ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ| ಟೀ ಮಾರುತ್ತಿದ್ದ ಒಂಟಿ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಲೆಗೈದ ಯುವಕ| ಸಿಸಿಟಿವಿ ಕೊಡ್ತು ಸುಳಿವು
ನವದೆಹಲಿ[ನ.30]: ದೇಶದಲ್ಲಿ ದಿನೇ ದಿನೇ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಹೈದರಾಬಾದ್ ವೈದ್ಯೆಯ ಮೇಲೆ ನಡೆದಿದ್ದ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಜನರು ತೀವ್ರವಾಗಿ ಖಂಡಿಸಿದ್ದು, ಆರೋಪಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಘಟನೆ ಮಾಸುವ ಮುನ್ನವೇ ದೆಹಲಿಯಲ್ಲಿ ಒಂಟಿ ಮಹಿಳೆ ಮೇಲೆ ನಡೆದಿರುವ ಅತ್ಯಾಚಾರ ಪ್ರಕರಣ ಸದ್ದು ಮಾಡಲಾರಂಭಿಸಿದೆ.
ಹೌದು ಉತ್ತರ ದೆಹಲಿಯ ಗುಲಾಬಿ ಭಾಗ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಟೀ ಮಾರಿ ಜೀವನ ಸಾಗಿಸುತ್ತಿದ್ದ 55 ವರ್ಷದ ಮಹಿಳೆಯನ್ನು ಅದೇ ಪ್ರದೇಶದ 24 ವರ್ಷದ ಯುವಕ ಅತ್ಯಾಚಾರಗೈದು ಕೊಲೆ ಮಾಡಿದ್ದಾನೆ. ಈ ಏಕಾಂಗಿ ಮಹಿಳೆ ತಾನು ಟೀ ಮಾರುತ್ತಿದ್ದ ಅಂಗಡಿಯಲ್ಲೇ ವಾಸಿಸುತ್ತಿದ್ದಳೆನ್ನಾಗಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಬೆಳಗ್ಗೆ ಗ್ರಾಹಕನೊಬ್ಬ ಟೀ ಕುಡಿಯಲೆಂದು ಶಾಪ್‌ಗೆ ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಆತ ಸ್ಥಳಿಯರಿಗೆ ಈ ಮಾಹಿತಿ ನೀಡಿದ್ದು, ಪೊಲೀಸರಿಗೂ ಕರೆ ಮಾಡಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಮಹಿಳೆ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿ ಆರೋಪಿಯನ್ನು ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಟೀ ಶಾಪ್‌ಗೆ ಬಂದಿರುವುದು ರೆಕಾರ್ಡ್ ಆಗಿದ್ದು, ಪೊಲೀಸರು ಆತನನ್ನು ಗುರುತಿಸಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ ತಾನೇ ಆ ಮಹಿಳೆಯನ್ನು ಅತ್ಯಾಚಾರಗೈದು, ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.