ಭಾರತದಲ್ಲಿ ಕೋವಿಡ್ ಆತಂಕ ಹೆಚ್ಚಾಗುತ್ತಿರುವ ಬೆನ್ನಲ್ಲೇ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ದೆಹಲಿ ಹಾಗೂ ಮುಂಬೈನ ಚರಂಡಿ ನೀರಿನಲ್ಲಿ ಕೋವಿಡ್ RNA ವೈರಸ್ ಪತ್ತೆಯಾಗಿದೆ. ಈ ಕುರಿತು ಎರಡು ನಗರಗಳಲ್ಲಿ ಮುಂಜಾಗ್ರತಾ ಕ್ರಮ ಹೆಚ್ಚಿಸಲು ಸೂಚಿಸಲಾಗಿದೆ.
ನವದೆಹಲಿ(ಡಿ.24): ವಿದೇಶಗಳಲ್ಲಿನ ಕೋವಿಡ್ ಹೆಚ್ಚಳದಿಂದ ಇದೀಗ ಮತ್ತೆ ಲಾಕ್‌ಡೌನ್ ಭೀತಿ ಎದುರಾಗುತ್ತಿದೆ. ಚೀನಾದಲ್ಲಿನ ಪರಿಸ್ಥಿತಿ ಭಯಾನಕವಾಗಿದೆ. ಕೋವಿಡ್ ಆತಂಕದಿಂದ ಭಾರತದಲ್ಲಿ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ನಡೆಸಿ ಕೋವಿಡ್ ಪರಿಸ್ಥಿತಿ ಅವಲೋಕಿಸಿದ್ದಾರೆ. ಇಷ್ಟೇ ಅಲ್ಲ ಕೋವಿಡ್ ಮಾರ್ಗಸೂಚಿ ಪಾಲನೆ, ಲಸಿಕೆ ಸೇರಿದಂತೆ ಹಲವು ಸಲಹೆಗಳನ್ನು ನೀಡಿದ್ದಾರೆ. ಇತ್ತ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ಮತ್ತೊಂದು ಆತಂಕ ಶುರುವಾಗಿದೆ. ದೆಹಲಿ ಹಾಗೂ ಮುಂಬೈನಲ್ಲಿನ ಚರಂಡಿ ನೀರಿನ ಮಾದರಿಯಲ್ಲಿ CoV-2 RNA ವೈರಸ್ ಪತ್ತೆಯಾಗಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಮಾಹಿತಿ ಬಹಿರಂಗ ಪಡಿಸಿದ್ದಾರೆ.
ದೆಹಲಿ ಹಾಗೂ ಮುಂಬೈನಲ್ಲಿ ಅಲರ್ಟ್ ಘೋಷಿಸಲಾಗಿದೆ. ಎಲ್ಲರೂ ಮಾಸ್ಕ್ ಧರಿಸುವಂತೆ ಸಚಿವರು ಮನವಿ ಮಾಡಿದ್ದಾರೆ. ಕೋವಿಡ್ ಮಾರ್ಗಸೂಚಿ ಪಾಲಿಸಲು ಮನವಿ ಮಾಡಿದ್ದಾರೆ. ಭಾರತದಲ್ಲಿ ಕೋವಿಡ್ ವೈರಸ್ ನಿಯಂತ್ರಣದಲ್ಲಿದೆ. ಹಾಗಂತ ಮೈಮರೆತರೆ ಅಪಾಯ ಎದುರಾಗಲಿದೆ. ಹೀಗಾಗಿ ಆರಂಭದಿಂದಲೇ ಎಚ್ಚರಿಕೆ ವಹಿಸಿಕೊಂಡರೆ ಭಾರತ ಮತ್ತೊಂದು ಅಲೆಯಿಂದ ಪಾರಾಗಲಿದೆ ಎಂದು ಮಾಂಡವಿಯಾ ಹೇಳಿದ್ದಾರೆ.
undefined
ಹಲವು ದೇಶದಲ್ಲಿ COVID - 19 ಉಲ್ಬಣ: ಜನದಟ್ಟಣೆ ಪ್ರದೇಶದಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ಕೇಂದ್ರ ಸೂಚನೆ
ಸೋಂಕು ಪತ್ತೆ ಹಚ್ಚಲು ಟೆಸ್ಟಿಂಗ್ ಹೆಚ್ಚಿಸಲು ಸೂಚಿಸಲಾಗಿದೆ. ಜೆನೋಮ್ ಸೀಕ್ವೆನ್ಸ್ ಮೂಲಕ ತಳಿಗಳು ಹಾಗೂ ಅದರ ಪರಿಣಾಮದ ಕುರಿತ ಮಾಹಿತಿ ಸಿಗಲಿದೆ. ಈಗಾಗಲೇ ವಿಮಾನ ನಿಲ್ದಾಣಗಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ನಿಗಾ ಇಡಲಾಗಿದೆ. ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.
ಕೊರೋನಾ ಸೋಂಕು ಚಿಕಿತ್ಸಾ ವ್ಯವಸ್ಥೆಗಳ ಸುಸ್ಥಿತಿಯನ್ನು ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದ್ದು, ಡಿ.27ರಂದು ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಅಣಕು (ಮಾಕ್‌ಡ್ರಿಲ್) ಕಾರ್ಯಾಚರಣೆ ನಡೆಸಲಾಗುವುದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಚೀನಾದಲ್ಲಿ ಕೋವಿಡ್ ಸ್ಫೋಟ, ಗಗನಕ್ಕೇರಿತು ನಿಂಬೆ ಹಣ್ಣಿನ ಬೆಲೆ!
ಶುಕ್ರವಾರ ವಿಧಾನಸೌಧದಲ್ಲಿ ಕೇಂದ್ರ ಆರೋಗ್ಯ ಸಚಿವರ ವಿಡಿಯೋ ಸಭೆಯಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ‘ಒಂದು ವೇಳೆ ಸೋಂಕು ಹೆಚ್ಚಳವಾದರೆ ಚಿಕಿತ್ಸೆಗೆ ಎಲ್ಲಾ ತಯಾರಿ ಹೊಂದಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್, ಆಕ್ಸಿಜನ್ ಜನರೇಟರ್ ಸೇರಿದಂತೆ ಕೋವಿಡ್ ಉಪಕರಣಗಳು, ಸಿಬ್ಬಂದಿ, ವ್ಯವಸ್ಥೆಗಳು ಸರಿಯಾಗಿದೆಯೇ ಅನ್ನುವುದನ್ನು ಪರಿಶೀಲನೆ ನಡೆಸಲಾಗುತ್ತದೆ. ಅಗತ್ಯ ವ್ಯವಸ್ಥೆ, ಪರಿಷ್ಕರಣೆ ಮಾಡಿಕೊಳ್ಳಲಾಗುವುದು. ಅಂತಿಮವಾಗಿ 27ರಂದು ಕೊರೋನಾ ಚಿಕಿತ್ಸೆ ವ್ಯವಸ್ಥೆಯ ಅಣಕು ಕಾರ್ಯಾಚರಣೆ ನಡೆಸಲಾಗುವುದು’ ಎಂದರು.
ಬೆಂಗಳೂರು ನಗರದಲ್ಲಿ ಶುಕ್ರವಾರ 16 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.1.39 ದಾಖಲಾಗಿದೆ. ಸೋಂಕಿನಿಂದ 37 ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ 1,203 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಎಲ್ಲರೂ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 1377 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 70 ಮಂದಿ ಮೊದಲ ಡೋಸ್, 65 ಮಂದಿ ಎರಡನೇ ಡೋಸ್ ಮತ್ತು 1242 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ.