ಕಾವೇರಿಗೆ ನಿರ್ಮಿಸಿದ Mettur Dam ಭರ್ತಿ, ತಮಿಳುನಾಡಿನ 11 ಜಿಲ್ಲೆಗೆ ಪ್ರವಾಹ ಎಚ್ಚರಿಕೆ

By Kannadaprabha News  |  First Published Jul 17, 2022, 8:38 AM IST

ಕೆಆರ್‌ಎಸ್ ನಿಂದ ನೀರು ಬಿಡುಗಡೆಗೊಳಿಸಿದ ಪರಿಣಾಮ ಮೆಟ್ಟೂರು ಡ್ಯಾಮ್  ಭರ್ತಿಯಾಗಿದ್ದು, ತಮಿಳುನಾಡಿನ 11 ಜಿಲ್ಲೆಗಳಿಗೆ ಸರಕಾರ ಪ್ರವಾಹ ಎಚ್ಚರಿಕೆ ನೀಡಿದೆ.


ಕೊಯಮತ್ತೂರು (ಜು.17): ಕರ್ನಾಟಕದಿಂದ ಹರಿದು ಹೋಗುವ ಕಾವೇರಿ ನದಿ ನೀರು ಸಂಗ್ರಹಕ್ಕೆ ನಿರ್ಮಿಸಲಾಗಿರುವ, ತಮಿಳುನಾಡಿನ ಕೃಷಿ ಚಟುವಟಿಕೆಗಳ ಜೀವನಾಡಿಯಾಗಿರುವ ಮೆಟ್ಟೂರಿನ ಸ್ಟ್ಯಾನ್ಲಿ ಜಲಾಶಯದ ಶನಿವಾರ ತನ್ನ ಗರಿಷ್ಠ ಮಟ್ಟವಾದ 120 ಅಡಿ ತಲುಪಿದೆ. ಜಲಾಶಯ ತನ್ನ ಪೂರ್ಣ ಮಟ್ಟತಲುಪಿರುವುದು 88 ವರ್ಷಗಳ ಇತಿಹಾಸದಲ್ಲಿ ಇದು ಕೇವಲ 42ನೇ ಬಾರಿ. ಕರ್ನಾಟಕ ಕೃಷ್ಣರಾಜ ಸಾಗರ ಮತ್ತು ಕಬಿನಿ ಜಲಾಶಯದಿಂದ 1.18 ಲಕ್ಷ ಕ್ಯುಸೆಕ್ಸ್‌ ನೀರು ಹರಿದು ಬರುತ್ತಿರುವ ಕಾರಣ, ನಿರೀಕ್ಷೆಗೂ ಮೊದಲೇ ಅಣೆಕಟ್ಟು ಭರ್ತಿಯಾಗಿದೆ. ಕಳೆದ 4 ದಿನಗಳಲ್ಲಿ ಅಣೆಕಟ್ಟಿಗೆ 20 ಅಡಿಯಷ್ಟು ನೀರು ಸೇರಿದೆ. ಈ ಹಿನ್ನೆಲೆಯಲ್ಲಿ 16 ಗೇಟ್‌ಗಳಿಂದ 5,000-10,000 ಕ್ಯೂಸೆಕ್‌ ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಬಿಡುಗಡೆಗೊಳಿಸಲಾಗುವ ಕಾರಣ ಜನಗಳಿಗೆ ಎಚ್ಚರಿಕೆಯಿಂದ ಇರುವಂತೆ ಸರ್ಕಾರ ಸೂಚಿಸಿದೆ. ತಮಿಳುನಾಡಿನ  ಸೇಲಂ, ಈರೋಡ್, ನಾಮಕ್ಕಲ್, ಕರೂರ್, ಅರಿಯಲೂರ್, ತಿರುಚಿರಾಪಳ್ಳಿ, ತಂಜಾವೂರು, ತಿರುವರೂರ್, ಮೈಲಾಡುತುರೈ, ನಾಗಪಟ್ಟಣಂ ಮತ್ತು ಕಡಲೂರು ಹೀಗೆ ಒಟ್ಟು 11 ಜಿಲ್ಲೆಗಳಿಗೆ ಪ್ರವಾಹದ ಎಚ್ಚರಿಕೆ ನೀಡಲಾಗಿದೆ.

ಕಾವೇರಿ ವಿವಾದ ದೂರ:  ಕೆಆರ್‌ಎಸ್‌ ಹಾಗೂ ಕಬಿನಿ ಜಲಾಶಯಗಳಿಂದ 1.18 ಲಕ್ಷ ಕ್ಯುಸೆಕ್‌ ನೀರು ಹರಿದುಬರುತ್ತಿರುವ ಕಾರಣ ತಮಿಳುನಾಡಿನ ಜೀವನಾಡಿ ಮೆಟ್ಟೂರು ಜಲಾಶಯ ಭರ್ತಿಯಾಗಿದೆ. ಹೀಗಾಗಿ ಜಲಾಶಯದಿಂದ ನೀರು ಹೊರಬಿಡಲಾಗುತ್ತಿದೆ. ಇದರಿಂದ ಈ ವರ್ಷ ಕಾವೇರಿ ಜಲ ವಿವಾದ ಆತಂಕ ದೂರವಾದಂತಾಗಿದೆ.

Tap to resize

Latest Videos

ರಾಜ್ಯದ ನದಿ-ಡ್ಯಾಂ ಸಮೀಪದ ಗ್ರಾಮಗಳಲ್ಲಿ ಪ್ರವಾಹ, ಜು. 19ರಿಂದ ತಗ್ಗಲಿದೆ ಮಳೆ

ಕೆಆರ್‌ಎಸ್‌ ನಲ್ಲಿ  88 ಸಾವಿರ ಕ್ಯುಸೆಕ್‌ ಒಳಹರಿವು : ಮಂಡ್ಯ ಜಿಲ್ಲೆಯ ಕೃಷ್ಣರಾಜಸಾಗರ ಜಲಾಶಯಕ್ಕೆ ಶನಿವಾರ ಸಂಜೆ 88 ಸಾವಿರ ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ಅಣೆಕಟ್ಟೆಯ ಒಳಹರಿವಿನ ಪ್ರಮಾಣದಲ್ಲೂ ಹೆಚ್ಚಳವಾಗಿದೆ. ಜಲಾಶಯದ ಗರಿಷ್ಠ ಮಟ್ಟ124.80 ಅಡಿ ದಾಖಲಾಗಿದ್ದು, ಜಲಾಶಯದ ಸುರಕ್ಷತೆ ದೃಷ್ಟಿಯಿಂದ ನೀರಿನ ಮಟ್ಟವನ್ನು 123.54 ಅಡಿಗೆ ಕಾಯ್ದಿರಿಸಿಕೊಂಡು 85639 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿದೆ. ನದಿಗೆ 84029 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದೆ. ವಿಶ್ವೇಶ್ವರಯ್ಯ ನಾಲೆಗೆ 1502 ಕ್ಯುಸೆಕ್‌ ನೀರನ್ನು ಹರಿಸಲಾಗುತ್ತಿದೆ. ಪ್ರಸ್ತುತ ಜಲಾಶಯದಲ್ಲಿ 47.707 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಕಳೆದ ವರ್ಷ ಇದೇ ದಿನ ಜಲಾಶಯದ ನೀರಿನ ಮಟ್ಟ93.30 ಅಡಿ ಇತ್ತು. ಅಂದು ಜಲಾಶಯಕ್ಕೆ 22027 ಕ್ಯುಸೆಕ್‌ ನೀರು ಹರಿದುಬರುತ್ತಿದ್ದು, 2197 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. ಅಂದು ಅಣೆಕಟ್ಟೆಯಲ್ಲಿ 18.001 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು.

Davanagere: ತುಂಗಾಭದ್ರಾ ಪ್ರವಾಹಕ್ಕೆ ಸಿಲುಕಿದ ಗಂಗಾನಗರ ನಿವಾಸಿಗಳ ಬದುಕು!

ಗೋದಾವರಿ ಪ್ರವಾಹ ಪ್ರತಾಪ: ಆಂದ್ರ  ಅಕ್ಷರಶಃ ಕಂಗಾಲು!
ಅಮರಾವತಿ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಆಂಧ್ರಪ್ರದೇಶದ ಗೋದಾವರಿ ನದಿಯಲ್ಲಿ ಉಕ್ಕೇರಿ ಹರಿಯುವಂತೆ ಮಾಡಿದ್ದು ನದಿ ಮತ್ತು ಅಣೆಕಟ್ಟಿನ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಅನಾಹುತ ಸೃಷ್ಟಿಸಿದೆ.

ಗೋದಾವರಿ ಹಲವು ಪ್ರದೇಶಗಳಲ್ಲಿ ಅಪಾಯ ಮಟ್ಟಮೀರಿ ಹರಿಯುತ್ತಿದ್ದು, ದೋವಲೇಶ್ವರಂ ಬಳಿ ಇರುವ ಸರ್‌ ಆರ್ಥರ್‌ ಕಾಟನ್‌ ಬ್ಯಾರೇಜ್‌ಗೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೀಗಾಗಿ ಬ್ಯಾರೇಜ್‌ನಿಂದ ದಾಖಲೆಯ 25 ಲಕ್ಷ ಕ್ಯುಸೆಕ್ಸ್‌ ನೀರನ್ನು ಹೊರಬಿಡಲಾಗುತ್ತಿದೆ. 1986ರಲ್ಲಿ 35 ಲಕ್ಷ ಕ್ಯುಸೆಕ್ಸ್‌, 2006ರಲ್ಲಿ 28 ಲಕ್ಷ ಕ್ಯುಸೆಕ್ಸ್‌ ನೀರು ಹೊರಬಿಟ್ಟಿದ್ದು ಬಿಟ್ಟರೆ ಇದೇ ದೊಡ್ಡ ದಾಖಲೆ. ಇದರ ಪರಿಣಾಮ ನದಿ ಮತ್ತು ಅಣೆಕಟ್ಟು ಪಾತ್ರದ 42 ಮಂಡಲಗಳ ವ್ಯಾಪ್ತಿಯ 300 ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವವಾಗಿದೆ. 177 ಹಳ್ಳಿಗಳು ಜಲಾವೃತವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಂದ 62337 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಸ್ಥಾನದ ನಾಗೌರ್‌ ಪಟ್ಟಣದಲ್ಲಿ ಮಳೆ ನೀರು ತುಂಬಿದ್ದ ಗುಂಡಿಗೆ ಬಿದ್ದು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳು ಸೇರಿ ನಾಲ್ವರು ಮಕ್ಕಳು ಸಾವನ್ನಪ್ಪಿದ ಘಟನೆ ನಡೆದಿದೆ. ಗುಂಡಿಯಲ್ಲಿ ಸ್ನಾನಕ್ಕೆ ಇಳಿದ ವೇಳೆ ಅವರೆಲ್ಲಾ ಕಾಲು ಜಾರಿ ಸಾವನ್ನಪ್ಪಿದ್ದಾರೆ

ಈ ನಡುವೆ ಒಡಿಶಾದ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ರಾಜ್ಯದ ಹಲವು ನಗರಗಳಲ್ಲಿ 8-9 ಸೆ.ಮೀನಷ್ಟುಮಳೆ ಸುರಿದಿದೆ. ಇನ್ನು ಭಾರೀ ಪ್ರವಾಹಕ್ಕೆ ತುತ್ತಾಗಿದ್ದ ಅಸ್ಸಾಂನಲ್ಲಿ ಪರಿಸ್ಥಿತಿ ಸುಧಾರಿಸಿದ್ದರೂ 5 ಜಿಲ್ಲೆಗಳ ಸುಮಾರು 1.50 ಲಕ್ಷ ಜನರು ಇನ್ನೂ ಪ್ರವಾಹದಿಂದ ಬಾಧಿತರಾಗಿದ್ದಾರೆ ಎಂದು ಸರ್ಕಾರ ತಿಳಿಸಿದೆ.

click me!