UP ಚುನಾವಣೆ; ಜಾತಿ ಲೆಕ್ಕದ ನಡುವೆ ಜನ ಬಯಸುತ್ತಿರುವುದೇನು?ಏಷ್ಯಾನೆಟ್ ಸುವರ್ಣನ್ಯೂಸ್ ಸಮೀಕ್ಷಾ ವರದಿ!

By Suvarna News  |  First Published Aug 18, 2021, 5:45 PM IST

* ಶುರುವಾಗಿದೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಾವು
*ಅತೀ ದೊಡ್ಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಗಳ ಜಾತಿವಾರು ಲೆಕ್ಕ ಹೇಗಿದೆ?
*ಕೊರೋನಾ, ಆರ್ಥಿಕ ಹಿನ್ನಡೆ, ಉದ್ಯೋಗ ಸಮಸ್ಯೆಗಳ ನಡುವೆ ಜನ ಬಯಸುತ್ತಿರುವುದೇನು?
*ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ಸಮೀಕ್ಷೆ ತೆರೆದಿಡುತ್ತಿದೆ ಯುಪಿ ನಾಡಿ ಮಿಡಿತ!


ಉತ್ತರ ಪ್ರದೇಶ(ಆ.17): ಕೊರೋನಾ ನಡುವೆ ದೇಶ ಈಗಾಗಲೇ ಪಂಚ ರಾಜ್ಯ ಚುನಾವಣೆ ಸೇರಿದಂತೆ ಹಲವು ಸ್ಥಳೀಯ ಚುನಾವಣೆಗಳನ್ನು ಕಂಡಿದೆ. ಇದೀಗ ಇಡೀ ದೇಶವೇ ಕುತೂಹಲದಿಂದ ಕಾಯುತ್ತಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಾವು ಏರತೊಡಗಿದೆ. ಯುಪಿ ಚುನಾವಣೆಗೆ ಇನ್ನು 6 ರಿಂದ 7 ತಿಂಗಳು ಮಾತ್ರ ಬಾಕಿ. ಆಗಲೇ ದೇಶದ ಅತೀ ದೊಡ್ಡ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಬೀಗುವ ಪಕ್ಷ ಯಾವುದು? ಅಧಿಕಾರ ಯಾರಿಗೆ, ಜನರು ಒಲವು ಯಾರ ಕಡೆಗಿದೆ ಅನ್ನೋ ಲೆಕ್ಕಾಚಾರಗಳು ಜೋರಾಗಿದೆ. ಉತ್ತರ ಪ್ರದೇಶದ ಜನರ ನಾಡಿಮಿಡಿತ ಅರಿಯಲು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಹಲವು ಕುತೂಹಲ ಮಾಹಿತಿ ತೆರೆದಿಟ್ಟಿದೆ.

"

Tap to resize

Latest Videos

undefined

ಸದ್ಯ ಆಡಳಿತದಲ್ಲಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಹಲವು ವಿಚಾರಗಳಲ್ಲಿ ಇತರ ಪಕ್ಷಗಳನ್ನು ಹಿಂದಿಕ್ಕಿ ಗೋಲು ಹೊಡೆದಿದೆ.  ಆದರೆ ಈ ಬಾರಿಯ ಚುನಾವಣೆಯಲ್ಲಿ ತಾವು ಹೊಡೆದ ಗೋಲು ಮತಗಳಾಗಿ ಪರಿವರ್ತನೆಯಾಗಲಿದೆಯಾ ಅನ್ನೋ ಕುತೂಹಲ ಎಲ್ಲರಲ್ಲಿ ಮನೆ ಮಾಡಿದೆ. ಇದಕ್ಕೆ ಕಾರಣ ಸಮಾಜವಾದಿ ಪಾರ್ಟಿ ನಾಯಕ, ಮಾಜಿ ಸಿಎಂ ಅಖಿಲೇಶ್ ಯಾದವ್ ತೀವ್ರ ಪೈಪೋಟಿ ನೀಡಲಿರುವುದು ಸಮೀಕ್ಷೆಯಿಂದ ಬಹಿರಂಗವಾಗಿದೆ. ಆದರೆ ಬಹುಜನ್ ಸಮಾಜ ಪಾರ್ಟಿ ನಾಯಕಿ, ಮಾಜಿ ಸಿಎಂ ಮಾಯಾವತಿಯನ್ನು ಜನ ಮರೆತಿರುವ ಹಾಗಿದೆ.

#UP22WithAsianetNews: ಯೋಗಿ, ಅಖಿಲೇಶ್ ನಡುವೆ ಬಿಗ್‌ ಫೈಟ್!

403 ಸ್ಥಾನಗಳಿಗೆ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆ ದೇಶದ ಇತರ ಚುನಾವಣೆಗಳ ಮೇಲೂ ಅದರಲ್ಲೂ ಲೋಕಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಹೀಗಾಗಿ ರಾಜಕೀಯ ಪಕ್ಷಗಳು ಜಾತಿವಾರು ಪಟ್ಟಿ ಹಿಡಿದು ಮತಗಳ ಲೆಕ್ಕಾಚಾರ ಹಾಕುತ್ತಿದೆ. ಮುಂಬರುವ ಯುಪಿ ಚುನಾವಣೆಯಲ್ಲಿ ಪಕ್ಷಗಳ ಜಾತಿ ಲೆಕ್ಕಾಚಾರ ಒಂದೆಡೆಯಾದರೆ, ಸಮುದಾಯಗಳ ಲೆಕ್ಕಾಚಾರವೇನು? ಹಲವು ಸಮಸ್ಯೆಗಳ ನಡುವೆ ಉತ್ತರ ಪ್ರದೇಶದ ಜನ ಮುಂದಿನ ಸರ್ಕಾರದಿಂದ ಬಯಸುತ್ತಿರುವುದೇನು? ಈ ಎಲ್ಲಾ ಕುತೂಹಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಏಷ್ಯಾನೆಟ್ ಸುವರ್ಣನ್ಯೂಸ್ ಹಾಗೂ ಜನ್ ಕಿ ಬಾತ್ ನಡೆಸಿದ ಸಮೀಕ್ಷೆ ಇಂಚಿಂಚು ಮಾಹಿತಿ ಇಲ್ಲಿದೆ.

ಉತ್ತರ ಪ್ರದೇಶದ ಜನ ಜಾತ್ಯಾತೀತ, ಎಡರಂಗ, ಬಲಪಂಥ ಸೇರಿದಂತೆ ಎಲ್ಲಾ ಸಿದ್ಧಾಂತಗಳ ಸರ್ಕಾರವನ್ನು ಕಂಡಿದೆ. ಇದೀಗ ಜಾತಿ, ಧರ್ಮಕ್ಕಿಂತ ಎಲ್ಲರನ್ನು ಸಮಾನರಾಗಿ ಕಾಣುವ, ರಾಜ್ಯವನ್ನು ಅಭಿವೃದ್ಧಿಪಥದಲ್ಲಿ ಮುನ್ನಡೆಸುವ ಸರ್ಕಾರ ಬೇಕು ಎಂಬುದು ಯುಪಿ ಜನರ ಬಯಕೆಯಾಗಿದೆ. ಹಾಗೆ ನೋಡಿದರೆ ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಸೇರಿದಂತೆ ಈ ಹಿಂದಿನ ಎಲ್ಲಾ ಸರ್ಕಾರಗಳ ಕಾರ್ಯವೈಖರಿ ಪರಾಮರ್ಶಿಸಿದರೆ, ಯೋಗಿ ಸರ್ಕಾರದ ಮೇಲೆ ಜನರ ವಿಶ್ವಾಸ ಹೆಚ್ಚಿದೆ ಅನ್ನೋದು ಸಮೀಕ್ಷೆಯಿಂದ ಬಹಿರಂಗವಾಗಿದೆ.

ಕಳೆದ 4.5 ವರ್ಷದ ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಉತ್ತರ ಪ್ರದೇಶದ ಹಲವು ಬದಲಾವಣೆ ಕಂಡಿದೆ. ಇದರಲ್ಲಿ ಪ್ರಮುಖವಾಗಿ ಕಾನೂನು ಸುವ್ಯವಸ್ಥೆಯಲ್ಲಿ ಉತ್ತರ ಪ್ರದೇಶ ಹಿಂದೆಂದೂ ಕಾಣದಂತೆ ಬದಲಾವಣೆಯಾಗಿದೆ. ಮೂಲಭೂತ ಸೌಕರ್ಯ, ಶಿಕ್ಷಣ, ರೈತರಿಗೆ ಕೃಷಿ ಸೌಲಭ್ಯಗಳು, ಬಡವರಿಗೆ ವಿಶೇಷ ಸೌಲಭ್ಯಗಳು ಸೇರಿದಂತೆ ಕೇಂದ್ರದ ಬಿಜೆಪಿ ಹಾಗೂ ರಾಜ್ಯದ ಯೋಗಿ ಸರ್ಕಾರ ಜಂಟಿಯಾಗಿ ಹಲವು ಕೊಡುಗೆ ನೀಡಿದೆ. ಆದರೆ ಕೃಷಿ ಮಸೂದೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದ ಪಾರ್ಟಿ ಹಾಗೂ ಮೈತ್ರಿ ಕೂಟ ಅಖಾಡಕ್ಕೆ ಇಳಿದಿದೆ. ಹೀಗಾಗಿ ಈ ಬಾರಿ ಯೋಗಿಗೆ ತೀವ್ರ ಪೈಪೋಟಿ ಎದುರಾಗುವುದಂತೂ ಸತ್ಯ.

ಉತ್ತರ ಪ್ರದೇಶಕ್ಕೆ ಮತ್ತೊಮ್ಮೆ ಯೋಗಿ? ಅಚ್ಚರಿ ಕೊಟ್ಟ ಏಷ್ಯಾನೆಟ್‌ ಸಮೀಕ್ಷೆ ವರದಿ!

ಓಲೈಕೆ ರಾಜಕಾರಣದ ಬದಲು ರಾಜ್ಯ ಅಭಿವೃದ್ಧಿ ಪಥದಲ್ಲಿ ಸಾಗುವ ಆಡಳಿತ ಬೇಕು ಅನ್ನೋದೇನು ನಿಜ. ಆದರೆ ಎಲ್ಲಾ ಚುನಾವಣೆಗಳಂತೆ ಉತ್ತರ ಪ್ರದೇಶ ಚುನಾವಣೆಯಲ್ಲೂ ಜಾತಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.  ಉತ್ತರ ಪ್ರದೇಶದಲ್ಲಿ ಜಾತಿ ಲೆಕ್ಕಾಚಾರ ಕೊಂಚ ಜಟಿಲ. ಆದರೆ ಯಾವ ಪಕ್ಷ ಜಾತಿ, ಪಂಗಡಕ್ಕೆ ಸಾಮಾಜಿಕ ನ್ಯಾಯ ಒದಗಿಸುತ್ತದೋ ಆ ಪಕ್ಷಕ್ಕೆ ಸಮುದಾಯಗಳ ಬೆಂಬಲ ಸಿಗಲಿದೆ.

ಯಾದವ್, ದಲಿತ, ಮುಸ್ಲಿಮರ ಒಲವಿದ್ದರೆ ಗೆಲುವು ಸುಲಭ:
ಜಾಟ್, ಯಾದವ್, ಜಾತ್ವಾಸ್, ಬ್ರಾಹ್ಮಣ, ಒಬಿಸಿ, ಮುಸ್ಲಿಂ, ಕ್ರಿಶ್ಚಿಯನ್ ಸೇರಿದಂತೆ ಹಲವು ಜಾತಿ ಹಾಗೂ ಧರ್ಮಗಳ ಸಮ್ಮಿಲನವಾಗಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಜಾತಿ ಲೆಕ್ಕಾಚಾರವೇ ಬೇರೆ. ಸಿಂಪಲ್ ಆಗಿ ಹೇಳಬೇಕು ಅಂದರೆ, ಉತ್ತರ ಪ್ರದೇಶದಲ್ಲಿ ಯಾದವ್, ದಲಿತ ಹಾಗೂ ಮುಸ್ಲಿಂ ಒಲವು ಯಾರ ಕಡೆಗಿದೆಯೋ ಆ ಪಕ್ಷದ ಗೆಲುವು ಸುಲಭವಾಗಲಿದೆ. 2017ರಲ್ಲಿ ಯಾದವ್, ಜಾಟ್, ದಲಿತ ಮತಗಳನ್ನು ಬಾಚಿಕೊಂಡ ಬಿಜೆಪಿ 312 ಸ್ಥಾನ ಗೆದ್ದು ಅಧಿಕಾರ ಹಿಡಿದಿದೆ. ಆದರೆ ಈ ಬಾರಿ ಉತ್ತರ ಪ್ರದೇಶದ ಫಲಿತಾಂಶ ನಿರ್ಧರಿಸುವ ಸಮುದಾಯಗಳ ಮತ ಯಾರಿಗೆ ಅನ್ನೋದು ಏಷ್ಯಾನೆಟ್ ಸುವರ್ಣನ್ಯೂಸ್-ಜನ್ ಕಿ ಬಾತ್ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.

ಈ ಬಾರಿ ಚುನಾವಣೆಯಲ್ಲಿ ಜಾಟ್ ಸಮುದಾಯದ ಒಲವು ಶೇಕಡಾ 60 ರಷ್ಟು ಸಮಾಜವಾದಿ ಪಾರ್ಟಿ ಹಾಗೂ ಮೈತ್ರಿ ಪಕ್ಷದ ಕಡೆಗಿದೆ. ಬಿಜೆಪಿಯತ್ತ ಕೇವಲ 30 ಶೇಕಡಾ ಜಾಟ್ ಸಮುದಾಯದ ಮಂದಿ ಒಲವು ತೋರಿದ್ದಾರೆ. ಇನ್ನು ಉತ್ತರ ಪ್ರದೇಶದ ಪ್ರಬಲ ಸಮುದಾಯ ಯಾದವ್ ಸಹಜವಾಗಿ ಪಾರ್ಟಿ ಹಾಗೂ ಮೈತ್ರಿ ಪಕ್ಷದತ್ತ ವಾಲಿದೆ. ತಮ್ಮ ಸಮುದಾಯದ ನಾಯಕನಾಗಿರುವ ಅಖಿಲೇಶ್ ಯಾದವ್ ಪರ ಶೇಕಡಾ 90 ರಷ್ಟು ಯಾದವ್ ಸಮುದಾಯ ಬೆಂಬಲ ನೀಡಿದೆ. ಇನ್ನು ಬಿಜೆಪಿಗೆ ಕೇವಲ 10 ಶೇಕಡಾ ಯಾದವ್ ಸಮುದಾಯದ ಬೆಂಬಲ ಸಿಗಲಿದೆ. ಯಾದವ್ ಹೊರತು ಪಡಿಸಿ ಹಾಗೂ ಒಬಿಸಿ ಸಮುದಾಯ ಬಿಜೆಪಿಯತ್ತ ಒಲವು ತೋರಿದೆ. ಶೇಕಡಾ 70 ರಷ್ಟು ಮಂದಿ ಬಿಜೆಪಿ ಮೇಲೆ ವಿಶ್ವಾಸವಿಟ್ಟಿದ್ದಾರೆ. ಎಸ್‍ಪಿ ಮೈತ್ರಿಗೆ ಶೇಕಡಾ 10 ರಷ್ಟು ಮಂದಿ ಬೆಂಬಲ ಸೂಚಿಸಿದ್ದಾರೆ.

ಬ್ರಾಹ್ಮಣ ಸಮುದಾಯ:
ಕಳೆದ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದ ಸಮುದಾಯದ ಬ್ರಾಹ್ಮಣ ಸಮುದಾಯ. ಈ ಬಾರಿಯ ಚುನಾವಣೆಯಲ್ಲಿ ಬ್ರಾಹ್ಮಣ ಸಮುದಾಯದ ಶೇಕಡಾ 70 ರಷ್ಟು ಮಂದಿ ಬಿಜೆಪೆಗೆ ಒಲವು ತೋರಿದ್ದಾರೆ. ಎಸ್‌ಪಿ ಮೈತ್ರಿಗೆ ಶೇಕಡಾ 20, ಬಿಎಸ್‌ಪಿಗೆ 10% ಹಾಗೂ ಐಎನ್‌ಸಿಗೆ 5% ರಷ್ಟು  ಬ್ರಾಹ್ಮಣ ಸಮುದಾಯದ ಬೆಂಬಲ ಸಿಗಲಿದೆ ಎಂದು ಸಮೀಕ್ಷೆ ವರದಿಗಳು ಹೇಳುತ್ತಿದೆ.

ಜಾತವ್ ಪರಿಶಿಷ್ಠ ಜಾತಿ(ಜಾತ್ವ ಎಸ್‌ಸಿ) ನಾನ್ ಜಾತ್ವ ಎಸ್‌ಸಿ ಸಮುದಾಯದ ಬೆಂಬಲ ಈ ಬಾರಿಯೂ ಬಿಜೆಪಿ ಪಕ್ಷಕ್ಕಿದೆ. ಆದರೆ ಈ ಹಿಂದಿನ ಪ್ರಮಾಣದಲ್ಲಿಲ್ಲ. ಜಾತವ್ ಸಮುದಾಯದ ಬೆಂಬಲ ಶೇಕಡಾ 30 ರಷ್ಟು ಮಾತ್ರ ಬಿಜೆಪಿಗಿದೆ, ಇನ್ನು ಶೇಕಡಾ 25 ರಷ್ಟು ಮಂದಿ ಬೆಂಬಲ ಎಸ್‌ಪಿ ಮೈತ್ರಿ ಪಕ್ಷಕ್ಕಿದೆ.

ಮುಸ್ಲಿಂ ಸಮುದಾಯ:
ಮೊದಲೇ ಹೇಳಿದಂತೆ ಉತ್ತರ ಪ್ರದೇಶದ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಬೆಂಬಲ ಅತೀ ಮುಖ್ಯ. ಉತ್ತರ ಪ್ರದೇಶ ಒಟ್ಟು ಜನಸಂಖ್ಯೆಯ 19.3% ರಷ್ಟು ಮುಸ್ಲಿಂ ಸಮುದಾಯ ಪ್ರಾಬಲ್ಯ ಹೊಂದಿದೆ. 2022ರ ಚುನಾವಣೆಯಲ್ಲಿ ಸಮೀಕ್ಷೆ ಪ್ರಕಾರ ಎಸ್‌ಪಿ ಮೈತ್ರಿ ಪಕ್ಷಕ್ಕೆ ಶೇಕಡಾ 80 ರಷ್ಟು ಮುಸ್ಲಿಂ ಸಮುದಾಯದ ಬೆಂಬಲವಿದೆ. ಬಿಜೆಪಿ ಕೇವಲ  3% ಮಾತ್ರ. ಬಿಎಸ್‌ಪಿ 10%,ಐಎನ್‌ಸಿ 7% ರಷ್ಟು ಮುಸಲ್ಮಾನರ ಬೆಂಬಲ ಸಿಗಲಿದೆ.  ಮೇಲ್ನೋಟಕ್ಕೆ ಇಲ್ಲಿ ಸಮುದಾಯದ ಲೆಕ್ಕಾಚಾರ ಸರಳವಾಗಿದೆ. ಆಯಾ ಸಮುದಾಯಗಳು ತಮ್ಮ ನಾಯಕನಿಗೆ ಬೆಂಬಲ ಸೂಚಿಸುವುದು ಸಹಜ. ಆದರೆ ಇತರ ಸಣ್ಣ ಪಕ್ಷಗಳಿಂದ ಇಲ್ಲಿ ಮುಸ್ಲಿಂ ಸಮುದಾಯದ ಮತಗಳು ಹಂಚಿಕೆಯಾಗಲಿದೆ. ಇದರ ಪ್ರಮಾಣ ಎಷ್ಟಿದೆ ಅನ್ನೋದರ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.

ಉತ್ತರ ಪ್ರದೇಶದ ಶೇಕಡಾ 40 ರಷ್ಟು ಮಂದಿ ಸ್ಥಳೀಯ ಅಭ್ಯರ್ಥಿ ಹಾಗೂ ಸ್ಥಳೀಯವಾಗಿ ಪ್ರಾಬಲ್ಯ ಹೊಂದಿರುವ ಸಮುದಾಯದ ನಾಯಕನಿಗೆ ಬೆಂಬಲ ಸೂಚಿಸುವುದಾಗಿ ಸಮೀಕ್ಷೆಯಲ್ಲಿ ಹೇಳಿದ್ದಾರೆ. ಇತ್ತ ಹಿಂದುತ್ವ ಕೂಡ 2022ರ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಅಸ್ತ್ರವಾಗಲಿದೆ. ಆದರೆ ಹಿಂದುತ್ವ ಒಂದರಿಂದ ಚುನಾವಣೆಗೆ ಗೆಲ್ಲೋದು ಕಷ್ಟ ಅನ್ನೋದು ಈ ಸಮೀಕ್ಷೆ ಬಹಿರಂಗ ಪಡಿಸಿದೆ.

ಆಡಳಿತರೂಢ ಬಿಜೆಪಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಮೇಲೆ ಉತ್ತರ ಪ್ರದೇಶದ ಜನ ವಿಶ್ವಾಸವಿಟ್ಟಿದ್ದಾರೆ ನಿಜ. ಆದರೆ ಬದಲಾವಣೆ ಗಾಳಿ ಕೂಡ ಜೋರಾಗಿ ಬೀಸುತ್ತಿದೆ. ಸಮೀಕ್ಷೆಯಲ್ಲಿ ಯೋಗಿ ಆದಿತ್ಯನಾಥ್‌ ಹಾಗೂ ಬಿಜೆಪಿಗೆ ಅಖಿಲೇಶ್ ಯಾದವ್ ಹಾಗೂ ಅವರ ಎಸ್‌ಪಿ ಮೈತ್ರಿ ಪಕ್ಷ ತೀವ್ರ ಪೈಪೋಟಿ ನೀಡುತ್ತಿರುವುದು ಅಂಕಿ ಅಂಶಗಳಲ್ಲಿ ಸಾಬೀತಾಗಿದೆ.

ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ಪರಿಸ್ಥಿತಿಯಲ್ಲಿರುವ ಬಿಎಸ್ಪಿ ನಾಯಕಿ ಮಾಯಾವತಿ ಹಾಹೂ ಬಹುಜನ ಪಾರ್ಟಿ ಮೇಲೆ ಮುಸ್ಲಿಂಮರು ಹಾಗೂ ಕೆಳವರ್ಗದ ಜನ ಒಲವು ತೋರಿದರೆ, ಯೋಗಿ ಆದಿತ್ಯನಾಥ್ ಹಾದಿ ಸುಗಮವಾಗಲಿದೆ. ಇಲ್ಲದಿದ್ದರೆ, ಆಡಳಿತ ವಿರೋಧಿ ಅಲೆ, ಅಖಿಲೇಶ್ ಪರ ಇರುವ ಯಾದವ್ ಸಮುದಾಯದ ಮುಂದೆ ಯೋಗಿ ನಿರೀಕ್ಷಿದಷ್ಟು ಮತಗಳಿಸುವಲ್ಲಿ ವಿಫಲರಾಗಬಹುದು. 

click me!