ನೀಟ್‌ನಲ್ಲಿ 1563 ಅಭ್ಯರ್ಥಿಗಳಿಗೆ ಅಕ್ರಮವಾಗಿ ಗ್ರೇಸ್ ಅಂಕ ನೀಡಲಾಗಿದೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟಲ್ಲಿ ದಾಖಲಾಗಿವೆ.
ನವದೆಹಲಿ (ಜೂ.19) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ‘ನೀಟ್-ಯುಜಿ’ ಪ್ರವೇಶ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪಗಳ ನಡುವೆಯೇ, ‘ಪರೀಕ್ಷೆಯಲ್ಲಿ ಶೇ.0.0001ರಷ್ಟು ನಿರ್ಲಕ್ಷ್ಯ ನಡೆದಿದ್ದರೂ ಅದನ್ನು ಅತ್ಯಂತ ಕಠಿಣವಾಗಿ ನಿರ್ವಹಿಸಬೇಕು’ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಗೆ (ಎನ್‌ಟಿಎ) ತಾಕೀತು ಮಾಡಿದೆ. ಈ ಮೂಲಕ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಅಧಿಕಾರಿಗಳು, ಶಿಕ್ಷಕ ವರ್ಗ ಮತ್ತು ವಿದ್ಯಾರ್ಥಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ನೀಟ್ ಪರೀಕ್ಷೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ 2 ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ವಿಕ್ರಂ ಸಂಪತ್ ಮತ್ತು ನ್ಯಾ. ಎಸ್.ವಿ.ಎನ್.ಭಟ್ ಅವರನ್ನೊಳಗೊಂಡ ನ್ಯಾಯಪೀಠ, ‘ಮಕ್ಕಳು ಪರೀಕ್ಷೆ ಎದುರಿಸಲು ಏನೆಲ್ಲಾ ಕಠಿಣ ಶ್ರಮ ಹಾಕಿರುತ್ತಾರೆ, ಅದರಲ್ಲೂ ಇಂಥ ಪರೀಕ್ಷೆಗಳಲ್ಲಿ ಅವರ ಶ್ರಮ ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಈ ವಿಷಯದಲ್ಲಿ ಯಾರಿಂದಲೇ ಆಗಲಿ ಶೇ.0.0001ರಷ್ಟು ನಿರ್ಲಕ್ಷ್ಯ ನಡೆದಿದ್ದರೂ ಅದನ್ನು ಕಠಿಣಾತಿಕಠಿಣವಾಗಿ ನಿರ್ವಹಿಸಬೇಕು ಎಂದು ಎನ್‌ಟಿಎಗೆ ಸೂಚಿಸಿತು.
undefined
ಅಲ್ಲದೆ ‘ವ್ಯವಸ್ಥೆಯಲ್ಲಿ ವಿದ್ಯಾರ್ಥಿಯೊಬ್ಬ ಅಕ್ರಮ ಎಸಗಿ ವೈದ್ಯನಾದ ಎಂದಿಟ್ಟುಕೊಳ್ಳಿ, ಆತ ಸಮಾಜಕ್ಕೆ ಅತ್ಯಂತ ಅಪಾಯಕಾರಿ ವ್ಯಕ್ತಿ’ ಎಂದು ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.
ಇದೇ ವೇಳೆ, ‘ಪರೀಕ್ಷಾ ಸಂಸ್ಥೆಯವರು, ಒಂದು ವೇಳೆ ತಪ್ಪಾಗಿದ್ದರೆ, ಹೌದು ತಪ್ಪಾಗಿದೆ ಎಂದು ಒಪ್ಪಿಕೊಳ್ಳಬೇಕು ಮತ್ತು ‘ಈ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ’ ಎಂದು ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಅದು ಕನಿಷ್ಠ ನಿಮ್ಮ ಕಾರ್ಯನಿರ್ವಹಣೆ ಮೇಲೆ ವಿಶ್ವಾಸ ಮೂಡಿಸುವಂತೆ ಮಾಡುತ್ತದೆ’ ಎಂದು ನೀಟ್ ಸೇರಿದಂತೆ ಮಹತ್ವದ ಪರೀಕ್ಷೆಗಳನ್ನು ಆಯೋಜಿಸುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ)ದ ವಕೀಲರಿಗೆ ಖಡಕ್ ಸೂಚನೆ ನೀಡಿತು.
ಜೊತೆಗೆ ಈ ವಿಷಯದಲ್ಲಿ ತಕ್ಷಣದ ಕ್ರಮದ ಅಗತ್ಯವನ್ನು ಪ್ರತಿಪಾದಿಸಿದ ನ್ಯಾಯಾಲಯ, ನೀಟ್‌ಗೆ ಸಂಬಂಧಿಸಿದಂತೆ ಸಲ್ಲಿಲಾಗಿರುವ ಎಲ್ಲಾ ಅರ್ಜಿಗಳನ್ನು ಒಂದೂಗೂಡಿಸಿ ಜು.8ರಂದು ವಿಚಾರಣೆ ನಡೆಸುವುದಾಗಿ ಹೇಳಿತು.
ನೀಟ್ ಅಕ್ರಮದ ಕುರಿತು ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಗಳ ಕುರಿತು ಕಳೆದ ವಾರ ವಿಚಾರಣೆ ನಡೆಸಿದ್ದ ನ್ಯಾಯಾಲಯ ತಜ್ಞರ ಸಮಿತಿಯಿಂದ ತನಿಖೆಗೆ ಆದೇಶಿಸಿತ್ತು ಹಾಗೂ ಈ ಬಗ್ಗೆ ಕೇಂದ್ರ ಸರ್ಕಾರ ಮತ್ತು ಎನ್‌ಟಿಎದ ಅಭಿಪ್ರಾಯ ಕೋರಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಕೇಂದ್ರ ಸರ್ಕಾರ, ‘1563 ವಿದ್ಯಾರ್ಥಿಗಳಿಗೆ ನೀಡಿದ್ದ ಗ್ರೇಸ್ ಅಂಕ ರದ್ದು ಮಾಡಲು ತೀರ್ಮಾನಿಸಲಾಗಿದೆ. ಈ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು. ವಿದ್ಯಾರ್ಥಿಗಳು ಒಂದೋ ಹೊಸದಾಗಿ ಪರೀಕ್ಷೆ ಬರೆಯಬೇಕು ಇಲ್ಲವೇ ಗ್ರೇಸ್ ಅಂಕ ಕಡಿತಗೊಳಿಸಿದ ಬಳಿಕದ ಅಂಕವನ್ನು ಇಟ್ಟುಕೊಳ್ಳಬೇಕು’ ಎಂದು ಹೇಳಿತ್ತು. ಇದಕ್ಕೆ ಸುಪ್ರೀಂಕೋರ್ಟ್ ಕೂಡಾ ಇದು ಸೂಕ್ತ ಕ್ರಮ ಎಂದು ಮೆಚ್ಚುಗೆ ವ್ಯಕ್ತಪಡಿಸಿತ್ತು.
ನೀಟ್‌ನಲ್ಲಿ 1563 ಅಭ್ಯರ್ಥಿಗಳಿಗೆ ಅಕ್ರಮವಾಗಿ ಗ್ರೇಸ್ ಅಂಕ ನೀಡಲಾಗಿದೆ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಅರ್ಜಿಗಳು ಸುಪ್ರೀಂ ಕೋರ್ಟಲ್ಲಿ ದಾಖಲಾಗಿವೆ.