ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ಮಧ್ಯಾಹ್ನದ ವೇಳೆಗೆ ಫಲಿತಾಂಶ ಲಭ್ಯವಾಗಲಿದೆ. ಈಗಿನ ಮತಗಟ್ಟೆ ಟ್ರೆಂಡ್ ಹೀಗಿದೆ ನೋಡಿ.
ನವದೆಹಲಿ: ಹರ್ಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಮತ ಎಣಿಕೆ ಕಾರ್ಯ ಈಗಾಗಲೇ ಶುರುವಾಗಿದ್ದು, ಮಧ್ಯಾಹ್ನದಷ್ಟೊತ್ತಿಗೆ ಲಭ್ಯವಾಗುವ ಫಲಿತಾಂಶ ಬಿಜೆಪಿ ನೇತೃತ್ವದ ಎನ್‌ಡಿಎಗೆ ಬಲ ನೀಡಲಿದೆಯೇ ಅಥವಾ ಹಲವು ವರ್ಷಗಳಿಂದ ಉಭಯ ರಾಜ್ಯಗಳಲ್ಲಿ ಅಧಿಕಾರ ವಂಚಿತ ಆಗಿದ್ದ ಕಾಂಗ್ರೆಸ್ ಹಾಗೂ ಇತರ ವಿಪಕ್ಷಗಳಿಗೆ ವರವಾಗಲಿದೆಯೇ ಎಂಬುದು ಸ್ಪಷ್ಟವಾಗಲಿದೆ.
ಹರ್ಯಾಣ ವಿಧಾನಸಭೆಯ 90 ಸ್ಥಾನಗಳಿಗೆ ಒಂದೇ ಹಂತದಲ್ಲಿ ಶನಿವಾರ ಚುನಾವಣೆ ನಡೆದಿದ್ದರೆ, ಜಮ್ಮು-ಕಾಶ್ಮೀರದ 90 ಸ್ಥಾನಕ್ಕೆ 3 ಹಂತದಲ್ಲಿ ಇತ್ತೀಚೆಗೆ ಚುನಾವಣೆ ನಡೆದಿತ್ತು. ಎರಡೂ ರಾಜ್ಯಗಳಲ್ಲಿ ಬಹುಮತ ಪಡೆದು ಅಧಿಕಾರ ನಡೆಸಲು ಕನಿಷ್ಠ 46 ಸ್ಥಾನಗಳನ್ನು ಪಕ್ಷಗಳು ಗಳಿಸಬೇಕಿದೆ. ಜಮ್ಮು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದಾದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
9.50ರ ಟ್ರೆಂಡಿಂಗ್
ಆದರೆ ಈಗ 9.50ರ ಸಮಯದ ಟ್ರೆಂಡಿಂಗ್ ಪ್ರಕಾರ, ಈಗ ಹರ್ಯಾಣದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 90 ಸೀಟುಗಳಲ್ಲಿ ಒಟ್ಟು 46 ಸೀಟುಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ ಜಮ್ಮು ಕಾಶ್ಮೀರದಲ್ಲಿ ಹಿನ್ನಡೆ ಸಾಧಿಸಿದೆ.
ಮುಂಜಾನೆ 9 ಗಂಟೆಯ ಟ್ರೆಂಡಿಂಗ್
ಮುಂಜಾನೆ 9 ಗಂಟೆಯ ಟ್ರೆಂಡಿಂಗ್ ಪ್ರಕಾರ ಹರ್ಯಾಣದಲ್ಲಿ ಕಾಂಗ್ರೆಸ್ 52 ಸೀಟುಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಆಡಳಿತರೂಢ ಬಿಜೆಪಿ 25 ಸ್ಥಾನಗಳಲ್ಲಿ ಮುಂದಿದೆ. ಐಎನ್‌ಎಲ್‌ಡಿ ಹಾಗೂ ಇತರರು ಮೂರು ಸ್ಥಾನಗಳಲ್ಲಿ ಮುಂದಿದ್ದಾರೆ. ಹಾಗೆಯೇ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ 39+ ಸ್ಥಾನಗಳಲ್ಲಿ ಲೀಡ್‌ನಲ್ಲಿದ್ದರೆ ಬಿಜೆಪಿ 24 ಸ್ಥಾನಗಳಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ಪಿಡಿಪಿ 7 ಸ್ಥಾನಗಳಲ್ಲಿ ಸದ್ಯಕ್ಕೆ ಲೀಡ್‌ನಲ್ಲಿದೆ.
ಹರ್ಯಾಣದಲ್ಲಿ ಬಿಜೆಪಿ ಹ್ಯಾಟ್ರಿಕ್ ಕನಸು:
ಹರ್ಯಾಣದಲ್ಲಿ ಬಿಜೆಪಿ ಸತತ 3ನೇ ಸಲ ಗೆದ್ದು ಅಧಿಕಾರಕ್ಕೇರುವ ಕನಸು ಕಂಡಿತ್ತು. ಆದರೆ ಈಗಿನ ಟ್ರೆಂಡಿಗ್ ನೋಡುವುದಾದರೆ ಈ ಕನಸು ಭಗ್ನವಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್, ಬಿಜೆಪಿ, ಜೆಜೆಪಿ ಮೈತ್ರಿಕೂಟ, ಐಎನ್‌ಎಲ್‌ಡಿ ಮೈತ್ರಿಕೂಟ, ಆಪ್ ಮತ್ತು ಪಕ್ಷೇತರರ ನಡುವೆ ತೀವ್ರ ಹಣಾಹಣಿ ಏರ್ಪಟ್ಟಿತ್ತು. ಆದರೆ ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ಕಾಂಗ್ರೆಸ್ ಬಹುಮತದೊಂದಿಗೆ ಜಯ ಸಾಧಿಸಲಿದ್ದು, ಬಿಜೆಪಿ ಘೋರ ಪರಾಭವ ಅನುಭವಿಸಲಿದೆ ಎಂದಿವೆ. ಈಗಿನ ಟ್ರೆಂಡ್ ನೋಡಿದರೆ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿವೆ.
ಹರ್ಯಾಣದಲ್ಲಿ ಕಾಂಗ್ರೆಸ್ ಗೆದ್ದರೆ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ ಹಾಗೂ ದಲಿತ ನಾಯಕಿ ಕುಮಾರಿ ಸೆಲ್ಜಾ ನಡುವೆ ಸಿಎಂ ಗಾದಿಗೆ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಬಿಜೆಪಿ ತಾನು ಗೆದ್ದರೆ ಹಾಲಿ ಸಿಎಂ ನಾಯಬ್ ಸಿಂಗ್ ಸೈನಿ ಅವರನ್ನೇ ಮುಂದುವರಿಸುತ್ತೇವೆ ಎಂದಿದ್ದರೂ, ಹಿರಿಯ ಕೇಸರಿ ನಾಯಕ ಅನಿಲ್ ವಿಜ್ ತಾವೂ ಆಕಾಂಕ್ಷಿ ಎಂದಿದ್ದಾರೆ.
ಕಾಶ್ಮೀರದಲ್ಲಿ 10 ವರ್ಷ ನಂತರ ಚುನಾವಣೆ:
ದಶಕದ ಬಳಿಕ ವಿಧಾನಸಭಾ ಚುನಾವಣೆ ಎದುರಿಸಿದ್ದ ಜಮ್ಮು-ಕಾಶ್ಮೀರದ ಫಲಿತಾಂಶ ಭಾರೀ ಕುತೂಹಲಕ್ಕೆ ಕಾರಣವಾಗಿದೆ. 2014ರಲ್ಲಿ ಕಡೆಯ ಬಾರಿ ಚುನಾವಣೆ ನಡೆದಾಗಲೂ ಇಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿ ಪಿಡಿಪಿ- ಬಿಜೆಪಿ ಸರ್ಕಾರ ರಚನೆಯಾಗಿತ್ತು. ಬಳಿಕ ಸರ್ಕಾರ ಕುಸಿದುಬಿದ್ದಿತ್ತು. ಅದಾದ ನಂತರ ಇದೀಗ ನಡೆದ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸೆಣಸಿವೆ. ಪಿಡಿಪಿ ಮತ್ತು ಬಿಜೆಪಿ ಏಕಾಂಗಿಯಾಗಿ ಕಣಕ್ಕೆ ಇಳಿದಿದಿವೆ.
ಆದರೆ ಇಲ್ಲಿ ಬಹುತೇಕ ಚುನಾವಣಾ ಸಮೀಕ್ಷೆಗಳು ಕಾಂಗ್ರೆಸ್-ಎನ್‌ಸಿ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂದಿದ್ದರೂ ಬಹುಮತದ ಅನುಮಾನ ವ್ಯಕ್ತಪಡಿಸಿವೆ. ಬಿಜೆಪಿ ಜಮ್ಮುವಿನಲ್ಲಿ ಉತ್ತಮ ಸಾಧನೆ ಮಾಡಿದರೆ ಕಾಶ್ಮೀರದಲ್ಲಿ ಶೂನ್ಯ ಸಂಪಾದನೆ ಭೀತಿ ಎದುರಿಸುತ್ತಿದೆ. ಅತಂತ್ರ ಸ್ಥಿತಿ ಸೃಷ್ಟಿಯಾದರೆ ಪಿಡಿಪಿ ಹಾಗೂ ಸಣ್ಣಪುಟ್ಟ ಪಕ್ಷ/ಪಕ್ಷೇತರರು ನಿರ್ಣಾಯಕ ಆಗಲಿದ್ದಾರೆ.