇಂದಿಗೆ 75 ವರ್ಷ. ಈ ಹಿನ್ನೆಲೆಯಲ್ಲಿ 2ನೇ ಮಹಾಯುದ್ಧದ ಹಿನ್ನೆಲೆ, ಪರಿಣಾಮ ಹಾಗೂ 2ನೇ ವಿಶ್ವಯುದ್ಧದಲ್ಲಿ ಭಾಗವಹಿಸಿದ್ದ ಕರ್ನಾಟಕದ ಯೋಧರ ನೆನಪುಗಳ ಮೆಲುಕು ಇಲ್ಲಿದೆ.
ಅದು ಎರಡನೇ ಮಹಾಯುದ್ಧದ ಸಂದರ್ಭ. ಭಾರತವೂ ಯುದ್ಧದಲ್ಲಿ ಪಾಲ್ಗೊಂಡ ಪರಿಣಾಮ, ಗಾಯಗೊಂಡಿದ್ದ ಯೋಧರು ಸಾವಿರಾರು ಸಂಖ್ಯೆಯಲ್ಲಿ ರೈಲುಗಳ ಮೂಲಕ ಬೆಂಗಳೂರಿಗೆ ಬಂದಿದ್ದರು. ಎಲ್ಲಿ ನೋಡಿದರಲ್ಲಿ ನರಳಾಟ. ರಕ್ತದ ಮಡುವಿನಲ್ಲಿದ್ದ ಯೋಧರ ನೋವು, ಚೀರಾಟ ಕಿವಿಗೆ ಅಪ್ಪಳಿಸುತ್ತಿತ್ತು. ಇದನ್ನು ಕಂಡು ಮನಸು ತೀವ್ರ ಘಾಸಿಗೊಂಡಿತ್ತು. ಆದರೆ ಕರ್ತವ್ಯ ಮಾಡಲೇಬೇಕು. ಹೀಗಾಗಿ ಅವರಿಗೆ ಚಿಕಿತ್ಸೆ ನೀಡುವುದೇ ನಮಗೆ ಒಂದು ರೀತಿಯ ಸವಾಲಿನ ಕೆಲಸವಾಗಿತ್ತು. ನಾವು ವೈದ್ಯರ ಸಲಹೆ ಮೇರೆಗೆ ಗಾಯಾಳುಗಳಿಗೆ ಅಗತ್ಯ ಸೇವೆ ನೀಡುವ ಮೂಲಕ ಅವರ ಆರೈಕೆ ಮಾಡುತ್ತಿದ್ದೆವು.
ಗಾಯಗೊಂಡವರ ಶುಶ್ರೂಷೆ
ಸೈನಿಕನಾಗಬೇಕೆಂಬ ಕನಸು ಕಂಡಿದ್ದ ನಾನು 1942ರಲ್ಲಿ ಐಎಂಇ ಮೆಡಿಕಲ್‌ನಲ್ಲಿ ನರ್ಸಿಂಗ್ ಯೋಧನಾಗಿ ನಾನು ಭರ್ತಿಯಾದೆ. ಬೆಳಗಾವಿಯಿಂದ ನನ್ನನ್ನು ಪುಣೆಗೆ ಕಳುಹಿಸಿಕೊಡಲಾಯಿತು. ಪುಣೆಯ ಡಂಕರ ಆಸ್ಪತ್ರೆಯಲ್ಲಿ ಆರು ತಿಂಗಳ ಕಾಲ ಕೆಲಸ ಮಾಡಿದೆ. ಅನಂತರ 2.5 ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿ 1945ರಲ್ಲಿ ನಿವೃತ್ತಿ ಪಡೆದೆ. ನಾನು ಸೇನೆ ಸೇರಿದ ಸಮಯದಲ್ಲಿಯೇ ಎರಡನೇ ಮಹಾಯುದ್ಧ ಸಂಭವಿಸುತ್ತಿತ್ತು. ಮಹಾಯುದ್ಧದಲ್ಲಿ ಗಾಯಗೊಂಡಿದ್ದ ಯೋಧರಿಗೆ ಶುಶ್ರೂಷಕ ಸೇವೆ ನೀಡಿದ ಭಾಗ್ಯ ನನ್ನದು.
ಕೈಕಾಲು ಕಳೆದುಕೊಂಡವರ ಲೆಕ್ಕವಿಲ್ಲ!
ಹೌದು, 1942ರ ವೇಳೆಗೆ 2ನೇ ಮಹಾಯುದ್ಧ ಪ್ರಾರಂಭವಾಗಿ 3 ವರ್ಷ ಆಗಿತ್ತು. ಭಾರತ, ಜಪಾನ್, ಪೋಲೆಂಡ್, ಇಟಲಿ, ಜರ್ಮನಿ, ರಷ್ಯಾ ಸೇರಿದಂತೆ ಮತ್ತಿತರ ದೇಶಗಳು ಈ ಯುದ್ಧದಲ್ಲಿ ಪಾಲ್ಗೊಂಡಿದ್ದವು. ಆ ವರ್ಷ ನನ್ನನ್ನು ಪುಣೆಯಿಂದ ಔರಂಗಾಬಾದ್‌ಗೆ ವರ್ಗಾವಣೆ ಮಾಡಲಾಯಿತು. ಬಳಿಕ ಪುಣೆಯ ನಿರಾಕ್ಯಾಂಪ್‌ಗೆ ವರ್ಗವಾಯಿತು. ನಾಸಿಕ್ ಬಳಿ ಇರುವ ದೇವಲಾಲಿಯಲ್ಲಿಯೂ ಸೇವೆ ಸಲ್ಲಿಸಿದ್ದೇನೆ. ಈ ಸೇವೆಯ ನಡುವೆಯೇ ನಾನು 10 ತಿಂಗಳು ಬೆಂಗಳೂರಿನಲ್ಲಿ ಮೆಂಟಲ್ (ಮನೋವಿಜ್ಞಾನ) ಕೋರ್ಸ್ ಪೂರ್ಣಗೊಳಿಸಿದೆ. ಅಲ್ಲದೇ, ನರ್ಸಿಂಗ್ ಕೋರ್ಸ್ ಕೂಡ ಪೂರ್ಣಗೊಳಿಸಿದೆ. ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿ ಗಾಯಗೊಂಡಿದ್ದ ನಾನಾ ದೇಶಗಳ ಯೋಧರಿಗೆ ಸೇವೆ ಮಾಡಿದೆ.
ವಿಶ್ವದ ಬೀಭತ್ಸ 2 ನೇ ಮಹಾಯುದ್ಧದ ಅಂತ್ಯಕ್ಕೆ 75 ವರ್ಷ..!
ಈ ಯುದ್ಧದಲ್ಲಿ ಅದೆಷ್ಟುಜನರು ಕೈ, ಕಾಲು ಕಳೆದುಕೊಂಡಿದ್ದರೆಂದರೆ ಲೆಕ್ಕವೇ ಇಲ್ಲ. ಅವರಲ್ಲಿ ಸಾವಿರಾರು ಯೋಧರು ಪುಣೆಯಿಂದ ರೈಲಿನ ಮೂಲಕ ಬೆಂಗಳೂರಿನ ಆಸ್ಪತ್ರೆಗೆ ಬಂದಿದ್ದರು. ಆ ಆಸ್ಪತ್ರೆ ಯಾವುದೆಂದು ನೆನಪಿಲ್ಲ. ಆದರೆ, ಅವರ ಶುಶ್ರೂಷೆಗೆ ನಾವು 100 ಮಂದಿ ಸಿಬ್ಬಂದಿ ಇದ್ದೆವು. ಬೆಳಗಾವಿ ಜಿಲ್ಲೆಯಿಂದ ನಾನೊಬ್ಬನೇ ನರ್ಸಿಂಗ್ ಸೇವೆಯಲ್ಲಿದ್ದೆ. 100 ಸಿಬ್ಬಂದಿಯನ್ನು ಪಾಳಿಯ ಆಧಾರದ ಮೇಲೆ ಕೆಲಸಕ್ಕೆ ನಿಯೋಜನೆ ಮಾಡಲಾಗುತ್ತಿತ್ತು. ಅವರಿಗೆ ಸೇವೆ ನೀಡುವುದೇ ನಮ್ಮ ಆದ್ಯ ಕರ್ತವ್ಯವಾಗಿತ್ತು. ಅವರ ಜೀವ ಉಳಿಸಲು ಅವರ ಕೈ, ಕಾಲುಗಳನ್ನು ತೆಗೆದು, ಶಸ್ತ್ರಚಿಕಿತ್ಸೆ ಮಾಡುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಚಿಕಿತ್ಸೆ ಫಲಿಸದೇ ಹಲವಾರು ಯೋಧರು ಕೊನೆಯುಸಿರೆಳೆದರು. ಆಗಿನ ಸನ್ನಿವೇಶವನ್ನು ನೆನಪಿಸಿಕೊಂಡರೆ, ಈಗಲೂ ಕಣ್ಣಲ್ಲಿ ನೀರು ಬರುತ್ತದೆ.
ನಿವೃತ್ತಿ ಬಳಿಕ ಸಮಾಜ ಸೇವೆ
ಜನವರಿ 1, 1918ರಂದು ಬೆಳಗಾವಿಯ ಯಳ್ಳೂರಿನಲ್ಲಿ ಜನಿಸಿದೆ. 1939ರಲ್ಲಿ 7ನೇ ತರಗತಿ (ಮುಲ್ಕಿ) ಪೂರ್ಣಗೊಳಿಸಿದೆ. ಬಳಿಕ ಅವರ ತಂದೆ ಮುಂದಿನ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಶಿಕ್ಷಣ ಮುಂದುವರಿಸಲಿಲ್ಲ. ಬೆಂಗಳೂರಿನಲ್ಲಿ ಗಾಯಾಳು ಯೋಧರನ್ನು 10 ತಿಂಗಳ ಕಾಲ ಆರೈಕೆ ಮಾಡಿದ್ದೂ ಸೇರಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿ, 1945ರಲ್ಲಿ ನಿವೃತ್ತಿಯಾದೆ. ನಿವೃತ್ತಿ ಬಳಿಕ ಮರಳಿ ಗ್ರಾಮಕ್ಕೆ ಬಂದು ತಾನು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇನೆ. ನಿವೃತ್ತಿ ಬಳಿಕ 1948ರಲ್ಲಿ ವಡಗಾವಿಯಲ್ಲಿ ಸೈನಿಕರ ಸೊಸೈಟಿಯನ್ನು ಸ್ಥಾಪಿಸಿದೆ. 1961ರಲ್ಲಿ ಧಾಮಣೆಯಲ್ಲಿ ಕೆರೆಗಳನ್ನು ನಿರ್ಮಿಸಿದೆ. ಈ ಮೂಲಕ 600 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಿದೆ.
ನಾನು ಸೇನೆ ಸೇರಿದ ವೇಳೆ ಮಾಸಿಕವಾಗಿ .24 ವೇತನ ಸಿಗುತ್ತಿತ್ತು. ನಿವೃತ್ತಿವೇಳೆ ಮಾಸಿಕವಾಗಿ .62 ವೇತನ ಇತ್ತು. ನನಗೆ 1992ರವರೆಗೂ ಪಿಂಚಣಿ ದೊರೆಯುತ್ತಿರಲಿಲ್ಲ. 1992ರ ನಂತರ ಪ್ರತಿ ತಿಂಗಳು .300 ಪಿಂಚಣಿ ಬರಲು ಶುರುವಾಯಿತು. ಸದ್ಯ ಮಾಸಿಕವಾಗಿ .6 ಸಾವಿರ ಪಿಂಚಣಿ ಲಭ್ಯವಾಗುತ್ತಿದೆ. ಈ ಹಿಂದೆ ಕೇಂದ್ರ ಸರ್ಕಾರ ಪಿಂಚಣಿ ನೀಡುತ್ತಿತ್ತು. ಈಗ ಸೇನೆ ವತಿಯಿಂದಲೇ ಪಿಂಚಣಿ ನೀಡಲಾಗುತ್ತಿದೆ.
- ರಾಮಚಂದ್ರ ಪಾಟೀಲ, ನಿವೃತ್ತ ನರ್ಸಿಂಗ್ ಯೋಧ