* ನೂಪುರ್ ಬೆಂಬಲಿಸಿದ್ದ ಟೈಲರ್ ತಲೆಕಡಿದ ಮತಾಂಧ ದುರುಳರು
* ರಾಜಸ್ಥಾನದಲ್ಲಿ ಐಸಿಸ್ ರೀತಿ ಹಿಂದೂ ವ್ಯಕ್ತಿಯ ಶಿರಚ್ಛೇದ
* ಗ್ರಾಹಕರಂತೆ ಅಂಗಡಿಗೆ ಅಂಗಡಿಗೆ ಪ್ರವೇಶ
* ಘಟನೆಯನ್ನು ಭಯೋತ್ಪಾದಕ ಘಟನೆ ಎಂದ ಕೇಂದ್ರ
ಜೈಪುರ(ಜೂ.29): ಟೈಲರ್‌ನ ಕ್ರೂರ ಹತ್ಯೆಯನ್ನು ಭಯೋತ್ಪಾದಕ ದಾಳಿ ಎಂದು ಪರಿಗಣಿಸಿರುವ ಕೇಂದ್ರವು ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆಯ (ಎನ್‌ಐಎ) ತಂಡವನ್ನು ಮಂಗಳವಾರ ಉದಯಪುರಕ್ಕೆ ಕಳುಹಿಸಿದೆ. ಮೇಲ್ನೋಟಕ್ಕೆ ಇದೊಂದು ಭಯೋತ್ಪಾದಕ ದಾಳಿಯಂತೆ ಕಾಣುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವನ್ನು ಉದಯಪುರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಇಲ್ಲಿ ತಿಳಿಸಿದ್ದಾರೆ. ಭಯೋತ್ಪಾದನಾ ನಿಗ್ರಹ ಕಾಯಿದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆಯಡಿ ಪ್ರಕರಣ ದಾಖಲಾದ ನಂತರ ಅದನ್ನು ತನಿಖೆಗಾಗಿ ಎನ್‌ಐಎಗೆ ಹಸ್ತಾಂತರಿಸಬಹುದು. ಉದಯ್‌ಪುರದ ಧನ್ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ವ್ಯಕ್ತಿಗಳು ಟೈಲರ್‌ನ ಕತ್ತು ಸೀಳಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದು, ಇಸ್ಲಾಂ ಧರ್ಮಕ್ಕೆ ಮಾಡಿದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಈ ಕೃತ್ಯವೆಸಗಿರುವುದಾಗಿ ಹೇಳಿದ್ದಾರೆ.
ಘಟನೆಯ ಹಿನ್ನೆಲೆ ಕೋಮು ಗಲಭೆ ಸೃಷ್ಟಿಯಾಗುವ ಸಾಧ್ಯತೆ ಇರುವುದರಿಂದ ಉದಯ್‌ಪುರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಉದಯ್‌ಪುರದ 7 ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ 8 ಗಂಟೆಯಿಂದ ಕರ್ಫ್ಯೂ ಜಾರಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ 1 ತಿಂಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, 24 ಗಂಟೆಗಳ ಅವಧಿಗೆ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಮತ್ತೊಂದೆಡೆ ಘಟನೆ ಕುರಿತು ತನಿಖೆಗೆ ರಾಷ್ಟ್ರೀಯ ತನಿಖಾ ದಳ ದೆಹಲಿಯಿಂದ ರಾಜಸ್ಥಾನದತ್ತ ಹೊರಟಿದೆ.
ಘಟನೆಯನ್ನು ಕಟುವಾಗಿ ಟೀಕಿಸಿರುವ ಬಿಜೆಪಿ, ರಾಜಸ್ಥಾನ ತಾಲಿಬಾನ್ ರಾಜ್ಯವಾಗುವತ್ತ ಹೆಜ್ಜೆ ಇಟ್ಟಿದೆ ಎಂದು ಕಿಡಿಕಾರಿದೆ. ಈ ನಡುವೆ ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿದೆ. ಜನರು ಶಾಂತಿ ಕಾಪಾಡಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮನವಿ ಮಾಡಿದ್ದಾರೆ.
ಹಗಲು ಹೊತ್ತಿನಲ್ಲೇ ಕೊಲೆ ಮಾಡಿದ ಆರೋಪಿಗಳಿಬ್ಬರೂ ಆನ್‌ಲೈನ್‌ನಲ್ಲಿ ವಿಡಿಯೋ ಪೋಸ್ಟ್ ಮಾಡುವ ಮೂಲಕ ಅಪರಾಧದ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದು, ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ವೀಡಿಯೊ ಕ್ಲಿಪ್‌ನಲ್ಲಿ, ಆಪಾದಿತ ಆಕ್ರಮಣಕಾರ ತಾನು ವ್ಯಕ್ತಿಯ ಶಿರಚ್ಛೇದ ಮಾಡಿದ್ದೇನೆ ಎಂದು ಹೇಳುವುದನ್ನು ಕೇಳಬಹುದು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿಯವರಿಗೂ ಈ ಚಾಕು ತಲುಪಲಿದೆ ಎಂದು ಬೆದರಿಕೆ ಹಾಕಿದ್ದಾರೆ. ಪ್ರವಾದಿ ಮೊಹಮ್ಮದ್ ಕುರಿತು ಹೇಳಿಕೆಗಾಗಿ ಬಿಜೆಪಿಯಿಂದ ಅಮಾನತುಗೊಂಡಿರುವ ನೂಪುರ್ ಶರ್ಮಾ ಅವರನ್ನು ದಾಳಿಕೋರರು ಪರೋಕ್ಷವಾಗಿ ಉಲ್ಲೇಖಿಸಿದ್ದಾರೆ.
ಏನಾಯ್ತು?:
ಉದಯ್‌ಪುರದ ಧನಮಂಡಿ ಪ್ರದೇಶದಲ್ಲಿರುವ ಕನ್ಹಯ್ಯಾ ಲಾಲ್ ಎಂಬಾತನ ಟೈಲರ್ ಅಂಗಡಿಗೆ ಆಗಮಿಸಿದ ಮಹಮ್ಮದ್ ರಿಯಾಜ್ ಅಖ್ತಾರಿ ಮತ್ತು ಮಹಮ್ಮದ್ ಬಟ್ಟೆಹೊಲೆಸುವ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಂಗಿಯ ಅಳತೆಯನ್ನು ಕನ್ಹಯ್ಯಾ ಲಾಲ್ ತೆಗೆದುಕೊಳ್ಳುವ ವೇಳೆ ಏಕಾಏಕಿ ದೊಡ್ಡ ಆಯುಧವೊಂದನ್ನು ಹೊರತೆಗೆದ ರಿಯಾಜ್ ಕತ್ತು ಕತ್ತರಿಸಿ ಹಾಕಿದ್ದಾನೆ. ಈ ಇಡೀ ಘಟನಾವಳಿಗಳನ್ನು ಮೊಹಮ್ಮದ್ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.
ಇದಾದ ಕೆಲ ಹೊತ್ತಿನಲ್ಲೇ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ ಧರ್ಮಾಂಧರು, ಇಸ್ಲಾಂಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ನಮ್ಮ ಕತ್ತಿ ಅವರನ್ನು ಬಲಿ ಪಡೆಯಲಿದೆ ಎಂದಿದ್ದಾರೆ. ಅಲ್ಲದೆ ಪರೋಕ್ಷವಾಗಿ ನೂಪುರ್ ಶರ್ಮಾ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.
ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಉದಯ್‌ಪುರ ಸೇರಿದಂತೆ ಎಲ್ಲೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಕೋಮುಗಲಭೆಯ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ್ತು ನೆರೆಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.