* ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ದುರ್ಮರಣ
* ರಾವತ್ ಹೆಲಿಕಾಪ್ಟರ್ ಟೇಕಾಫ್‌ಗೂ ಮುನ್ನ ಇನ್ನೆರಡು ಹೆಲಿಕಾಪ್ಟರ್ ಕಳುಹಿಸಿದ್ವಿ ಎಂದ ಸೂಲೂರ್ ಬೇಸ್
* ಯಾವುದೇ ವಿಮಾನ ಬಂದಿಲ್ಲ ಎಂದ ಮದ್ರಾಸ್ ರೆಜಿಮೆಂಟ್
ವೆಲ್ಲಿಂಗ್ಟನ್(ಡಿ.10): ಡಿಸೆಂಬರ್ 8 ರಂದು ತಮಿಳುನಾಡಿನ ಸೂಲೂರಿನಲ್ಲಿ ನಡೆದ ಹೆಲಿಕಾಪ್ಟರ್ ಅಪಘಾತದಲ್ಲಿ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮತ್ತು ಇತರ 11 ಸೇನಾ ಅಧಿಕಾರಿಗಳು ಸಾವನ್ನಪ್ಪಿದ್ದರು. ಘಟನೆ ಬಳಿಕ ಇದೀಗ ಹೆಲಿಕಾಪ್ಟರ್ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಟೇಕಾಫ್ ಆಗುವ ಮುನ್ನವೇ ಆ ಮಾರ್ಗದಲ್ಲಿ ವಿಚಕ್ಷಣಾ ವಿಮಾನಗಳನ್ನು ವಾಯುಪಡೆ ಕಳುಹಿಸಿದೆಯೇ ಎಂಬ ಚರ್ಚೆ ಆರಂಭವಾಗಿದೆ. ಸಿಡಿಎಸ್ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಅವರ ಪತ್ನಿ ಸೇರಿ ಹದಿನಾಲ್ಕು ಮಂದಿ ಇದ್ದ ಹೆಲಿಕಾಪ್ಟರ್ ಟೇಕಾಫ್ ಆಗುವ ಮೊದಲು ಆ ಮಾರ್ಗದಲ್ಲಿ ಐಎಎಫ್‌ನ ಶೋಧ ವಿಮಾನವನ್ನು ಕಳುಹಿಸಲಾಗಿತ್ತು ಎಂದು ಸೂಲೂರ್ ಬೇಸ್ ಹೇಳುತ್ತದೆ.
ಟೈಮ್ಸ್ ಆಫ್ ಇಂಡಿಯಾ ಈ ಬಗ್ಗೆ ವರದಿ ಪ್ರಕಟಿಸಿದ್ದು, ಪ್ರೋಟೋಕಾಲ್ ಪ್ರಕಾರ ನೀಲಗಿರಿಯ ಹವಾಮಾನ ಪರೀಕ್ಷೆಗಾಗಿ ಐಎಎಫ್‌ನ ಎರಡು ಹೆಲಿಕಾಪ್ಟರ್‌ಗಳನ್ನು ಮಾರ್ಗವನ್ನು ಅನ್ವೇಷಿಸಲು ಕಳುಹಿಸಲಾಗಿದೆ ಎಂದು ಸೂಲೂರು ವಾಯುನೆಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೆಲಿಕಾಪ್ಟರ್ ಪತನದ ಬಗ್ಗೆ ಮಾತನಾಡಿದ ಅಧಿಕಾರಿ, “ಈ ಹೆಲಿಕಾಪ್ಟರ್‌ಗಳು ವೆಲ್ಲಿಂಗ್ಟನ್ ಹೆಲಿಪ್ಯಾಡ್‌ನಲ್ಲಿ ಇಳಿದಿವೆಯೇ ಅಥವಾ ಇಳಿಯದೆ ಹಿಂತಿರುಗಿವೆಯೇ ಎಂದು ನಮಗೆ ಖಚಿತವಿಲ್ಲ" ಎಂದಿದ್ದಾರೆ.
ಆದರೆ ಈ ಮಾತಿಗೆ ವ್ಯತಿರಿಕ್ತವಾಗಿ, ಮದ್ರಾಸ್ ರೆಜಿಮೆಂಟಲ್ ಸೆಂಟರ್‌ನ ಹಿರಿಯ ಸೇನಾಧಿಕಾರಿಯೊಬ್ಬರು "ಎಂಐ -17 ವಿಶ್ವಾಸಾರ್ಹ ಹೆಲಿಕಾಪ್ಟರ್ ಆಗಿರುವುದರಿಂದ, ಸಣ್ಣ ಹೆಲಿಕಾಪ್ಟರ್‌ಗಳಿಂದ ಪ್ರಾಯೋಗಿಕವಾಗಿ ಯಾವುದೇ ಪ್ರಯೋಗವನ್ನು ನಡೆಸಲಾಗಿಲ್ಲ." ಎಂದಿದ್ದಾರೆ.
ಈ ನಡುವೆ ಜನರಲ್ ರಾವತ್ ಅವರು ಉಪನ್ಯಾಸ ನೀಡಲು ಮುಂದಾದ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನ ಅಧಿಕಾರಿಯೊಬ್ಬರು, "ಅದರ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರವಿಲ್ಲ" ಎಂದು ಹೇಳಿದ್ದಾರೆ. ಇನ್ನು ಹೆಲಿಕಾಪ್ಟರ್ ಅಪಘಾತಕ್ಕೀಡಾದ ನಂಜಪ್ಪಛತ್ರಂನಲ್ಲಿನ ಪ್ರತ್ಯಕ್ಷದರ್ಶಿಗಳು, ದುರಂತಕ್ಕಿಂತ ಮುನ್ನ ಇಲ್ಲಿ ಬೇರಾವುದೇ ಹೆಲಿಕಾಪ್ಟರ್ ಅನ್ನು ನೋಡಿಲ್ಲ ಅಥವಾ ಹಾರಾಟದ ಸದ್ದು ಕೇಳಿಲ್ಲ ಎಂದು ಹೇಳಿದ್ದಾರೆ.
ನಿವೃತ್ತ ಐಎಎಫ್ ಅಧಿಕಾರಿ ಎಸ್ ರಮೇಶ್ ಕುಮಾರ್ ಮಾತನಾಡಿ, ಸಾಮಾನ್ಯವಾಗಿ ರಾಷ್ಟ್ರಪತಿ ಅಥವಾ ಪ್ರಧಾನಿ ಭೇಟಿಯ ಸಂದರ್ಭದಲ್ಲಿ ಮುಖ್ಯ ಹೆಲಿಕಾಪ್ಟರ್ ಜೊತೆಗೆ ನಾಲ್ಕು ಹೆಲಿಕಾಪ್ಟರ್‌ಗಳು ಹಾರುತ್ತವೆ. ಆದರೆ ವೆಲ್ಲಿಂಗ್‌ಟನ್‌ಗೆ Mi-17 V 5 ಟೇಕ್ ಆಫ್ ಆಗುವ ಮೊದಲು ಯಾವುದೇ ಚಾಪರ್‌ಗಳನ್ನು ಕಳುಹಿಸಿದ್ದಾರೆಯೇ ಎಂಬುವುದನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
"Mi-17 V 5 ಅನ್ನು ಹೆಚ್ಚು ಅನುಭವಿ ಪೈಲಟ್ ನಿರ್ವಹಿಸಿದ್ದಾರೆ. ಹೀಗಿದ್ದರೂ ಚಾಪರ್ ತಾಂತ್ರಿಕವಾಗಿ ಮುಂದುವರಿದಿದೆ. ಹೀಗಾಗಿ ಮಾನವ ದೋಷ ಅಪಘಾತಕ್ಕೆ ಕಾರಣವಾಗಿರಬಹುದು " ಎಂದು ರಮೇಶ್ ಕುಮಾರ್ ಹೇಳಿದರು. "ಮೋಡ / ಮಂಜು ಸಾಮಾನ್ಯಕ್ಕಿಂತ ದುಪ್ಪಟ್ಟಿರಬಹುದು. ಇಂತಹ ಸಂದರ್ಭಗಳಲ್ಲಿ, ಪೈಲಟ್ ಒಂದು ಕ್ಷಣದಲ್ಲಿ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿರ್ಧಾರವು ತಪ್ಪಾಗಿರಬಹುದು. ಅಂತಿಮವಾಗಿ ಈಗಾಗಲೇ ಪತ್ತೆಯಾದ ಬ್ಲಾಕ್ ಬಾಕ್ಸ್ ಅಪಘಾತಕ್ಕೆ ಕಾರಣವಾದ ಕ್ಷಣಗಳಲ್ಲಿ ಏನಾಯಿತು ಎಂಬುದನ್ನು ಬಹಿರಂಗಪಡಿಸಬಹುದು ಎಂದು ಹೇಳಿದ್ದಾರೆ.
ವಾಯುಯಾನ ಭದ್ರತಾ ಸಲಹೆಗಾರ ಮೋಹನ್ ರಂಗನಾಥನ್ ಅವರು "ನಾನು ಹೆಲಿಕಾಪ್ಟರ್‌ನ ಕೊನೆಯ ನಿಮಿಷದ ದೃಶ್ಯಗಳನ್ನು ಗಮನಿಸಿದ್ದೇನೆ (ಪ್ರವಾಸಿಗರು ಚಿತ್ರೀಕರಿಸಿದ ಈ ದೃಶ್ಯವನ್ನು ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ). ಮಂಜು ಕವಿದ ವಾತಾವರಣವಿದ್ದು, ಹೆಲಿಕಾಪ್ಟರ್ ತುಂಬಾ ಕೆಳಮಟ್ಟದಲ್ಲಿ ಹಾರುತ್ತಿತ್ತು. ಅಪಘಾತಕ್ಕೆ ಮುಖ್ಯ ಕಾರಣ ಹವಾಮಾನ ವೈಪರೀತ್ಯ ಎಂಬುವುದು ನನ್ನ ಅನುಮಾನ ಎಂದಿದ್ದಾರೆ.