ಕೊರೋನಾ ಆತಂಕದ ನಡುವೆ ದೇಶದಲ್ಲಿ ಡೇಂಘೀ ಹಾವಳಿ!

By Suvarna NewsFirst Published Jul 11, 2020, 12:35 PM IST
Highlights

ಈ ವರ್ಷ ಡೆಂಘೀ ಅಪಾಯವೂ ಹೆಚ್ಚು| ಮಳೆಗಾಲದ ಬೆನ್ನಲ್ಲೇ ದೇಶದಲ್ಲಿ ಡೆಂಘೀ ಹಾವಳಿ ಶುರು

ನವದೆಹಲಿ(ಜು.11): ಕೊರೋನಾ ವೈರಸ್‌ ವಿರುದ್ಧ ಹೋರಾಡುತ್ತಿರುವ ದೇಶಕ್ಕೀಗ ಮಳೆಗಾಲದ ಹಿನ್ನೆಲೆಯಲ್ಲಿ ಡೆಂಘೀ ಭೀತಿಯೂ ಆರಂಭವಾಗಿದೆ. ಇವೆರಡೂ ವೈರಸ್‌ಗಳು ಒಟ್ಟಾದರೆ ಜನರಿಗೆ ಅಪಾಯ ಹೆಚ್ಚುವುದಲ್ಲದೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವುದು ಇನ್ನಷ್ಟುಕಷ್ಟವಾಗಿ ದೇಶಕ್ಕೂ ದೊಡ್ಡ ಸಮಸ್ಯೆ ಉಂಟಾಗಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಮಳೆಗಾಲದ ಸಮಯದಲ್ಲಿ ದೇಶದಲ್ಲಿ ಪ್ರತಿವರ್ಷ 1ರಿಂದ 2 ಲಕ್ಷ ಡೆಂಘೀ ಪ್ರಕರಣಗಳು ವರದಿಯಾಗುತ್ತವೆ. ಕಳೆದ ವರ್ಷ 1.36 ಲಕ್ಷ ಜನರಲ್ಲಿ ಡೆಂಘೀ ಕಾಣಿಸಿಕೊಂಡು 132 ಜನರು ಸಾವನ್ನಪ್ಪಿದ್ದರು. ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ಭಾರತದಲ್ಲಿ ಡೆಂಘೀ ತೀವ್ರತೆ ಹೆಚ್ಚಿದೆ. ಸೊಳ್ಳೆಯಿಂದ ಹರಡುವ ಈ ರೋಗವೂ ವೈರಸ್‌ನಿಂದ ಉಂಟಾಗುವ ರೋಗವೇ ಆಗಿದ್ದು, ಕೊರೋನಾ ಮತ್ತು ಡೆಂಘೀ ಸೋಂಕಿನ ಲಕ್ಷಣಗಳು ಹೆಚ್ಚುಕಮ್ಮಿ ಒಂದೇ ಆಗಿವೆ.

ಭಾರತದಲ್ಲಿ ಕೊರೋನಾ ಲಸಿಕೆ 2021ರಲ್ಲಿ ಮಾತ್ರ ಲಭ್ಯ: ಕೇಂದ್ರ!

ಎರಡೂ ರೋಗಪೀಡಿತರಲ್ಲಿ ತೀವ್ರ ಜ್ವರ, ತಲೆನೋವು, ಮೈಕೈ ನೋವು ಕಾಣಿಸಿಕೊಳ್ಳುತ್ತದೆ. ಹೀಗಾಗಿ ಯಾವುದು ಕೊರೋನಾ, ಯಾವುದು ಡೆಂಘೀ ಎಂದು ಪತ್ತೆಹಚ್ಚಲು ಸೋಂಕಿನ ಲಕ್ಷಣಗಳಿರುವವರಿಗೆ ಎರಡೂ ಪರೀಕ್ಷೆ ನಡೆಸಬೇಕಾಗುತ್ತದೆ. ಇದು ಆರೋಗ್ಯ ಕ್ಷೇತ್ರಕ್ಕೆ ಹೊರೆಯಾಗಿ ಪರಿಣಮಿಸಲಿದೆ. ದಕ್ಷಿಣ ಅಮೆರಿಕದಲ್ಲಿ ಸದ್ಯ ಹೀಗಾಗುತ್ತಿದೆ ಎಂದು ವಿವಿಧ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

43% ಮಧ್ಯ ವಯಸ್ಕರು ಕೊರೋನಾಗೆ ಬಲಿ!

ಡೆಂಘೀ ಹಾಗೂ ಕೊರೋನಾ ಎರಡೂ ಸೋಂಕು ಒಬ್ಬರಲ್ಲೇ ಕಾಣಿಸಿಕೊಂಡರೆ ಜೀವಕ್ಕೆ ದೊಡ್ಡ ಅಪಾಯ ಉಂಟಾಗಬಹುದು. ಅಥವಾ ಯಾವುದಾದರೂ ಒಂದು ಸೋಂಕು ಕಾಣಿಸಿಕೊಂಡವರಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಿರುವುದರಿಂದ ಇನ್ನೊಂದು ಸೋಂಕು ಕೂಡ ಬೇಗ ಕಾಣಿಸಿಕೊಳ್ಳಬಹುದು. ರೋಗಿಗಳ ಸಂಖ್ಯೆ ಹೆಚ್ಚಾದರೆ ಆಸ್ಪತ್ರೆಗಳಲ್ಲಿ ಬೆಡ್‌ಗಳು ಸಿಗದೆ, ಐಸಿಯು ಅಥವಾ ವೆಂಟಿಲೇಟರ್‌ ಕೊರತೆಯಾಗಿ ಸಾವಿನ ಸಂಖ್ಯೆಯೂ ಹೆಚ್ಚಬಹುದು. ಅಥವಾ ಡೆಂಘೀ ಪೀಡಿತರನ್ನು ಕೊರೋನಾ ಶಂಕೆಯ ಮೇಲೆ ಆಸ್ಪತ್ರೆಗಳು ದಾಖಲಿಸಿಕೊಳ್ಳದೆ ಹೋದರೆ ಡೆಂಘೀಯಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಬಹುದು. ಒಟ್ಟಿನಲ್ಲಿ ಡೆಂಘೀ ಮತ್ತು ಕೊರೋನಾ ಎರಡೂ ಸೇರಿದರೆ ಏನೇನಾಗಬಹುದು ಎಂಬುದು ನಮಗೂ ತೋಚುತ್ತಿಲ್ಲ ಎಂದು ವೈರಾಣು ತಜ್ಞರು ಹೇಳಿದ್ದಾರೆ.

click me!