ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದ ತಂದೆ, ಸ್ನಾತಕೋತ್ತರ ಪದವೀಧರೆ ತಾಯಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿತ್ತೂರು (ಜ.29): ‘ಪುನರ್ಜನ್ಮ ತಾಳಲಿದ್ದಾರೆ’ ಎಂಬ ತಪ್ಪು ಗ್ರಹಿಕೆಯಲ್ಲಿ ಇಬ್ಬರು ಹೆಣ್ಣುಮಕ್ಕಳನ್ನೇ ಕೊಂದು ಹಾಕಿದ್ದ ಆಂಧ್ರದ ದಂಪತಿಯನ್ನು ತಿರುಪತಿಯ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜ್ಞಾನದಲ್ಲಿ ಡಾಕ್ಟರೆಟ್ ಪಡೆದಿರುವ ವಿ. ಪುರುಷೋತ್ತಮ್ ನಾಯ್ಡು ಹಾಗೂ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ ಅವರ ಪತ್ನಿ ಪದ್ಮಜಾ ಅವರಿಗೆ ಅಗತ್ಯಬಿದ್ದರೆ ಮಾನಸಿಕ ಚಿಕಿತ್ಸೆ ನೀಡಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಈ ದಂಪತಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಪುನರ್ಜನ್ಮ ನಂಬಿ ಮಕ್ಕಳನ್ನೇ ಹತ್ಯೆಗೈದ ರಕ್ಕಸ ಪೋಷಕರು! ...
ಈ ಬಗ್ಗೆ ಗುರುವಾರ ಮಾಹಿತಿ ನೀಡಿದ ಪೊಲೀಸ್ ಅಧೀಕ್ಷಕ ರಾಮಕೃಷ್ಣ ಯಾದವ್, ‘ಬುಧವಾರ ಜೈಲಿಗೆ ಭೇಟಿ ನೀಡಿ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಈ ಪೋಷಕರು ಭ್ರಾಂತಿಗೆ ಒಳಗಾಗಿರುವ ಸಾಧ್ಯತೆಯಿದ್ದು, ಅವರ ಮಾನಸಿಕ ಆರೋಗ್ಯದ ಬಗ್ಗೆ ಪರಿಶೀಲನೆ ನಡೆಸಬೇಕಿದೆ’ ಎಂದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಗುರುವಾರ ತಿರುಪತಿಯಲ್ಲಿರುವ ಶ್ರೀ ವೆಂಕಟೇಶ್ವರ ರಾಮನಾರಾಯಣ ರಿಯಾ ಸರ್ಕಾರಿ ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದರು.
ಕಲಿಯುಗ ಮುಕ್ತಯವಾಗಿ ಸತ್ಯಯುಗ ಆರಂಭವಾಗುವ ಕಾರಣ ತಮ್ಮ ಮಕ್ಕಳು ಸತ್ತ ಕೆಲವೇ ಗಂಟೆಗಳಲ್ಲಿ ಪುನರ್ಜನ್ಮ ಪಡೆಯುತ್ತಾರೆ ಎಂಬ ಮೂಢನಂಬಿಕೆಗೆ ಸಿಲುಕಿದ್ದ ದಂಪತಿ ತಮ್ಮ 20 ವರ್ಷದ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿದ್ದರು. ಜೊತೆಗೆ ಇದರ ಸಾಬೀತಿಗಾಗಿ ತಾವು ಸಹ ಆತ್ಮಹತ್ಯೆಗೆ ಶರಣಾಗಲು ಮುಂದಾಗಿದ್ದರು. ಆದರೆ ಅಷ್ಟೊತ್ತಿಗಾಗಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಅವರನ್ನು ಬಂಧಿಸಿದ್ದಾರೆ.