
ನವದೆಹಲಿ(ಮೇ.12): ದೇಶಾದ್ಯಂತ ಹಲವು ರಾಜ್ಯಗಳಲ್ಲಿ ಉಷ್ಣ ಮಾರುತದ ಪ್ರಭಾವ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳನ್ನು ಬಿಸಿಲಿನ ಅಡ್ಡ ಪರಿಣಾಮಗಳಿಂದ ಕಾಪಾಡಲು ಶಾಲಾ ಸಮಯದಲ್ಲಿ ಬದಲಾವಣೆ, ಸಮವಸ್ತ್ರದಲ್ಲಿ ಸಡಿಲಿಕೆ ಸೇರಿದಂತೆ ಕೆಲವು ಮಾರ್ಪಾಡು ಮಾಡಿಕೊಳ್ಳುವಂತೆ ಕೇಂದ್ರ ಶಿಕ್ಷಣ ಸಚಿವಾಲಯವು ರಾಜ್ಯಗಳಿಗೆ ಸಲಹೆ ನೀಡಿದೆ.
ಆದರೆ ಶಾಲೆ ಆರಂಭ ಮುಂದೂಡಿಕೆ ಬೇಡ ಎಂದಿರುವ ಅದು, ಈ ಕುರಿತ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ದೇಶದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಪ್ರಮಾಣ 45 ಡಿ.ಸೆ.ಗಿಂತ ಹೆಚ್ಚಿದ್ದು, ಶಾಲೆಗಳು ಆರಂಭದ ದಿನಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಶಾಲೆ ಬೇಸಿಗೆ ರಜೆ ವಿಸ್ತರಣೆಗೆ ರುಪ್ಸಾ ವಿರೋಧ, ಸಿಎಂಗೆ ಪತ್ರ
ಏನೇನು ಸಲಹೆ?
- ಉಷ್ಣ ಮಾರುತದ ಕಾರಣಕ್ಕೆ ಶಾಲೆಗಳನ್ನು ಮುಚ್ಚಬಾರದು
- ಶಾಲಾ ಸಮಯ ಬದಲಾಯಿಸಿ, ತರಗತಿ ಅವಧಿ ಕಡಿತ ಮಾಡಿ
- ಸಮವಸ್ತ್ರ ಧಾರಣೆ ಕಡ್ಡಾಯ ಬೇಡ, ಅನುಕೂಲ ಆಗುವ ಬಟ್ಟೆಧರಿಸಲು ಅವಕಾಶ ನೀಡಿ
- ಚರ್ಮದ ಶೂ ಬದಲು ಕ್ಯಾನ್ವಾಸ್ ಶೂ ಬಳಕೆಗೆ ಅವಕಾಶ ಕೊಡಿ
- ಕೊಠಡಿಯ ಹೊರಗಿನ ಚಟುವಟಿಕೆ ಕಡಿಮೆ ಮಾಡಿ
- ಶಾಲೆಗಳಲ್ಲಿ ಒಆರ್‌ಎಸ್, ಗ್ಲುಕೋಸ್ ಸಂಗ್ರಹ ಮಾಡಿಡಿ
- ಹೆಚ್ಚೆಚ್ಚು ನೀರು ಕುಡಿಯುವ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿ
ಹಲವು ರಾಜ್ಯಗಳಲ್ಲಿ ಮುಂದುವರೆದ ಉಷ್ಣ ಮಾರುತ
ದೇಶದ ಉತ್ತರದ ರಾಜ್ಯಗಳಲ್ಲಿ ಉಷ್ಣ ಮಾರುತದ ಪ್ರಭಾವ ಭಾನುವಾರವೂ ಮುಂದುವರೆದಿದ್ದು, ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ರಾಜಸ್ಥಾನದ ಬಿಕಾನೇರ್‌ನಲ್ಲಿ ಗರಿಷ್ಠ 47.1 ಡಿಸೆ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಶ್ರೀಗಂಗಾನಗರ್‌ದಲ್ಲಿ 46.9 ಡಿ.ಸೆ, ಅಲಹಾಬಾದ್, ಲಖನೌ, ಝಾನ್ಸಿ, ಸತ್ನಾ, ಗುರುಗ್ರಾಮದಲ್ಲಿ ದಾಖಲೆಯ 46.8 ಡಿ.ಸೆ ಉಷ್ಣಾಂಶ ದಾಖಲಾಗಿದೆ.
ಬೇಸಿಗೆ ರಜೆ ವಿಸ್ತರಣೆ ಇಲ್ಲ, ನಿಗದಿಯಂತೆ ಶಾಲೆಗಳು ಆರಂಭ, ವಿದ್ಯಾರ್ಥಿಗಳ ಕಲಿಕೆಗೆ ವಿವಿಧ ಕಾರ್ಯಕ್ರಮ
ಈ ನಡುವೆ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಉಷ್ಣ ಸಂಬಂಧಿ ಕಾಯಿಲೆಗಳ ನಿರ್ವಹಣೆಗೆ ಅಗತ್ಯ ಪ್ರಮಾಣದ ಔಷಧಿ, ವೈದ್ಯಕೀಯ ಉಪಕರಣಗಳ ಲಭ್ಯತೆಯಿರುವುದಾಗಿ ಖಾತ್ರಿ ಪಡಿಸಿಕೊಳ್ಳುವಂತೆ ಸೂಚನೆ ನೀಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ರಾಷ್ಟ್ರೀಯ ಕ್ರಿಯಾ ಯೋಜನೆಯಡಿ ಉಷ್ಣ ಸಂಬಂಧಿತ ಕಾಯಿಲೆಗಳ ನಿರ್ವಹಣೆಗೆ ಮಾರ್ಗಸೂಚಿಯನ್ನು ಹೊರಡಿಸಿದ್ದು, ಉಷ್ಣ ಸಂಬಂಧಿ ಕಾಯಿಲೆಗಳ ಬಗ್ಗೆ ದೈನಂದಿನ ನಿಗಾ ವರದಿಯನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ)ಗೆ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಬೇಸಿಗೆಯ ದಿನ, ಉಷ್ಣ ಮಾರುತದ ಪರಿಣಾಮ ದೇಶಾದ್ಯಂತ ವಿದ್ಯುತ್ ಬೇಡಿಕೆ ಸಾರ್ವಕಾಲಿಕ ಗರಿಷ್ಠ ತಲುಪಿದ್ದು, ಇದೇ ವೇಳೆ ಕಲ್ಲಿದ್ದಲು ಕೊರತೆ ಕಾರಣ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದ್ದು, ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ ಸಾರ್ವಕಾಲಿಕ ಗರಿಷ್ಠ ಪ್ರಮಾಣ ತಲುಪಿದೆ.
ಕಳೆದ ಭಾನುವಾರ ದೇಶದಲ್ಲಿ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸ 2.64 ಗಿಗಾವ್ಯಾಟ್ ಇದ್ದರೆ, ಸೋಮವಾರ ಅದು 5.24 ಗಿಗಾವ್ಯಾಟ್‌ಗೆ, ಮಂಗಳವಾರ 10.29 ಗಿಗಾವ್ಯಾಟ್, ಗುರುವಾರ 10.77 ಗಿಗಾವ್ಯಾಟ್‌ಗೆ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಪ್ರಮಾಣ ತಲುಪಿದೆ. ಆದರೆ ಶುಕ್ರವಾರದಂದು ಉತ್ಪಾದನಾ ಘಟಕಗಳು ಸಾರ್ವಕಾಲಿಕ ಗರಿಷ್ಠ 207.11 ಗಿಗಾ ವ್ಯಾಟ್ ವಿದ್ಯುತ್ ಪೂರೈಕೆ ಮಾಡಿದ್ದರಿಂದ ವಿದ್ಯುತ್ ಕೊರತೆ ಶುಕ್ರವಾರ 8.12 ಗಿಗಾ ವ್ಯಾಟ್‌ಗೆ ಇಳಿಕೆ ಕಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ