ದೀಪಾವಳಿ ತಯಾರಿ ಜೋರಾಗುತ್ತಿದೆ. ಎಲ್ಲೆಡೆ ಸಂಭ್ರಮ ಕಳೆಗಟ್ಟಿದೆ. ವಿಶೇಷ ಅಂದರೆ ಇಲ್ಲೊಂದು ಗ್ರಾಮವಿದೆ. ಈ ಗ್ರಾಮದ ಹೆಸರೇ ದೀಪಾವಳಿ. ಇಲ್ಲಿ 5 ದಿನ ದೀಪಾವಳಿ ಹಬ್ಬ ಆಚರಿಸುತ್ತಾರೆ. ಈಗ್ರಾಮಕ್ಕೆ ದೀಪಾವಳಿ ಹೆಸರು ಬಂದಿದ್ದೇ ರೋಚಕ ಘಟನೆ.
ಶ್ರೀಕಾಕುಲಂ(ಅ.28) ದೇಶಾದ್ಯಂತ ದೀಪಾವಳಿ ಸಂಬ್ರಮ ಜೋರಾಗಿದೆ. ತಯಾರಿಗಳು ಆರಂಭಗೊಂಡಿದೆ. ಆಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾದ ಬಳಿಕ ಮೊದಲ ದೀಪಾವಳಿ. ದೇಶಾದ್ಯಂತ ದೀಪಾವಳಿ ಆಚರಿಸಲು ಎಲ್ಲರು ಉತ್ಸುಕರಾಗಿದ್ದಾರೆ. ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನಿಮಗೆ ದೀಪಾವಳಿ ಅನ್ನೋ ಗ್ರಾಮದ ಬಗ್ಗೆ ಕೇಳಿದ್ದೀರಾ? ಹೌದು, ದೀಪಾವಳಿ ಅನ್ನೋ ಹೆಸರಿನ ಗ್ರಾಮವಿದೆ. ಇಲ್ಲಿ ದೀಪಾವಳಿ ಹಬ್ಬವನ್ನು 5 ದಿನ ಆಚರಿಸಲಾಗುತ್ತದೆ. ವಿಶೇಷ ಅಂದರೆ ಈ ಗ್ರಾಮಕ್ಕೆ ಮೊದಲು ಹೆಸರೇ ಇರಲಿಲ್ಲ. ಹೀಗಾಗಿ ರಾಜನಿಟ್ಟ ಹೆಸರು ದೀಪಾವಳಿ. ಆದರೆ ರಾಜ ಸುಮ್ಮನೆ ದೀಪಾವಳಿ ಅನ್ನೋ ಹೆಸರಿಟ್ಟಿಲ್ಲ.
ಇದು ಆಂಧ್ರ ಪ್ರದೇಶದಲ್ಲಿರುವ ಸಣ್ಣ ಗ್ರಾಮ. ಶ್ರೀಕಾಕುಳಂ ಜಿಲ್ಲೆಯ ಗರ ಮಂಡಲದಲ್ಲಿ ಈ ಪುಟ್ಟ ಹಳ್ಳಿಯೇ ದೀಪಾವಳಿ. ಶ್ರೀಕಾಕುಳಂ ಅನ್ನೋ ರಾಜ ಈ ಗ್ರಾಮದ ಮೂಲಕ ಸಂಚರಿಸುವಾಗ ಇಲ್ಲಿನ ಪ್ರಸಿದ್ಧ ಕುರುಮಾನಧಾ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಸಂಜೆಯಾಗುತ್ತಿದ್ದಂತೆ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದರು. ಆದರೆ ದೇವಸ್ಥಾನದಿಂದ ಮರಳುವಾಗ ರಾಜ ಶ್ರೀಕಾಕುಳಂ ಅಸ್ವಸ್ಥರಾಗಿದ್ದರು. ಹೀಗಾಗಿ ರಾಜನಿಗೆ ನಡೆಯಲು ಸಾಧ್ಯವಾಗಲಿಲ್ಲ. ತನ್ನ ಸೈನಿಕರು ಹಾಗೂ ಸಿಬ್ಬಂದಿಗಳಿಗೆ ಮುಂದೆ ಸಾಗಲು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಕತ್ತಲಾಗುತ್ತಾ ಬಂದಿತ್ತು.
ರಾಜ ತಮ್ಮ ಊರಿನಲ್ಲಿ ಅಸ್ವಸ್ಥಗೊಂಡಿದ್ದಾರೆ ಅನ್ನೋ ಮಾಹಿತಿ ಗ್ರಾಮದಲ್ಲಿ ಹಬ್ಬಿತ್ತು. ಗ್ರಾಮಸ್ಥರು ಓಡೋಡಿ ರಾಜನ ಬಳಿ ಬಂದಿದ್ದರು. ರಾತ್ರಿಯಾಗುತ್ತಿದ್ದ ಕಾರಣ ದೀಪಗಳನ್ನು ಹಿಡಿದು ಆಗಮಿಸಿದ್ದರು. ಹಲವರು ನೀರು, ಹಣ್ಣುಗಳನ್ನು ತಂದಿದ್ದರು. ರಾಜನ ಆರೈಕೆಗೆ ಬಹುತೇಕ ಗ್ರಾಮಸ್ಥರು ದೀಪಗಳನ್ನು ಹಿಡಿದು ನಿಂತಿದ್ದರು. ಗ್ರಾಮಸ್ಥರ ಆರೈಕೆಯಿಂದ ಕೆಲ ಹೊತ್ತಲ್ಲಿ ರಾಜ ಚೇತರಿಸಿಕೊಂಡಿದ್ದರು. ಎದ್ದು ನೋಡಿದಾಗ ಗ್ರಾಮದ ಬಹುತಕರು ದೀಪ ಹಿಡಿದು ರಾಜನ ವಿಶ್ರಾಂತಿ ವೇಳೆ ಬೆಳಕು ನೀಡಿದ್ದರು. ಗ್ರಾಮದಿಂದ ಹೊರಡುವಾಗ ಈ ಗ್ರಾಮದ ಹೆಸರೇನೆಂದು ಕೇಳಿದ್ದರು. ಆದರೆ ಈ ಗ್ರಾಮಕ್ಕೆ ಯಾವದೇ ಹೆಸರಿಲ್ಲ ಅನ್ನೋ ಉತ್ತರ ಬಂದಿದೆ. ಹೀಗಾಗಿ ದೀಪ ಹಿಡಿದು ಆರೈಕೆ ಮಾಡಿದ ಈ ಗ್ರಾಮ ಇನ್ನು ಮುಂದೆ ದೀಪಾವಳಿ ಎಂದು ಕರೆಯಲ್ಪಡಲಿ ಎಂದು ಘೋಷಿಸಿದ್ದರು.
ಇದು ದೀಪಾವಳಿ ಗ್ರಾಮದ ಹೆಸರಿನ ಹಿಂದಿನ ರೋಚಕ ಕತೆ. ಈ ಗ್ರಾಮದ ಜನರು ಐದು ದಿನಗಳ ಕಾಲ ದೀಪಾವಳಿಯನ್ನು ಆಚರಿಸುತ್ತಾರೆ. ತಮ್ಮ ಮೃತ ಪೂರ್ವಜರನ್ನು ಸಹ ಈ ಸಂದರ್ಭದಲ್ಲಿ ಸ್ಮರಿಸುತ್ತಾರೆ. ದೀಪಾವಳಿ ದಿನದಂದು ಜನರು ಬೆಳಿಗ್ಗೆ ಪಿತೃ ಕರ್ಮಗಳನ್ನು ಮಾಡುತ್ತಾರೆ. ಸೋಂಡಿ ಸಮುದಾಯದವರು ತಮ್ಮ ಪೂರ್ವಜರ ಆಶೀರ್ವಾದವನ್ನು ಪಡೆಯಲು ಈ ದಿನ ಪಿತೃಪೂಜೆ ಮಾಡಿ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಪ್ರಸ್ತುತ, ಈ ಗ್ರಾಮದಲ್ಲಿ 1,000 ಜನರಿದ್ದಾರೆ.