ಅಳಿದು ಹೋದ/ಅಳಿವಿನ ಅಂಚಿನ ಪ್ರಾಣಿ ಪುನರುತ್ಥಾನ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಯೋಜನೆಯ ಅಂಗವಾಗಿ ಪುನಃ ಚೀತಾವನ್ನು ಭಾರತಕ್ಕೆ ಪರಿಚಯಿಸಲಾಗುತ್ತಿದೆ. ತಜ್ಞರ ಪ್ರಕಾರ ‘ಚೀತಾ’ ಪದವು ಸಂಸ್ಕೃತದ ‘ಚಿತ್ರಕಾ’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಚುಕ್ಕೆಗಳಿರುವಂತಹದ್ದು’ ಎಂದಾಗಿದೆ
ಗ್ವಾಲಿಯರ್ (ಸೆ.17) : ಅಳಿದು ಹೋದ/ಅಳಿವಿನ ಅಂಚಿನ ಪ್ರಾಣಿ ಪುನರುತ್ಥಾನ ಯೋಜನೆಯನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಈ ಯೋಜನೆಯ ಅಂಗವಾಗಿ ಪುನಃ ಚೀತಾವನ್ನು ಭಾರತಕ್ಕೆ ಪರಿಚಯಿಸಲಾಗುತ್ತಿದೆ. ತಜ್ಞರ ಪ್ರಕಾರ ‘ಚೀತಾ’ ಪದವು ಸಂಸ್ಕೃತದ ‘ಚಿತ್ರಕಾ’ ಎಂಬ ಪದದಿಂದ ಬಂದಿದೆ. ಇದರ ಅರ್ಥ ‘ಚುಕ್ಕೆಗಳಿರುವಂತಹದ್ದು’ ಎಂದಾಗಿದೆ. ಚೀತಾ, ಚಿರತೆ, ಜಾಗ್ವಾರ್... ಇವು ಮೇಲ್ನೋಟಕ್ಕೆ ನೋಡಲು ಒಂದೇ ಎನ್ನಿಸಿದರೂ ಬೇರೆ ಬೇರೆ ಪ್ರಾಣಿಗಳು. ಜಾಗ್ವಾರ್, ಚೀತಾಗೆ ಹೋಲಿಸಿದರೆ ಚೀತಾ ಸಪೂರವಾಗಿದೆ. ಚೀತಾ ಮುಖದ ಮೇಲೆ 2 ಗೆರೆ ಇರುತ್ತವೆ ಹಾಗೂ ಚುಕ್ಕೆ ಕಮ್ಮಿ ಇರುತ್ತವೆ. ಚಿರತೆ ಮುಖದ ಮೇಲೆ ಗೆರೆ ಇರಲ್ಲ. ಚುಕ್ಕೆಗಳಲ್ಲೂ ವ್ಯತ್ಯಾಸವಿದೆ. ಚೀತಾಗಿಂತ ಚಿರತೆ ಬಲಿಷ್ಠ ಎನ್ನಲಾಗಿದೆ.
ಮೋದಿ ಜನ್ಮದಿನದಂದೇ ಭಾರತಕ್ಕೆ ಆಫ್ರಿಕಾ ಚೀತಾ
ಎಲ್ಲಿಂದ ಚೀತಾ ಆಗಮನ?
ನಮೀಬಿಯಾ ದೇಶದಿಂದ 8 ಚೀತಾ ತರಿಸಿಕೊಳ್ಳಲಾಗುತ್ತಿದೆ. ಇದರಲ್ಲಿ 5 ಹೆಣ್ಣು, 3 ಗಂಡು. ಇವುಗಳಲ್ಲಿ ಜೋಡಿಯಲ್ಲೇ ಬೇಟೆಯಾಡುವ 2 ಗಂಡು ಸಹೋದರ ಚೀತಾಗಳು ಹಾಗೂ ಇತ್ತೀಚಿನ ಕಾಡ್ಗಿಚ್ಚಿನಲ್ಲಿ ಸಂರಕ್ಷಿಸಲ್ಪಟ್ಟಹೆಣ್ಣು ಚೀತಾ ಮರಿ ಕೂಡಾ ಇವೆ.
ಕುನೋ ಅರಣ್ಯಕ್ಕೆ ಏಕೆ?
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಈಗಾಗಲೇ ಅಳಿವಿನಂಚಿನಲ್ಲಿರುವ ಪ್ರಭೇದ ಎನಿಸಿದ ಏಷಿಯಾಟಿಕ್ ಸಿಂಹಗಳಿದ್ದು, ಅವುಗಳ ವಾಸಕ್ಕೆ ಅನುಕೂಲಕರ ಪರಿಸರವಿದೆ. ಇದು ಚೀತಾ ವಾಸಕ್ಕೂ ಯೋಗ್ಯವೆನಿಸಿದ ಕಾರಣ ಇಲ್ಲಿಯೇ ಚೀತಾಗಳನ್ನು ಇರಿಸಲಾಗುವುದು. ಚೀತಾಗಳ ಬೇಟೆಗಾಗಿ ಚಿಂಕಾರ, ಜಿಂಕೆ ಹಾಗೂ ಕೃಷ್ಣಮೃಗಗಳು ಇಲ್ಲಿ ವ್ಯಾಪಕ ಸಂಖ್ಯೆಯಲ್ಲಿ ಇವೆ.
ಭಾರತದಲ್ಲಿತ್ತು ಸಾವಿರಾರು ಚೀತಾ:
ದಶಕಗಳ ಹಿಂದೆ ಭಾರತದಲ್ಲಿ ಸಾವಿರಾರು ಚೀತಾಗಳು ಅರಣ್ಯದಲ್ಲಿ ಸ್ವಚ್ಛಂದವಾಗಿ ವಿಹರಿಸಿಕೊಂಡಿದ್ದವು. ಆದರೆ ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಅವುಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಕುಸಿಯಿತು ಅತಿಯಾದ ಬೇಟೆ, ಅವುಗಳ ನೈಸರ್ಗಿಕ ಆವಾಸಸ್ಥಾನದ ನಾಶದಿಂದ ದೇಶದಲ್ಲಿ ಚೀತಾ ಸಂತತಿ ಅಳಿಯಿತು. ಮಧ್ಯಪ್ರದೇಶದ ಮಹಾರಾಜ ರಾಮಾನುಜ ಪ್ರತಾಪ್ ಸಿಂಗ್ ದೇವ್ ಅವರು 1947ರಲ್ಲಿ ಕೊನೆಯ ಚೀತಾವನ್ನು ಕೊಂದಿದ್ದರು. 1952ರಲ್ಲಿ ಭಾರತದಿಂದ ಚೀತಾ ನಾಮಾವಶೇಷವಾಗಿದೆ ಎಂದು ಘೋಷಿಸಲಾಗಿತ್ತು.
ಮುಂದೆ ಕರ್ನಾಟಕಕ್ಕೂ ಬರಲಿದೆ:
ಹಾಲಿ ತಂದ ಚೀತಾಗಳು ಕುನೋ ಅರಣ್ಯದಲ್ಲಿ ಹೊಂದಿಕೊಂಡ ಬಳಿಕ ಮುಂದಿನ ದಿನಗಳಲ್ಲಿ ಕರ್ನಾಟಕ, ರಾಜಸ್ಥಾನ ಮತ್ತು ಗುಜರಾತ್ ಅರಣ್ಯಗಳಲ್ಲೂ ಇಂಥದ್ದೇ ಚೀತಾಗಳನ್ನು ತಂದುಬಿಡುವ ಉದ್ದೇಶ ಸರ್ಕಾರಕ್ಕಿದೆ.
ಚಂಬಲ್ ಡಕಾಯಿತ್ ಈಗ ‘ಚೀತಾ ಮಿತ್ರ’:
ಹಿಂದೆ ಚಂಬಲ್‌ನಲ್ಲಿ ಡಕಾಯಿತನಾಗಿದ್ದ ರಮೇಶ್ ಸಿಕರ್‌ವಾರ್ ಈಗ ‘ಚೀತಾ ಮಿತ್ರ’ನಾಗಿದ್ದಾರೆ. ಚೀತಾಗಳ ಅರಣ್ಯದಿಂದ ಸಮೀಪದ ಗ್ರಾಮಗಳತ್ತ ಬಂದರೆ ಅವುಗಳ ಮೇಲೆ ದಾಳಿ ಮಾಡದೇ ಕೂಡಲೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಸ್ಥಳೀಯರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. Project Cheetah: ವೈಲ್ಡ್‌ಲೈಫ್ ತಜ್ಞರು ಕುತೂಹಲದಿಂದ ನೋಡುತ್ತಿರುವ ಪ್ರಯೋಗ