* ಹಿಜಾಬ್ ಹಾಕದಿದ್ರೆ ರೇಪ್ ಆಗುತ್ತೆ ಎಂದಿದ್ದ ಶಾಸಕ ಜಮೀರ್ ಅಹ್ಮದ್
* ಜಮೀರ್ ಅಹ್ಮದ್ ಹೇಳಿಕೆಗೆ ಭಾರೀ ಆಕ್ರೋಶ
* ಜಮೀರ್ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ, ಅವರು ಜನರ ಕ್ಷಮೆ ಕೇಳಬೇಕು ಎಂದ ಡಿಕೆಶಿ
ಬೆಂಗಳೂರು(ಫೆ.14): ಕರ್ನಾಟಕದ ಉಡುಪಿ ಜಿಲ್ಲೆಯಿಂದ ಹೊತ್ತಿಕೊಂಡ ಹಿಜಾಬ್ ವಿವಾದದ ಕಿಡಿ ಸದ್ಯ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುತ್ತಿದೆ. ಈ ನಡುವೆ ಅನೇಕ ಹಿರಿಯ, ಕಿರಿಯ ರಾಜಕೀಯ ನಾಯಕರು ಈ ವಿಚಾರವಾಗಿ ಹೇಳಿಕೆ ನೀಡುತ್ತಿದ್ದು, ಇದಕ್ಕೆ ಪರ ವಿರೀಧಗಳು ವ್ಯಕ್ತವಾಗಿವೆ. ಸದ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನೀಡಿರುವ ಹೇಳಿಕೆ ಸದ್ದು ಮಾಡುತ್ತಿದ್ದು, ಈ ವಿಚಾರವಾಗಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಹೀಗಿರುವಾಗಲೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಜಮೀರ್ ಅಹ್ಮದ್ ಹೇಳಿಕೆಯನ್ನು ಪಕ್ಷ ಒಪ್ಪುವುದಿಲ್ಲ ಎಂದಿದ್ದಾರೆ.
Hijab Row: 'ರೇಪ್ ಹೆಚ್ಚಾಗಲು ಹಿಜಾಬ್ ಹಾಕದ್ದೇ ಕಾರಣ. ಸೌಂದರ್ಯ ಮುಚ್ಚಿಡಲು ಬುರ್ಖಾ ಬೇಕು'
ಹೌದು ನಿನ್ನೆ, ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಶಾಸಕ ಜಮೀರ್ ಅಹ್ಮದ್ ಬುರ್ಕಾ, ಹಿಜಾಬ್ (Hijab) ಧರಿಸದೆ ಇರುವುದೆ ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಲು ಕಾರಣವಾಗಿದೆ ಎಂದಿದ್ದರು. ಅವರ ಈ ಹೇಳಿಕೆಗಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಿರುವಾಗ ಅವರ ಈ ಹೇಳಿಕೆಯನ್ನು ಡಿಕೆಶಿ ಖಂಡಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಜಮೀರ್ ಹೇಳಿಕೆಯನ್ನ ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಹಿಜಾಬ್ ಬಗ್ಗೆ ಹೇಗೆ ಬೇಕೋ ಹಾಗೆ ಮಾತನಾಡಬಾರದು ಎಂದು ನಾನು ಸೂಚನೆ ಕೊಟ್ಟಿದ್ದೆ, ಆದರೂ ಮಾತಾಡಿದ್ದಾರೆ. ಈ ವಿಚಾರದಲ್ಲಿ ಪಕ್ಷದಿಂದ ಜಮೀರ್ ಅವರಿಗೆ ಸ್ಪಷ್ಟನೆ ಕೇಳ್ತೇವೆ. ಜಮೀರ್ ಹೇಳಿಕೆ ಗೆ ಅವರಿಂದ ಸ್ಪಷ್ಟನೆ ಕೇಳಿ ಅವರ ಹೇಳಿಕೆ ವಾಪಸ್ ಪಡೆಯುವಂತೆ ನಾನು ಸೂಚನೆ ನೀಡ್ತೇನೆ. ಅಲ್ಲದೇ ಜಮೀರ್ ಜನರ ಕ್ಷಮೆ ಕೇಳಬೇಕು ಎಂದಿದ್ದಾರೆ.
ಇದೇ ವೇಳೆ ಈಶ್ವರಪ್ಪ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದ್ದಾರೆಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ ಅವರ ಮೇಲೆ ರಾಷ್ಟ್ರ ದ್ರೋಹದ ಕೇಸ್ ದಾಖಲಿಸಬೇಕು. ಮಂತ್ರಿಯಾದರೇನು, ಶಾಸಕರಾದರೇನು? ಅವರ ಮೇಲೆ ಮೊದಲು ಕೇಸ್ ರಿಜಿಸ್ಟರ್ ಮಾಡಬೇಕು. ಅವರನ್ನ ಸಚಿವ ಸ್ಥಾನದಿಂದ ಕೈಬಿಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅಲ್ಲದೇ ಈ ವಿಚಾರವಾಗಿ ನಾವು ಸುಮ್ಮನೆ ಕೂರೋಕೆ ಸಾಧ್ಯವೇ.? ನಾವು ಇದರ ವಿರುದ್ಧ ಹೋರಾಟ ಮಾಡ್ತೇವೆ. ಖಂಡಿತ ಇದರ ಬಗ್ಗೆ ಪ್ರಸ್ತಾಪ ಮಾಡ್ತೇವೆ.ರಾಷ್ಟ್ರ ಧ್ವಜದ ಬಗ್ಗೆ ಅವಹೇಳನ ಮಾಡ್ತಾರಲ್ರೀ ಅವರು ದೇಶದ್ರೋಹಿಗಳು. ರೈತರ ಮೇಲೆ ಕೇಸ್ ಹಾಕ್ತೀರಾ, ಸಣ್ಣ ಪುಟ್ಟವರ ಮೇಲೆ ಕೇಸ್ ಹಾಕ್ತೀರಾ, ದೇಶದ್ರೋಹಿಗಳ ಮೇಲೆ ಯಾಕೆ ಕೇಸ್ ಹಾಕಲ್ಲ? ಎಂದು ಪ್ರಶ್ನಿಸಿದ್ದಾರೆ.
ಹಿಜಾಬ್ ವಿವಾದದಿಂದಾದ ಗಲಭೆ ಬಗ್ಗೆ ಪ್ರತಿಕ್ರಿಯಿಸಿದ ಡಿಕೆಶಿ ರಾಜ್ಯದಲ್ಲಿ ಮಕ್ಕಳಿಗೆ ಅನ್ಯಾಯವಾಗ್ತಿದೆ. ಶಾಲಾ ಕಾಲೇಜುಗಳಲ್ಲಿ ಅನ್ಯಾಯವಾಗ್ತಿದೆ. ನಾರಾಯಣಗುರು ವಿಚಾರದಲ್ಲಿ ಅನ್ಯಾಯವಾಗಿದೆ. ಬಿಟ್ ಕಾಯಿನ್,೪೦% ಕಮೀಷನ್ ಆರೋಪವಿದೆ, ವಿಷಯ ಡೈವರ್ಟ್ ಮಾಡಲು ಮಕ್ಕಳನ್ನ ಎತ್ತಿ ಕಟ್ಟುತ್ತಿದ್ದಾರೆ. ಹೀಗಾಗಿ ನಾವು ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ಮಾಡಿದ್ವಿ. ಸರ್ಕಾರಿ ಅಧಿಕಾರಿಗಳನ್ನ ಬಳಸಿಕೊಳ್ತಿದೆ, ಪೊಲೀಸ್ ಅಧಿಕಾರಿಗಳನ್ನ ಸರ್ಕಾರ ಬಳಿಸಿಕೊಳ್ತಿದೆ. ಅವರ ಪಾರ್ಟಿಯವರ ಮೇಲೆ ಕೇಸ್ ಹಾಕಲ್ಲ ಎಂದಿದ್ದಾರೆ.
'ಮುಸ್ಲಿಂ ಎಂದು ಸಾಬೀತು ಮಾಡಲು ಹಿಜಾಬ್ ಧರಿಸಬೇಕಾಗಿಲ್ಲ, ನೆಟ್ಟಿಗರ ವಿರುದ್ಧ ಕಾಶ್ಮೀರಿ ಟಾಪರ್ ಗರಂ
ಜಮೀರ್ ಅಹ್ಮದ್ ಹೇಳಿದ್ದೇನು?
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಜಾಬ್ ಎನ್ನುವುದು ಮುಸಲ್ಮಾನದಲ್ಲಿ ಪರದೆ ಎಂದರ್ಥ. ಇದನ್ನು ಯಾರು ವಿರೋಧ ಮಾಡುತ್ತಿದ್ದಾರೋ ಅವರ ಮನೆಯಲ್ಲಿ ಹೆಣ್ಣು ಮಕ್ಕಳು ಇಲ್ಲ ಎನ್ನಿಸುತ್ತದೆ. ಹೆಣ್ಣುಮಕ್ಕಳಿದ್ದರೆ ಅವರಿಗೆ ಇದರ ಬಗ್ಗೆ ಗೊತ್ತಿರುತ್ತಿತ್ತು. ಮಹಿಳೆಯರ ಸೌಂದರ್ಯವನ್ನು ಪರ ಪುರುಷರು ನೋಡಬಾರದು, ಅವರಿಂದ ಮುಚ್ಚಿಡಲು ಹಿಜಾಬ್, ಬುರ್ಕಾ ಬಳಸಲಾಗುತ್ತದೆ. ನನ್ನ ಪ್ರಕಾರ ಪ್ರಸ್ತುತ ಭಾರತದಲ್ಲೇ ಅತೀ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಇದಕ್ಕೆ ಕಾರಣವೇನು? ಬುರ್ಕಾ, ಪರದೆಯಲ್ಲಿ ಇರದೇ ಇರುವುದೆ ಇದಕ್ಕೆ ಕಾರಣವಾಗಿದೆ. ಹಿಜಾಬ್ ಇವತ್ತು, ನಿನ್ನೆಯ ವಿಚಾರವಲ್ಲ. ಅನಾದಿ ಕಾಲದಿಂದ ನಡೆದುಬಂದ ಪದ್ಧತಿ. ಅಷ್ಟಕ್ಕೂ ಹಿಜಾಬ್ ಕಡ್ಡಾಯವಲ್ಲ. ಯಾರಿಗೆ ಇಷ್ಟವಿಲ್ಲವೋ ಅವರು ಧರಿಸದಿದ್ದರೂ ನಡೆಯುತ್ತದೆ. ಯಾರಿಗೆ ತಮ್ಮ ಸೌಂದರ್ಯ ಮುಚ್ಚಿಡಬೇಕು ಎಂದೆನಿಸುತ್ತದೊ ಅವರು ಹಿಜಾಬ್ ಧರಿಸುತ್ತಾರೆ ಎಂದಿದ್ದರು.