ಯಾರು ನಮ್ಮವರು, ಯಾರು ನಿಷ್ಠರು ಅನ್ನುವುದೇ ಗಾಂಧಿಗಳಿಗೆ ಅರ್ಥ ಆಗುತ್ತಿಲ್ಲ. ಇದನ್ನೆಲ್ಲ ನೋಡಿದರೆ ಗಾಂಧಿಗಳು ಕೂಡ ಖಾಸಗಿ ದರ್ಬಾರು ಮಾಡಿಕೊಳ್ಳುವ ದಿನಗಳು ಹತ್ತಿರ ವಾಗುತ್ತಿದೆ ಅನ್ನಿಸುತ್ತಿದೆ. ಗಾಂಧಿ ಕುಟುಂಬಕ್ಕೆ ಅತ್ಯಂತ ಕಷ್ಟದ ದಿನಗಳಿವು.
India Gate Column by Prashant Natu
ರಾಹುಲ್ ಒಪ್ಪದಿದ್ದಾಗ ಕನಿಷ್ಠ ತಮಗೆ ನಿಷ್ಠರಾಗಿರುವವರನ್ನು ಅಧ್ಯಕ್ಷರನ್ನಾಗಿ ಕೂರಿಸಲು ಸೋನಿಯಾ ಮತ್ತು ಪ್ರಿಯಾಂಕಾ ಯತ್ನಿಸುತ್ತಿದ್ದಾರೆ. ಗೆಹ್ಲೋಟ್ ಬಂಡಾಯದ ನಂತರ ಕಮಲನಾಥ್‌ರನ್ನು ಕೇಳಿದ್ದಾರೆ. ಅವರು ಸಹವಾಸವೇ ಬೇಡ ಎಂದು ಕೈಮುಗಿದಿದ್ದಾರೆ. ಛತ್ತೀಸ್‌ಗಢದ ಸಿಎಂ ಬಘೇಲ್ ತಮ್ಮ ಕುರ್ಚಿ ಬಿಟ್ಟು ಬರಲು ತಯಾರಿಲ್ಲ. ಚನ್ನಿ ದಲಿತ ಪ್ರಯೋಗ ವಿಫಲವಾದ ನಂತರ ಖರ್ಗೆ, ವಾಸ್ನಿಕ್‌ರನ್ನು ಅಧ್ಯಕ್ಷ ಮಾಡುವ ಉತ್ಸಾಹ ಇಳಿದಿದೆ. ಅಪ್ರತಿಮ ಬುದ್ಧಿವಂತ ತರೂರ್ ಬಗ್ಗೆ ಹೈಕಮಾಂಡ್‌ಗೆ ಒಲವಿಲ್ಲ. ಕೊನೆಗೆ ಉಳಿದಿರುವುದು ಸಡಿಲ ನಾಲಗೆಯ ದಿಗ್ವಿಜಯ್ ಸಿಂಗ್.
ನವರಾತ್ರಿ ಸಂದರ್ಭದಲ್ಲಿ ಮೈಸೂರು ಮಹಾರಾಜರ ಖಾಸಗಿ ದರ್ಬಾರ್ ನೋಡಿದಾಗ ಗತಿಸಿ ಹೋದ ಪ್ರಭುತ್ವದ ಹಳೆ ಪಳೆಯುಳಿಕೆ ನೋಡಿದ ಅನುಭವವಾಗುತ್ತದೆ. ರಾಜ ರಾಣಿಯರು, ಆಳು ಕಾಳು, ಪೋಷಾಕು ಎಲ್ಲವೂ ನೋಡಲು ಸಿಗುತ್ತದೆ. ಆದರೆ ಪ್ರಭುತ್ವದ ಜೀವಾಳವಾದ ಅಧಿಕಾರ ಅವರಿಗೆ ಎಳ್ಳಷ್ಟೂಇರುವುದಿಲ್ಲ. ದಿಲ್ಲಿಯ ಘಟನಾವಳಿಗಳನ್ನು ನೋಡಿದಾಗ ಗಾಂಧಿಗಳ ಪರಿಸ್ಥಿತಿ ಕೂಡ ಇದಕ್ಕಿಂತ ಭಿನ್ನವಾಗಿ ಏನೂ ಕಾಣುತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಲಕ್ಷಾಂತರ ಕಾರ್ಯಕರ್ತರು, ಭೋಪರಾಕ್ ಹೇಳುವ ನಾಯಕರು, ಜೀ ಜೀ ಅನ್ನುವ ವಂದಿ ಮಾಗಧರು, ಇಷ್ಟಿದ್ದರೆ ಅಷ್ಟುಎಂದು ಹೇಳುವ ಡಂಗೂರದವರು ಎಲ್ಲರೂ ಇದ್ದಾರೆ.
ಆದರೆ ಯಾರೂ ಕೂಡ ಗಾಂಧಿಗಳ ಮಾತು ಕೇಳಲು ತಯಾರು ಇಲ್ಲ. ಗುಲಾಂ ನಬಿ ಆಜಾದ್ ಮೇಲೆ ಪಕ್ಷಕ್ಕೆ ನಂಬಿಕೆ ಇತ್ತು, ಅವರು ಕೈಕೊಟ್ಟು ಹೋದರು. ಎಸ್.ಎಂ.ಕೃಷ್ಣ ಮೇಲೆ ವಿಶ್ವಾಸ ಇತ್ತು, ಅವರು ಬಿಟ್ಟು ಹೋದರು. ಜ್ಯೋತಿರಾದಿತ್ಯ ನಮ್ಮವರು ಅನ್ನಿಸುತ್ತಿತ್ತು, ಅವರು ಕ್ಯಾರೇ ಅನ್ನಲಿಲ್ಲ. ಕೊನೆಗೆ ಅಶೋಕ್ ಗೆಹ್ಲೋಟ್ ಒಳಗೊಳಗೇ ನಮ್ಮವರು ಅನ್ನಿಸುತ್ತಿತ್ತು. ಈಗ ಅವರು ಸಾರ್ವಜನಿಕವಾಗಿ ಮುಜುಗರ ಮಾಡುತ್ತಿದ್ದಾರೆ. ಯಾರು ನಮ್ಮವರು, ಯಾರು ನಿಷ್ಠರು ಅನ್ನುವುದೇ ಗಾಂಧಿಗಳಿಗೆ ಅರ್ಥ ಆಗುತ್ತಿಲ್ಲ. ಇದನ್ನೆಲ್ಲ ನೋಡಿದರೆ ಗಾಂಧಿಗಳು ಕೂಡ ಖಾಸಗಿ ದರ್ಬಾರು ಮಾಡಿಕೊಳ್ಳುವ ದಿನಗಳು ಹತ್ತಿರ ವಾಗುತ್ತಿದೆ ಅನ್ನಿಸುತ್ತಿದೆ. ಗಾಂಧಿ ಕುಟುಂಬಕ್ಕೆ ಅತ್ಯಂತ ಕಷ್ಟದ ದಿನಗಳಿವು.
India Gate: ನಿತೀಶ್ ಪ್ರಧಾನಿ ಕನಸು ರಾಹುಲ್‌ಗೆ ತಣ್ಣೀರು?
ಆಪದ್ಬಾಂಧವನೇ ಬಂಡೆದ್ದಾಗ: ಕರ್ನಾಟಕ, ಗುಜರಾತ್, ಮಹಾರಾಷ್ಟ್ರ ಹೀಗೆ ಯಾವುದೇ ರಾಜ್ಯ ಇರಲಿ ಅಹ್ಮದ್ ಪಟೇಲ್ ತೀರಿಕೊಂಡ ನಂತರ ಗಾಂಧಿಗಳಿಗೆ ನೆನಪಾಗುತ್ತಿದ್ದ ಒಂದೇ ಹೆಸರು ಮೃದು ಸ್ವಭಾವದ ಗಾಂಧಿವಾದಿ ಎಂದು ಸ್ವತಃ ಹೇಳಿಕೊಳ್ಳುವ ಅಶೋಕ್ ಗೆಹ್ಲೋಟ್. ಹೀಗಾಗಿ ಮತದಾರರಲ್ಲಿ ಗಾಂಧಿಗಳು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿರುವಾಗ ಮಧ್ಯಂತರವಾಗಿ ಯಾರನ್ನು ಅಧ್ಯಕ್ಷ ಮಾಡಬೇಕು ಎಂಬ ಪ್ರಶ್ನೆ ಬಂದಾಗ ಅಮ್ಮ ಸೋನಿಯಾ, ಮಗಳು ಪ್ರಿಯಾಂಕಾ ಮತ್ತು ಮಗ ರಾಹುಲ್‌ರಿಗೆ ಹೊಳೆದ ಹೆಸರು ಒಂದೇ ಅಶೋಕ್ ಗೆಹ್ಲೋಟ್‌ರದು. ಅದಕ್ಕೆ 2 ವರ್ಷಗಳ ಹಿಂದೆ ಬಂಡೆದ್ದಿದ್ದ ಸಚಿನ್ ಪೈಲಟ್‌ರಿಗೆ ಸೋನಿಯಾ ಮತ್ತು ಪ್ರಿಯಾಂಕಾ ನೀಡಿದ ಮುಖ್ಯಮಂತ್ರಿ ಭರವಸೆಯ ಕಾರಣವೂ ಇತ್ತು.
ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅಶೋಕ್ ಗೆಹ್ಲೋಟ್ ತಾನು ಬಯಸಿದಂತೆ ನಡೆಯುತ್ತಾರೆ ಎಂಬ ನಂಬಿಕೆ ಜಾಸ್ತಿ ಇತ್ತು. ಆದರೆ ದಿಲ್ಲಿಯಲ್ಲಿ ಏನಾದರೂ ಮಾಡಿಕೊಳ್ಳಿ, ಜೈಪುರದಲ್ಲಿ ಮಾತ್ರ ನಾನು ಹೇಳಿದ್ದೇ ನಡೆಯಬೇಕು ಎಂದು ಅಶೋಕ್ ಗೆಹ್ಲೋಟ್ ಹಟ ಹಿಡಿದು ಕುಳಿತಿದ್ದರಿಂದ ಗಾಂಧಿಗಳು ಬರೆದಿಟ್ಟುಕೊಂಡಿದ್ದ ಸ್ಕ್ರಿಪ್ಟ್ ಪೂರ್ತಿ ತಿರುವು ಮುರುವು ಆಗಿದೆ. ಈ ಕಡೆ ಗೆಹ್ಲೋಟ್ ಕೂಡ ದೂರ ಆದರು, ಆ ಕಡೆ ಸಚಿನ್ ಪೈಲಟ್ ಕೂಡ ಒಂದು ಕಾಲು ಹೊರಗೆ ಇಟ್ಟು ಕುಳಿತಿದ್ದಾರೆ. ಕಾಂಗ್ರೆಸ್‌ನಲ್ಲಿ ಗಾಂಧಿಗಳ ಪರಿಸ್ಥಿತಿ ಒಂದು ರೀತಿ ಕೆಲ ಕುಟುಂಬದ ವೃದ್ಧ ಹಿರಿಯರ ರೀತಿ ಇದೆ. ಮಕ್ಕಳು ಹೊರಗಡೆ ಬಗ್ಗಿ ಬಗ್ಗಿ ನಮಸ್ಕಾರ ಏನೋ ಮಾಡುತ್ತಾ ಇರುತ್ತಾರೆ, ಆದರೆ ಮಾತು ಒಂದು ಕೇಳುವುದಿಲ್ಲ.
ರಾಜಸ್ಥಾನದಲ್ಲಿ ನಿಜಕ್ಕೂ ಆಗಿದ್ದೇನು?: ಕಾಂಗ್ರೆಸ್‌ನ ಅಧ್ಯಕ್ಷೀಯ ಚುನಾವಣೆ ಘೋಷಣೆ ಆಗುವ ಮುನ್ನ ಆಗಸ್ಟ್ 19ರಂದು ವಿದೇಶಕ್ಕೆ ಹೋಗುವ ಮೊದಲು ಸೋನಿಯಾ ಗಾಂಧಿ ಅಶೋಕ್ ಗೆಹ್ಲೋಟ್‌ರನ್ನು ಕರೆಸಿಕೊಂಡು ನೀವು ಕಾಂಗ್ರೆಸ್ ಅಧ್ಯಕ್ಷರಾಗಬೇಕು ಎಂದು ಹೇಳಿ ಕಳುಹಿಸಿದ್ದರು. ಆದರೆ ನಂತರ ಗೆಹ್ಲೋಟ್ ಕಮಲನಾಥ್, ದಿಗ್ವಿಜಯ್ ಸಿಂಗ್, ಅಂಬಿಕಾ ಸೋನಿಯ ಎದುರು ಅಧ್ಯಕ್ಷ ಬೇಕಾದರೆ ಆಗುತ್ತೇನೆ, ಆದರೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಲಾರೆ ಎಂದು ಷರತ್ತು ಹಾಕತೊಡಗಿದರು. ಆಗ ಪುನಃ ಸೆಪ್ಟೆಂಬರ್ 21ರಂದು ಗೆಹ್ಲೋಟ್‌ರನ್ನು ಕರೆಸಿಕೊಂಡ ಸೋನಿಯಾ, ಒಬ್ಬರಿಗೆ ಒಂದೇ ಹುದ್ದೆ ಎಂದು ಉದಯಪುರದಲ್ಲೇ ನಿರ್ಣಯ ತೆಗೆದುಕೊಳ್ಳಲಾಗಿದೆ. ಹೀಗಾಗಿ ನೀವು ನಾಮಪತ್ರ ಸಲ್ಲಿಸುವ ಮುನ್ನ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ಎಂದು ಹೇಳಿದರು.
ಕಾಂಗ್ರೆಸ್ಸಿನ ಹಳೆ ಆಟಗಾರ ಗೆಹ್ಲೋಟ್‌ಗೆ ಇದು ಸಚಿನ್ ಪೈಲಟ್‌ಗೆ ಪಟ್ಟಾಭಿಷೇಕ ಮಾಡುವುದರ ಮುನ್ಸೂಚನೆ ಎಂದು ಅರ್ಥ ಆಗಿತ್ತು.ಪೈಲಟ್ ಮುಖ್ಯಮಂತ್ರಿ ಆಗುವುದು ಅಂದರೆ ತಾನು ನಾಮ್‌ಕೆವಾಸ್ತೆ ಕಾಂಗ್ರೆಸ್ ಅಧ್ಯಕ್ಷ ಎಂದು ತೀರ್ಮಾನಕ್ಕೆ ಬಂದಿದ್ದ ಗೆಹ್ಲೋಟ್ ಜೈಪುರಕ್ಕೆ ಬಂದಕೂಡಲೇ ಸೋನಿಯಾ ಮುಂದೆ ಒಪ್ಪಿಕೊಂಡಿದ್ದಕ್ಕೆಲ್ಲ ಉಲ್ಟಾಹೊಡೆಯತೊಡಗಿದರು. ಸೋನಿಯಾ, ಪ್ರಿಯಾಂಕಾ ಎಷ್ಟೇ ಹೇಳಿಸಿದರೂ ಕೂಡ ಕ್ಯಾರೇ ಅನ್ನದ ಗೆಹ್ಲೋಟ್ 90 ಶಾಸಕರನ್ನು ಜೊತೆ ಕೂರಿಸಿಕೊಂಡು ದಿಲ್ಲಿಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ, ಆದರೆ ಜೈಪುರದಲ್ಲಿ ಕೈ ಹಾಕಬೇಡಿ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ಪಂಜಾಬ್‌ನಲ್ಲಿ ‘ಚನ್ನಿ ಪ್ರಯೋಗ’ ಮಾಡಿ ವಿಫಲವಾಗಿದ್ದ ಗಾಂಧಿ ಕುಟುಂಬಕ್ಕೆ ಜೈಪುರದಲ್ಲಿ ಗೆಹ್ಲೋಟ್ ಅವರು ‘ಪೈಲಟ್ ಪ್ರಯೋಗ’ ಮಾಡುವ ಅವಕಾಶವನ್ನೇ ನೀಡಲಿಲ್ಲ.
ರಾಜ್ಯಗಳ ಮಾಸ್ ಲೀಡರ್ ತಾಕತ್ತು: ಸೋನಿಯಾ ಗಾಂಧಿ ಹೇಳಿ ಕಳುಹಿಸಿದ್ದಾರೆ ಎಂಬ ಧೈರ್ಯದಲ್ಲಿ ದಿಲ್ಲಿಯಿಂದ ಜೈಪುರಕ್ಕೆ ಹೋದ ಅಜಯ್ ಮಾಕೇನ್ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗೆಹ್ಲೋಟ್ ಬಣದ 90 ಶಾಸಕರು ಶಾಸಕಾಂಗ ಪಕ್ಷದ ಸಭೆಗೆ ಬರಬೇಕು ಅಂದರೆ ಎರಡು ಷರತ್ತು ಇಟ್ಟಿದ್ದರು. 1.ಅಕ್ಟೋಬರ್ 17ರಂದು ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಆಗುವವರೆಗೆ ರಾಜಸ್ಥಾನದ ಮುಖ್ಯಮಂತ್ರಿ ಬದಲಾವಣೆ ಆಗಬಾರದು. 2.ಸಚಿನ್ ಪೈಲಟ್‌ರನ್ನು ಮುಖ್ಯಮಂತ್ರಿ ಮಾಡೋದಿಲ್ಲ ಎಂದು ಮಾತು ಕೊಡಬೇಕು. ಪರಿಸ್ಥಿತಿ ಎಲ್ಲಿಗೆ ತಲುಪಿತು ಅಂದರೆ ದಿಲ್ಲಿಯಿಂದ ಹೋಗಿದ್ದ ವೀಕ್ಷಕರು ಶಾಸಕರ ಫುಲ್ ಕೋರಂ ಸಭೆ ಕೂಡ ನಡೆಸಲು ಸಾಧ್ಯ ಆಗದೇ ಜೈಪುರ ವಿಮಾನ ನಿಲ್ದಾಣಕ್ಕೆ ವಾಪಸ್ ಹೋಗಬೇಕಾಯಿತು.
ಬಹುಕಾಲ ಏಕಾಂಗಿ ಆಗಿ ರಾಜ್ಯ ಆಳಿದ ಮಾಸ್ ನಾಯಕರಿಗೆ ಈ ದಿಲ್ಲಿ ಮತ್ತು ಅಲ್ಲಿಯ ಪೊಲಿಟಿಕ್ಸ್ ಇಷ್ಟಆಗುವುದಿಲ್ಲ. ಅವರಿಗೆ ಅವರ ಜನರ ನಡುವೆಯೇ ಅಧಿಕಾರ ಖುಷಿ ಕೊಡುತ್ತದೆ. ದೇವೇಗೌಡರು ಪ್ರಧಾನಿ ಆದರೂ ಕೂಡ ಹಾಸನದ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಯಾರು ಎಂಬ ಬಗ್ಗೆ ಹೆಚ್ಚು ಚಿಂತಿತರಾಗುತ್ತಿದ್ದರು. ಯಡಿಯೂರಪ್ಪ, ಕುಮಾರಸ್ವಾಮಿ ಇಬ್ಬರಿಗೂ ದಿಲ್ಲಿ ಪಾರ್ಲಿಮೆಂಟು ಎಂದರೆ ಉಸಿರುಗಟ್ಟುತ್ತಿತ್ತು. ಗೆಹ್ಲೋಟ್‌ದು ತಪ್ಪಿಲ್ಲ ಬಿಡಿ, ದಿಲ್ಲಿಗೆ ಬಂದು ಮೂಟೆ ಹೊರುವುದಕ್ಕಿಂತ ಜೈಪುರದಲ್ಲಿ ಇರುವಷ್ಟುದಿನ ರಾಜನಾಗಿ ಮೆರೆಯುವ ಯೋಚನೆ ಇರಬಹುದು.
ರೇಸ್‌ಗೆ ದಿಗ್ವಿ ಬಂದಿದ್ದು ಹೇಗೆ?: ಬಿಜೆಪಿಯಲ್ಲಿ ಯಾರೇ ಅಧ್ಯಕ್ಷರಾಗಲು ಹೇಗೆ ಸಂಘದ ಒಪ್ಪಿಗೆ ಬೇಕೋ ಹಾಗೆ ಕಾಂಗ್ರೆಸ್‌ನಲ್ಲಿ ಅಧ್ಯಕ್ಷರಾಗಲು ಗಾಂಧಿಗಳ ಬೆಂಬಲ ಬೇಕು. ಇಂದಿರಾ ಗಾಂಧಿ ಉಚ್ಛ್ರಾಯದ ನಂತರ ಗಾಂಧಿ ಕುಟುಂಬದ ಹೊರಗೆ ಅಧ್ಯಕ್ಷರಾದವರು ಇಬ್ಬರು. 1.ಪಿ.ವಿ.ನರಸಿಂಹರಾವ್. 2.ಸೀತಾರಾಮ್ ಕೇಸರಿ. ಇಬ್ಬರೂ ಮೊದಲು ಗಾಂಧಿಗಳ ಬೆಂಬಲ ಪಡೆದು ಅಧ್ಯಕ್ಷರಾದ ನಂತರ ಗಾಂಧಿಗಳನ್ನು ಮೂಲೆಗುಂಪು ಮಾಡಲು ನೋಡಿದವರು. ಹೀಗಾಗಿ ರಾಹುಲ್ ಅಧ್ಯಕ್ಷರಾಗಲು ಒಪ್ಪದೇ ಇರುವಾಗ ಕನಿಷ್ಠ ತಮಗೆ ನಿಷ್ಠರಾಗಿರುವ ಅಧ್ಯಕ್ಷರನ್ನು ಕೂರಿಸಲು ಸೋನಿಯಾ ಮತ್ತು ಪ್ರಿಯಾಂಕಾ ಗಾಂಧಿ ಪ್ರಯತ್ನಪಡುತ್ತಿದ್ದಾರೆ. ಅಶೋಕ್ ಗೆಹ್ಲೋಟ್ ಬಂಡಾಯದ ನಂತರ ಸೋನಿಯಾ ಕಮಲನಾಥ್‌ರನ್ನು ಕರೆದು ಕೇಳಿದ್ದಾರೆ. ಅವರು ಸಹವಾಸವೇ ಬೇಡ ಎಂದು ಕೈಮುಗಿದಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಕೂಡ ರಾಯಪುರದ ಅಧಿಕಾರ ಬಿಟ್ಟು ಬರಲು ತಯಾರಿಲ್ಲ. ಚನ್ನಿ ದಲಿತ ಪ್ರಯೋಗ ವಿಫಲವಾದ ನಂತರ ಖರ್ಗೆ, ಮುಕುಲ್ ವಾಸ್ನಿಕ್‌ರನ್ನು ಅಧ್ಯಕ್ಷರನ್ನಾಗಿ ಮಾಡುವ ಉತ್ಸಾಹ ಕಡಿಮೆ ಆಗಿದೆ. ಅಪ್ರತಿಮ ಬುದ್ಧಿವಂತ, ಪಟಪಟನೆ ಇಂಗ್ಲಿಷ್ ಮಾತನಾಡುವ ಶಶಿ ತರೂರ್ ಬಗ್ಗೆ ಹೈಕಮಾಂಡ್‌ಗೆ ಒಲವಿಲ್ಲ. ಹೀಗಾಗಿ ಈಗ ಉಳಿದಿರುವ ಹೆಸರು ದಿಗ್ವಿಜಯ ಸಿಂಗ್ ಒಂದೇ. ಹೀಗಾಗಿ ಅವರನ್ನು ಸೋನಿಯಾ ಕರೆದು ಶುಕ್ರವಾರ ನಾಮಪತ್ರ ಸಲ್ಲಿಸುವಂತೆ ಹೇಳಿದ್ದಾರೆ. ದಿಗ್ವಿಜಯ ಗಾಂಧಿ ಕುಟುಂಬಕ್ಕೆ ನಿಷ್ಠರು ಹೌದು. ಆದರೆ ಮಾಧ್ಯಮಗಳ ಎದುರು ಬಂದು ದಿನಕ್ಕೊಂದು ಹೊಸ ವಿವಾದ ಸೃಷ್ಟಿಸುವ ಚಾಳಿ. ಅದರಿಂದ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು.
India Gate: 2024ಕ್ಕೆ ನರೇಂದ್ರ ಮೋದಿ ಎದುರು ಯಾರು?
ಹಿಂದೆ ಏಮಾರಿದ್ದ ಗಾಂಧಿಗಳು: 1991ರಲ್ಲಿ ರಾಜೀವ್ ಹತ್ಯೆಯ ನಂತರ ಅನುಕಂಪದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಸೀಟು ಬಂದಾಗ ಶರದ್ ಪವಾರ್ ತಾನು ಮುಂದಿನ ಪ್ರಧಾನಿ ಆಗುತ್ತೇನೆ ಎಂದು ಸೂಟು ಬೂಟು ಹೊಲಿಸಿದ್ದರು. ಆದರೆ ಗಾಂಧಿಗಳಿಗೆ ನಿಷ್ಠರಾಗಿ ಇರುವುದಿಲ್ಲ ಎಂಬ ಕಾರಣಕ್ಕೆ ಆಗಲೇ ವಾನಪ್ರಸ್ಥಕ್ಕೆ ಹೋಗಿದ್ದ ಪಿ.ವಿ.ನರಸಿಂಹ ರಾಯರನ್ನು ಕರೆದುಕೊಂಡು ಬಂದು ಮೊದಲು ಅಧ್ಯಕ್ಷ, ಆಮೇಲೆ ಪ್ರಧಾನಿ ಮಾಡಲಾಯಿತು. ಆದರೆ ಒಂದು ಒರೆಯಲ್ಲಿ ಎರಡು ಕತ್ತಿಗಳು ಇರುವುದಿಲ್ಲ ನೋಡಿ. ರಾಯರು ಮೊದಲ ದಿನದಿಂದಲೇ ಗಾಂಧಿಗಳನ್ನು ರಾಜಕೀಯವಾಗಿ ಮುಗಿಸುವ ಪ್ರಯತ್ನ ಮಾಡಿದರು. ಗಾಂಧಿಗಳ ಆದಾಯದ ಮೂಲಗಳನ್ನು ಬತ್ತಿಸುವುದರಿಂದ ಹಿಡಿದು ಕುಟುಂಬ ನಿಷ್ಠರನ್ನು ಮೂಲೆಗುಂಪು ಮಾಡುವವರೆಗೆ ನರಸಿಂಹ ರಾಯರು ಎಲ್ಲವನ್ನೂ ಮಾಡಿದರು.
ನಂತರ ಬಂದ ಸೀತಾರಾಮ್ ಕೇಸರಿಯನ್ನು ಪಾರ್ಟಿ ಕಚೇರಿಯಿಂದ ಎತ್ತಿ ಹಾಕಿ ಸೋನಿಯಾ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಬೇಕಾಯಿತು. ಇತಿಹಾಸದ ಪುಟ ತೆರೆದು ನೋಡಿ, ಈ ಅಧಿಕಾರ ಅಂತ ಬಂದಾಗ ಮಗ ಅಪ್ಪನಿಗೆ, ಹೆಂಡತಿ ಗಂಡನಿಗೆ ನಿಷ್ಠರಾಗಿ ಉಳಿದಿರುವ ಉದಾಹರಣೆಗಳು ಕ್ವಚಿತ್ ಮಾತ್ರ. ಮನಮೋಹನ ಸಿಂಗ್ 10 ವರ್ಷ ಗಾಂಧಿಗಳಿಗೆ ನಿಷ್ಠರಾಗಿ ಉಳಿದರು. ಆದರೆ ವಿಪರ್ಯಾಸ ನೋಡಿ, ಅತ್ಯಂತ ದುರ್ಬಲ ಪ್ರಧಾನಿ ಎಂದು ಇತಿಹಾಸದಲ್ಲಿ ದಾಖಲಾದರು. ಈಗ ಮತ್ತೊಮ್ಮೆ ಗಾಂಧಿಗಳು ತಮಗೆ ನಿಷ್ಠರಾಗಿ ಉಳಿಯುವ ಹೆಸರಿನ ಕುಡುಕಾಟದಲ್ಲಿ ಇದ್ದಾರೆ.