India@75: 15 ವರ್ಷದ ಬಾಲಕನಿಗೆ ಥಳಿಸಿದ ಬ್ರಿಟಿಷರು, ಮೂರ್ಛೆ ಹೋಗುವವರೆಗೂ ಭಾರತ್ ಮಾತಾ ಕೀ ಜೈ ಎಂದ 'ಆಜಾದ್'!

By Suvarna News  |  First Published Mar 29, 2022, 4:49 PM IST

* ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ

* ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ವೀರ ಸೇನಾನಿಗಳ ಸ್ಮರಣೆ

* 15 ವರ್ಷದ ಬಾಲಕನಿಗೆ ಥಳಿಸಿದ ಬ್ರಿಟಿಷರು

* ಮೂರ್ಛೆ ಹೋಗುವವರೆಗೂ ಭಾರತ್ ಮಾತಾ ಕೀ ಜೈ ಎಂದ 'ಆಜಾದ್'


ನವದೆಹಲಿ(ಮಾ.29): ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ. ಅಮೃತ ಮಹೋತ್ಸವದ ಸಂದರ್ಭದಲ್ಲಿ ಸರ್ಕಾರ ವಿಭಿನ್ನ ಕಾರ್ಯಕ್ರಮಗಳ ಮೂಲಕ ಇದನ್ನು ಆಚರಿಸುತ್ತಿದೆ. ಹೀಗಿರುವಾಗ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸ್ವಾತಂತ್ರ್ಯ ಸೇನಾನಿಗಳನ್ನೂ ನೆನಪಿಸಿಕೊಳ್ಳಬೇಕು. ಹೀಗೆ ದೇಶಕ್ಕಾಗಿ ಮಡಿದವರಲ್ಲಿ  ಚಂದ್ರಶೇಖರ ಆಜಾದ್ ಕೂಡಾ ಒಬ್ಬರು. ಸ್ವಾತಂತ್ರ್ಯ ಹೋರಾಟದ ಮಹಾನ್ ನಾಯಕ ಚಂದ್ರಶೇಖರ ಆಜಾದ್ ವೀರಗಾಥೆ ಯಾರಿಗೆ ತಿಳಿದಿಲ್ಲ? ಬ್ರಿಟಿಷರ ಕೈಗೆ ಜೀವಂತವಾಗಿ ಸಿಗಬಾರದೆಂಬ ನಿಟ್ಟಿನಲ್ಲಿ ಅಲಹಾಬಾದ್‌ನ ಆಲ್ಫ್ರೆಡ್ ಪಾರ್ಕ್‌ನಲ್ಲಿ ಗುಂಡು ಹಾರಿಸಿಕೊಂಡು ತನ್ನ ಜೀವ ಬಲಿ ಕೊಟ್ಟ ವೀರ ಅವರು. ಈಗ ಈ ಉದ್ಯಾನವನವನ್ನು ಚಂದ್ರಶೇಖರ್ ಆಜಾದ್ ಎಂದು ಕರೆಯಲಾಗುತ್ತದೆ. ಆಜಾದ್ ಅವರು ರಾಮಪ್ರಸಾದ್ ಬಿಸ್ಮಿಲ್ ಮತ್ತು ಶಹೀದ್ ಭಗತ್ ಸಿಂಗ್ ರಂತಹ ಕ್ರಾಂತಿಕಾರಿಗಳ ಒಡನಾಡಿಯಾಗಿದ್ದರು. 1922ರಲ್ಲಿ ಮಹಾತ್ಮ ಗಾಂಧೀಜಿಯವರು ಅಸಹಕಾರ ಚಳವಳಿಯನ್ನು ಹಠಾತ್ತನೆ ನಿಲ್ಲಿಸಿದಾಗ ಆಜಾದ್ ಅವರ ಮನಸ್ಸಿನಲ್ಲಿ ಕ್ರಾಂತಿಕಾರಿ ವಿಚಾರಗಳು ಹುಟ್ಟಿಕೊಂಡವು. ಇದರ ನಂತರ ಅವರು ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್‌ನ ಸಕ್ರಿಯ ಸದಸ್ಯರಾದರು. 

ಇದೇ ಸಂಘಟನೆಯು ಆಗಸ್ಟ್ 9, 1925 ರಂದು ರಾಮಪ್ರಸಾದ್ ಬಿಸ್ಮಿಲ್ ಅವರ ನೇತೃತ್ವದಲ್ಲಿ ಕಾಕೋರಿ ಘಟನೆಯನ್ನು ಮುನ್ನಡೆಸಿತು. ಈ ರೈಲು ದರೋಡೆಯಾಗಿತ್ತು. 1927 ರಲ್ಲಿ, ಬಿಸ್ಮಿಲ್ ಮತ್ತು 4 ಸಹಚರರ ತ್ಯಾಗದ ನಂತರ, ಆಜಾದ್ ಉತ್ತರ ಭಾರತದ ಕ್ರಾಂತಿಕಾರಿ ಪಕ್ಷಗಳನ್ನು ಸೇರುವ ಮೂಲಕ ಹಿಂದೂಸ್ತಾನ್ ಸಮಾಜವಾದಿ ಗಣರಾಜ್ಯ ಸಂಘವನ್ನು ಸ್ಥಾಪಿಸಿದರು. ಆಜಾದ್ ಭಗತ್ ಸಿಂಗ್ ಜೊತೆಗೆ 1928 ರಲ್ಲಿ ಲಾಹೋರ್‌ನಲ್ಲಿ ಬ್ರಿಟಿಷ್ ಪೊಲೀಸ್ ಅಧಿಕಾರಿ ಎಸ್‌ಪಿ ಸೌಂಡರ್ಸ್ ಅವರನ್ನು ಗುಂಡಿಕ್ಕಿ ಲಾಲಾ ಲಜಪತ್ ರಾಯ್ ಸಾವಿಗೆ ಸೇಡು ತೀರಿಸಿಕೊಂಡರು. ಇದಾದ ಬಳಿಕ ದೆಹಲಿಗೆ ಬಂದು ವಿಧಾನಸಭೆಯಲ್ಲಿ ಬಾಂಬ್ ಎಸೆದಿದ್ದರು.

Tap to resize

Latest Videos

undefined

ಚಂದ್ರಶೇಖರ್ ಆಜಾದ್ ಅವರು ಜುಲೈ 23, 1906 ರಂದು ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಭಾಬ್ರಾ ಗ್ರಾಮದಲ್ಲಿ (ಈಗ ಚಂದ್ರಶೇಖರ್ ಆಜಾದ್ ನಗರ ಎಂದು ಕರೆಯುತ್ತಾರೆ) ಜನಿಸಿದರು. ಅವರ ಪೂರ್ವಜರು ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ ಬದರ್ಕಾ ನಿವಾಸಿಗಳು. ಆದರೆ ಬರಗಾಲದ ಕಾರಣ ಅವರ ತಂದೆ ಸೀತಾರಾಮ್ ತಿವಾರಿ ಭಾಬ್ರಾಗೆ ಬಂದು ನೆಲೆಸಿದರು. ಅವರ ತಾಯಿಯ ಹೆಸರು ಜಾಗ್ರಣಿ ದೇವಿ. ಆಜಾದ್ ಅವರ ಬಾಲ್ಯವು ಭಿಲ್ ಬುಡಕಟ್ಟು ಜನಾಂಗದವರ ಜೊತೆ ಕಳೆದಿತ್ತು. ಆಜಾದ್ ಉತ್ತಮ ಬಿಲ್ಲುಗಾರರಾಗಿದ್ದರು. ಭಿಲ್ ಬುಡಕಟ್ಟು ಜನಾಂಗದವರಿಗೆ ಬಿಲ್ಲುಗಾರಿಕೆ ತುಂಬಾ ಚೆನ್ನಾಗಿ ತಿಳಿದಿರುತ್ತದೆ.

1919ರಲ್ಲಿ ಅಮೃತಸರದಲ್ಲಿ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಇಡೀ ದೇಶವನ್ನೇ ಬಡಿದೆಬ್ಬಿಸಿತ್ತು. ಆಗ ಆಜಾದ್ ವಿದ್ಯಾರ್ಥಿಯಾಗಿದ್ದರು. 1920ರಲ್ಲಿ ಗಾಂಧೀಜಿ ಅಸಹಕಾರ ಚಳವಳಿ ಆರಂಭಿಸಿದಾಗ ಆಜಾದ್ ಕೂಡ ಅವರ ಜತೆ ಸೇರಿಕೊಂಡರು. ತನ್ನ ಶಾಲೆಯ ವಿದ್ಯಾರ್ಥಿಗಳೊಂದಿಗೆ ರ್ಯಾಲಿಯನ್ನು ನಡೆಸುತ್ತಿದ್ದಾಗ ಬ್ರಿಟಿಷರು ಅವನನ್ನು ಹಿಡಿದರು. ಪಂಡಿತ್ ಜವಾಹರಲಾಲ್ ನೆಹರು ಈ ಬಗ್ಗೆ ಬರೆಯುತ್ತಾ, 14-15 ವರ್ಷದ ಹುಡುಗನಿಗೆ 15 ಬೆತ್ತಗಳಿಂದ ಥಳಿಸುವ ಶಿಕ್ಷೆ ವಿಧಿಸಲಾಯಿತು ಎಂದು ಎಂದಿದ್ದಾರೆ. ಆತ ತನನ್ನು ತಾನು ಆಜಾದ್(ಸ್ವತಂತ್ರ) ಎಂದು ಕರೆಯುತ್ತಿದ್ದ. ಆತನನ್ನು ವಿವಸ್ತ್ರಗೊಳಿಸಿ ಬೆತ್ತದಿಂದ ಥಳಿಸಲಾಯ್ತು. ಅವನ ಮೇಲೆ ಬೆತ್ತದ ಹೊಡೆತದಿಂದ ಆತನ ಚರ್ಮವು ಸುಲಿದು ಬಂದರೂ ಆತನ ಬಾಯಿಯಲ್ಲಿ ಭಾರತ್ ಮಾತಾ ಕಿ ಜೈ ಎಂಬ ಕೂಗು ನಿಂತಿರಲಿಲ್ಲ. ತಾನು ಮೂರ್ಛೆ ಹೋಗುವವರೆಗೂ ಭಾರತ್ ಮಾತಾ ಕೀ ಜೈ ಎಂದು ಜಪಿಸುತ್ತಲೇ ಇದ್ದ ಆ ಬಾಲಕ.

ಬಳಿಕ ಆಜಾದ್ ಝಾನ್ಸಿಯಲ್ಲಿ ಕೆಲಕಾಲ ತಂಗಿದ್ದರು. ಝಾನ್ಸಿಯಿಂದ ಸುಮಾರು 15 ಕಿಮೀ ದೂರದಲ್ಲಿರುವ ಓರ್ಚಾದ ಕಾಡುಗಳಲ್ಲಿ ಅವರು ತಮ್ಮ ಸಹವರ್ತಿ ಕ್ರಾಂತಿಕಾರಿಗಳಿಗೆ ಶೂಟಿಂಗ್ ಕಲಿಸುತ್ತಿದ್ದರು. ಇಲ್ಲಿ ಅವರು ಪಂಡಿತ್ ಹರಿಶಂಕರ್ ಬ್ರಹ್ಮಚಾರಿ ಎಂಬ ಹೆಸರಿನಲ್ಲಿ ವಾಸಿಸುತ್ತಿದ್ದರು. ಅಲ್ಲೇ ಮಕ್ಕಳಿಗೆ ಪಾಠ ಕಲಿಸುತ್ತಿದ್ದರು. ಝಾನ್ಸಿಯಲ್ಲಿಯೇ ಇದ್ದು ಡ್ರೈವಿಂಗ್ ಕಲಿತರು.

ಪಂಡಿತ್ ಜವಾಹರಲಾಲ್ ನೆಹರು ಆಜಾದ್‌ರನ್ನು ಆನಂದ ಭವನದಲ್ಲಿ ಭೇಟಿಯಾದರು. ಇದನ್ನು ಅವರು ತಮ್ಮ ಆತ್ಮಕಥನ ಫ್ಯಾಸಿಸ್ಟ್ ಆಟಿಟ್ಯೂಡ್ ನಲ್ಲಿ ಉಲ್ಲೇಖಿಸಿದ್ದಾರೆ. ಕಾಕೋರಿ ಘಟನೆಯ ನಂತರ, ಆಜಾದ್ ಸಾಧುವಿನ ವೇಷದಲ್ಲಿ ವಾಸಿಸಲು ಪ್ರಾರಂಭಿಸಿದರು, ಆದ್ದರಿಂದ ಬ್ರಿಟಿಷರು ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ.

ಆಜಾದ್ 14 ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬ್ರಿಟಿಷರ ಕೈಯಲ್ಲಿ ಸಿಕ್ಕಾಕೊಂಡಿದ್ದರು. ನಂತರ ಅವರು ಸಾಯುವವರೆಗೂ ಆಜಾದ್ ಎಂದೇ ಕರೆಸಿಕೊಂಡರು. ಫೆಬ್ರವರಿ 27, 1931 ರಂದು, ಅಲಹಾಬಾದ್‌ನ ಆಲ್ಫ್ರೆಡ್ ಪಾರ್ಕ್‌ನಲ್ಲಿ ಆಜಾದ್ ಅವರನ್ನು ಪೊಲೀಸರು ಸುತ್ತುವರೆದರು. ಅವರು ಮರದ ಹಿಂದೆ ಅಡಗಿಕೊಂಡರು. ಅವನ ಪಿಸ್ತೂಲಿನಲ್ಲಿ ಒಂದು ಗುಂಡು ಉಳಿದಿತ್ತು. ಆಗ ತಾನು ಜೀವಂತವಾಗಿ ಬ್ರಿಟಿಷರ ಕೈಯಲ್ಲಿ ಬಂಧಿಯಾಗುವ ಬದಲು ಸಾವೇ ಉತ್ತಮ ಎಂದು ಬಯಸಿದರು. ಹೀಗಾಗಿ ತನಗೆ ತಾನೇ ಗುಂಡು ಹಾರಿಸಿ ಪ್ರಾಣ ತ್ಯಜಿಸಿದ್ದರು. 

click me!