* ಸಂಸತ್ ಭವನದ ಮೇಲಿನ ದಾಳಿಗೆ 20 ವರ್ಷ
* ಭಾರತೀಯರ ಅಸ್ಮಿತೆ ಧಕ್ಕೆಗೊಳಿಸಿದ್ದ ಭಯೋತ್ಪಾದಕರ ದಾಳಿ
* ಎರಡು ದಶಕದಲ್ಲಿ ಹೆಚ್ಚಿದ ಭದ್ರತೆ
ನವದೆಹಲಿ(ಡಿ.13): ಡಿಸೆಂಬರ್ 13, 2001, ಇತಿಹಾಸದ ಪುಟಗಳಲ್ಲಿ ದಾಖಲಾದ ದಿನ, ಪ್ರಜಾಪ್ರಭುತ್ವದ ದೇವಾಲಯವಾದ ಸಂಸತ್ತಿನ ಮೇಲೆ ಭಯೋತ್ಪಾದಕರು ದಾಳಿ ಮಾಡಿದ ದಿನ. ಈ ಭಯೋತ್ಪಾದಕ ದಾಳಿಯು ಭಾರತೀಯ ಅಸ್ಮಿತೆಯನ್ನಷ್ಟೇ ಘಾಸಿಗೊಳಿಸಿದ್ದಲ್ಲ, ಬದಲಾಗಿ, ದೀರ್ಘಕಾಲ ಉಳಿಯುವ ಆಳವಾದ ಗಾಯವೊಂದನ್ನು ಭಾರತಾಂಬೆಗೆ ಮಾಡಿದ್ದರು. ಅಂದೂ ಕೂಡಾ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯುತ್ತಿತ್ತು.
ದಾಳಿ ನಡೆದಿದ್ದು ಹೇಗೆ?
ಗೃಹ ಸಚಿವಾಲಯದ ಸ್ಟಿಕ್ಕರ್ ಇರುವ ಅಂಬಾಸಿಡರ್ ಕಾರು ಸಂಸತ್ತಿನ ಸಂಕೀರ್ಣವನ್ನು ಪ್ರವೇಶಿಸಿತ್ತು. ಸಂಸತ್ತಿನ ಉಭಯ ಸದನಗಳನ್ನು ಸಂಕ್ಷಿಪ್ತವಾಗಿ ಮುಂದೂಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಸೋನಿಯಾ ಗಾಂಧಿ ಸಂಸತ್ ಭವನದಿಂದ ನಿರ್ಗಮಿಸಿದ್ದರು. ಎಲ್ ಕೆ ಅಡ್ವಾಣಿ ಸೇರಿದಂತೆ 100 ಮಂದಿ ಸಂಸತ್ ಭವನದಲ್ಲಿಯೇ ಇದ್ದರು. ಆ ವೇಳೆ ಕೆಲ ಸಂಸದರ ವಾಹನಗಳೂ ಬಂದು ಹೋಗುತ್ತಿದ್ದವು. ಹಾಗಾಗಿಯೇ ಕಾರಿನಲ್ಲಿದ್ದ ಐವರು ಭಯೋತ್ಪಾದಕರು ಸಂಸತ್ತಿನೊಳಗೆ ನುಗ್ಗಿರುವ ಬಗ್ಗೆ ಯಾರಿಗೂ ಅನುಮಾನ ಬಂದಿರಲಿಲ್ಲ. ಕಾರಿನಲ್ಲಿ ಅಪಾರ ಪ್ರಮಾಣದ ಆರ್‌ಡಿಎಕ್ಸ್ ಇತ್ತು. ಗೇಟ್ ನಂ. 11ರಿಂದ ಉಪರಾಷ್ಟ್ರಪತಿ ಹೊರಡುವವರಿದ್ದರು. ಅವರ ವಾಹನಗಳ ಬೆಂಗಾವಲು ಪಡೆ ಅವರಿಗಾಗಿ ಕಾಯುತ್ತಿತ್ತು.
ಅದೇ ಸಮಯದಲ್ಲಿ, ಗೇಟ್ ಸಂಖ್ಯೆ 11 ರ ಕಡೆ ಬಿಳಿ ಬಣ್ಣದ ಅಂಬಾಸಿಡರ್ ಕಾರು ಮುನ್ನುಗ್ಗುತ್ತಿರುವುದನ್ನು ನೋಡಿದ ಭದ್ರತಾ ಸಿಬ್ಬಂದಿ ನಿಲ್ಲಿಸಲು ಯತ್ನಿಸಿದ್ದಾರೆ. ಈ ವೇಳೆ ಭಯೋತ್ಪಾದಕರು ಗುಂಡು ಹಾರಿಸಲು ಪ್ರಾರಂಭಿಸಿದರು. ಉಗ್ರರು ಎಕೆ 47 ರೈಫಲ್‌ಗಳು, ಗ್ರೆನೇಡ್ ಲಾಂಚರ್‌ಗಳು, ಪಿಸ್ತೂಲ್‌ಗಳು ಮತ್ತು ಗ್ರೆನೇಡ್‌ಗಳನ್ನು ಹೊಂದಿದ್ದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳೂ ಮುಂದಾಳತ್ವ ವಹಿಸಿ ಪ್ರತಿದಾಳಿ ನಡೆಸಿದರು. ಸುಮಾರು 45 ನಿಮಿಷಗಳ ಕಾಲ ಎರಡೂ ಕಡೆಯಿಂದ ಗುಂಡಿನ ಚಕಮಕಿ ನಡೆಯಿತು. ಭದ್ರತಾ ಪಡೆ ಐವರು ಭಯೋತ್ಪಾದಕರನ್ನು ಕೊಂದು ಸಂಸತ್ತಿನ ಸಂಕೀರ್ಣದಲ್ಲಿ ಹಾಜರಿದ್ದ ಸಚಿವರು ಮತ್ತು ಸಂಸದರನ್ನು ರಕ್ಷಿಸಿದ್ದರು. ಈ ದಾಳಿಯಲ್ಲಿ 5 ಉಗ್ರರು ಸೇರಿದಂತೆ 14 ಜನ ಸಾವನ್ನಪ್ಪಿದ್ದಾರೆ. ಮೊದಲ ಕಾನ್‌ಸ್ಟೆಬಲ್ ಕಮಲೇಶ್ ಕುಮಾರಿ ಯಾದವ್ ಹುತಾತ್ಮರಾಗಿದ್ದರು. ಇದಲ್ಲದೆ, ಸಂಸತ್ತಿನ ತೋಟಗಾರರೊಬ್ಬರು ಸೇರಿದಂತೆ ಸಂಸತ್ ಭವನದ ಇಬ್ಬರು ಭದ್ರತಾ ಸಿಬ್ಬಂದಿ ಮತ್ತು 6 ದೆಹಲಿ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದಾರೆ.
ತಿಹಾರ್ ಜೈಲಿನಲ್ಲಿ ಅಫ್ಜಲ್ ಗುರುವಿಗೆ ಗಲ್ಲು
ಈ ಪ್ರಕರಣದಲ್ಲಿ, ಡಿಸೆಂಬರ್ 15, 2001 ರಂದು ದೆಹಲಿ ಪೊಲೀಸರು ಜಮ್ಮು ಮತ್ತು ಕಾಶ್ಮೀರದಿಂದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸದಸ್ಯ ಅಫ್ಜಲ್ ಗುರುವನ್ನು ಬಂಧಿಸಿದರು. ದೆಹಲಿ ವಿಶ್ವವಿದ್ಯಾಲಯದ ಜಾಕಿರ್ ಹುಸೇನ್ ಕಾಲೇಜಿನ ಎಸ್‌ಎಆರ್ ಗೀಲಾನಿ ಅವರನ್ನು ವಿಚಾರಣೆಗೊಳಪಡಿಸಿ, ಬಂಧಿಸಲಾಯಿತು. ಇದಾದ ನಂತರ ಅಫ್ಸಾನ್ ಗುರು ಮತ್ತು ಆಕೆಯ ಪತಿ ಶೌಕತ್ ಹುಸೇನ್ ಗುರು ಸಿಕ್ಕಿಬಿದ್ದಿರು.
18 ಡಿಸೆಂಬರ್ 2002 ರಂದು, SAR ಗೀಲಾನಿ, ಶೌಕತ್ ಹುಸೇನ್ ಗುರು ಮತ್ತು ಅಫ್ಜಲ್ ಗುರುವಿಗೆ ಮರಣದಂಡನೆ ವಿಧಿಸಲಾಯಿತು, ಆದರೆ ಅಫ್ಸಾನ್ ಗುರುವನ್ನು ಖುಲಾಸೆಗೊಳಿಸಲಾಯಿತು. 30 ಆಗಸ್ಟ್ 2003 ರಂದು, ಸಂಸತ್ ದಾಳಿಯ ಪ್ರಮುಖ ಆರೋಪಿ ಜೈಶ್-ಎ-ಮೊಹಮ್ಮದ್ ನಾಯಕ ಘಾಜಿ ಬಾಬಾ ಶ್ರೀನಗರದಲ್ಲಿ BSF ಜೊತೆಗಿನ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟರು. 29 ಅಕ್ಟೋಬರ್ 2003 ರಂದು SAR ಗಿಲಾನಿ ಅವರನ್ನು ಖುಲಾಸೆಗೊಳಿಸಲಾಯಿತು. 4 ಆಗಸ್ಟ್ 2005 ರಂದು, ಸುಪ್ರೀಂ ಕೋರ್ಟ್ ಅಫ್ಜಲ್ ಗುರುಗೆ ಮರಣದಂಡನೆಯನ್ನು ನೀಡುವ ತೀರ್ಪನ್ನು ಎತ್ತಿ ಹಿಡಿಯಿತು. ಅದೇ ಸಮಯದಲ್ಲಿ, ಶೌಕತ್ ಹುಸೇನ್ ಗುರುಗಳ ಮರಣದಂಡನೆಯನ್ನು 10 ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಬದಲಾಯಿಸಲಾಯಿತು. ಅಫ್ಜಲ್ ಗುರುವನ್ನು 9 ಫೆಬ್ರವರಿ 2013 ರಂದು ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.
ಹೆಚ್ಚಿದ ಭದ್ರತಾ ವ್ಯವಸ್ಥೆ
ಉಗ್ರರ ದಾಳಿಯ ನಂತರ ಸಂಸತ್ತಿನಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 24 ಗಂಟೆಗಳ ಕಾಲ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಯಿತು. ಸಂಸತ್ ಭವನದ ಒಳಗೆ ಸಂಸತ್ ಭದ್ರತಾ ಸಿಬ್ಬಂದಿ ಬೀಡುಬಿಟ್ಟಿದ್ದಾರೆ. ಕೇಂದ್ರ ಮೀಸಲು ಪೊಲೀಸ್ ಪಡೆಯ ಸಿಬ್ಬಂದಿಯನ್ನು ಕ್ಯಾಂಪಸ್‌ನಲ್ಲಿ ನಿಯೋಜಿಸಲಾಗಿದೆ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಹೊರ ಮಟ್ಟದಲ್ಲಿ ಭದ್ರತೆಗೆ ನಿಯೋಜಿಸಲಾಗಿದೆ. ಭದ್ರತೆಗಾಗಿ ವಿವಿಧ ಎಲೆಕ್ಟ್ರಾನಿಕ್ ಮತ್ತು ತಾಂತ್ರಿಕ ಸಾಧನಗಳನ್ನು ಅಳವಡಿಸಲಾಗಿದೆ. ತ್ವರಿತ ಕಾರ್ಯಾಚರಣೆ ತಂಡವನ್ನು ನಿಯೋಜಿಸಲಾಗಿದೆ. ಸೈರನ್ ಮೊಳಗಿದ ತಕ್ಷಣ, ಈ ತಂಡವು ಪ್ರತಿ ಸನ್ನಿವೇಶವನ್ನು ಎದುರಿಸಲು ಮುಂದಾಳತ್ವ ವಹಿಸುತ್ತದೆ.
ಅನುಮತಿ ಇಲ್ಲದೆ ಯಾವುದೇ ವಾಹನ ಸಂಸತ್ ಭವನ ಪ್ರವೇಶಿಸದಂತೆ ಬೂಮ್ ಬ್ಯಾರಿಯರ್ ಹಾಗೂ ಟೈರ್ ಬಸ್ಟರ್ ಗಳನ್ನು ಅಳವಡಿಸಲಾಗಿದೆ. ಪ್ರತಿ ಪ್ರವೇಶದ್ವಾರದಲ್ಲಿ ಸಿಸಿಟಿವಿ, ಪ್ರವೇಶ ನಿಯಂತ್ರಣ ಮತ್ತು ವ್ಯಕ್ತಿಗಳು ಮತ್ತು ಸರಕುಗಳನ್ನು ಪರಿಶೀಲಿಸುವ ಸಾಧನಗಳನ್ನು ಅಳವಡಿಸಲಾಗಿದೆ. ವಾಹನ ಸ್ಕ್ಯಾನಿಂಗ್ ವ್ಯವಸ್ಥೆಯ ಜೊತೆಗೆ ಸ್ಫೋಟಕ ವಸ್ತುಗಳನ್ನು ಪತ್ತೆ ಮಾಡುವ ಉಪಕರಣಗಳನ್ನು ಅಳವಡಿಸಲಾಗಿದೆ. RFID ಟ್ಯಾಗ್‌ಗಳನ್ನು ಹೊಂದಿರುವ ವಾಹನಗಳಿಗೆ ಮಾತ್ರ ಸಂಸತ್ ಭವನಕ್ಕೆ ಪ್ರವೇಶಿಸಲು ಅವಕಾಶವಿದೆ. ಪಾಸ್ ಹೊಂದಿರುವವರು ಮಾತ್ರ ಈ ವಾಹನಗಳನ್ನು ಹತ್ತಬಹುದು.