ಸಲಿಂಗಿಗಳ ಮದುವೆಗೆ ಕೇಂದ್ರ ಸರ್ಕಾರದ ತೀವ್ರ ವಿರೋಧ: ಇಂದು ಸುಪ್ರೀಂನಲ್ಲಿ ಮಹತ್ವದ ವಿಚಾರಣೆ

By Kannadaprabha News  |  First Published Mar 13, 2023, 9:03 AM IST

ನಾಲ್ವರು ಸಲಿಂಗಿ ದಂಪತಿಗಳು ತಮ್ಮ ಮದುವೆಯನ್ನು ನೋಂದಣಿ ಮಾಡಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕೇಂದ್ರ ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸಿದೆ.


ನವದೆಹಲಿ (ಮಾರ್ಚ್‌ 13, 2023): ಕೆಲ ವರ್ಷಗಳ ಹಿಂದೆ ದೇಶದಲ್ಲಿ ಸಲಿಂಗ ಕಾಮವನ್ನು ಸುಪ್ರೀಂಕೋರ್ಟ್‌ ಅಪರಾಧ ಮುಕ್ತಗೊಳಿಸಿದ್ದರೂ ಸಲಿಂಗಿಗಳ ಮದುವೆ ಅಥವಾ ಲಿವಿಂಗ್‌ ಟುಗೆದರ್‌ಗೆ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಇದೀಗ ವಿರೋಧ ವ್ಯಕ್ತಪಡಿಸಿದೆ. ಸಲಿಂಗಿಗಳ ಮದುವೆ, ಲಿವಿಂಗ್‌ ಟುಗೆದರ್‌ ಹಾಗೂ ಲೈಂಗಿಕ ಸಂಬಂಧವು ಭಾರತೀಯ ಕೌಟುಂಬಿಕ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಕೇಂದ್ರ ಸರ್ಕಾರ ವಾದ ಮಂಡಿಸಿದೆ. ಜೊತೆಗೆ ಇಂಥ ಸಂಬಂಧಕ್ಕೆ ನೀಡುವ ಮಾನ್ಯತೆ, ಅತ್ಯಂತ ಸಮತೋಲಿತವಾಗಿರುವ ವೈಯಕ್ತಿಕ ಕಾನೂನು ವ್ಯವಸ್ಥೆ ಮತ್ತು ಸ್ವೀಕೃತವಾಗಿರುವ ಸಾಮಾಜಿಕ ಮೌಲ್ಯಗಳನ್ನು ನಾಶಗೊಳಿಸುತ್ತದೆ ಎಂದು ಹೇಳಿದೆ.

ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ (Indian Family Concept) ಪುರುಷನು (Male) ಗಂಡನೆಂದೂ, ಮಹಿಳೆಯು (Female) ಹೆಂಡತಿಯೆಂದೂ, ಅವರ ಸಂಬಂಧದಿಂದ ಜನಿಸುವ ಸಂತಾನವನ್ನು ಮಗು (Baby) ಎಂದೂ ಗುರುತಿಸಲಾಗುತ್ತದೆ. ಇದಕ್ಕೆ ವ್ಯತಿರಿಕ್ತವಾದ ಯಾವುದೇ ವ್ಯವಸ್ಥೆಯು ಕೌಟುಂಬಿಕ ವ್ಯವಸ್ಥೆ ಎಂದು ಕರೆಸಿಕೊಳ್ಳುವುದಿಲ್ಲ. ಹೀಗಾಗಿ ಈ ವ್ಯವಸ್ಥೆಗೆ ವಿರುದ್ಧವಾದ ಸಂಬಂಧವನ್ನೂ ಮದುವೆ ಎಂದು ಪರಿಗಣಿಸಬೇಕೆಂಬ ಸಲಿಂಗಿಗಳ ಅರ್ಜಿಯನ್ನು ತಿರಸ್ಕರಿಸಬೇಕು. ಸಲಿಂಗ ಕಾಮವನ್ನು ಅಪರಾಧ ಮುಕ್ತಗೊಳಿಸಿದ್ದರೂ, ಅದನ್ನೇ ಆಧಾರವಾಗಿಟ್ಟುಕೊಂಡು ಅರ್ಜಿದಾರರು ಸಲಿಂಗ ವಿವಾಹವನ್ನು ದೇಶದ ಕಾನೂನಿನ ಅನ್ವಯ ಮಾನ್ಯಗೊಳಿಸುವುದು ತಮ್ಮ ಮೂಲಭೂತ ಹಕ್ಕು ಎಂದು ವಾದ ಮಂಡಿಸಲಾಗದು ಎಂದು ಸರ್ಕಾರ ಸುಪ್ರೀಂಕೋರ್ಟ್‌ ಮುಂದೆ ವಾದ ಮಂಡಿಸಿದೆ.

Tap to resize

Latest Videos

ಇದನ್ನು ಓದಿ: ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿದ್ದ ಎಲ್ಲಾ ಅರ್ಜಿ ತನಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ !

ಆದರೆ ಇದೇ ವೇಳೆ, ಸದ್ಯಕ್ಕೆ ತಾನು ಭಿನ್ನಲಿಂಗೀಯ ಸಂಬಂಧಕ್ಕೆ ಮಾತ್ರವೇ ಮಾನ್ಯತೆ ನೀಡಿದ್ದರೂ, ಇತರೆ ವಿವಾಹದ ಮಾದರಿ ಅಥವಾ ಸಮ್ಮಿಲನ ಅಥವಾ ವೈಯಕ್ತಿಕ ಸಮ್ಮತಿಯ ಸಂಬಂಧಗಳು ಕಾನೂನು ಬಾಹಿರವೇನಲ್ಲ ಎಂದೂ ಸ್ಪಷ್ಟಪಡಿಸಿದೆ.

ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಕೋರಿರುವ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರನ್ನೊಳಗೊಂಡ ನ್ಯಾಯಪೀಠ ಸೋಮವಾರ ವಿಚಾರಣೆ ಆರಂಭಿಸಲಿದ್ದು, ಅದಕ್ಕೂ ಮುನ್ನಾ ದಿನ ಕೇಂದ್ರ ಸರ್ಕಾರ ಈ ಅಫಿಡವಿಟ್‌ ಸಲ್ಲಿಸಿದೆ.

ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಬಿಜೆಪಿ ಸಂಸದ ಸುಶೀಲ್‌ ಮೋದಿ ಪ್ರಬಲ ವಿರೋಧ

ಸಲಿಂಗಿಗಳ ಮದುವೆ ನೋಂದಣಿ ತಪ್ಪು:
ಸಮಾನ ಲಿಂಗಿಗಳ ಮದುವೆಯನ್ನು ನೋಂದಣಿ ಮಾಡುವುದು ಪ್ರಸ್ತುತ ಜಾರಿಯಲ್ಲಿರುವ ವೈಯಕ್ತಿಕ ಕಾನೂನುಗಳಿಗೆ ವಿರುದ್ಧವಾಗಿದೆ. ಇಂತಹ ಸಂಬಂಧಗಳು ನಿಷೇಧಿತ ಸಂಬಂಧದ ವ್ಯಾಪ್ತಿಗೆ ಬರುತ್ತವೆ. ಇವು ಮದುವೆ ಎಂಬ ಸಾಂಸ್ಥಿಕ ವ್ಯವಸ್ಥೆಯಡಿ ಬರುವುದಿಲ್ಲ. ಜೊತೆಗೆ ಇವುಗಳಿಗೆ ಸಾಂಪ್ರದಾಯಿಕ ಹಾಗೂ ಭಾರತೀಯ ಆಚರಣೆಗಳಿಗೆ ಸಂಬಂಧಿಸಿದ ಕಾನೂನಿನಲ್ಲೂ ಮಾನ್ಯತೆಯಿಲ್ಲ ಎಂದು ಸರ್ಕಾರ ಹೇಳಿದೆ.

ಮದುವೆಯೆಂಬ ಕಲ್ಪನೆಯೇ ಇಬ್ಬರು ವಿರುದ್ಧ ಲಿಂಗಿಗಳ ನಡುವಿನ ಸಂಬಂಧವನ್ನು ಒಳಗೊಂಡಿದೆ. ಅದರ ವ್ಯಾಖ್ಯಾನವು ಸಾಮಾಜಿಕ, ಸಾಂಸ್ಕೃತಿಕ, ಕಾನೂನಾತ್ಮಕ ಚೌಕಟ್ಟನ್ನು ಹೊಂದಿದೆ. ನ್ಯಾಯಾಂಗದ ಮಧ್ಯಪ್ರವೇಶದ ಮೂಲಕ ಆ ವ್ಯಾಖ್ಯಾನವನ್ನು ಭಗ್ನಗೊಳಿಸುವ ಅಥವಾ ತಿಳಿಗೊಳಿಸುವ ಕೆಲಸ ಮಾಡಬಾರದು. ಮದುವೆಯಾಗುವ ಇಬ್ಬರು ವ್ಯಕ್ತಿಗಳು ಒಂದು ವ್ಯವಸ್ಥೆಯಡಿ ಬರುತ್ತಾರೆ. ಅದಕ್ಕೆ ಸಾರ್ವಜನಿಕವಾದ ಔಚಿತ್ಯವಿದೆ. ಅದೊಂದು ಸಾಮಾಜಿಕ ವ್ಯವಸ್ಥೆಯಾಗಿದ್ದು, ನಾನಾ ರೀತಿಯ ಹಕ್ಕುಗಳು ಹಾಗೂ ಜವಾಬ್ದಾರಿಗಳು ಕೂಡ ಅದರಡಿ ಬರುತ್ತವೆ. ಮದುವೆಯನ್ನು ನೋಂದಣಿ ಮಾಡಿಸುವುದು ಅದಕ್ಕೆ ಸಾಮಾನ್ಯ ಕಾನೂನು ಮಾನ್ಯತೆ ನೀಡುವುದಕ್ಕಿಂತ ಹೆಚ್ಚಿನದಾಗಿದೆ. ಇಬ್ಬರು ಸಮಾನ ಲಿಂಗಿಗಳ ನಡುವಿನ ಮದುವೆಯನ್ನು ನೋಂದಣಿ ಮಾಡಿದರೆ ಅದರಿಂದ ಬೇರೆ ಬೇರೆ ರೀತಿಯ ಕೌಟುಂಬಿಕ ಸಮಸ್ಯೆಗಳು ಉದ್ಭವಿಸುತ್ತವೆ ಎಂದೂ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ನಾಲ್ವರು ಸಲಿಂಗಿ ದಂಪತಿಗಳು ತಮ್ಮ ಮದುವೆಯನ್ನು ನೋಂದಣಿ ಮಾಡಬೇಕೆಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಕೇಂದ್ರ ಸರ್ಕಾರ ತನ್ನ ವಿರೋಧ ವ್ಯಕ್ತಪಡಿಸಿದೆ.

ಕೇಂದ್ರದ ವಾದ ಏನು?
- ಸಲಿಂಗಿಗಳ ವಿವಾಹಕ್ಕೆ ಮಾನ್ಯತೆ ನೀಡಿದರೆ ದೇಶದಲ್ಲಿ ಸ್ವೀಕೃತವಾಗಿರುವ ಸಾಮಾಜಿಕ ಮೌಲ್ಯ ನಾಶ ಆಗುತ್ತದೆ
- ವ್ಯವಸ್ಥೆಗೆ ವಿರುದ್ಧವಾದ ಸಂಬಂಧವನ್ನೂ ಮದುವೆ ಎಂದು ಪರಿಗಣಿಸಬೇಕೆಂಬ ಬೇಡಿಕೆ ತಿರಸ್ಕರಿಸಬೇಕು
- ಸಮಾನ ಲಿಂಗಿಗಳ ಮದುವೆ ನೋಂದಣಿ ಮಾಡುವುದು ಜಾರಿಯಲ್ಲಿರುವ ಕಾನೂನಿಗೆ ವಿರುದ್ಧ
- ಇಂತಹವುಗಳು ನಿಷೇಧಿತ ಸಂಬಂಧದ ವ್ಯಾಪ್ತಿಗೆ ಬರುತ್ತವೆ.. ಮದುವೆ ವ್ಯವಸ್ಥೆ ವ್ಯಾಪ್ತಿಗೆ ಬರುವುದಿಲ್ಲ
- ಸಮಾನ ಲಿಂಗಿಗಳ ವಿವಾಹ ನೋಂದಣಿಯಿಂದ ಹಲವು ಕೌಟುಂಬಿಕ ಸಮಸ್ಯೆಗಳು ಸೃಷ್ಟಿಯಾಗುತ್ತವೆ

click me!