Independence Day: ಸ್ವಾತಂತ್ರ್ಯ ಹೋರಾಟಕ್ಕೆ ಹೆಗಲಾಗಿದ್ದ ಹುಬ್ಬಳ್ಳಿ-ಧಾರವಾಡ

By Kannadaprabha NewsFirst Published Aug 15, 2022, 9:28 AM IST
Highlights
  • ಸ್ವಾತಂತ್ರ್ಯ ಹೋರಾಟಕ್ಕೆ ಹೆಗಲಾಗಿದ್ದ ಹುಬ್ಬಳ್ಳಿ-ಧಾರವಾಡ
  • ಜೈಲುವಾಸ, ತ್ಯಾಗ, ಬಲಿದಾನ ಅನುಭವಿಸಿದ್ದ ನಾಯಕರು
  • ಸ್ವಯಂ ಸಂಘಟನೆ, ಸತ್ಯಾಗ್ರಹ, ಪತ್ರಿಕಾ ಹೋರಾಟದ ಕೇಂದ್ರ

ಮಯೂರ ಹೆಗಡೆ

 ಹುಬ್ಬಳ್ಳಿ (ಆ.15) : 1947 ಆ. 15, ಹುಬ್ಬಳ್ಳಿಯ ಗುಳ್ಳವ್ವನ ಕೆರೆ (ನೆಹರು ಮೈದಾನ). ಸುತ್ತಲ ಊರುಗಳಿಂದ ಚಕ್ಕಡಿ, ಗಾಡಿಯಲ್ಲಿ ಬಂದಿದ್ದ ಜನ ಅವತ್ತು ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸಿದ್ದರು. ಅದರಂತೆ ನಗರದ ಹಲವೆಡೆ ಸ್ವಾತಂತ್ರ್ಯ ಸಡಗರ ಮನೆ ಮಾಡಿತ್ತು.

ಆ ಸಂಭ್ರಮಕ್ಕೀಗ ಅಮೃತ ಮಹೋತ್ಸವದ ಸಡಗರ: ಸ್ವಾತಂತ್ರ್ಯ ಹೋರಾಟದ ಎಲ್ಲ ಬಗೆಯ ಹೋರಾಟದಲ್ಲಿ ಹುಬ್ಬಳ್ಳಿ-ಧಾರವಾಡ ಹೆಗಲಿಗೆ ಹೆಗಲು ಕೊಟ್ಟು ಆಂದೋಲನದ ಕೇಂದ್ರ ಸ್ಥಾನವಾಗಿತ್ತು. ಕ್ರಾಂತಿ- ಅಹಿಂಸಾ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪಾರತಂತ್ರ್ಯದ ಬಿಡುಗಡೆಗೆ ತ್ಯಾಗ, ಬಲಿದಾನಗೈದಿದ್ದರು. 1817ರ ಸುಮಾರಿಗೆ ಹುಬ್ಬಳ್ಳಿ ಧಾರವಾಡ(Hubballi-Dharwad) ಬ್ರಿಟಿಷ್‌ ಆಡಳಿತಕ್ಕೆ ಒಳಪಟ್ಟಿತು. ಬೌದ್ಧಿಕ ಕೇಂದ್ರವಾಗಿದ್ದ ಧಾರವಾಡ ಸಹಜವಾಗಿ ಸ್ವಾತಂತ್ರ್ಯ ಚಳವಳಿ(Freedom Movement)ಯ ಕೇಂದ್ರವಾಗಿತ್ತು. ಇಲ್ಲಿನ ಟ್ರೇನಿಂಗ್‌ ಕಾಲೇಜಿನ ಮುಖ್ಯ ಅಧ್ಯಾಪಕ ಖರೆ ಅವರು ಮುದವಿಡು ಕೃಷ್ಣರಾಯರು ಸೇರಿ ಹಲವರಿಗೆ ರಾಷ್ಟ್ರೀಯ ದೀಕ್ಷೆ ನೀಡಿದ್ದರು. 1895 ವೇಳೆಗೆ ಇಲ್ಲಿ ಆರಂಭವಾದ ಗಣೇಶೋತ್ಸವ ಜನತೆಯನ್ನು ಒಗ್ಗೂಡಿಸಿತು.

1901ರಲ್ಲಿ ಸರ್ಕಾರ ಜಾರಿಗೊಳಿಸಿದ ಹೊಸ ಭೂಕಂದಾಯ ಮಸೂದೆ ವಿರೋಧಿಸಿ ಜು. 17ರಂದು ಧಾರವಾಡದಲ್ಲಿ ದೊಡ್ಡ ಸಮಾವೇಶ ನಡೆದಿತ್ತು. ಇದೆ ವೇಳೆ ರಾಷ್ಟ್ರೀಯ ಮನೋವೃತ್ತಿ ಬಿತ್ತುತ್ತಿದ್ದ ಕರ್ನಾಟಕ ಎಜುಕೇಶನ್‌ ಸೊಸೈಟಿಯ ನ್ಯೂ ಇಂಗ್ಲಿಷ್‌ ಸ್ಕೂಲ್‌ನ್ನು (ವಿದ್ಯಾರಣ್ಯ ಹೈಸ್ಕೂಲ್‌) ಬ್ರಿಟಿಷರು ವಶಪಡಿಸಿಕೊಂಡರು. ಮುಂಬೈ ಪ್ರಾಂತ್ಯದ ರಾಜಕೀಯ ಪರಿಷತ್‌ ಧಾರವಾಡದಲ್ಲಿ ನಡೆದಿದ್ದು ಕೂಡ ಚಳವಳಿಗೆ ಇಂಬು ನೀಡಿತು.

ಕನ್ನಡ ಕುಲಪುರೋಹಿತ ಆಲೂರು ವೆಂಕಟರಾಯರು(Aluru Venkatarayaru) ಹೋರಾಟಗಾರರಿಗೆ ದಿಕ್ಕು ತೋರಿದರು. ಹುಬ್ಬಳ್ಳಿಯಲ್ಲಿ ನಾ.ಸು. ಹರ್ಡೀಕರ 1904ರಲ್ಲಿ ಸ್ಥಾಪಿಸಿದ ಆರ್ಯಬಾಲಸಭಾ ಎಳೆಯರಲ್ಲಿ ಕಿಚ್ಚು ಹಚ್ಚಿತ್ತು. 1907ರಲ್ಲಿ ಲೋಕಮಾನ್ಯ ತಿಲಕರ ಭೇಟಿ ಇಲ್ಲಿನವರಿಗೆ ಶಕ್ತಿ ತುಂಬಿತ್ತು. 1916ರಲ್ಲಿ ಅವರ ಭೇಟಿ ಬಳಿಕವೇ ಹುಬ್ಬಳ್ಳಿ ಧಾರವಾಡದಲ್ಲಿ ಹೋಂರೂಲ್‌ ಲೀಗ್‌ ಚಟುವಟಿಕೆ ಪ್ರಬಲವಾಗಿ ಬೆಳೆದಿತ್ತು. ಗೆದಗೆಯ್ಯ ಹೊನ್ನಾಪುರಮಠ, ಕಡಪಾ ರಾಘವೇಂದ್ರರಾವ್‌, ಮದ್ದರಾವ್‌ ಕಬ್ಬೂರ, ದ.ಪ. ಕರಮಕರ ಸ್ವಯಂ ಸೇವಕರಾಗಿ ಈ ಹೋರಾಟದಲ್ಲಿದ್ದರು.

Independence Day: ಕ್ವಿಟ್‌ ಇಂಡಿಯಾ ಚಳವಳಿಗೆ ಧುಮುಕಿ 18ರ ಹರೆಯದಲ್ಲೇ ವೀರ ಮರಣವನ್ನಪ್ಪಿದ ಸಿಂಗೂರು ಕುಟ್ಟಪ್ಪ!

1919ರಲ್ಲಿ ಮೊದಲ ಮಹಾಯುದ್ಧ ಮುಗಿದಾಗ ಬ್ರಿಟಿಷರು ಕರೆ ನೀಡಿದ್ದ ಶಾಂತಿ ದಿನ ಆಚರಣೆಗೆ ವಿರೋಧವಾಗಿ ಇಲ್ಲಿ ಪ್ರತಿಭಟನೆ ನಡೆದಿತ್ತು. 1920ರ ಅಸಹಕಾರ-ಖಿಲಾಫತ್‌ ಚಳವಳಿಯ ಭಾಗವಾಗಿ ಗಾಂಧೀಜಿ ಹುಬ್ಬಳ್ಳಿ-ಧಾರವಾಡ ನಗರಕ್ಕೆ ಬಂದು ಸಾರ್ವಜನಿಕ ಭಾಷಣ ಮಾಡಿದ್ದರು. ಅಸಹಕಾರದ ಭಾಗವಾಗಿ ಸೇಂದಿ, ಸಾರಾಯಿ ಅಂಗಡಿಗಳ ಎದುರು ಪಿಕೆಟಿಂಗ್‌ ತೀವ್ರವಾಗಿತ್ತು. ಧಾರವಾಡದಲ್ಲಿ 1921ರ ಜು. 1ರಂದು ನಡೆದ ಹರತಾಳ ದೊಂಬಿ ಸ್ವರೂಪ ಪಡೆಯಿತು. ಅಂದು ನಡೆದ ಗೋಲಿಬಾರ್‌ನಲ್ಲಿ ಮೂವರು ಖಿಲಾಫತ್‌ ಸ್ವಯಂ ಸೇವಕರು ಹುತಾತ್ಮರಾದರು.

1927ರಲ್ಲಿ ಧಾರವಾಡದಲ್ಲಿ ಸ್ಥಾಪನೆಯಾದ ಭಾರತೀಯ ತರುಣರ ಸಂಘ ಹೆಚ್ಚು ಪ್ರಚಲಿತದಲ್ಲಿತ್ತು. ಎಸ್‌.ಬಿ. ಹಿರೇಮಠ ಇದರ ಸ್ಥಾಪಕ ಅಧ್ಯಕ್ಷರಾಗಿದ್ದರೆ ಗುದ್ಲೆಪ್ಪ ಹಳ್ಳಿಕೇರಿ, ವೆಂಕಟೇಶ ಮಾಗಡಿ, ಸಿದ್ದಲಿಂಗಯ್ಯ ಕಜರಿಸ್ವಾಮಿ, ಕೆ.ಎಫ್‌. ಪಾಟೀಲ್‌, ಮೈಲಾರ ಮಹಾದೇವಪ್ಪ ಕಾರ್ಯಕರ್ತರಾಗಿದ್ದರು.

ಸಾಹಿತ್ಯಿಕ ಸಾಧನೆಯ ಪರಿಣಾಮ ನರಗುಂದ ಬಂಡಾಯ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ನಾಟಕಗಳು ಇಲ್ಲಿನ ಜನರಲ್ಲಿ ಹೋರಾಟದ ಕಿಚ್ಚು ಹಚ್ಚಲು ಕಾರಣವಾಗಿತ್ತು. ಅಮೆರಿಕದಿಂದ ಮರಳಿದ ನಾ.ಸು. ಹರ್ಡಿಕರ್‌ ಸ್ಥಾಪಿಸಿದ ಸೇವಾದಳದ ಕೇಂದ್ರ ಹುಬ್ಬಳ್ಳಿಯಲ್ಲಿತ್ತು. ದೇಶಾದ್ಯಂತ ಸ್ವಯಂ ಸೇವಕರನ್ನು ಹುಟ್ಟುಹಾಕಿದ್ದರು. ಇದೆ ಸಂಘಟನೆ 1930ರ ಜ. 26ರಂದು ಕಾಂಗ್ರೆಸ್‌ ಕರೆಯಂತೆ ಹುಬ್ಬಳ್ಳಿ, ಧಾರವಾಡ ಗದಗದಲ್ಲಿ ಧ್ವಜಾರೋಹಣ ಮಾಡಿತ್ತು. 1931ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಸೇವಾದಳ ಶಿಬಿರಕ್ಕೆ ನೆಹರು ಆಗಮಿಸಿ ತರುಣರ ಮನಗೆದ್ದಿದ್ದರು.

1930ರಲ್ಲಿ ಉಪ್ಪಿನ ಸತ್ಯಾಗ್ರಹಕ್ಕೆ ಕರೆ ಬಂದಾಗ ಏ. 13, 14ರಂದು ಸೇವಾದಳ ನೇತೃತ್ವದಲ್ಲಿ ಮುಖಂಡರು ಅಂಕೋಲಾಕ್ಕೆ ಕಾಲ್ನಡಿಗೆಯಲ್ಲಿ ಹೋಗಿ ಯಶಸ್ವಿಗೊಳಿಸಿದ್ದರು. ರಂಗರಾವ್‌ ದಿವಾಕರ ಅವರು ಅಲ್ಲಿಂದ ತಂದಿದ್ದ ಕರಮುಕ್ತ ಉಪ್ಪನ್ನು ಏ. 15ರಂದು ಧಾರವಾಡದಲ್ಲಿ ಸಾರ್ವಜನಿಕ ಸಭೆಯಲ್ಲಿ ಹರಾಜು ಹಾಕಿ ಬಂಧಿತರಾದರು. ಅರಣ್ಯ ಸತ್ಯಾಗ್ರಹ, ವಿದೇಶಿ ವಸ್ತು ಬಹಿಷ್ಕಾರ ಎರಡೂ ನಗರದಲ್ಲಿ ತೀವ್ರವಾಗಿ ನಡೆದಿತ್ತು. ಇಂಗ್ಲೆಂಡ್‌ ಚಕ್ರವರ್ತಿಯ ಜನ್ಮದಿನದ ಪ್ರಯುಕ್ತ ಧಾರವಾಡದ ಮುನಸಿಪಾಲ್ಟಿಯಲ್ಲಿ ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಯೂನಿಯನ್‌ ಜಾಕ್‌ ಧ್ವಜ ಹಾರಿಸಿದ್ದಾಗ ಅದನ್ನು ಹುಕ್ಕೇರಿಕರ ಹಾಗೂ ಕರಮಕರರು ಕಿತ್ತು ಹಾಕಿದ್ದರು.

ದೇಶ- ಜನರಿಗಾಗಿ ಸರ್ವಸ್ವ ತ್ಯಾಗ ಮಾಡಿದ ‘ದಕ್ಷಿಣದ ಗಾಂಧಿ’

ದುಂಡು ಮೇಜಿನ ಪರಿಷತ್‌ನಿಂದ ಗಾಂಧೀಜಿ ಬರಿಗೈಲಿ ವಾಪಸಾದಾಗ 1932ರಲ್ಲಿ ಚಳವಳಿ ತೀವ್ರವಾಯಿತು. ಜ. 26ರಂದು ಕೆಸಿಸಿಸಿಯ ಪ್ರಥಮ ಡಿಕ್ಟೇಟರ್‌ ಉಮಾಬಾಯಿ ಕುಂದಾಪುರ ಅವರು ಹುಬ್ಬಳ್ಳಿಯಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿ ಬಂಧಿತರಾದರು. ಅವರು ತೆರೆದ ತಿಲಕನ್ಯಾ ಶಾಲೆ, ಹೊನ್ನಾವರದ ಕೃಷ್ಣಾಬಾಯಿ ಪಂಜೇಕರ ಸಾರಸ್ವತಪುರದಲ್ಲಿ ತೆರೆದ ಶಾಲೆ, ಮಹಿಳಾ ಸಮಾಜ ಸ್ತ್ರೀಶಕ್ತಿ ಹೆಚ್ಚಿಸಿತು.

ಗಾಂಧೀಜಿ 1934ರಲ್ಲಿ ಹರಿಜನ ಪ್ರವಾಸ ಕೈಗೊಂಡು ಹುಬ್ಬಳ್ಳಿಯ ಹರಿಜನಕೇರಿ(Harijanakeri)ಗೆ ಭೇಟಿ ನೀಡಿದ್ದರು. ಮುಂದೆ ವೀರನಗೌಡ ಪಾಟೀಲ್‌(Veeranagowda) ಇಲ್ಲಿ ಸ್ಥಾಪಿಸಿದ ಬಾಲಿಕಾಶ್ರಮ(Baalikashrama) ಹಿಂದುಳಿದ ಮಕ್ಕಳಿಗೆ ಶಿಕ್ಷಣ ಕೇಂದ್ರವಾಯಿತು. 1935ರಲ್ಲಿ ಡಾ. ರಾಜೇಂದ್ರ ಪ್ರಸಾದ ಜಿಲ್ಲಾದ್ಯಂತ ಸಂಚರಿಸಿದ್ದರು. 1938ರ ಮೇ ತಿಂಗಳಲ್ಲಿ ಸುಭಾಷ್‌ಚಂದ್ರ ಬೋಸ್‌ ಹುಬ್ಬಳ್ಳಿ ಧಾರವಾಡಕ್ಕೆ ಬಂದು ಭಾಷಣ ಮಾಡಿದ್ದರು. ಕಾಂಗ್ರೆಸ್‌ ತ್ಯಜಿಸಿದ ಹೊಸಮನಿ ಸಿದ್ದಪ್ಪ ಬೋಸ್‌ ಅವರ ಫಾರ್ವರ್ಡ್‌ ಬ್ಲಾಕ್‌ಗೆ ಅಧ್ಯಕ್ಷರಾದರು.

ಮುಂದೆ 1942ರಲ್ಲಿ ಆ. 9ರಂದು ದುರ್ಗದಬೈಲಿನಲ್ಲಿ ನಡೆದ ಚಳವಳಿಯ ಗೋಲಿಬಾರ್‌ನಲ್ಲಿ 14ರ ಬಾಲಕ ನಾರಾಯಣ ಡೋಣಿ ಹುತಾತ್ಮನಾದ. ಇದರ ಪರಿಣಾಮ ರೈಲ್ವೆ, ಅಂಚೆ ಕಚೇರಿ ಭಸ್ಮವಾದವು. ಅ. 24ರಂದು ಧಾರವಾಡದ ಕೋರ್ಚ್‌ನಲ್ಲಿ ವಿಮಲ ಗುಲ್ವಾಡಿ, ಶಿರೋಳಕರ ವಿದ್ಯಾರ್ಥಿನಿಯರು ರಾಷ್ಟ್ರಧ್ವಜ ಹಾರಿಸಿ ಮೂರು ತಿಂಗಳ ಶಿಕ್ಷೆಗೆ ಒಳಪಟ್ಟಿದ್ದರು. 1944ರ ಜ. 26ರಂದು ಕರ್ನಾಟಕ ಕಾಲೇಜಿನಲ್ಲಿ ಧ್ವಜಾರೋಹಣ ಮಾಡಲಾಗಿತ್ತು. ಏ. 13ರಿಂದ ರಾಷ್ಟ್ರೀಯ ಸಪ್ತಾಹಕ್ಕೆ ಕರೆ ಕೊಟ್ಟಾಗ ಧಾರವಾಡದಲ್ಲಿ ಉಗ್ರ ಚಳವಳಿ ನಡೆಯಿತು. ಖ್ಯಾತ ಪತ್ರಕರ್ತ ಪಾಟೀಲ್‌ ಪುಟ್ಟಪ್ಪ ಅವರು ಸೇರಿ ಹಲವರು ಕೈಗೊಂಡಿದ್ದ ಇಲ್ಲಿನ ಭೂಗತ ಚಳವಳಿ ಕರ್ನಾಟಕ ಪ್ಲಾಟರ್ಸ್‌ ಎಂದೆ ಪ್ರಸಿದ್ಧವಾಗಿತ್ತು.

ಧಾರವಾಡದಿಂದ ಪ್ರಕಟವಾದ 1885ರ ವೃತ್ತಾಂತ ಮಂಜರಿ, ವಾಗ್ಭೂಷಣ ((1896), ಚಂದ್ರೋದಯ ಪತ್ರಿಕೆ, ಹರ್ಡೇಕರ ಮಂಜಪ್ಪನವರು ಹುಬ್ಬಳ್ಳಿಯಲ್ಲಿ ಆರಂಭಿಸಿದ ಧನುರ್ಧಾರಿ ಪತ್ರಿಕೆ ಹೆಚ್ಚು ಪ್ರಭಾವ ಬೀರಿತು. ಬಿಂದೂರಾವ್‌ ಮುತಾಲಿಕ ದೇಸಾಯಿ ಅವರ ಕನ್ನಡ ಕೇಸರಿ, ಮುದವಿಡು ಕೃಷ್ಣರಾಯರ ತರುಣ ಕರ್ನಾಟಕ ಉಗ್ರ ಲೇಖನ ಪ್ರಕಟಿಸುತ್ತಿದ್ದವು. ಅದೇ ರೀತಿ ಅಣ್ಣಾಚಾರ್ಯ ಹೊಸಕೇರಿ ಸಂಪಾದಕತ್ವದ ರಾಜಹಂಸ, ವಿಶಾಲ ಕರ್ನಾಟಕ ಪತ್ರಿಕೆಗಳು ಸ್ವಾತಂತ್ರ್ಯ ಕಹಳೆ ಊದಿದ್ದವು.

click me!