14 ಬಿಜೆಪಿ ಕಾರ‍್ಯಕರ್ತರ ಹತ್ಯೆ, ಲಕ್ಷ ಮಂದಿ ಗುಳೆ| ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪ| ಬಂಗಾಳ ಹಿಂಸೆ ಖಂಡಿಸಿ ದೇಶವ್ಯಾಪಿ ಪ್ರತಿಭಟನೆ
ಕೋಲ್ಕತಾ(ಮೇ.06): ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಗಲಭೆ-ಹಿಂಸಾಚಾರದ ಘಟನೆಗಳಲ್ಲಿ 14 ಬಿಜೆಪಿ ಕಾರ‍್ಯಕರ್ತರು ಹತ್ಯೆಗೀಡಾಗಿದ್ದಾರೆ. ಅಲ್ಲದೆ ಸುಮಾರು ಒಂದು ಲಕ್ಷ ಮಂದಿ ಪ್ರಾಣ ಭೀತಿಯಿಂದ ತಮ್ಮ ಮನೆಗಳನ್ನು ಬಿಟ್ಟು ಇತರೆಡೆಗಳಲ್ಲಿ ಗುಳೆ ಹೋಗಿದ್ದಾರೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ದೂರಿದ್ದಾರೆ.
ಈ ಬಗ್ಗೆ ಬುಧವಾರ ಮಾತನಾಡಿದ ನಡ್ಡಾ ಅವರು, ರಾಜ್ಯಾದ್ಯಂತ ಬಿಜೆಪಿ ಕಾರ‍್ಯಕರ್ತರನ್ನು ಭೀಕರವಾಗಿ ಥಳಿಸಿ ಹತ್ಯೆ ಮಾಡಲಾಗುತ್ತಿದೆ. ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಗುತ್ತಿದೆ. ಮಮತಾ ಬ್ಯಾನರ್ಜಿ ಅವರು ಈ ಬಗ್ಗೆ ಮೌನವಾಗಿರುವುದು ಈ ಕೃತ್ಯಗಳಲ್ಲಿ ಮುಖ್ಯಮಂತ್ರಿಗಳೇ ಶಾಮೀಲಾಗಿರುವುದನ್ನು ಜಗಜ್ಜಾಹೀರು ಮಾಡುತ್ತದೆ. ಬ್ಯಾನರ್ಜಿ ಅವರ ಕೈ ರಕ್ತಮಯವಾಗಿದೆ ಎಂದು ಹೇಳಿದರು.
ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ಹಿಂಸಾಚಾರ ಖಂಡಿಸಿ ಬಿಜೆಪಿ, ಬುಧವಾರ ದೇಶವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿತ್ತು.