ಕುನೋ ಪಶುವೈದ್ಯರಿಗೆ ಚೀತಾಗಳ ಆರೈಕೆ ಗೊತ್ತಿಲ್ಲ ಎಂದ ಅಫ್ರಿಕಾದ ಪಶುವೈದ್ಯರು

By Kannadaprabha News  |  First Published Aug 4, 2023, 11:16 AM IST

ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ 9ನೇ ಚೀತಾ ಸಾವನ್ನಪ್ಪಿದ ಬೆನ್ನಲ್ಲೇ, ಚೀತಾಗಳ ನಿರ್ವಹಣೆ ಮಾಡುತ್ತಿರುವ ಭಾರತೀಯ ವನ್ಯಜೀವಿ ತಜ್ಞರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲಾಗಿದೆ.


ನವದೆಹಲಿ: ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ 9ನೇ ಚೀತಾ ಸಾವನ್ನಪ್ಪಿದ ಬೆನ್ನಲ್ಲೇ, ಚೀತಾಗಳ ನಿರ್ವಹಣೆ ಮಾಡುತ್ತಿರುವ ಭಾರತೀಯ ವನ್ಯಜೀವಿ ತಜ್ಞರ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಮಾಡಲಾಗಿದೆ. ಚೀತಾ ಯೋಜನೆಯಲ್ಲಿ ಭಾಗಿಯಾಗಿರುವ ಪಶುವೈದ್ಯರಿಗೆ ಈ ಕುರಿತು ಯಾವುದೇ ವೈಜ್ಞಾನಿಕ ಅನುಭವ ಇಲ್ಲ ಎಂದು ಆಫ್ರಿಕಾ ಮೂಲದ ವನ್ಯಜೀವಿ ತಜ್ಞರು ಸುಪ್ರೀಂಕೋರ್ಟ್‌ಗೆ ಪತ್ರ ಬರೆದಿದ್ದಾರೆ.

ಪ್ರಿಟೋರಿಯಾ ವಿವಿಯ ವನ್ಯಜೀವಿ ತಜ್ಞರ ಪ್ರೊ. ಆಡ್ರಿಯನ್‌ ಟೋರ್‌ಡಿಫ್‌ ಮತ್ತು ನಮೀಬಿಯಾದ ಚೀತಾ ಸಂರಕ್ಷಣಾ ನಿಧಿಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಲಾರಿ ಮಾರ್ಕ್ ಸುಪ್ರೀಂಕೋರ್ಟ್ಗೆ ರವಾನಿಸಿದ್ದಾರೆ. ಈ ಪತ್ರಕ್ಕೆ ಆಫ್ರಿಕಾ ಮೂಲದ ವನ್ಯಜೀವಿ ತಜ್ಞರಾದ ಪ್ರೊ. ಆಡ್ರಿಯನ್‌ ಟೋರ್‌ಡಿಫ್‌, ವಿನ್ಸೆಂಟ್‌ ವ್ಯಾನ್‌ ಡೆರ್‌ ಮೆರ್ವೆ, ಡಾ. ಮೈಕ್‌ ಟೋಫ್ಟ್, ಡಾ. ಆ್ಯಂಡಿ ಫ್ರೇಸರ್‌ ಸಹಿ ಹಾಕಿದ್ದಾರೆ. ಆದರೆ ಈ ಪತ್ರ ಬಹಿರಂಗವಾದ ಬೆನ್ನಲ್ಲೇ, ಪತ್ರವನ್ನು ಸುಪ್ರೀಂಕೋರ್ಟ್‌ಗೆ ಕಳುಹಿಸಲು ನಮ್ಮ ಅನುಮತಿ ಪಡೆದಿರಲಿಲ್ಲ ಎಂದು ವಿನ್ಸೆಂಟ್‌ ಮತ್ತು ಫ್ರೇಸರ್‌ ಹೇಳಿದ್ದಾರೆ.

Tap to resize

Latest Videos

Breaking: ಮಧ್ಯಪ್ರದೇಶದಲ್ಲಿ ಮತ್ತೊಂದು ಚೀತಾ ಮರಣ ಈವರೆಗೂ 9 ಸಾವು!

ಪತ್ರದಲ್ಲೇನಿದೆ?:

ಪತ್ರದಲ್ಲಿ, ‘ಇಡೀ ಯೋಜನೆಯಲ್ಲಿ ನಮ್ಮ ಪಾತ್ರವನ್ನು ಭಾರತದ ಚೀತಾ ನಿರ್ವಹಣೆ ಕುರಿತಾದ ಸಂಚಲನಾ ಸಮಿತಿ ಪೂರ್ಣವಾಗಿ ನಿರ್ಲಕ್ಷಿಸಿದೆ. ಪ್ರಸಕ್ತ ಯೋಜನೆಯಲ್ಲಿ ಭಾಗಿಯಾಗಿರುವ ಪಶುವೈದ್ಯರಿಗೆ ವೈಜ್ಞಾನಿಕ ತರಬೇತಿ ಕೊರತೆ ಇದೆ ಮತ್ತು ಬಹುತೇಕ ತಜ್ಞರು ಇಂಥ ಯೋಜನೆ ನಿರ್ವಹಿಸಲು ಅನನುಭವಿಗಳಾಗಿದ್ದಾರೆ. ಇಂಥ ಯೋಜನೆಯಲ್ಲಿ ಪ್ರಾಣಿಗಳ ಸಾವು ಸಹಜವಾದರೂ, ಕಾಲಕಾಲಕ್ಕೆ ಮತ್ತು ಸೂಕ್ತ ರೀತಿಯಲ್ಲಿ ಪರಿಶೀಲಿಸಿದ್ದರೆ ಕೆಲ ಚೀತಾಗಳ ಜೀವ ಉಳಿಸಬಹುದಿತ್ತು. ಕುನೋದಲ್ಲಿ ನಡೆಯುತ್ತಿರುವ ಯಾವುದೇ ಬೆಳವಣಿಗೆ ಬಗ್ಗೆಯೂ ನಮಗೆ ಮಾಹಿತಿ ನೀಡಲಾಗುತ್ತಿಲ್ಲ, ಇಂಥ ವಿಷಯಗಳನ್ನು ನಾವು ಕೇವಲ ಮಾಧ್ಯಮದ ಮೂಲಕ ಪಡೆಯುತ್ತಿದ್ದೇವೆ. ಈ ಯೋಜನೆ ಕೇವಲ ಭಾರತಕ್ಕೆ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀತಾ ಸಂರಕ್ಷಣೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಸ್ತಾಪಿಸಲಾಗಿದೆ.

ಜೊತೆಗೆ, ಕುನೋದಲ್ಲಿ ಬದುಕುಳಿದಿರುವ ಎಲ್ಲಾ ಚೀತಾಗಳನ್ನು ತಜ್ಞ ಪಶುವೈದ್ಯರ ತಂಡದಿಂದ ಪರಿಶೀಲನೆಗೆ ಒಳಪಡಿಸಬೇಕು. ಚೀತಾಗಳ ಆರೋಗ್ಯದ ಕುರಿತಾದ ತತ್‌ಕ್ಷಣದ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಬೇಕು, ಸಂಚಾಲನಾ ಸಮಿತಿಯ ಕಾರ್ಯಚಟುವಟಿಕೆಯಲ್ಲಿ ನಮ್ಮನ್ನೂ ಸಕ್ರಿಯವಾಗಿ ಪಾಲ್ಗೊಳ್ಳಲು ಬಿಡಬೇಕು. ಬಲವಂತವಾಗಿ ಹುದ್ದೆಯಿಂದ ತೆಗೆದುಹಾಕಲಾದ ಪ್ರೊ. ವೈ.ವಿ.ಜಲ ಅವರನ್ನು ಮರಳಿ ಯೋಜನೆ ಉಸ್ತುವಾರಿಗೆ ನಿಯೋಜಿಸಬೇಕು ಎಂದು ತಜ್ಞರ ತಂಡ ತನ್ನ 2 ಪತ್ರದಲ್ಲಿ ಪ್ರಸ್ತಾಪಿಸಿದೆ.

 ಸಣ್ಣ ವಯಸ್ಸಿನ ಚೀತಾ ಆಮದು ಸೂಕ್ತ

ನವದೆಹಲಿ: ಆಫ್ರಿಕಾ ಮತ್ತು ನಮೀಬಿಯಾದಿಂದ ವಯಸ್ಕ ಚೀತಾಗಳನ್ನು ಆಮದು ಮಾಡಿಕೊಳ್ಳುವ ಬದಲು ಸಣ್ಣ ವಯಸ್ಸಿನ ಚೀತಾಗಳನ್ನು ತರುವುದು ಸೂಕ್ತ ಎಂದು ಅಂತಾರಾಷ್ಟ್ರೀಯ ವನ್ಯಜೀವಿ ತಜ್ಞರ ತಂಡ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದೆ.

ಸರಣಿ ಸಾವು ಹಿನ್ನೆಲೆ: ಚೀತಾಗಳ ರೇಡಿಯೋ ಕಾಲರ್‌ ತೆಗೆದು ಆರೋಗ್ಯ ತಪಾಸಣೆ

ವಯಸ್ಕ ಚೀತಾಗಳಿಗೆ ಹೋಲಿಸಿದರೆ ಸಣ್ಣ ಚೀತಾಗಳು ಇಲ್ಲಿನ ಪರಿಸರಕ್ಕೆ ಬೇಗವಾಗಿ ಹೊಂದಿಕೊಳ್ಳುತ್ತದೆ. ಅವುಗಳ ನಿರ್ವಹಣೆಯೂ ಸುಲಭ. ಅವುಗಳ ಆರೋಗ್ಯದ ಮೇಲೆ ನಿಗಾ ಸುಲಭ. ಜೊತೆಗೆ ಸಣ್ಣ ಮರಿಗಳು ಪರಸ್ಪರ ಕಾದಾಡಿ ಸಾವನ್ನಪ್ಪುವ ಸಾಧ್ಯತೆ ಕಡಿಮೆ ಇರುತ್ತದೆ. ಸಣ್ಣ ಚೀತಾಗಳು ಹೊಸ ಪರಿಸರದಲ್ಲಿ ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತದೆ ಮತ್ತು ಅವುಗಳ ಜೀವಿತಾವಧಿಯೂ ಹೆಚ್ಚು. ಆಫ್ರಿಕಾದಲ್ಲಿ ಕಂಡುಕೊಂಡ ಪಾಠ ಈ ವಿಷಯವನ್ನು ಸ್ಪಷ್ಟಪಡಿಸುತ್ತದೆ ಎಂದು ತಜ್ಞರು ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಇದೇ ವೇಳೆ ಕುನೋದಲ್ಲಿ ಚೀತಾಗಳ ಸಾವು ದುರದೃಷ್ಟಕರವಾದರೂ, ಅವುಗಳ ಸಾವಿನ ಪ್ರಮಾಣ, ಇಂಥ ಯೋಜನೆಗಳಲ್ಲಿ ಕಂಡುಬರುವ ನಿಗದಿತ ಮಿತಿಯಲ್ಲೇ ಇದೆ ಎಂದು ವರದಿ ಹೇಳಿದೆ. ಆಫ್ರಿಕಾ ಮತ್ತು ನಮೀಬಿಯಾದಿಂದ ಭಾರತ ಸರ್ಕಾರ ಈವರೆಗೆ 24 ಚೀತಾ ಆಮದು ಮಾಡಿಕೊಂಡಿದೆ. ಭಾರತಕ್ಕೆ ಬಂದ ಬಳಿಕ 4 ಮರಿಗಳು ಜನ್ಮತಾಳಿವೆ. ಹೀಗೆ ಒಟ್ಟು 24 ಚೀತಾಗಳ ಪೈಕಿ 9 ಚೀತಾ ಸಾವನ್ನಪ್ಪಿವೆ. 15 ಮಾತ್ರ ಬದುಕುಳಿದಿವೆ.

click me!