9 ಪಕ್ಷಗಳು, 4,200 ಅಭ್ಯರ್ಥಿಗಳು, 90 ಬಂಡಾಯ ಸ್ಪರ್ಧಿಗಳು, ಪರಸ್ಪರ ಮತ ವರ್ಗಾವಣೆ, ಯಾರ ಮತ ಯಾರು ಒಡೆಯುತ್ತಾರೆ? ಆಳಕ್ಕೆ ಹೋದಷ್ಟು ತಲೆ ಕೆಟ್ಟು ಹೋಗುತ್ತದೆ ಅಷ್ಟೇ. 2024ರ ಲೋಕಸಭಾ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಮಹಾವಿಕಾಸ ಅಘಾಡಿ ತುಂಬಾ ಸುಲಭವಾಗಿ ಮಹಾರಾಷ್ಟ್ರ ಗೆದ್ದುಕೊಳ್ಳಬೇಕು. ಆದರೆ 6 ತಿಂಗಳಲ್ಲಿ ಸಾಕಷ್ಟು ಬದಲಾಗಿದೆ
ಭಾರತೀಯರ ಪ್ರಕಾರ, ತೀರಿಕೊಂಡವರು ಮೇಲೆ ಹೋಗಿ ತಾನು ಬಿಟ್ಟು ಹೋದವರು ಹೇಗೆ ಬದುಕುತ್ತಿದ್ದಾರೆ. ಎಂದು ಸ್ವರ್ಗದಿಂದ ನೋಡುತ್ತಿರುತ್ತಾರೆ ಎಂಬ ನಂಬಿಕೆಯಿದೆ. ನನಗಿರುವ ಕುತೂಹಲ, ಮೇಲೆ ಕುಳಿತು ಬಾಳಾಸಾಹೇಬ ಠಾಕ್ರೆ, ಯಶವಂತ ರಾವ್ ಚವಾಣ್, ಪ್ರಮೋದ್ ಮಹಾಜನ್, ವಿಲಾಸ್ ರಾವ್ ದೇಶ್‌ಮುಖ್, ಗೋಪಿನಾಥ ಮುಂಡೆ ಆರೇ ಇದೇನಿದು! ಯಾರು ಯಾರ ಜೊತೆಗಿದ್ದಾರೆ ಎಂದು ಅರ್ಥವೇ ಆಗುತ್ತಿಲ್ಲ ಎಂದು ತಲೆ ಚಚ್ಚಿಕೊಂಡು ಕುಳಿತಿರಬಹುದು ಅನ್ನಿಸುತ್ತಿದೆ.
ಯಾವ ಬಾಳಾ ಠಾಕ್ರೆ 'ಹಿಂದೂ ಹೃದಯ ಸಾಮ್ರಾಟ್' ಎಂದು ಕರೆಸಿಕೊಳ್ಳುತ್ತಿದ್ದರೋ ಅವರ ಮಗ ಉದ್ಭವ್ ಮತ್ತು ಮೊಮ್ಮಗ ಆದಿತ್ಯ ಇವತ್ತು ಮುಂಬೈ ದಂಗೆ ನಮ್ಮಿಂದಾದ ಪ್ರಮಾದ ಎಂದು ಹೇಳುತ್ತಾ ಕ್ಷಮೆ ಕೋರುತ್ತಿದ್ದಾರೆ. ಯಾವ ಅಜಿತ್ ದಾದಾ ಪವಾರ್ ವಿರುದ್ಧ ಟ್ರ್ಯಾಕ್ಟರ್‌ಗೆ ತುಂಬಿಕೊಂಡು ಭ್ರಷ್ಟಾಚಾರದ ದಾಖಲೆ ತರ್ತೀನಿ ಎಂದು ಗೋಪಿನಾಥ ಮುಂಡೆ ಅಬ್ಬರಿಸಿ ಹೇಳುತ್ತಿದ್ದರೋ ಅದೇ ಅಜಿತ್ ಪರವಾಗಿ ಇವತ್ತು ಮೋದಿ ಸಾಹೇಬರು ಪುಣೆಯಲ್ಲಿ ಪ್ರಚಾರ ಮಾಡಿ ಹೋಗಿದ್ದಾರೆ. ಸಾಮಾನ್ಯ ಜನ ಬಿಡಿ, ಘಟಾನುಘಟ ರಾಜಕೀಯ ವಿಶ್ಲೇಷಕರಿಗೂ ಮಹಾರಾಷ್ಟ್ರದ ರಾಜಕಾರಣ, ಜನರ ಒಲವು- ನಿಲುವು ಅರ್ಥ ಆಗುವುದು ಕಷ್ಟ ಆಗಿದೆ.
9 ಪಕ್ಷಗಳು, 4,200 ಅಭ್ಯರ್ಥಿಗಳು, 90 ಬಂಡಾಯ ಸ್ಪರ್ಧಿಗಳು, ಪರಸ್ಪರ ಮತ ವರ್ಗಾವಣೆ, ಯಾರ ಮತ ಯಾರು ಒಡೆಯುತ್ತಾರೆ? ಆಳಕ್ಕೆ ಹೋದಷ್ಟು ತಲೆ ಕೆಟ್ಟು ಹೋಗುತ್ತದೆ ಅಷ್ಟೇ. 2024ರ ಲೋಕಸಭಾ ಫಲಿತಾಂಶ ಗಣನೆಗೆ ತೆಗೆದುಕೊಂಡರೆ ಮಹಾವಿಕಾಸ ಅಘಾಡಿ ತುಂಬಾ ಸುಲಭವಾಗಿ ಮಹಾರಾಷ್ಟ್ರ ಗೆದ್ದುಕೊಳ್ಳಬೇಕು. ಆದರೆ 6 ತಿಂಗಳಲ್ಲಿ ಸಾಕಷ್ಟು ಬದಲಾಗಿದೆ. ಲೋಕಸಭಾ ಫಲಿತಾಂಶ ನೋಡಿದರೆ ಮಹಾವಿಕಾಸ ಆಘಾಡಿಗೂ ಮತ್ತು ಮಹಾಯುತಿಗೂ ಇರುವ ಮತಗಳ ಅಂತರ ಶೇ. 0.95 ಮಾತ್ರ. ಅಂದರೆ 6 ಲಕ್ಷ 35 ಸಾವಿರ ಮತಗಳ ಅಂತರ. ಅಷ್ಟು ಕಡಿಮೆ ಅಂತರವಿದ್ದಾಗಲೂ ಮಹಾ ಅಘಾಡಿ 48ರ ಪೈಕಿ 31 ಗೆದ್ದಿತ್ತು.
ಮಹಾಯುತಿ ಗೆಲ್ಲಲು ಸಾಧ್ಯವಾಗಿದ್ದು 17 ಮಾತ್ರ. ಲೋಕಸಭಾ ಚುನಾವಣೆಗೆ ಹೋಲಿಸಿದರೆ ವಿಧಾನಸಭಾ ಚುನಾವಣೆ ಹೆಚ್ಚು ಸ್ಥಳೀಯವಾಗುತ್ತದೆ. ಪಕ್ಷ ಮತ್ತು ವಿಷಯಗಳ ಜೊತೆಗೆ ಅಭ್ಯರ್ಥಿಗಳ ಜಾತಿ, ದುಡ್ಡು, ಸಾಮೀಪ್ಯವೂ ಪ್ರಮುಖ. ಹೀಗಾಗಿಯೇ ಏನೋ ಮಹಾರಾಷ್ಟ್ರದಲ್ಲಿ 288 ಸಣ್ಣ ಸಣ್ಣಯುದ್ಧಗಳು ನಡೆಯುತ್ತಿವೆಯೇನೋ ಎಂದು ಅನ್ನಿಸುತ್ತಿದೆ. ಅಘಾಡಿ ಮತ್ತು ಯುತಿಯ ನಡುವಿನ ಕುರುಕ್ಷೇತ್ರದ ಜೊತೆಗೆ ಆಘಾಡಿ, ಯುತಿಯ ಒಳಗಡೆ ಕೂಡ ಪೈಪೋಟಿಯ ಯುದ್ಧ ನಡೆಯುತ್ತಿದೆ. ಜೊತೆಗೆ ರಾಜ್ ಠಾಕ್ರೆ, ಓವೈಸಿ ಮತ್ತು ಪ್ರಕಾಶ್ ಅಂಬೇಡ್ಕರ್ ಯಾರ ವೋಟು ತಿನ್ನುತ್ತಾರೆ ಎಂದು ಕಂಡು ಹಿಡಿದು ಹೊರಗಡೆ ಹೇಳುವ ಸಾಹಸ ಮಾಡೋದೇ ದುಸ್ತರದ ಕೆಲಸ.
ಯಾಕೆ ಈ ಪರಿಯ ಸ್ಪರ್ಧೆ?
ಮಹಾರಾಷ್ಟ್ರ ದೊಡ್ಡರಾಜ್ಯ ಹೌದು. ಜೊತೆಗೆ ಮುಂಬೈ ಕಾರಣದಿಂದ ರಾಜಕೀಯ ಪಕ್ಷಗಳಿಗೆ ಪುಷ್ಕಳ ದುಡ್ಡು ಹುಡುಕಿಕೊಂಡು ಬರುವ ರಾಜ್ಯವೂ ಹೌದು. ಮಹಾರಾಷ್ಟ್ರ ಕೈಯಲ್ಲಿ ಇದ್ದರೆ ಆರಾಮಾಗಿ 3 ರಿಂದ 4 ರಾಜ್ಯಗಳ ಚುನಾವಣಾ ಖರ್ಚು ವೆಚ್ಚನೋಡಿಕೊಳ್ಳಬಹುದು. ಅದಕ್ಕಾಗಿಯೇ ಮೋದಿ ಸಾಹೇಬರಿಗೂ ಮುಂಬೈ ಬೇಕು, ರಾಹುಲ್ ಗಾಂಧಿಗೂ ಮಹಾರಾಷ್ಟ್ರ ಬೇಕು. ಯೋಚನೆ ಮಾಡಿ. ಬರೀ ಮುಂಬೈ ಮಹಾನಗರ ಪಾಲಿಕೆ ಮೇಲೆ ಅಧಿಕಾರ ಇಟ್ಟುಕೊಂಡು ಶಿವಸೇನೆ 30 ವರ್ಷಗಳಿಂದ ದೇಶದ ಅತ್ಯಂತ ಶ್ರೀಮಂತ ಪ್ರಾದೇಶಿಕ ಪಕ್ಷವಾಗಿದೆ. ಮುಂಬೈ ಮೇಲೆ ಹಿಡಿತ ಇತ್ತು ಅನ್ನುವ ಕಾರಣದಿಂದ ಅಲ್ಲದೇ ಬಿಜೆಪಿಯಲ್ಲಿ ಪ್ರಮೋದ್ ಮಹಾಜನ್ ಮಹತ್ವ, ಕಾಂಗ್ರೆಸ್‌ನಲ್ಲಿ ಶರದ್ ಪವಾರ್, ಮುರಳಿ ದೇವರಾ ಮತ್ತು ವಿಲಾಸ್ ದೇಶ್‌ಮುಖ್ ಮಹತ್ವ ಜಾಸ್ತಿ ಆಗಿದ್ದು.
ಇವತ್ತು ಕೂಡ ಶಿವಸೇನಾ ಇಲ್ಲದಿದ್ದರೂ ಪರವಾಗಿಲ್ಲ, ಠಾಕ್ರೆ ಪಾರ್ಟಿ ಒಡೆಯುತ್ತೇವೆ. ಪವಾರ್ ಕುಟುಂಬ ಒಡೆದಾದರೂ ಸರಿ ಮಹಾರಾಷ್ಟ್ರ ಕಾಂಗ್ರೆಸ್ ಕೈಯಲ್ಲಿ ಹೋಗಬಾರದು ಎನ್ನುವ ಹಠಕ್ಕೆ ಬಿಜೆಪಿ ಬಿದ್ದಿದ್ದು, ದುಡ್ಡಿನ ಮೂಲಗಳು ಗಾಂಧಿ ಕುಟುಂಬ ಮತ್ತು ಪಾರ್ಟಿಗೆ ಸಿಗಬಾರದು ಎಂದು. ಅದೇ ಸೋನಿಯಾ ಮತ್ತು ರಾಹುಲ್ ಗಾಂಧಿ ಪೂರ್ತಿ ಜಾತ್ಯತೀತ ಸಿದ್ಧಾಂತಕ್ಕೆ ತದ್ವಿರುದ್ದವಾದ ಶಿವಸೇನೆಯನ್ನು ಅಪ್ಪಿಕೊಂಡು ಠಾಕ್ರೆಯನ್ನೇ ಮುಖ್ಯಮಂತ್ರಿ ಮಾಡಲು ತಯಾರಾಗಿದ್ದು, ದಿಲ್ಲಿ ಗೆಲ್ಲಬೇಕಾದರೆ ಮೊದಲು ಮುಂಬೈಯನ್ನು ಕೈಗೆ ತೆಗೆದು ಕೊಳ್ಳಬೇಕು ಅನ್ನುವ ಕಾರಣದಿಂದ, ಹಿಂದೆಲ್ಲ ರಾಜರ ಯುದ್ಧದ ನಿರ್ಣಯಗಳು ಎಷ್ಟು ಹಣ ಬೊಕ್ಕಸಕ್ಕೆ ಸಿಗಬಹುದು ಎನ್ನುವುದರ ಮೇಲೆ ಅವಲಂಬಿತವಾಗಿದ್ದವಂತೆ.ಇದೀಗ ಪ್ರಜಾಪ್ರಭುತ್ವ ಕೂಡ ಭಿನ್ನವಾಗಿಲ್ಲ.
ಒಡೆಯುವ ಆಟ ಯಾಕೆ?
ಒಂದು ಕಾಲದಲ್ಲಿ ಮಹಾರಾಷ್ಟ್ರದ ಬಾಳಾಸಾಹೇಬ ಠಾಕ್ರೆ, ವೈಯಕ್ತಿಕವಾಗಿ ಜನಪ್ರಿಯ ನಾಯಕರಾಗಿದ್ದರೆ, ಶರದ್ ಪವಾರ್ ಅತ್ಯಂತ ಚತುರಮತಿ ರಾಜಕಾರಣಿ, ಭಾವುಕ ಜೀವಿಯಾಗಿದ್ದ ಬಾಳಾ ಠಾಕ್ರೆ ಅಧಿಕಾರದಲ್ಲಿದ್ದದ್ದು 5 ವರ್ಷ ಮಾತ್ರ. ಆದರೆ ಶರದ್ ಪವಾರ್ ಕಳೆದ 40 ವರ್ಷಗಳಲ್ಲಿ ಹೆಚ್ಚು ಕಡಿಮೆ 32 ವರ್ಷ ಅಧಿಕಾರದಲ್ಲಿದ್ದಾರೆ. ಯಾವಾಗ 2014 ರಲ್ಲಿ ಮೋದಿ ದಿಲ್ಲಿಯಲ್ಲಿ ಅಧಿಕಾರಕ್ಕೆ ಬಂದರೋ, ಗೋಪಿನಾಥ ಮುಂಡೆ ತೀರಿಕೊಂಡರೋ, ಆಗಿಂದ ಪವಾರ್ ಅವರು ಅದಾನಿ ಮೂಲಕ ಬಿಜೆಪಿಗೆ ಕಣ್ಣು ಹೊಡೆಯ ತೊಡಗಿದರು. ಆದರೆ ಆರ್‌ಎಸ್‌ಎಸ್‌ಗೆ ಪವಾರ್ ಬರುವುದು ಇಷ್ಟವಿರಲಿಲ್ಲ.
India Gate: ರಾಷ್ಟ್ರೀಯ ಬಿಜೆಪಿಗೆ ‘ಅಧ್ಯಕ್ಷ ಸಂಕಟ’: ಪ್ರಶಾಂತ್ ನಾತು
2019ರ ಹೊತ್ತಿಗೆ ಇನ್ನೇನು ನಾವೇ ಕಾಯಂ ಅಧಿಕಾರದಲ್ಲಿ ಇರುತ್ತೇವೆ. ಯಾರೇನು ಲೆಕ್ಕ ಎಂಬ ಭ್ರಮೆಯಲ್ಲಿದ್ದ ಬಿಜೆಪಿಗೆ ಶಿವಸೇನೆಯ ಉದ್ಧವ್ ಠಾಕ್ರೆ, ಕಿರಿ ಕಿರಿ ಅನ್ನಿಸತೊಡಗಿದರು. ಉದ್ಧವ್ ಮಗ ಆದಿತ್ವನನ್ನು ಉಪ ಮುಖ್ಯಮಂತ್ರಿ ಮಾಡಿ ಅಂದಾಗ ಬಿಜೆಪಿ ನಾಯಕರು ಕ್ಯಾರೇ ಅನ್ನಲಿಲ್ಲ. ಮೋದಿ ಮತ್ತು ಶಾ ಅವರಿಗೆ ಇನ್ನೊಂದು ತಲೆಮಾರಿನ ಠಾಕ್ರೆ ನಾಯಕತ್ವ ಬೇಡವಾಗಿತ್ತು. ಆಗ ಒಂದೇ ಕಾಲಕ್ಕೆ ಬಿಜೆಪಿ ಮತ್ತು ಉದ್ಭವ್ ಇಬ್ಬರಿಗೂ ನಾವು ಬೆಂಬಲ ಕೊಡುತ್ತೇವೆ ಎಂದು ತಾಂಬೂಲ ಕೊಟ್ಟ ಶರದ್ ಪವಾರ್ ಆಟಕ್ಕೆ ಉದ್ಭವ್ ಬಿದ್ದೇ ಬಿಟ್ಟರು.
ಬಿಜೆಪಿ ತನ್ನನ್ನು ಆಪೋಶನ ತೆಗೆದುಕೊಳ್ಳುತ್ತದೆ. ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ ಮತ್ತು ರಾಷ್ಟ್ರವಾದಿ ಜೊತೆಗೆ ಹೋಗಿಯಾದರೂ ಮುಖ್ಯಮಂತ್ರಿ ಆಗಬೇಕು. ಮೋದಿ ಮತ್ತು ಬಿಜೆಪಿಗೆ ಪಾಠ ಕಲಿಸಬೇಕು ಎಂದು ಉದ್ದವ್ ರಾತ್ರೋರಾತ್ರಿ ಸೋನಿಯಾ ಮತ್ತು ಪವಾರ್ ಜೊತೆ ಸೇರಿಕೊಂಡು ಸರ್ಕಾರ ರಚಿಸಿದರು. ಅಜಿತ್ ಪವಾರ್ ಬಿಜೆಪಿ ಜೊತೆ ಹೋಗಿ ರಾತ್ರಿ ಪ್ರಮಾಣ ವಚನ ಸ್ವೀಕರಿಸಿದರು. ಅದು ಕೂಡ ಶರದ್ ಪವಾರ್ ರಣ ತಂತ್ರದ ಭಾಗವೇ ಆಗಿತ್ತು. ಒಂದು ರೀತಿ ಬಿಜೆಪಿ ಮತ್ತು ಶಿವಸೇನೆಯ 1990ರಿಂದ ಶುರುವಾದ ಮೈತ್ರಿಯನ್ನು ಪವಾರ್ 2019 ರಲ್ಲಿ ಒಡೆದು ಮತ್ತೊಮ್ಮೆ ಮಹಾರಾಷ್ಟ್ರದಪಾಲಿಟಿಕ್ಸ್ ನಲ್ಲಿ ಪ್ರಸ್ತುತತೆ ಕಂಡುಕೊಂಡರು ಅಷ್ಟೇ. ಇದನ್ನು ನೋಡುತ್ತಾ ಕುಳಿತಿದ್ದ ಮೋದಿ ಮತ್ತು ಶಾ ಸಮಯಕ್ಕಾಗಿ ಕಾಯುತ್ತಿದ್ದರು.
ಯಾವಾಗ ಕೋವಿಡ್ ಸಂದರ್ಭದಲ್ಲಿ ಉದ್ಭವ್ ಮತ್ತು ಶಿಂಧೆ ನಡುವೆ ತಿಕ್ಕಾಟದ ವಾಸನೆ ಬಡಿಯಿತೋ ಬಿಜೆಪಿ 40 ಶಾಸಕರನ್ನು ಸೆಳೆದು ಉದ್ದವರನ್ನು ಅಬ್ಬೇಪಾರಿಯನ್ನಾಗಿ ಮಾಡಿತು. ಆದರೆ ಬಿಜೆಪಿಗೆ ಲೋಕಸಭೆಯಲ್ಲಿ ಮಹಾರಾಷ್ಟ್ರದ 48 ರಲ್ಲಿ 40 ಸೀಟು ಗೆಲ್ಲುವುದು ಮುಖ್ಯವಿತ್ತು. ಶೇ.22ರಷ್ಟು ಫೋಟ್ ಬ್ಯಾಂಕ್ ಇರುವ ಬಿಜೆಪಿ ಜೊತೆ ಶೇ.10ರಷ್ಟು ವೋಟ್ ಬ್ಯಾಂಕ್‌ನ ಶಿಂಧೆ ಬಂದರೆ ಸಾಕಾಗುವುದಿಲ್ಲ, ಕಾಂಗ್ರೆಸ್, ಶರದ್ ಪವಾರ್ ಮತ್ತು ಉದ್ದವ ತಾಕಿ ಸೇರಿ ಶೇ.46ರಷ್ಟು ವೋಟು ತೆಗೆದುಕೊಳ್ಳುತ್ತಾರೆ. ಆ ಶೇ.4ರಷ್ಟು ವೋಟು ತೆಗೆದುಕೊಂಡರೆ ಮಾತ್ರ ವೋಟು ಸೀಟು ಆಗಿ ಪರಿವರ್ತಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿಯು ಅಜಿತ್ ದಾದಾ ಪವಾರ್‌ರನ್ನು ಚಿಕ್ಕಪ್ಪನಿಂದ ದೂರ ತಂದು ರಾಷ್ಟ್ರವಾದಿ ಪಕ್ಷವನ್ನು ಕೂಡ ಒಡೆಯಿತು. ಆದರೆ ಯಾವಾಗ ಬಿಜೆಪಿ ಅತಿರೇಕತನಕ್ಕೆ ಇಳಿದು ಉದ್ದವ್‌ರಿಂದ ಶಿವಸೇನೆಯ ಚಿಹ್ನೆ ಕಸಿದುಕೊಂಡು ಶಿಂಧೆಗೆ ನೀಡಿ ಶರದ್ ಪವಾರ್ ರಿಂದ ಗಡಿಯಾರದ ಚಿನ್ನೆ ಕಸಿದು ಅಜಿತ್ ದಾದಾ ಪವಾರ್‌ಗೆ ನೀಡಿತೋ ಬೇಕೋ ಬೇಡವೋ ಜನರ ಅನುಕಂಪ ಉದ್ದವ ತಾಕ್ಕೆ ಮತ್ತು ಶರದ್ ಪವಾರ್ ಕಡೆ ತಿರುಗಿತು. ಅದೇ ಕಾರಣದಿಂದ ಮಹಾರಾಷ್ಟ್ರದಲ್ಲಿ ಬಿಜೆಪಿ 2019ಕ್ಕೆ ಹೋಲಿಸಿದರೆ 25 ಸೀಟು ಕಳೆದುಕೊಂಡಿತು. ಅಷ್ಟೇ ಅಲ್ಲ ಬಿಜೆಪಿ ಕಾರ್ಯಕರ್ತರೇ ಅಜಿತ್ ದಾದಾ ಜೊತೆ ಹೋಗಿದ್ದಕ್ಕೆ ಮೋದಿ ವಿರುದ್ಧವೆ ಬೇಸರಿಸಿಕೊಂಡರು. ಹಾಗೆಯೇ ನೋಡಿ, ಮೋದಿ ಇರಲಿ ಇಂದಿರಾ ಇರಲಿ too much is too bad ಅದು ಪ್ರಕೃತಿಯ ನಿಯಮ.
ಲೋಕಸಭೆಯಲ್ಲಿದ್ದ ಫ್ಯಾಕ್ಟರ್‌ಗಳೇನು?
ಲೋಕಸಭಾ ಚುನಾವಣೆಯಲ್ಲಿ ಮಹಾವಿಕಾಸ ಅಘಾಡಿಗೆ ಹೆಚ್ಚು ಲಾಭ ಆಗಿದ್ದು ಶೇ.33ರಷ್ಟಿರುವ ಇರುವ ಮರಾಠ ಸಮುದಾಯ. ಮೀಸಲಾತಿ ಕಾರಣದಿಂದ ಬಿಜೆಪಿ ಮತ್ತು ಫಡ್ನವೀಸ್ ವಿರುದ್ದ ಈ ಸಮುದಾಯ ಮುನಿಸಿಕೊಂಡಿತ್ತು. ಇದು ಮರಾಠವಾಡಾದಲ್ಲಿ ಬಿಜೆಪಿ ಕುಸಿಯಲು ಮುಖ್ಯ ಕಾರಣ. ಜೊತೆಗೆ ಬಿಜೆಪಿ 400 ಫಾರ್ ಸಂವಿಧಾನ ಬದಲಾವಣೆಗೆ ಅನ್ನೋದು ದಲಿತ ವೋಟುಗಳನ್ನು ವಿದರ್ಭದಲ್ಲಿ ಕಾಂಗ್ರೆಸ್ ಪರವಾಗಿ ಹೋಗುವಂತೆ ಮಾಡಿತು. ಮುಂಬೈಯಲ್ಲಿ ಮುಸ್ಲಿಮರು ಸಾರಾಸಾಗಟಾಗಿ ಶಿವಸೇನೆ ಜೊತೆಗೆ ನಿಂತ ಕಾರಣ ಉದ್ದವ್ ಮುಂಬೈನಲ್ಲೇ 6 ರಲ್ಲಿ 4 ಗೆದ್ದರು. ಶರದ್ ಪವಾರ್ ಮೇಲಿನ ಅನುಕಂಪ ಪಶ್ಚಿಮ ಮಹಾರಾಷ್ಟ್ರದಲ್ಲಿ ಸೋಲಿಗೆ ಕಾರಣವಾಯಿತು. ಇದರ ಜೊತೆಗೆ ಬಿಜೆಪಿ ಮತೆಗಳು ಶಿಂಧೆಗೆ ವರ್ಗಾವಣೆಯಾದವು, ಆದರೆ ಅಜಿತ್ ಪವಾರ್‌ಗೆ ಸುತಾರಾಮ್ ವರ್ಗಾವಣೆಯಾಗಲಿಲ್ಲ.
ವಿಧಾನಸಭೆಯ ಫ್ಯಾಕ್ಟರ್‌ಗಳೇನು?
ಮತದಾರನ ಸಿಟ್ಟು ಅನೇಕ ಬಾರಿ ಕುಕ್ಕರ್ನ ಸೀಟಿ ಹೊಡೆದು ಅವಿ ಹೊರಟು ಹೋದ ಹಾಗೇ, ಒಂದು ಚುನಾವಣೆಯಲ್ಲಿ ವಿರುದ್ಧ ವೋಟು ಕೊಟ್ಟ ನಂತರ ಕಡಿಮೆಯಾಗುತ್ತದೆ ಅಂತೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಮಹಾಯುತಿ ವಿರುದ್ಧ ಇದ್ದ ಸಿಟ್ಟು ಕಾಣುತ್ತಿಲ್ಲ, ಅದಕ್ಕೆ ಕಾರಣ ಮಹಾಯುತಿ ಸರ್ಕಾರ ಸುಮಾರು 50 ಲಕ್ಷಮಹಿಳೆಯರ ಖಾತೆಗೆ ಜೂನ್‌ನಿಂದ ಪ್ರತಿ ತಿಂಗಳು 'ಲಡ್ಡಿ ಬಹಿನ್' ಯೋಜನೆ ಮೂಲಕ 1500 ರು. ಹಾಕಿರುವುದು. ಜೊತೆಗೆ ಈ ಬಾರಿ ಮರಾಠ ಮತ ಕ್ರೋಢಿಕರಣಕ್ಕೆ ಪ್ರತಿಯಾಗಿ ಶೇ.27ರಷ್ಟಿರುವ ಹಿಂದುಳಿದ ವರ್ಗಗಳು ಮಹಾಯುತಿ ಹಿಂದೆ ಗಟ್ಟಿಯಾಗಿ ನಿಂತುಕೊಂಡಿರುವುದು. ಅದರಲ್ಲೂ ಮಾಳಿ ಕುರುಬರು ಮತ್ತು ವಂಜಾರಿ ಸಮುದಾಯಗಳು ಮಹಾಯುತಿ ಜೊತೆ ನಿಂತುಕೊಂಡಿವೆ. ಆದರೆ ಸಿಟ್ಟು ಕಡಿಮೆ ಆಗಿರುವುದು ಕಾಣುತ್ತಿದೆಯೇ ಹೊರತು ವಾತಾವರಣ ಪೂರ್ತಿ ಮಹಾಯುತಿ ಪರವಾಗಿದೆ ಅಂತಲೂ ಸ್ಪಷ್ಟ ಅಭಿಪ್ರಾಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಪರವಾದ ಮತ್ತು ವಿರುದ್ಧ ವಾದ ಅಲೆ ಇಲ್ಲದೇ ಇದ್ದಾಗ ಜಾತಿ ಮತ್ತು ದುಡ್ಡಿನ ಪಾತ್ರ ಪ್ರಧಾನವಾಗಿರುವ ಕಾರಣ ಪ್ರತಿಯೊಂದು ವಿಭಾಗದಲ್ಲೂ ವೋಟಿಂಗ್ ವಿಧಾನ ಭಿನ್ನವಿದೆ.ಮರಾಠವಾಡಾ ವೋಟಿನ ವಿಧಾನಕ್ಕೂ ಉತ್ತರ ಮಹಾರಾಷ್ಟ್ರ ಕೊಂಕಣಕ್ಕೂ ತುಂಬಾ ವ್ಯತ್ಯಾಸ ಕಾಣುತ್ತಿದೆ. ಸರಳವಾಗಿ ಹೇಳೋದು ಆದರೆ 'ಲಡ್ಡಿ ಬಹಿನ್' ಮತ್ತು ಹಿಂದುಳಿದ ವರ್ಗಗಳು ಗಟ್ಟಿಯಾಗಿ ನಿಂತುಕೊಂಡು ಬಿಜೆಪಿ ವೋಟುಗಳು ಅಜಿತ್ ಪವಾರ್ ಗೂ ವರ್ಗಾವಣೆಗೊಂಡರೆ ಮಹಾಯುತಿಗೊಂದು ಸಿಗಬಹುದು. ಇಲ್ಲವಾದಲ್ಲಿ ಇವು ಕಾಗದದಲ್ಲೇ ಉಳಿದರೆ ಮಹಾವಿಕಾಸ ಪುನರಾವರ್ತಿಸಬಹುದು. ಮೇನ ಫಲಿತಾಂಶ
India Gate: ರಾಷ್ಟ್ರೀಯ ಬಿಜೆಪಿಗೆ ‘ಅಧ್ಯಕ್ಷ ಸಂಕಟ’: ಪ್ರಶಾಂತ್ ನಾತು
ಅಂತಿಮವಾಗಿ ಏನಾಗಬಹುದು?
ಮಹಾರಾಷ್ಟ್ರದಲ್ಲಿ ಬಿಜೆಪಿ ಏಕಾಂಗಿಯಾಗಿ ದೊಡ್ಡ ಪಕ್ಷವಾಗಿ ಶೇ. 25- 26ರಷ್ಟು ಮತಗಳೊಂದಿಗೆ 80 ರಿಂದ 90 ಸೀಟು ಹಾಗೂ ಕಾಂಗ್ರೆಸ್ 50 ರಿಂದ 60 ಸೀಟು ಪಡೆಯುವ ಬಗ್ಗೆ ಬಹುತೇಕ ಎಲ್ಲಾ ಸರ್ವೇ ಮಾಡುವವರ ಸರ್ವ ಸಮ್ಮತಿಯಿದೆ. ಮರಾಠವಾಡಾ ಮತ್ತು ವಿದರ್ಭದ ಒಟ್ಟು 72 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನೇರ ಹಣಾಹಣಿಯಿದೆ. ಅದರಲ್ಲಿ ಯಾರು ಹೆಚ್ಚು ಗೆಲ್ಲುತ್ತಾರೆ ಅನ್ನೋದು ಫೈನಲ್ ನಂಬರ್‌ಮೇಲೆ ಪರಿಣಾಮ ಬೀರಲಿದೆ. ಆದರೆ ನಿಜವಾದ ಫೈಟ್ ಇರುವುದು ಉದ್ಭವ್ ಮತ್ತು ಶಿಂಧೆ ನಡುವೆ ಮುಂಬೈ ಮತ್ತು ಕೊಂಕಣದ 40 ಕ್ಷೇತ್ರಗಳಲ್ಲಿ,
ಅಲ್ಲಿ ನೇರ ಪೈಪೋಟಿಯಿದ್ದು ಯಾರು ಹೆಚ್ಚು ಸೀಟುತರುತ್ತಾರೋ ಆ ಒಕ್ಕೂಟಕ್ಕೆ ಅಧಿಕಾರ ಸಿಗುವ ಸಾಧ್ಯತೆ ಜಾಸ್ತಿ. ಅದೇ ರೀತಿ ಪಶ್ಚಿಮ ಮಹಾರಾಷ್ಟ್ರದ 40 ಸೀಟುಗಳಲ್ಲಿ ಪವಾರ್ ವರ್ಸಸ್ ಪವಾರ್ ಫೈಟ್ ಇದೆ. ಇನ್ನೊಂದು ಕಡೆ 90 ಬಂಡಾಯ ಸ್ಪರ್ಧೆ ಮಾಡಿರುವವರು ಇದ್ದಾರೆ. ಮಗದೊಂದು ಕಡೆ ರಾಜ್ ತಾಕ್ರೆ, ಮುಂಬೈನಲ್ಲಿ ಯಾರ ವೋಟುಕದಿಯುತ್ತಾರೆ?ಓವೈಸಿಮರಾಠವಾಡಾ ಮತ್ತು ಮುಂಬೈನಲ್ಲಿ ಎಷ್ಟು ಮುಸ್ಲಿಂವೋಟು ತೆಗೆದುಕೊಳ್ಳುತ್ತಾರೆ ಮತ್ತು ವಂಚಿತ ಬಹುಜನ ಅಘಾಡಿಯ ಪ್ರಕಾಶ್ ಅಂಬೇಡ್ಕರ್ ಯಾರ ಎಷ್ಟು ವೋಟು ಕಸಿಯಬಹುದು ಎನ್ನುವುದು ಕೂಡ ಫೈನಲ್ ಸಂಖ್ಯೆಗೆ ನಿರ್ಣಾಯಕ ಅಂಶಗಳು.